ನೀಲೇಶ್ವರ: ನೀಲಕಂಠ ಈಶ್ವರ
ಐತಿಹಾಸಿಕ ಮಹತ್ವದ ನೀಲೇಶ್ವರವು ಕೋಲತ್ತಿರಿ ರಾಜರ ಕುಟುಂಬಿಕರಾದ ನೀಲೇಶ್ವರ ರಾಜರ ಕೇಂದ್ರ ಸ್ಥಾನವಾಗಿದ್ದು ನೀಲಕಂಠ ಈಶ್ವರ್ ಎಂಬವನಿಂದ ಹೆಸರು ಪಡೆದಿದೆ.
ಚಾರಿತ್ರಿಕ ಪ್ರಧಾನವಾದ ನಗರವಿದು. ಕೋಲತ್ತಿರಿ ರಾಜರ ಕುಟುಂಬಿಕರಾದ ನೀಲೇಶ್ವರ ರಾಜರ ಕೇಂದ್ರ ಸ್ಥಾನ. ನೀಲಕಂಠ ಈಶ್ವರ್ ಎಂಬವನಿಂದ ಇಲ್ಲಿಗೆ ನೀಲೇಶ್ವರ ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ.

ಬ್ರಿಟಿಷರ ಪೂರ್ವ ಮತ್ತು ಬಳಿಕದ ಕಾಲದಲ್ಲೂ ಈ ಪ್ರದೇಶ ತನ್ನದೇ ಆದಂತಹ ಘನಸ್ಥಿಕೆ, ಗಾಂಭೀರ್ಯವನ್ನು ಉಳಿಸಿಕೊಂಡು ಬಂದಿದೆ. ಸ್ವಾತಂತ್ರ್ಯ ಹೋರಾಟದಲ್ಲೂ ಇಲ್ಲಿನವರ ಕೊಡುಗೆ ಅಪಾರ. ಫ್ರೆಂಚ್, ಪೋರ್ಚುಗೀಸ್, ಆಂಗ್ಲರ ವಿರುದ್ಧ ಸಿಡಿದೆದ್ದವರ ಚಟುವಟಿಕೆಗಳಿಗೆ ಕೇಂದ್ರಸ್ಥಾನವಾಗಿತ್ತು. ಜಿಲ್ಲೆಯ ಒಂದು ಪ್ರಧಾನ ನಗರವಾಗಿರುವ ಇಲ್ಲಿ, ಪ್ರಸ್ತುತ ಹಲವು ದೇವಸ್ಥಾನ, ಇಗರ್ಜಿ, ಮಸೀದಿಗಳು ಮತ್ತು ಪ್ರತಿಷ್ಠಿತ ಶಿ7ಣ ಸಂಸ್ಥೆಗಳಿವೆ. ಇಕ್ಕೇರಿ ನಾಯಕರೂ ಇಲ್ಲಿನ ರಾಜರೊಂದಿಗೆ ವ್ಯಾವಹಾರಿಕ ಸಂಬಂಧ ಹೊಂದಿದ್ದರು ಎಂದು ಹೇಳಲಾಗುತ್ತಿದೆ.

ಚಾರಣಕ್ಕೆ ಹೆಸರಾದ ರಾಣಿಪುರಂ
ಕಾಸರಗೋಡಿನಿಂದ ಸುಮಾರು 85 ಕಿ.ಮೀ. ದೂರದಲ್ಲಿರುವ ರಾಣಿಪುರಂ ಕೇರಳ-ಕರ್ನಾಟಕದ ಗಡಿಭಾಗ. ಬೆಟ್ಟಗಳು, ಕಣಿವೆಗಳು, ತೊರೆಗಳಿಂದ ಕೂಡಿರುವ ಪ್ರಾಕೃತಿಕ ಶ್ರೀಮಂತಿಕೆ ಹೊಂದಿರುವ ಇದನ್ನು ಕೇರಳದ ಊಟಿ ಎಂದೂ ಕರೆಯಲಾಗುತ್ತಿದೆ. ಸಮುದ್ರ ಮಟ್ಟದಿಂದ 750 ಕಿ.ಮೀ. ಎತ್ತರದಲ್ಲಿದೆ. ಜೈವಿಕ ವೈವಿಧ್ಯತೆಯ ಇದು ಚಾರಣಕ್ಕೆ ಯೋಗ್ಯ ಪ್ರದೇಶ.
ದಿನಂಪ್ರತಿ ನೂರಾರು ಮಂದಿ ಚಾರಣಪ್ರಿಯರು ಇಲ್ಲಿಗೆ ಭೇಟಿ ನೀಡುತ್ತಾರೆ. ಉಳಕೊಳ್ಳಲು ಬಯಸುವವರಿಗೆ ವಾಸ್ತವ್ಯದ ವ್ಯವಸ್ಥೆಯೂ ಇದೆ.

ರಾಣಿಪುರಂನ ಹಿಂದಿನ ಹೆಸರು ಮದತ್ತುಮಲ ಎಂದಾಗಿತ್ತು. ಕಾಡುಗಳಿಂದ ಕೂಡಿರುವ ಈ ಪ್ರದೇಶ ತಂಪು ಹವಾಮಾನ ಹೊಂದಿದೆ. ಈ ಬೆಟ್ಟಗಳ ಇದರ ಮತ್ತೂಂದು ಮೂಲೆ ಕರ್ನಾಟಕದಲ್ಲಿ ಹರಡಿಕೊಂಡಿದೆ. ಏರಿಳಿತಗಳಿಂದ ಕೂಡಿರುವ ಇಲ್ಲಿ ಯಾವ ರೀತಿಯ ಚಾರಣವನ್ನೂ ಮಾಡಬಹುದು.
ಕಾಡುಗಳು ಮತ್ತು ಬೆಟ್ಟಗಳಲ್ಲೂ ಸಾಹಸಿಗಳಿಗೆ ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸಲು ಸೂಕ್ತ ಸ್ಥಳವಿದು. ಬೆಳಗ್ಗೆ ಚಾರಣ ಆರಂಭಿಸಿದರೆ ಸಂಜೆ ತನಕವೂ ಇಲ್ಲಿ ಕಾಲ ಕಳೆಯಬಹುದು. ಆದ್ದರಿಂದ ಚಾರಣಪ್ರಿಯರು ಇಲ್ಲಿಗೆ ಬೆಳಗ್ಗಿನ ಹೊತ್ತು ಬರುವುದೇ ಒಳಿತು. ಎಲ್ಲಾ ಕಡೆ ಇರುವಂತೆ ಇಲ್ಲೂ ಜಿಗಣೆಗಳ ಕಾಟ ಇದೆ. ಬರುವಾಗ ಮುಂಜಾಗ್ರತೆ ವಹಿಸಿಕೊಳ್ಳುವುದು ಅಗತ್ಯ. ಹಲವು ತೊರೆಗಳು ಇರುವುದರಿಂದ ಸಾಕಷ್ಟು ಬಟ್ಟೆಗಳನ್ನೂ ಜತೆಗೆ ಕೊಂಡೊಯ್ಯುವುದು ಒಳಿತು. ಕುಡಿಯುವ ನೀರನ್ನೂ ಜತೆಗಿಟ್ಟುಕೊಳ್ಳಿ.
ಇಲ್ಲಿಗೆ ಬರಲು ಬಸ್ಸುಗಳ ವ್ಯವಸ್ಥೆಯಿದೆ, ಜೀಪುಗಳೂ ಲಭಿಸುತ್ತವೆ. ಪ್ರಕೃತಿ ಪ್ರಿಯರು ಮತ್ತು ಚಾರಣಆಸಕ್ತರ ಮೆಚ್ಚಿನ ಈ ತಾಣ ಪಾಣತ್ತೂರಿನಿಂದ 18 ಕಿ.ಮೀ., ಬೇಕಲದಿಂದ 58 ಕಿ.ಮೀ., ಪನತ್ತಡಿಯಿಂದ 10 ಕಿ.ಮೀ., ಕಾಂಞಂಗಾಡ್‌ನಿಂದ 40 ಕಿ.ಮೀ. ದೂರದಲ್ಲಿದೆ.
