Thursday, May 23, 2013
Last Updated: 9:28:36 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮಧುರ ಮಾತೃತ್ವ- 37
    • ತಾಯಿಯ ಕ್ಷೇಮ ಸಮಾಚಾರ
    • ತಾಯಿಯ ಕ್ಷೇಮ ಸಮಾಚಾರ.

      • ಡಾ. ಅನುರಾಧಾ ಕಾಮತ್‌ | Dec 14, 2012

        ನವಮಾಸ ತನ್ನ ದೇಹದ ರಸರಕ್ತ ಮಾಂಸಗಳನ್ನು ಉಣಿಸಿ, ಪೊರೆದು, ಹೊತ್ತು-ಹೆತ್ತು ಸಲಹುವ ನೋವಲ್ಲೇ ನಲಿವ ಮಾತೆಗೆ, "ಮಾತೃದೇವೋ ಭವ' ಎಂದು ಮೊದಲ ನಮನ, ಆದ್ದರಿಂದಲೇ.

        ಅದೊಂದು ಕಾಲವಿತ್ತು, ಅಜ್ಞಾನ, ಸೌಕರ್ಯಗಳ ಕೊರತೆ, ಮೂಢನಂಬಿಕೆ, ಕಾಳಜಿಯ ಕೊರತೆ, ಔಷಧೋಪಚಾರದ ನ್ಯೂನತೆ - ಇವೇ ಮೊದಲಾದವುಗಳು ಗರ್ಭಿಣೀ ಅವಸ್ಥೆಯಲ್ಲಿ ಅಥವಾ ಪ್ರಸವದ ಸಮಯದಲ್ಲಿ ಮಾತೆಯ ಮರಣಕ್ಕೆ ಹೇತುಗಳಾಗಿದ್ದವು.

        ಆದರೆ, ಇಂದಿನ ಆಧುನಿಕ ಕಾಲದಲ್ಲಿ ವೈಜ್ಞಾನಿಕತೆಯ, ತಾಂತ್ರಿಕತೆಯ ಉಚ್ಛಾ†ಯದ ಸ್ಥಿತಿಯಲ್ಲಿ ಸೌಲಭ್ಯ ಬಾಹುಳ್ಯವಿರುವೆಡೆಯಲ್ಲಿ , ಅಕ್ಷರಸ್ಥರು ಹೆಚ್ಚಿರುವ ಕಾಲದಲ್ಲಿ - ಇನ್ನೂ ಗಮನಾರ್ಹ, ಶೋಚನೀಯ ಎನ್ನುವಷ್ಟು ಮಾತೃಮರಣದ ಅಂಕಿಅಂಶಗಳು ಭಾರತದಂತಹ ಅಭಿವೃದ್ಧಿಶೀಲ ದೇಶಗಳನ್ನು ಕಾಡುತ್ತಿವೆ.

        ಇತ್ತೀಚೆಗೆ, ವಿದೇಶದಲ್ಲಿ ಮರಣ ಹೊಂದಿದ ಭಾರತೀಯ ಗರ್ಭಿಣಿ ಸ್ತ್ರೀಯ ಮರಣ ವಿಶ್ವಾದ್ಯಂತ ಸಂಚಲನ ಮೂಡಿಸಿದೆ. ಇದೊಂದು ಜಾಗೃತಿಯ ಘಂಟೆ. ಪ್ರತೀವರ್ಷ ವಿಶ್ವಾದ್ಯಂತ ಐದು ಲಕ್ಷಕ್ಕೂ ಮಿಕ್ಕಿ ಗರ್ಭಿಣಿ ಸ್ತ್ರೀಯರು ಪ್ರಸವದ ಸಮಯದಲ್ಲಿ ಅಥವಾ ಪ್ರಸವದ ಬಳಿಕ ಸಾವನ್ನಪ್ಪುತ್ತಾರೆ.  ಅದರಲ್ಲಿ ನಾಲ್ಕನೇ ಒಂದು ಭಾಗದಷ್ಟು ಮಾತೃಮರಣ ಭಾರತ ದೇಶ ಒಂದರಲ್ಲೇ ಉಂಟಾಗುತ್ತಿದೆ ಎಂದರೆ ಖೇದಕರ ಸಂಗತಿ.

        ಭಾರತದಲ್ಲಿ ದಕ್ಷಿಣ ಭಾರತಕ್ಕಿಂತ, ಉತ್ತರ ಭಾರತದಲ್ಲೇ ಹೆಚ್ಚು ಮಾತೃ ಮರಣ ಸಂಭವಿಸುತ್ತಿದೆ. ಅಂತೆಯೇ ನಗರ ಪ್ರದೇಶಗಳಿಗಿಂತ ಗ್ರಾಮಾಂತರ ಪ್ರದೇಶಗಳಲ್ಲಿ ಮಾತೃಮರಣದ ಅಂಕಿಸಂಖ್ಯೆ ಹೆಚ್ಚಿದೆ.

        ವಿಶ್ವ ಆರೋಗ್ಯ ಸಂಸ್ಥೆಯು ಮಾತೃಮರಣವನ್ನು ಹೇಗೆ ವಿವರಿಸುತ್ತದೆ. "ಯಾವುದೇ ಗರ್ಭಿಣಿ ಸ್ತ್ರೀ, ಪ್ರಸವದ ಸಮಯದಲ್ಲಿ ಅಥವಾ ಪ್ರಸವಾನಂತರದ 42 ದಿನಗಳ ಒಳಗೆ ಪ್ರಸವ ಸಂಬಂಧೀ ತೊಂದರೆಗಳಿಂದ ಮರಣವನ್ನಪ್ಪಿದರೆ ಅದನ್ನು ಮಾತೃಮರಣವೆಂದು ಪರಿಗಣಿಸಲಾಗುತ್ತದೆ.

        ಭಾರತದಲ್ಲಿ ನಡೆಸಿದ ಸರ್ವೇಗಳ ಪ್ರಕಾರ 60-70 ಪ್ರತಿಶತ ಮಾತೃಮರಣವನ್ನು ಮುಂಜಾಗರೂಕತೆಯ ಕ್ರಮ-ವಿಧಾನಗಳಿಂದ ತಪ್ಪಿಸಬಹುದು.

        ಪರಿಹಾರೋಪಾಯಗಳು

        20 ವರ್ಷಕ್ಕಿಂತ ಮೊದಲು ಗರ್ಭಧಾರಣೆಯಾದ ಸ್ತ್ರೀಯರಲ್ಲಿ, 35 ವರ್ಷಕ್ಕೂ ಮೇಲ್ಪಟ್ಟು ಮೊದಲ ಬಾರಿ ಗರ್ಭ ಧರಿಸಿದ ಸ್ತ್ರೀಯರಲ್ಲಿ , ತೀವ್ರ ಶಕ್ತಿಹೀನತೆಯಿಂದ ಬಳಲುವ ಗರ್ಭಿಣೀ ಸ್ತ್ರೀಯರಲ್ಲಿ , ಈ ಮುಂಚೆ ಒಂದು ಅಥವಾ ಒಂದಕ್ಕಿಂತಲೂ ಹೆಚ್ಚು ಬಾರಿ ಸಿಸೇರಿಯನ್‌ ಶಸ್ತ್ರಕ್ರಿಯೆಯಾದ ಸಂದರ್ಭಗಳಿದ್ದ ಗರ್ಭಿಣೀ ಸ್ತ್ರೀಯರಲ್ಲಿ , ಗರ್ಭಿಣಿಯರ ಎತ್ತರ 145 ಸೆಂ.ಮೀ.ಗಿಂತಲೂ ಕಡಿಮೆ ಇರುವ ಸಂದರ್ಭಗಳಲ್ಲಿ , ಜಲಗರ್ಭ, ಅವಳಿಗರ್ಭ, ಟಾಕ್ಸಿಮಿಯಾ, ಮಧುಮೇಹ, ಅಧಿಕ ರಕ್ತದೊತ್ತಡ, ಜಾಂಡಿಸ್‌ ಕಾಯಿಲೆ ಉಂಟಾದ ಗರ್ಭಿಣಿ ಸ್ತ್ರೀಯರಲ್ಲಿ ಕೈಕಾಲು ಮತ್ತು ಮೈಗಳಲ್ಲಿ ಊತ ಕಂಡುಬಂದಾಗ, ತೀವ್ರತರವಾದ ವಾಂತಿಯಿಂದ ಬಳಲುತ್ತಿದ್ದಾಗ (ತೀವ್ರ ಗರ್ಭಿಣೀ ವಮನದಲ್ಲಿ) ಗರ್ಭಸ್ಥ ಶಿಶುವಿನ ಚಲನೆ ಸ್ಥಗಿತವಾದ ಸಂದರ್ಭಗಳಲ್ಲಿ , ಅತಿಯಾದ ರಕ್ತಸ್ರಾವ ಉಂಟಾಗುತ್ತಿರುವಾಗ - ಇವೇ ಮೊದಲಾದ ಸನ್ನಿವೇಶ ಹಾಗೂ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆ , ಕಾಳಜಿ, ಸೂಕ್ತ ತಪಾಸಣೆ, ಔಷಧೋಪಚಾರ ನೀಡುವುದರಿಂದ ಮಾತೃ ಮರಣವನ್ನು ತಡೆಗಟ್ಟಬಹುದು. ಇಂತಹ ಸಂದರ್ಭಗಳಲ್ಲಿ ಮಾತೆಗೂ ಹಾಗೂ ಗರ್ಭಸ್ಥ ಶಿಶುವಿಗೂ ತೊಂದರೆ ಇರುವುದರಿಂದ ಸೂಕ್ತ ಕಾಳಜಿ, ಆರೈಕೆ, ತುರ್ತು ಕ್ರಮಗಳು ತಾಯಿ ಮತ್ತು ಮಗು ಇಬ್ಬರ ಪ್ರಾಣಗಳನ್ನು ರಕ್ಷಿಸಬಲ್ಲವು.

        ಅಂತೆಯೇ ತೀವ್ರವಾದ ರಕ್ತಸ್ರಾವ, ಅನಿಯಮಿತ ರಕ್ತದೊತ್ತಡದ ತೊಂದರೆ, ಬಾಣಂತಿಯಲ್ಲಿ ಸೋಂಕು, ಪೂಯ ಉತ್ಪತ್ತಿ, ಗರ್ಭಪಾತ, ಗರ್ಭಸ್ರಾವ, ಹೃತ್‌ಸಂಬಂಧೀ ಕಾಯಿಲೆ, ಕ್ಯಾನ್ಸರ್‌, ಅನಿಯಂತ್ರಿತ ಮಧುಮೇಹ, ಜಾಂಡಿಸ್‌ ಕಾಯಿಲೆ, ವಿವಿಧ ಸೋಂಕು ರೋಗಗಳು, ಪ್ರಸವದ ಸಮಯದಲ್ಲಿ ಹಾಗೂ ತದನಂತರ ಕಂಡುಬರುವ ತೀವ್ರತರ ಆರೋಗ್ಯ ವೈಪರೀತ್ಯ - ಇವೆಲ್ಲವೂ ಮಾತೃಮರಣದ ಮುಖ್ಯ ಹೇತುಗಳಾಗಿವೆ.

        ಆರೋಗ್ಯ ಸಂಬಂಧೀ ತೊಂದರೆಗಳಲ್ಲದೆ, ಸಾಮಾಜಿಕ, ಆರ್ಥಿಕ ಹಾಗೂ ಧಾರ್ಮಿಕ ಕಾರಣಗಳಿಂದಲೂ ಮಾತೃಮರಣ ಸಂಭವಿಸುವುದನ್ನು ಗಮನಿಸಿದಾಗ ಆತಂಕ ಮೂಡದಿರುವುದಿಲ್ಲ.

        ಮಾತೃತ್ವವೆಂಬುದು ಒಂದು ಮಧುರ ಅನುಭೂತಿ. ಆದರೆ ಗರ್ಭಿಣಿ ಸ್ತ್ರೀಯರ ಕುರಿತಾದ ನಿರ್ಲಕ್ಷ್ಯ , ನಿಷ್ಕಾಳಜಿ, ಆರೈಕೆ ಹಾಗೂ ಔಷಧೋಪಚಾರದ ಕೊರತೆ, ಬಡತನ, ಮೂಢನಂಬಿಕೆ, ಹಲವು ಸಾಮಾಜಿಕ ಹಾಗೂ ಧಾರ್ಮಿಕ ಕಟ್ಟುಪಾಡುಗಳಿಂದ ಬಂಧಿತಳಾದ ಗರ್ಭಿಣಿ ಸ್ತ್ರೀ, ಮಾತೃತ್ವದ ಮಧುರ ಅನುಭೂತಿಯ ಬದಲಾಗಿ, "ಮಾತೃ ಮರಣ'ದ ಕಬಂಧಬಾಹುಗಳಿಂದ ದುರ್ಮರಣವನ್ನಪ್ಪಿದರೆ ಅದು ದುರಂತವಲ್ಲವೆ?

        ಇಂದಿಗೂ, ಒಂದು "ದೇಶದ ಆರೋಗ್ಯದ ಮಟ್ಟ'ವನ್ನು ಅಳೆಯಬೇಕಾದ ಸಂದರ್ಭದಲ್ಲಿ , ಗಮನಿಸುವ ಹಲವು ಅಂಶಗಳಲ್ಲಿ "ಮಾತೃ ಮರಣ'ವೂ ಒಂದು ಮುಖ್ಯ ಅಂಶ ! "ಮಾತೃ ಮರಣ'ದ ಸಂಖ್ಯೆ ಕಡಿಮೆ ಇದ್ದಷ್ಟು ಆ ದೇಶದ ಆರೋಗ್ಯದ ಮಟ್ಟ ಹೆಚ್ಚು ಸುಧಾರಿತ ಎಂದರ್ಥ. ನಮ್ಮ ಭಾರತ ದೇಶದಲ್ಲಿ ಮಾತೃ ಮರಣದ ಸಂಖ್ಯೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲು, ಸರ್ವ ವಿಧದ ಪರಿಹಾರೋಪಾಯ, ಮುಂಜಾಗರೂಕತಾ ಕ್ರಮಗಳನ್ನು ಸಮಗ್ರವಾಗಿ ಅಳವಡಿಸಿಕೊಳ್ಳುವುದು ಇಂದಿನ ಅತ್ಯಾವಶ್ಯಕವಾಗಿದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      pic"ಉದ್ಯೋಗ' ಎನ್ನುವುದು ಕೆಲವರಿಗೆ ತಮ್ಮ ಪ್ರತಿಭೆಯ ಅಭಿವ್ಯಕ್ತಿಗೆ, ಸ್ವಾತಂತ್ರ್ಯದ ಅಪೇಕ್ಷೆಗೆ ಪೂರಕವಾದರೆ ಇನ್ನು ಕೆಲವರಿಗೆ ತುತ್ತಿನ ಚೀಲ ತುಂಬಿಸಲು ಅನಿವಾರ್ಯ...
      • ಈ ವಿಭಾಗದಲ್ಲಿಯೂ ಇದೆ
      • ಏಕತಾರಿ ಮಿಡಿತ
        ಅವಳು ಒಂಟಿಯಾಗಿ ಕಾರ್ಯಕ್ರಮಕ್ಕೆ ಬಂದಳು, ಕಾರ್ಯಕ್ರಮ ಮುಗಿದ ನಂತರ ಒಂಟಿಯಾಗಿ ಬಸ್‌ನಲ್ಲಿ ಜೋತಾಡಿಕೊಂಡು ಹೋಗುತ್ತಿದ್ದಳು....
      image
      image
      • Copyright @ 2009 Udayavani.All rights reserved.
      • Designed & Hosted By 4cplus