ಕಾಸರಗೋಡು ಜಿಲ್ಲೆಯನ್ನು ಸಂದರ್ಶಿಸುವ ಪ್ರವಾಸಿಗರಿಗೆ ಈ ಜಿಲ್ಲೆ ನೈಸರ್ಗಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮುಖಗಳು ಶಿಕ್ಷಣಾಸಕ್ತಿಯನ್ನು ಮೂಡಿಸುತ್ತವೆ.

ಮಂಜೇಶ್ವರ, ಹೊಸಂಗಡಿ, ಪೈವಳಿಕೆ, ಉಪ್ಪಳ, ಕುಂಬಳೆ, ಬದಿಯಡ್ಕ, ಮುಳ್ಳೇರಿಯ, ಚೆರುವತ್ತೂರು, ಚೆರ್ಕಳ, ಉದುಮ, ಬಂದಡ್ಕ, ಪಾಣತ್ತೂರು, ತೃಕ್ಕರಿಪುರ, ಕಾಂಞಂಗಾಡ್, ನೀಲೇಶ್ವರ, ಪನತ್ತಡಿ, ಪೊಯಿನಾಚಿ...ಮುಂತಾದವು ಕಾಸರಗೋಡು ಜಿಲ್ಲೆಯ ಪ್ರಮುಖ ಸ್ಥಳಗಳಾಗಿದ್ದು ಇವೆಲ್ಲವೂ ಪ್ರವಾಸ ದೃಷ್ಟಿಯಲ್ಲಿ ವಿಭಿನ್ನ ಮಹತ್ವವನ್ನು ಹೊಂದಿವೆ.
ಪ್ರಮುಖ ಹಬ್ಬಗಳು, ಆಹಾರ, ಉಡುಗೆ

ವಿಶು, ಈದುಲ್ ಫಿತ್ರ, ಕ್ರಿಸ್‌ಮಸ್, ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ದೀಪಾವಳಿ, ನವರಾತ್ರಿ, ಓಣಂ, ಬಕ್ರೀದ್...ಇತ್ಯಾದಿ.
ಕಾಸರಗೋಡಿನಲ್ಲಿ ಕುಚ್ಚಿಗೆ ಅಕ್ಕಿ ಅನ್ನ ಉಣ್ಣುವವರೇ ಹೆಚ್ಚು. ಪರೋಟಾ ಇಲ್ಲಿನ ಹೊಟೇಲ್‌ಗಳಲ್ಲಿ ಸಿಗುವ ಒಂದು ಪ್ರಮುಖ ಆಹಾರ. ಇದು ಕೇರಳದ ಸ್ಪೆಷಲ್ ಎಂಬ ವಿಶೇಷತೆ ಹೊಂದಿದೆ. ಪ್ಯಾಂಟ್, ಶರ್ಟ್, ಮುಂಡು, ಸೀರೆ, ಚೂಡಿದಾರ್, ಬುರ್ಖಾ...ಇವುಗಳು ಸಾಮಾನ್ಯ ಉಡುಗೆಗಳು.

ಪ್ರಕಟವಾಗುವ ಪ್ರಮುಖ ಪತ್ರಿಕೆಗಳು
ಕಾಸರಗೋಡಿನಿಂದ "ಕಾರವಲ್' ಮತ್ತು "ಉತ್ತರದೇಶ್' ಎಂಬೆರಡು ಸಂಜೆಪತ್ರಿಕೆಗಳು ಕನ್ನಡ ಮತ್ತು ಮಲಯಾಳಿ ಭಾಷೆಗಳಲ್ಲಿ ಪ್ರಕಟವಾಗುತ್ತಿವೆ. ಇದರಲ್ಲಿ ಕಾರವಲ್ ಪತ್ರಿಕೆಯು ಎರಡು ಭಾಷೆಯಲ್ಲಿ ಪ್ರಕಟವಾಗುವ ಕೇರಳದ ಮೊದಲ ಪತ್ರಿಕೆ ಎಂಬ ವಿಶೇಷತೆ ಹೊಂದಿದೆ. ಕಾಂಞಂಗಾಡ್‌ನಿಂದ "ಲೇಟೆಸ್ಟ್' ಎಂಬ ಮಲಯಾಳಿ ಪತ್ರಿಕೆ ಪ್ರಕಟವಾಗುತ್ತಿದೆ. ಕಾಸರಗೋಡಿನಲ್ಲಿ ಈ ಹಿಂದೆ "ಗಡಿನಾಡು', "ಪ್ರತಿಸೂರ್ಯ', "ಬಯ್ಯಮಲ್ಲಿಗೆ', "ಕಾಸರಗೋಡು ಸಮಾಚಾರ'...ಮುಂತಾದ ಪ್ರಮುಖ ಕನ್ನಡ ಪತ್ರಿಕಗಳು ಪ್ರಕಟವಾಗಿದ್ದವು.
ಒಪ್ಪನ, ದಫ್‌ಮುಟ್ಟು

ಒಪ್ಪನ ಮತ್ತು ದಫ್‌ಮುಟ್ಟು ಇಲ್ಲಿನ ಎರಡು ಪ್ರಧಾನ ಮುಸ್ಲಿಂ ಕಲಾಪ್ರಕಾರಗಳು. ಮದುವೆ ಸಂದರ್ಭದಲ್ಲಿ ಮದುಮಗಳನ್ನು ಕುಳ್ಳಿರಿಸಿ ಆಕೆಯ ಸುತ್ತ ಮಾಪಿಳ್ಳಪಾಟುಗಳನ್ನು ಹಾಡುತ್ತಾ, ಪರಸ್ಪರ ತಪ್ಪಾಳೆ ತಟ್ಟುತ್ತಾ ಹೆಣ್ಮಕ್ಕಳು ಕುಣಿಯುವುದು ಒಪ್ಪನದ ವಿಶೇಷತೆ. ಒಪ್ಪನ ಮಹಿಳಾ ಪ್ರಧಾನ ಕಲೆಯಾದರೂ, ಮದುಮಗನನ್ನು ಕುಳ್ಳಿರಿಸಿ ಯುವಕರು ಹಾಡುವುದೂ ಇದೆ.

ಮರ ಮತ್ತು ಪ್ರಾಣಿಯ ಚರ್ಮದಿಂದ ತಯಾರಿಸಿದ ಒಂದು ವಾದ್ಯಪ್ರಕಾರವಾಗಿದೆ ದಫ್. ಸಾಂಪ್ರದಾಯಿಕ ಇಸ್ಲಾಂ ಟೊಪ್ಪಿ ಧರಿಸಿ, ದಫ್ ಬಾರಿಸುತ್ತಾ, ಮಾಪಿಳ್ಳ ಪಾಟ್ ಹಾಡುತ್ತಾ ಖೀ ಆಕಾರದಲ್ಲಿ ಕುಣಿಯುವುದು ದಫ್‌ಮುಟ್ಟುವಿನ ವಿಶೇಷತೆ.
ಓಣಂ ಪೂಕಳಂ

ಕೇರಳದ ಪ್ರಮುಖ ಹಬ್ಬವಾಗಿರುವ ಓಣಂ ಕಾಸರಗೋಡಿನಲ್ಲೂ ಆಚರಿಸಲ್ಪಡುತ್ತಿದೆ. ಆದರೆ ಕನ್ನಡಿಗರು ಈ ಹಬ್ಬವನ್ನು ಅಷ್ಟಾಗಿ ಆಚರಿಸುವುದಿಲ್ಲ. ಅವರು ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಿ ಸಂಭ್ರಮಿಸುತ್ತಾರೆ. ಜತೆಗೆ ನಾಡಹಬ್ಬವನ್ನೂ. ದೀಪಾವಳಿ ಮತ್ತು ಓಣಂ ಹಬ್ಬದಲ್ಲಿ ಒಂದೇ ಕಥೆ ಇದೆ.
ಓಣಂ ಹಬ್ಬದ ವಿಶೇಷವಾಗಿರುವ "ಪೂಕಳಂ' (ರಂಗೋಲಿ) ಕಾಸರಗೋಡಿನಲ್ಲೂ ಕಂಡು ಬರುತ್ತದೆ. ಪೂಕಳಂ ರಚನೆ ಸ್ಪರ್ಧೆಗಳೂ ಅಲ್ಲಲ್ಲಿ ಜರಗುತ್ತವೆ.