Wednesday, June 19, 2013
Last Updated: 12:47:20 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ವಿವಾಹ ಹರೆಯದ ಕುರಿತು...
    • ಕನ್ಯಾಪಿತೃಗಳು ಒಳ್ಳೆಯ ವರ ಸಿಕ್ಕರೆ ಮಗಳಿಗೆ ಎಷ್ಟೇ ವಯಸ್ಸಾದರೂ ಮದುವೆಗೆ ಸಿದ್ಧರಾಗುತ್ತಾರೆ.

      • ಡಾ | ಎಚ್‌. ಎಸ್‌. ಅನುಪಮಾ | Dec 14, 2012

        ಕನ್ಯಾಪಿತೃಗಳು ಒಳ್ಳೆಯ ವರ ಸಿಕ್ಕರೆ ಮಗಳಿಗೆ ಎಷ್ಟೇ ವಯಸ್ಸಾದರೂ ಮದುವೆಗೆ ಸಿದ್ಧರಾಗುತ್ತಾರೆ. ಹುಡುಗಿ ಎಳೆಯವಳಾದಷ್ಟೂ ಕೊಡಬೇಕಾದ ದಕ್ಷಿಣೆ ಕಮ್ಮಿಯಿರುತ್ತದೆ. ವಯಸ್ಸಿಗೆ ಬಂದ ಮಗಳನ್ನು ಮನೆಯಲ್ಲಿಟ್ಟುಕೊಳ್ಳುವುದೆಂದರೆ ಸೆರಗಲ್ಲಿ ಕೆಂಡ ಕಟ್ಟಿಕೊಂಡಂತೆ ಎಂಬ ಭಾವನೆ ಬಲವಾಗಿದೆ. ಸಾಮೂಹಿಕ ವಿವಾಹಗಳಲ್ಲಿ 10%ಕ್ಕಿಂತ ಹೆಚ್ಚು ಬಾಲ್ಯವಿವಾಹವೇ ಆಗಿದ್ದು, ಊರಹಿರಿಯರ ಸಮ್ಮತಿ, ಆಶೀರ್ವಾದ ಪಡೆದೇ ನಡೆಯುವುದರಿಂದ ಮತ್ತು ಬಾಲ್ಯವಿವಾಹ ತಪ್ಪೆಂಬ ಭಾವವೇ ಇಲ್ಲದಿರುವುದರಿಂದ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುತ್ತದೆ.

        ಬಾಲ್ಯವಿವಾಹ, ಒಳವಿವಾಹ ಹಾಗೂ ವಿಧವಾ ಪದ್ಧತಿ ಇವು ಮೂರೂ ಭಾರತೀಯ ವಿವಾಹ ವ್ಯವಸ್ಥೆಯ ಮುಖ್ಯ ಆಚರಣೆಗಳು. ಅವು ಮಹಿಳೆಗೆ ಆಯ್ಕೆಯ ಮುಕ್ತ ಅವಕಾಶ ನೀಡದೇ, ಹೆಣ್ಣೆಂದರೆ "ಒಪ್ಪಿಗೆ'ಯೆಂದು ತಲೆ ಅಲ್ಲಾಡಿಸಬೇಕಾದವಳು ಎಂದೇ ಭಾವಿಸಿವೆ. ಸ್ವಾತಂತ್ರ್ಯಪೂರ್ವ ಕಾಲದಲ್ಲಿ ರಾಜಾರಾಮ್‌ ಮೋಹನರಾಯ್‌ರಂತಹ ಇಂಗ್ಲಿಷ್‌ ವಿದ್ಯಾಭ್ಯಾಸ ಪಡೆದ ಸಮಾಜಸುಧಾರಕರನೇಕರು ಬದಲಾವಣೆಗೆ ಶ್ರಮಿಸಿ ಸತೀಪದ್ಧತಿ ನಿಂತು ಹೋಗಿ, ವಿಧವಾ ಪದ್ಧತಿಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ. ಆದರೆ ಜಾಗತೀಕರಣದ ಕಾಲದಲ್ಲಿಯೂ ಬಾಲ್ಯವಿವಾಹ ಮತ್ತು ಒಳವಿವಾಹ ಪದ್ಧತಿಗಳು ಮುಂದುವರೆದಿವೆ. ಗ್ರಾಮೀಣ ಪ್ರದೇಶಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಬಾಲ್ಯವಿವಾಹ ತಡೆಗೆ ಸರ್ಕಾರ ಕಾನೂನು ಮಾಡಿದೆ. ಸರ್ಕಾರೇತರ ಸಂಘಸಂಸ್ಥೆಗಳು ಕೈಜೋಡಿಸಿವೆ. ಶಿಕ್ಷಣವು ಹಕ್ಕಾಗಿರುವ; ಮಹಿಳಾ ಸಬಲೀಕರಣ, ಮಹಿಳಾ ದಿನಾಚರಣೆ ಶತಮಾನೋತ್ಸವ ವರ್ಷ, ಮಹಿಳಾ ಚಳುವಳಿ ಎಂದೆಲ್ಲ ಮಾತನಾಡುತ್ತಿರುವ; ಹೆಣ್ಣುಮಕ್ಕಳಿಗೆ ಭಾಗ್ಯಜ್ಯೋತಿ, ಮಡಿಲು, ಬಾಲಿಕಾ ಸಮೃದ್ಧಿ ಯೋಜನೆ, ತಾಯಿಭಾಗ್ಯದಂತಹ ಯೋಜನೆಗಳು ಜಾರಿಯಾಗಿರುವ ಈ ಹೊತ್ತಲ್ಲಿ ಐವರಲ್ಲಿ ಇಬ್ಬರು ಹುಡುಗಿಯರು 18 ವರ್ಷದೊಳಗೇ ಮದುವೆಯಾಗಿರುತ್ತಾರೆಂಬ ಅಂಶ ದಿಗಿಲುಗೊಳಿಸುತ್ತದೆ. ಹಾಗಾದರೆ, ಈ ಎಲ್ಲ ಕಾರ್ಯಕ್ರಮಗಳೂ ಯಾರನ್ನು ತಲುಪುತ್ತಿವೆ? ಬಾಲ್ಯವಿವಾಹ ನಿಷೇಧ ಕಾಯ್ದೆ 2006 ಹುಡುಗಿಯು 18 ವರ್ಷಕ್ಕಿಂತ ಕಡಿಮೆಯಿದ್ದಲ್ಲಿ ಹಾಗೂ ಹುಡುಗ 21 ವರ್ಷಕ್ಕಿಂತ ಕಡಿಮೆ ಇದ್ದಲ್ಲಿ ಅವರನ್ನು ಅಪ್ರಾಪ್ತ ವಯಸ್ಕರೆಂದು ಪರಿಗಣಿಸುತ್ತದೆ. ಆದರೆ "ಸಿಲಿಕಾನ್‌ ವ್ಯಾಲಿ' ಬೆಂಗಳೂರು ಎಂಬ ಗಾಜಿನ ನಗರವನ್ನು ತನ್ನ ಹೃದಯದಲ್ಲಿ ಹೊತ್ತ ಮುಂದುವರಿದ ರಾಜ್ಯ ಕರ್ನಾಟಕದಲ್ಲಿ ಹೆಚ್ಚುಕಡಿಮೆ 40% ಮದುವೆಗಳಲ್ಲಿ ಹುಡುಗಿ ಅಪ್ರಾಪ್ತ ವಯಸ್ಕಳಾಗಿರುತ್ತಾಳೆ. ಮದುವೆಗಳು ಕಡ್ಡಾಯ ನೋಂದಾವಣೆಯಾಗದೇ ಇರುವುದರಿಂದ ಹಾಗೂ ವಯಸ್ಸಿನ ಕುರಿತ ಪ್ರಮಾಣ ಪತ್ರ ಇಲ್ಲದಿರುವುದರಿಂದ ನಿಜವಾದ ಅಂಕಿಅಂಶ ದೊರೆಯುತ್ತಿಲ್ಲ.

        ಅಂತಾರಾಷ್ಟ್ರೀಯ ಮಹಿಳಾ ಸಂಶೋಧನಾ ಸಂಸ್ಥೆಯ ಪ್ರಕಾರ 18 ವರ್ಷದೊಳಗೆ ಹೆಣ್ಣುಮಕ್ಕಳು ಮದುವೆಯಾಗುವ ವಿಶ್ವದ ಮೊದಲ 20 ರಾಷ್ಟ್ರಗಳ ಪೈಕಿ ಭಾರತ 11ನೇ ಸ್ಥಾನದಲ್ಲಿದೆ. ರಾಜಾಸ್ಥಾನದಲ್ಲಿ ಮೊದಲ ಸಲ ತಾಯಿಯಾಗುವ ಮಹಿಳೆಯ ಸರಾಸರಿ ವಯಸ್ಸು 16.3 ವರ್ಷ! ದಕ್ಷಿಣ ಭಾರತದಲ್ಲಿ ಉತ್ತರ ಭಾರತಕ್ಕಿಂತ ಬಾಲ್ಯ ವಿವಾಹ ಕಡಿಮೆಯಿದ್ದರೂ, 2009ರ ಕರ್ನಾಟಕ ಮಕ್ಕಳ ಹಕ್ಕು ಸಮೀûಾ ವರದಿಯ ಪ್ರಕಾರ ಉತ್ತರ ಕರ್ನಾಟಕದಲ್ಲಿ ಬಾಲ್ಯ ವಿವಾಹ ಹೆಚ್ಚಾಗಿ ಕಂಡುಬರುತ್ತದೆ. ಅತಿ ಹೆಚ್ಚು - 60% - ರಾಯಚೂರಿನಲ್ಲಾದರೆ, ಕೊಪ್ಪಳ - 51.4%, ಬಿಜಾಪುರ 50.1%, ಗುಲ್ಬರ್ಗ - 48.9%, ಬಾಗಲಕೋಟೆ - 48.3%, ಬೆಳಗಾವಿ 43%, ಬೀದರ್‌ ಮತ್ತು ಗದಗ  44%, ಬಳ್ಳಾರಿ  35% ಇವು ಬಾಲ್ಯವಿವಾಹ ಹೆಚ್ಚು ಸಂಭವಿಸುವ ಜಿಲ್ಲೆಗಳಾಗಿವೆ. ಅದೇ ದಕ್ಷಿಣ ಕರ್ನಾಟಕದಲ್ಲಿ ಬೆಂಗಳೂರು ಗ್ರಾಮಾಂತರ 29%, ಕೋಲಾರ - 24.3%, ಬೆಂಗಳೂರು ನಗರ 12.4%, ಶಿವಮೊಗ್ಗ 9%, ಉತ್ತರ ಕನ್ನಡ  7.8%, ಚಿಕ್ಕಮಗಳೂರು 6.8%, ದಕ್ಷಿಣಕನ್ನಡ 5.5%, ಕೊಡಗು 2.2% ಇದ್ದು, ಎಲ್ಲಕ್ಕಿಂತ ಅತಿ ಕಡಿಮೆ ಉಡುಪಿ ಜಿಲ್ಲೆಯಲ್ಲಿ 1.1% ವಿವಾಹ ಬಾಲ್ಯವಿವಾಹವಾಗಿದೆ.

        ಬಾಲ್ಯವಿವಾಹವು ವರಮಾನ ಮತ್ತು ಶಿಕ್ಷಣ ಮಟ್ಟ ಕಡಿಮೆಯಿದ್ದಷ್ಟು ಹೆಚ್ಚುತ್ತ ಹೋಗಿರುವುದು ಕಂಡುಬರುತ್ತದೆ. ಕನ್ಯಾಪಿತೃಗಳು ಒಳ್ಳೆಯ ವರ ಸಿಕ್ಕರೆ ಇಬ್ಬರಿಗೂ ಎಷ್ಟೇ ವಯಸ್ಸಾದರೂ ಮದುವೆಗೆ ಸಿದ್ಧರಾಗುತ್ತಾರೆ. ಹುಡುಗಿ ಎಳೆಯವಳಾದಷ್ಟು ಜೊತೆಗೆ ಕೊಡಬೇಕಾದ ದಕ್ಷಿಣೆ ಕಮ್ಮಿಯಿರುತ್ತದೆ. ವಯಸ್ಸಿಗೆ ಬಂದ ಮಗಳನ್ನು ಮನೆಯಲ್ಲಿಟ್ಟುಕೊಳ್ಳುವುದೆಂದರೆ ಸೆರಗಲ್ಲಿ ಕೆಂಡ ಕಟ್ಟಿಕೊಂಡಂತೆ ಎಂಬ ಭಾವನೆ ಬಲವಾಗಿದೆ. ಮನೆತನದ ಮರ್ಯಾದೆ ಹುಡುಗಿಯರ ಕೈಲಿದೆ ಎಂದು ಭಾವಿಸುವ ಕುಟುಂಬಗಳು ಪೋರಿಯು ಹೊರಜಗತ್ತಿಗೆ ಕಣ್ಣುಬಿಟ್ಟು ಸ್ವಪ್ರಜ್ಞೆ ಬೆಳೆಸಿಕೊಳ್ಳುವುದರಲ್ಲಿ ಮದುವೆ ಮಾಡುತ್ತಾರೆ. ಅದರಲ್ಲೆಷ್ಟೋ ಹುಸಿ ಮದುವೆಗಳಾಗಿ, ಎಳೆ ಹುಡುಗಿಯರನ್ನು ವೇಶ್ಯಾವಾಟಿಕೆಗೆ ಸಾಗಿಸುವುದು, ಎಳೆತನದಲ್ಲೇ ಹೆರುವ ಹೆಣ್ಣು ಮತ್ತು ಅವಳ ಮಗು ಮೆಡಿಕಲ್‌ ಕಾಂಪ್ಲಿಕೇಷನ್ನುಗಳಿಗೆ ತುತ್ತಾಗುವುದು ಕಂಡುಬರುತ್ತದೆ. ಜಾತ್ರೆ, ಉತ್ಸವಗಳಲ್ಲಿ ನಡೆಯುವ ಸಾಮೂಹಿಕ ವಿವಾಹಗಳಲ್ಲಿ 10%ಕ್ಕಿಂತ ಹೆಚ್ಚು ಬಾಲ್ಯವಿವಾಹವೇ ಆಗಿದ್ದು, ಊರಹಿರಿಯರ ಸಮ್ಮತಿ, ಆಶೀರ್ವಾದ ಪಡೆದೇ ನಡೆಯುವುದರಿಂದ ಮತ್ತು ಬಾಲ್ಯವಿವಾಹ ತಪ್ಪೆಂಬ ಭಾವವೇ ಇಲ್ಲದಿರುವುದರಿಂದ ಸಮಸ್ಯೆ ಇನ್ನಷ್ಟು ಉಲ್ಬಣಗೊಂಡಿದೆ. ಹೆತ್ತವರೇ ದೊಡ್ಡವಳ ಜೊತೆ ಸಣ್ಣವಳದ್ದೂ ಎಂದು ಜೋಡಿ ಮದುವೆಯಲ್ಲಿ ಖರ್ಚು ಕಡಿಮೆ ಮಾಡಿಕೊಳ್ಳಲು ಯತ್ನಿಸುವಾಗ ಯಾರನ್ನು ದೂರಬಹುದು? ಮಹಿಳಾ ಸ್ವಸಹಾಯ ಗುಂಪುಗಳ ಮೀಟಿಂಗುಗಳಲ್ಲಿ ಈ ವಿಷಯ ಎತ್ತಿದರೆ, ಅದೊಂದು ವಿಷಯ ಬಿಟ್ಟು ಬೇರೆ ಏನಾದ್ರೂ ಹೇಳಿ ಎಂಬ ಬೇಡಿಕೆ ಬರುವುದಂತೆ! ಮದುವೆ ಎನ್ನುವುದು ಸಂಪೂರ್ಣ ಕುಟುಂಬದ ವಿಷಯ. ಅದರಲ್ಲಿ ಬೇರೆಯವರಾರೂ ತಲೆ ಹಾಕುವಂತಿಲ್ಲ, ಅದು ಸಾರ್ವಜನಿಕ ಚರ್ಚೆಯೂ ಅಲ್ಲ ಎಂಬ ಧೋರಣೆ ಇದೆ.

        ಈ ಹಿನ್ನೆಲೆಯಲ್ಲಿ ಭಾರತೀಯ ಸಮಾಜದಲ್ಲಿ ಮದುವೆಯ ಕುರಿತು ಸುಧಾರಣೆಯಾಗಲು ಇನ್ನೂ ಬಹಳಷ್ಟಿದೆ. ಇಲ್ಲಿ ಬಾಲ್ಯ ವಿವಾಹ ಸಿಂಧು, ಅಂತಜಾìತಿ ವಿವಾಹ ಅಪರಾಧ. ಆದರೆ ವರದಕ್ಷಿಣೆ ಮಾತ್ರ ಸರ್ವಮಾನ್ಯ!

        ಇದರ ಇತಿಹಾಸವೂ ಕುತೂಹಲಕಾರಿಯಾಗಿದೆ.

        ಮಹಿಳೆಯರ ಸಮಸ್ಯೆಗಳ ಮೂಲ ಪುರುಷಪ್ರಧಾನ ಸಮಾಜದ ಹೃದಯದಲ್ಲಿದೆ. ಮೇಲ್ಜಾತಿ ಆಚರಣೆಗಳು ಕಟ್ಟುನಿಟ್ಟಾದ ನಿರ್ಬಂಧ ಹೊಂದಿದ್ದು ಬಾಲ್ಯವಿವಾಹ ಎನ್ನುವುದು ತಳಿಶುದ್ಧತೆ ಕುರಿತ ಅತಿರೇಕದ ಕಲ್ಪನೆಯ ಪ್ರತಿಫ‌ಲವಾಗಿದೆ. ಜಾತಿಶುದ್ಧತೆ ಕಾಯ್ದುಕೊಳ್ಳುವುದು ಹೇಗೆಂದರೆ ಹುಡುಗಿ ಸಂತಾನೋತ್ಪತ್ತಿ ಸಾಮರ್ಥ್ಯ ಗಳಿಸಿದ ಕೂಡಲೇ ಅವಳನ್ನು ಅವಳದೇ ಜಾತಿಯ ವರನಿಗೆ ಮಾತ್ರ ಲಭ್ಯವಾಗುವಂತೆ ಮೊದಲೇ ಮದುವೆ ಮಾಡಿಬಿಡುವುದು; ಮೊಟ್ಟಮೊದಲ ಋತುಸ್ರಾವವಾದ 16ನೇ ದಿನವೇ ಹುಡುಗಿಗೆ ಅವಳ ಗಂಡ ಗರ್ಭದಾನ ಮಾಡಲು ಅನುಕೂಲವಾಗುವಂತೆ ಮೊದಲೇ ಮದುವೆ ಮುಗಿಸುವುದು. ಮಹಾರಾಷ್ಟ್ರದ ಪೇಶ್ವೆಗಳು ಬ್ರಾಹ್ಮಣ್ಯದ ಪರಿಶುದ್ಧತೆಯನ್ನು ಎತ್ತಿಹಿಡಿಯಲು ಬಾಲ್ಯವಿವಾಹವನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರು. ಆದರೆ ವಸಾಹತುಶಾಹಿ ಆಗಮನದೊಂದಿಗೆ ಭಾರತೀಯ ಚಿಂತನಾಕ್ರಮವೂ ಸ್ವಲ್ಪ$ ಬದಲಾವಣೆ ಕಂಡಿತು. ಜಾತಿಶುದ್ಧತೆಯನ್ನು ನಿರಾಕರಿಸುವ ಅಂತರ್ಜಾತಿ ಮದುವೆಗಳೂ, ಜಾತಿಯ ಚೌಕಟ್ಟಿನಲ್ಲಿ ಒಪ್ಪಿಗೆ ಪಡೆಯದ ವಿಧವಾ ವಿವಾಹವೂ ಹೆಚ್ಚುಕಡಿಮೆ ಈ ಸಮಯದಲ್ಲೇ ಮುನ್ನೆಲೆಗೆ ಬಂದವು. 1829ರಲ್ಲಿ ಸತಿ ನಿರ್ಮೂಲನಾ ಕಾಯಿದೆ, 1856ರಲ್ಲಿ ವಿಧವಾ ಪುನರ್ವಿವಾಹ ಕಾಯಿದೆ ಜಾರಿಯಾದರೂ ಬಾಲ್ಯವಿವಾಹ ಕಾಯ್ದೆ ಜಾರಿಯಾಗಲು ಹಲವು ವರ್ಷ ಕಾಯಬೇಕಾಯಿತು. ಈಶ್ವರಚಂದ್ರ ವಿದ್ಯಾಸಾಗರ, ಬೆಹ್ರಾಮ್‌ ಮಲಬಾರಿಯಂತಹ ಹಲವರ ಪ್ರಯತ್ನದಿಂದ ಬಾಲ್ಯವಿವಾಹ ನಿಷೇಧ ಕಾನೂನು 1930ರಲ್ಲಿ ಜಾರಿಯಾಯಿತು.

        1872ರಲ್ಲಿ ಬ್ರಿಟಿಷ್‌ ಆಡಳಿತ "ಸಿವಿಲ್‌ ಮದುವೆ ಕಾಯಿದೆ' ಜಾರಿಗೊಳಿಸಿ, ಅದರಲ್ಲಿರುವ ಆ್ಯಕ್ಟ್ 3 ಭಾರತದಲ್ಲಿ ಮೊದಲ ಬಾರಿ ನಾಗರಿಕ ವಿವಾಹ ಎಂಬ ಪದವನ್ನು ವರ್ಣಿಸಿತು. ಅಂತಜಾìತಿ ವಿವಾಹಗಳು ಕಾನೂನುರೀತ್ಯಾ ಮಾನ್ಯವಾದ ಮೊದಲ ಕಾಯ್ದೆ ಇದು. ಈ ಕಾನೂನಿನನ್ವಯ ಗಂಡು ಹೆಣ್ಣು ಭಾರತೀಯರಾಗಿದ್ದು, ಇಬ್ಬರೂ ವಯಸ್ಕರಾಗಿದ್ದು, ಪರಸ್ಪರ ಒಪ್ಪಿಗೆ ಇದ್ದಲ್ಲಿ ಅವರ ಜಾತಿ ಬೇರೆಬೇರೆಯಾಗಿದ್ದರೂ, ಅವರ ಪಾಲಕ, ಪೋಷಕ ಮತ್ತು ಜಾತಿ ಸಮುದಾಯ ಒಪ್ಪದೇ ಇದ್ದರೂ ಅವರು ಕಾನೂನು ರೀತ್ಯಾ ಸತಿಪತಿಗಳಾಗಿರಲು ಸಾಧ್ಯವಿತ್ತು. ಈ ಕಾನೂನು ಪ್ರೇಮವಿವಾಹವನ್ನು ಮಾನ್ಯ ಮಾಡಿದ್ದರಿಂದ ತೀವ್ರ ವಿರೋಧ ಬಂತು. ಮದುವೆ ಸಮಯದಲ್ಲಿ ಮಧ್ಯವರ್ತಿ ಆಗಬೇಕಾದ್ದು ಸಮುದಾಯವೇ (ಜಾತಿ) ಹೊರತು ಪ್ರಭುತ್ವವಲ್ಲ, ಮದುವೆಯಲ್ಲಿ ವ್ಯಕ್ತಿಗಿಂತ ಸಮಾಜಕ್ಕೇ ಪ್ರಾಧಾನ್ಯ, ಹಾಗಾಗಿ ಇಂಥ ಮದುವೆಗಳು ಅನೈಸರ್ಗಿಕ ಎಂದೂ ದೂರಲಾಯಿತು.

        ಅಂದಿನ ಸಮಾಜಕ್ಕೆ ಜಾತಿ ಬಿಟ್ಟು ಆದ ಮದುವೆಯನ್ನು ಕಾನೂನುಬದ್ಧ ಎಂದು ಊಹಿಸಿಕೊಳ್ಳುವುದು ತುಂಬ ಕಷ್ಟವಿತ್ತು. ಈ ಕಾಯ್ದೆ ವಿರುದ್ಧ ತೀವ್ರ ದಾಳಿಯಾಗಿ, ಇದರ ಅನುಷ್ಠಾನದಿಂದ ಸಮಾಜದ ರಚನೆ, ಏಣಿಶ್ರೇಣಿ ಅಷ್ಟೇ ಅಲ್ಲ ಇಡೀ ವ್ಯವಸ್ಥೆಯೇ ಹಾಳಾಗುವುದೆಂದು ದೂರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಅಂತಜಾìತಿ ಮದುವೆಯಾದವರು ದ್ವೇಷಕ್ಕೊಳಗಾದರು ಹಾಗೂ ಅವರ ಮಕ್ಕಳನ್ನು "ಬೆರಕಿ' ಮಕ್ಕಳು

        (ಬಾಸ್ಟರ್ಡ್ಸ್‌) ಎನ್ನಲಾಯಿತು. ಒಬ್ಬರಂತೂ ಅದರ ವಿರುದ್ಧ ಬರೆಯುತ್ತ¤, ಜಗತ್ತಿನ ಯಾವ ಭಾಗದಲ್ಲೂ ಇಲ್ಲದ, ಭಾರತದಲ್ಲಿ ಮಾತ್ರ ಇರುವ ಮಹತ್ವದ ವಿಷಯ ರಕ್ತಶುದ್ಧಿಯದು. ಇಲ್ಲಿ ಪ್ರತಿ ಜಾತಿಯೂ ತನ್ನ ರಕ್ತಶುದ್ಧಿಯನ್ನು ಕಾಪಾಡಿಕೊಂಡು ಬರುತ್ತಿದೆ ಎಂದು ಒಳವಿವಾಹ ವ್ಯವಸ್ಥೆಯ ಬಗ್ಗೆ ಹೆಮ್ಮೆ ಪಟ್ಟರು. ಭಾರತೀಯ ನಾರಿಯ ಪಾತಿವ್ರತ್ಯ ದಂತಕಥೆಯಾಗಿದೆ ಎಂದು ಇನ್ನೊಬ್ಬರೆಂದರು. ಭಾರತೀಯ ಮಹಿಳೆಯೆಂದರೆ ನೈತಿಕ ಸಂತತಿಯನ್ನು ಹೆರುವವಳು ಎಂದು ಮಗದೊಬ್ಬರೆಂದರು. ಖುದ್ದು ನ್ಯಾಯಾಧೀಶರೊಬ್ಬರು ಪಾಲಕರು ತಮ್ಮ ಮಗಳನ್ನು ಕೊಂದಾರೇ ವಿನಹ ಬೇರೆ ಜಾತಿಯವನಿಗೆ ಕೊಟ್ಟು ಮದುವೆ ಮಾಡಲಾರರು ಎಂದು ಸರ್ಕಾರಕ್ಕೆ ಪತ್ರ ಬರೆದರು. 

        ಈ ಎಲ್ಲ ಪ್ರತಿರೋಧದಿಂದ ಒಂದು ಬದಲಾವಣೆಯಾಯಿತು. ಮೊದಲು ಮದುವೆಗೆ ಮುಂಚೆ 5 ದಿನ ಹಾಗೂ ನಂತರ 5 ದಿನ ಯಾವುದೇ ತಕರಾರು ಬರದೇ ಇದ್ದಲ್ಲಿ ಮದುವೆ ಊರ್ಜಿತ ಎಂದು ಹೇಳಲಾಗಿದ್ದರೆ ನಂತರ ಆ ಅವಧಿಯನ್ನು 15 ದಿವಸಗಳಿಗೇರಿಸಲಾಯಿತು. ಈಗ ಆ ಅವಧಿಯನ್ನು ಒಂದು ತಿಂಗಳು ಮೊದಲು, ಒಂದು ತಿಂಗಳು ನಂತರ ಎಂದು ನಿಗದಿಗೊಳಿಸಲಾಗಿದೆ. ಕೊನೆಗೂ ಕಾಯ್ದೆ ಜಾರಿಯಾಗಿ ಹೆಣ್ಣಿನ ವಯಸ್ಸನ್ನು 18ರಿಂದ 21ಕ್ಕೇರಿಸಿದಾಗ, ರೆಸಿಡೆನ್ಸ್‌ ರಿಕ್ವೆ„ರ್‌ವೆುಂಟನ್ನು 15 ದಿನಗಳಿಗೇರಿಸಿದಾಗ ಪ್ರೇಮವಿವಾಹಗಳು ಅಪರಾಧದಂತೆ, ಸಮಾಜಬಾಹಿರವೆಂಬಂತೆ ಬಿಂಬಿಸಲ್ಪಟ್ಟವು. ಇದು ಹೆಚ್ಚು ಕಡಿಮೆ ಇಂದೂ ಹಾಗೆಯೇ ಮುಂದುವರೆದುಕೊಂಡು ಬಂದಿವೆ.

        ನಾಗರಿಕ ಮದುವೆ ಮತ್ತು ಅತ್ಯಾಚಾರ ಕಾಯ್ದೆ ಮಾಡುವಾಗ ಮತ್ತೂಂದು ವಿಷಯ ಅನಾಯಾಸವಾಗಿ ಗಮನ ಸೆಳೆಯಿತು. ಅದು ಮದುವೆಗಾಗಿನ ಒಪ್ಪಿಗೆ. 1861ರಲ್ಲಿ "ಒಪ್ಪಿಗೆ ವಯಸ್ಸು ಕಾಯ್ದೆ' (ಏಜ್‌ ಆಫ್ ಕನ್ಸೆಂಟ್‌ ಬಿಲ್‌) ಜಾರಿಯಾಯಿತು. ಅದರ ಪ್ರಕಾರ ಮದುವೆಯಾಗಿದ್ದರೂ ಲೈಂಗಿಕ ಸಂಪರ್ಕಕ್ಕೆ ಒಪ್ಪಿಗೆ ಕೊಡಲು ಹೆಣ್ಣಿಗೆ 10 ವರ್ಷ ಆಗಿರಬೇಕು ಎಂದು ನಿಗದಿಯಾಗಿತ್ತು. ಅದುವರೆಗೂ ಭಾರತ ಸಮಾಜದಲ್ಲಿ ಮದುವೆಗೆ ಹೆಣ್ಣಿನ ಒಪ್ಪಿಗೆ ಪಡೆಯುವ ಪರಿಪಾಠವೇ ಇರಲಿಲ್ಲ. ಒಪ್ಪಿಗೆ ಮತ್ತು ಸ್ವತಂತ್ರ ಅಭಿವ್ಯಕ್ತಿ ಈ ಎರಡಕ್ಕೂ ಒಂದು ಕನಿಷ್ಠ ವಯಸ್ಸಾಗಿರಬೇಕೆಂದು ಯಾರೂ ಭಾವಿಸಿರಲಿಲ್ಲ. ಅಲ್ಲದೆ,  ಬಾಲ್ಯವಿವಾಹವೇ ಸಾಮಾನ್ಯವಾಗಿದ್ದ ಕಾಲದಲ್ಲಿ ಒಪ್ಪಿಗೆ ಎಂದರೆ ಹುಡುಗ-ಹುಡುಗಿಯ ಪಾಲಕ-ಪೋಷಕರ ಒಪ್ಪಿಗೆಯೇ ಆಗಿತ್ತು.

        ಒಂದು ವಿವಾದಗ್ರಸ್ತ ಕೇಸು 1880ರಲ್ಲಿ ವಿಚಾರಣೆಗೆ ಬಂತು. ಅದು ಒಪ್ಪಿಗೆ ವಯಸ್ಸಿನ ವಿವಾದವನ್ನು ಮುನ್ನೆಲೆಗೆ ತಂದಿತು. ಮುಂಬಯಿಯ ರುಕಾ¾ಬಾಯಿ ಎಂಬ 22 ವರ್ಷದ ಮಹಿಳೆ 11 ವರ್ಷದ ಹುಡುಗಿಯಾಗಿದ್ದಾಗ ದಾದಾಜಿಯನ್ನು ಮದುವೆಯಾಗಿದ್ದಳು. ಅವರ ಬಡಗಿ ಸಮುದಾಯವು ಆಗ ಮುಂಬಯಿಯಲ್ಲಿ ಸಾಕಷ್ಟು ಸ್ಥಿತಿವಂತರಾಗಿದ್ದ ಕಾಲ. ರುಕಾ¾ಬಾಯಿಗೆ ತಂದೆಯಿರಲಿಲ್ಲ. ಅವಳ ತಾಯಿ ಸಮಾಜಸೇವಕರಾಗಿದ್ದ ವೈದ್ಯರೊಬ್ಬರನ್ನು ಎರಡನೇ ಮದುವೆಯಾಗಿದ್ದರಿಂದ ಆಸ್ತಿಗೆ ರುಕಾ¾ಬಾಯಿ ಏಕೈಕ ಹಕ್ಕುದಾರಳಾಗಿದ್ದಳು. ತನ್ನ ಮಲತಂದೆಯ ಪ್ರೋತ್ಸಾಹದಿಂದ ರುಕಾ¾ಬಾಯಿ ವಿದ್ಯಾಭ್ಯಾಸ ಮುಂದುವರೆಸಿದಳು. ದಾದಾಜಿ ಮನೆ ಅಳಿಯನಾಗಿ ಬಂದ. ಹೀಗೇ 8-9 ವರ್ಷ ಕಳೆಯಿತು. ರುಕಾ¾ಬಾಯಿ ವಯಸ್ಕಳಾದರೂ ಅವರಿಬ್ಬರ ನಡುವೆ ದೈಹಿಕ ಸಂಪರ್ಕ ಏರ್ಪಡಲಿಲ್ಲ. ದಾದಾಜಿಯನ್ನು ರುಕಾ¾ಬಾಯಿ ಒಪ್ಪಿಕೊಳ್ಳದ್ದರಿಂದ ಅವನು ತನ್ನ ಮನೆಗೆ ಹೋಗಿ ಅವಳನ್ನು ಅಲ್ಲಿಗೇ ಬರುವಂತೆ ಕೇಳಿದ. ಆದರೆ, ರುಕಾ¾ಬಾಯಿ ಬೇರೊಬ್ಬರ ಆಶ್ರಯದಲ್ಲಿರತೊಡಗಿದಳು. ಮದುವೆಯಾಗಿದ್ದರೂ ಅವರಿಬ್ಬರೂ ದೂರವಿದ್ದು ಅದಾಗಲೇ 11 ವರ್ಷ ಆಗಿತ್ತು. ರುಕಾ¾ಬಾಯಿಯೆ ಅನಾಮಿಕ ಹೆಸರುಗಳಲ್ಲಿ ಸುದ್ದಿ ಪತ್ರಿಕೆಗಳಿಗೆ ಬಾಲ್ಯವಿವಾಹ ಹಾಗೂ ವಿಧವಾ ಪದ್ಧತಿಗಳನ್ನು ಅನಿಷ್ಠವೆಂದು ಟೀಕಿಸಿ ಬರೆಯುತ್ತಿದ್ದಳು. ಅಲ್ಲದೇ ಜಾತಿಯ ಚೌಕಟ್ಟು ಇರುವುದರಿಂದ ಹೆಣ್ಣಿನ ಆಯ್ಕೆಗೆ ಮುಕ್ತ ಅವಕಾಶಗಳಿಲ್ಲ ಎಂದೂ ದೂರಿದ್ದಳು. ಆಗ ದಾದಾಜಿ ಕೋರ್ಟಿಗೆ ಹೋದ. ಕೋರ್ಟಿನಲ್ಲಿ ರುಕಾ¾ಬಾಯಿ ತನಗೆ ಅಪ್ರಾಪ್ರ ವಯಸ್ಸಿದ್ದಾಗಲೇ ಮದುವೆ ಮಾಡಿದ್ದು, ತಾಯ್ತಂದೆಯರು ಒಪ್ಪಿ$ಮಾಡಿದ ಮದುವೆಗೆ ತಾನೇಕೆ ಜವಾಬ್ದಾರಳಾಗಬೇಕೆಂದು ಮರು ಪ್ರಶ್ನಿಸಿದಳು. ಆಗ ಹಿಂದೂ ಸಮಾಜದಲ್ಲಿ ಬಾಲ್ಯ ವಿವಾಹ ಸಾಮಾನ್ಯವಾಗಿತ್ತು ಹಾಗೂ ಬಾಲಕಿಯ ಒಪ್ಪಿಗೆಯನ್ನು ಯಾರೂ ಪಡೆಯುತ್ತಿರಲಿಲ್ಲ. ಕೊನೆಗೆ ರುಕಾ¾ಬಾಯಿಗೆ ಇಷ್ಟವಿಲ್ಲದ ಕಾರಣ ಗಂಡನ ಮನೆಗೆ ಹೋಗಬೇಕಾಗಿಲ್ಲವೆಂದು ತೀರ್ಪು ನೀಡಲಾಯಿತು. ದಾದಾಜಿ ಅಲ್ಲಿಗೇ ನಿಲ್ಲದೇ ಮೇಲ್ಮನವಿ ಸಲ್ಲಿಸಿದ. ಕೇಸು ಮುಂದುವರೆಯುತ್ತ ಕಾಯ್ದೆಯ ದ್ವಂದ್ವಗಳನ್ನೂ, ದುರ್ಬಲ ಅಂಶಗಳನ್ನೂ ಬಯಲುಗೊಳಿಸಿತು.

        ಈ ಕಾಯ್ದೆಯು ಒಪ್ಪಿಗೆ ಪಡೆದು ಮದುವೆಯಾಗುವ ಪಾಶ್ಚಾತ್ಯ ಸಮಾಜಕ್ಕೆ ಅನ್ವಯವಾಗುವಂತೆ ಭಾರತಕ್ಕೆ ಹೊಂದಿಕೊಳ್ಳುತ್ತಿರಲಿಲ್ಲ. ಭಾರತದ ಬಹುಪಾಲು ಮದುವೆಗಳು ಬಾಲ್ಯವಿವಾಹಗಳೇ ಆಗಿದ್ದವು. ಲಾರ್ಡ್‌ ಮೆಕಾಲೆ ಭಾರತೀಯ ದಂಡ ಸಂಹಿತೆಯನ್ನು ರೂಪಿಸುತ್ತ ಒಪ್ಪಿಗೆಯ ವಯೋಮಿತಿ ಕನಿಷ್ಠ 15-16 ವರ್ಷ ಎಂದು ಹೇಳಿದಾಗ ಭಾರತದ ಎಲ್ಲ ಮದುವೆಗಳೂ ಕಾನೂನಿನ ಪ್ರಕಾರ ಅಸಿಂಧುವಾಗುವ ಅಪಾಯ ಒದಗಿತು. ಎಂದರೆ ಭಾರತ ಸಮಾಜದಲ್ಲಿ ಒಪ್ಪಿಗೆ-ಬಾಲ್ಯವಿವಾಹ ಎರಡೂ ಒಟ್ಟಿಗೆ ಹೋಗಲು ಸಾಧ್ಯವೇ ಇರಲಿಲ್ಲ.

        ರುಕಾ¾ಬಾಯಿಯ ಕೇಸಿನಲ್ಲಿ ಮೇಲಿನ ಕೋರ್ಟು ಗಂಡನ ಮನೆಗೆ ಹೋಗಲೊಪ್ಪದ ಅವಳಿಗೆ ಜೈಲು ಶಿಕ್ಷೆ ವಿಧಿಸಿತು. ಆದರೆ, ಅವಳು ದಾದಾಜಿಗೆ 2000 ರೂಪಾಯಿ ಕೊಟ್ಟು ಸ್ವಾತಂತ್ರ್ಯವನ್ನು "ಗಳಿಸಿ'ದಳು. ಇದು ಸಂಪ್ರದಾಯವಾದಿಗಳಿಗೆ ಗೆಲುವಿನಂತೆಯೂ, ಬಾಲ್ಯವಿವಾಹವನ್ನು ವಿರೋಧಿಸುತ್ತಿದ್ದವರಿಗೆ ಹಿನ್ನಡೆಯಾಗಿಯೂ ತೋರಿತು. ಭಾರತದ ಸಾಮಾಜಿಕ ಅನಿಷ್ಟಗಳ ಕುರಿತು, ವಿಶೇಷವಾಗಿ ಬಾಲ್ಯವಿವಾಹದ ವಿರುದ್ಧವಾಗಿ ಹೋರಾಡುತ್ತಿದ್ದ ಬೆಹ್ರಾಮಿj ಮಲಬಾರಿ ಇದನ್ನೊಂದು ಸೋಲೆಂಬಂತೆ ಪರಿಗಣಿಸಿದರು. ಬಾಲ್ಯವಿವಾಹ ರದ್ದತಿಗಷ್ಟೇ ಅಲ್ಲದೇ, ಒಪ್ಪಿಗೆ ವಯಸ್ಸನ್ನು ಕಾಯ್ದೆ ಮೂಲಕ ಹೆಚ್ಚಿಸಬೇಕೆಂದು ಮಲಬಾರಿ, ಪಂಡಿತ ರಮಾಬಾಯಿ, ಆನಂದಿಬಾಯಿ ಸಮೇತ ಹಲವರು ಒತ್ತಾಯ ತಂದರು. 1891ರಲ್ಲಿ "ಒಪ್ಪಿಗೆ ವಯಸ್ಸು ಕಾಯ್ದೆ' ಜಾರಿಯಾಯಿತು. ಅದನ್ನು ಭಾರತೀಯ ಸಂಸ್ಕೃತಿಯ ಮೇಲಿನ ವಸಾಹತುಶಾಹಿ ದಬ್ಟಾಳಿಕೆ ಎಂದು ಬಾಲಗಂಗಾಧರ ತಿಲಕರೂ ಸೇರಿದಂತೆ ಮುಖ್ಯವಾಹಿನಿಯ ಹಲವು ನಾಯಕರು ವಿರೋಧಿಸಿದರು.

        ನಿಜವಾಗಿ ಒಪ್ಪಿಗೆ ವಯಸ್ಸಿನ ಚರ್ಚೆ ಶುರುವಾಗಿದ್ದು 1889ರಲ್ಲಿ 11 ವರ್ಷದ ಫ‌ೂಲಮ್ನಿ ಎಂಬ ವಿವಾಹಿತ ಬಂಗಾಲಿ ಹುಡುಗಿ, 35 ವರ್ಷದ ತನ್ನ ಗಂಡ ಹರಿ ಮೋಹನ ಮೈತಿಯ ಜೊತೆ ದೈಹಿಕ ಸಂಪರ್ಕದ ಸಮಯದಲ್ಲಿ ತೀವ್ರ ರಕ್ತಸ್ರಾವವಾಗಿ ತೀರಿಕೊಂಡಾಗ. ಎಳೆಯ ಹುಡುಗಿಯ ದಾರುಣ ಸಾವು ಒಪ್ಪಿಗೆ ವಯಸ್ಸನ್ನು 10ರಿಂದ 12ಕ್ಕೇರಿಸುವಂತೆ ಮಾಡಿತು. ಎಂದರೆ 12 ವರ್ಷದ ಒಳಗೆ ಗಂಡನೇ ಆದರೂ ಹುಡುಗಿಯ ಜೊತೆ ಲೈಂಗಿಕ ಸಂಪರ್ಕ ಹೊಂದಿದಲ್ಲಿ ಅದು ಅತ್ಯಾಚಾರ ಎಂದು ಪರಿಗಣಿತವಾಯಿತು. ಇದಾದ ನಂತರ ಒಪ್ಪಿಗೆ ವಯಸ್ಸಿನ ಮೊದಲೇ ಓಡಿಹೋದ ಜೋಡಿಗಳಲ್ಲಿ ಗಂಡನ್ನು "ಅಪಹರಣ'ದ ತಪ್ಪಿಗೆ ಶಿಕ್ಷೆಗೊಳಪಡಿಸಿದರೆ, ಓಡಿಹೋದ ಹುಡುಗಿಗೆ ಅಪಹರಣಕ್ಕೆ ಕುಮ್ಮಕ್ಕು ಕೊಟ್ಟಳೆಂಬ ಕಾರಣಕ್ಕೆ ಶಿಕ್ಷಿಸುವುದು ಮುಂದುವರೆಯಿತು.

        ಅಂದಿನ ಸಾಮಾಜಿಕ ಸುಧಾರಣಾಕಾರರು ಮಹಿಳೆ ಸಮಾಜ ಕಟ್ಟುವಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಬಯಸಿ ಶಿಕ್ಷಣ, ವಿಧವಾ ಪದ್ಧತಿ ರದ್ದತಿ ಇತ್ಯಾದಿಗಳ ಸಲುವಾಗಿ ಶ್ರಮಿಸಿದರೂ, ಸ್ವತಂತ್ರಪೂರ್ವದಲ್ಲಿ ಜ್ಯೋತಿಬಾ ಫ‌ುಲೆ ಹಾಗೂ ಸ್ವಾತಂತ್ರಾéನಂತರ ಅಂಬೇಡ್ಕರರನ್ನು ಹೊರತುಪಡಿಸಿ ಮಹಿಳಾ ಚಳುವಳಿ ಜಾತಿ ಪ್ರಶ್ನೆಯನ್ನು ದೂರವೇ ಇಟ್ಟಿತು. ಆದರೆ, ಜಾತಿಪದ್ಧತಿಯೆನ್ನುವುದು ಅಖಂಡ ವ್ಯವಸ್ಥೆ. ಹೀಗಾಗಿ, ವ್ಯಕ್ತಿಗತ ಸುಧಾರಣೆಗಾಗಿ ಕಾನೂನು ಬಂದರೂ ಒಳವಿವಾಹ, ಜಾತಿ ಆಚರಣೆಗಳು ಮುಂದುವರೆದಂತೆ ವರದಕ್ಷಿಣೆ, ಬಾಲ್ಯವಿವಾಹಗಳೂ ವ್ಯವಸ್ಥೆಯ ಇನ್ನೊಂದು ಭಾಗವಾಗಿ ಮುಂದುವರೆದವು.

        ಈ ಒಪ್ಪಿಗೆ ವಯಸ್ಸಿನ ವಿವಾದ ಇಂದಿಗೂ ನಿಂತಿಲ್ಲ. "ಪೆನೆಟ್ರೇಟಿವ್‌' ಅಲ್ಲದ ಲೈಂಗಿಕ ಸಂಪರ್ಕಕ್ಕೆ ಒಪ್ಪಿಗೆ ವಯಸ್ಸು 12 ವರ್ಷ (ವಿವಾಹದ ಹೊರತಾಗಿ) ಎಂದು ನಿಗದಿ ಮಾಡಿದ ಕಾಯ್ದೆಯೊಂದು ಇದೇ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಸಂಸತ್ತಿನ ಮುಂದೆ ಚರ್ಚೆಗೆ ಬಂದಾಗ ತೀವ್ರ ವಿವಾದಗಳೆದ್ದಿದ್ದನ್ನು ಇಲ್ಲಿ ನೆನೆಯಬಹುದು. ಈಗಲೂ ವ್ಯಾಟಿಕನ್‌ ನಗರರಾಷ್ಟ್ರದಲ್ಲಿ ಒಪ್ಪಿಗೆ ವಯಸ್ಸು 12 ಅಂತೆ! ಇದು ಸ್ಪೇನ್‌ನಲ್ಲಿ 13, ಅಮೆರಿಕದಲ್ಲಿ 16, ಮಡಗಾಸ್ಕರ್‌ನಲ್ಲಿ 20 ವರ್ಷ! ಬಹುಪಾಲು ಇಸ್ಲಾಮಿಕ್‌ ದೇಶಗಳು ವಿವಾಹಬಾಹಿರ ಲೈಂಗಿಕತೆಗೆ ಅವಕಾಶವಿಲ್ಲವೆಂದು ಒಪ್ಪಿಗೆ ವಯಸ್ಸಿನ ಬಗ್ಗೆ ಮಾತಾಡುವುದಿಲ್ಲ. ಎಷ್ಟೇ ವಯಸ್ಸಾದರೂ ವಿವಾಹಕ್ಕೆ ಅನುಮತಿ ಸಿಕ್ಕರೆ ಲೈಂಗಿಕ ಸಂಪರ್ಕಕ್ಕೂ ಒಪ್ಪಿಗೆ ಸಿಕ್ಕಂತೆಯೇ ಎಂಬ ಧೋರಣೆ ಅದರ ಹಿಂದಿದೆ. 

        ಪ್ರಸ್ತುತ ಬಹುಪಾಲು ಕಾಯ್ದೆ ಕಾನೂನುಗಳು ಮಹಿಳಾಪರವಾಗಿಯೇ ಇದ್ದರೂ, ಸಮಾಜವು ವಿವಾಹದ ವಿಷಯದಲ್ಲಿ ಇನ್ನೂ ಉದಾರವಾಗಿ ಚಿಂತಿಸಬೇಕಾಗಿದೆ. ಇಲ್ಲವಾದಲ್ಲಿ ಸಾಂವಿಧಾನಿಕ ಪ್ರಯತ್ನಗಳೆಲ್ಲ ಕಾಗದದ ಹುಲಿಗಳಾಗಿಯೇ ಉಳಿಯುತ್ತವೆ. ಬಾಲ್ಯವಿವಾಹ ತಡೆಯಲು ಯತ್ನಿಸಿದ ರಾಜಸ್ಥಾನದ ಭನವಾರಿ ದೇವಿಯಂಥವರು ಸಾಮೂಹಿಕ ಅತ್ಯಾಚಾರದ "ಶಿಕ್ಷೆ'ಗೆ ಗುರಿಯಾಗುತ್ತಲೇ ಇರುತ್ತಾರೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಒಂದು ವರ್ಷದ ಹಿಂದೆ ಆಕೆಗೆ ಕ್ಯಾನ್ಸರ್‌. ಆಕೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಆಕೆ ಮತ್ತೂಮ್ಮೆ ಬಣ್ಣ ಹಚ್ಚುವುದೇ ಸಂಶಯ ಹೆಚ್ಚಾಗುತ್ತಿದೆ..
      • ಈ ವಿಭಾಗದಲ್ಲಿಯೂ ಇದೆ
      • ಕೊಲೆಸ್ಟರಾಲ್‌ ನಿಯಂತ್ರಣಕ್ಕಾಗಿ
        ಮೆಂತ್ಯೆಯನ್ನು ಹುರಿದು ಪುಡಿ ಮಾಡಿ ಬೆಳಗ್ಗೆ ಅಥವಾ ಮಧ್ಯಾಹ್ನ ಆಹಾರಕ್ಕೆ ಮೊದಲು ಬಿಸಿನೀರಿನಲ್ಲಿ ಅಥವಾ ಮಜ್ಜಿಗೆಯಲ್ಲಿ ಕದಡಿ ಕೊಡಿ. ಪ್ರಮಾಣ 1/2 - 1 1/2 ಚಮಚ...
      image
      • Copyright @ 2009 Udayavani.All rights reserved.
      • Designed & Hosted By 4cplus