ಹೊಸದಿಲ್ಲಿ: ಧೋನಿ ಅವರನ್ನು ನಾಯಕತ್ವದಿಂದ ತೆಗೆದು ಹಾಕಲು ಮಂಡಳಿ ಅಧ್ಯಕ್ಷ ಎನ್. ಶ್ರೀನಿವಾಸನ್ ಅವಕಾಶ ನೀಡಲಿಲ್ಲ ಎಂಬ ಮಾಜಿ ಆಯ್ಕೆಗಾರ ಮೊಹಿಂದರ್ ಅಮರ್‌ನಾಥ್ ಅವರ ಆರೋಪವನ್ನು ತಳ್ಳಿ ಹಾಕಿದ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಆಯ್ಕೆಗಾರರು 'ಸ್ವತಂತ್ರರು' ಎಂದು ಹೇಳಿದೆ.ಇಂಗ್ಲಂಡ್ ಮತ್ತು ಆಸ್ಟ್ರೇಲಿಯದಲ್ಲಿ ಸತತ ಎಂಟು ಟೆಸ್ಟ್ ಪಂದ್ಯಗಳಲ್ಲಿ ಸೋತ ಬಳಿಕ ಧೋನಿ ಅವರನ್ನು ನಾಯಕತ್ವದಿಂದ ತೆಗೆದುಹಾಕಲು ಆಯ್ಕೆ ಸಮಿತಿಗೆ 'ಕೆಲವೊಂದು ಆಂತರಿಕ ಕಾರಣ' ಅಡ್ಡಿ ಆಯಿತು ಎಂದು ಅಮರ್‌ನಾಥ್ ಬಹಿರಂಗವಾಗಿ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ಬಿಸಿಸಿಐ ಉಪಾಧ್ಯಕ್ಷ ಮತ್ತು ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲ ನಿರಾಕರಿಸಿದ್ದಾರೆ.ಅಮರ್‌ನಾಥ್ ಅವರ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಈ ರೀತಿ ಆಗಿದೆ ಎಂಬುದನ್ನು ನಾನು ಆಲೋಚಿಸುವುದಿಲ್ಲ. ಇಂತಹ ಹೇಳಿಕೆ ನೀಡುವುದು ಸಮಂಜಸವಲ್ಲ ಎಂದು ಶುಕ್ಲ ಹೇಳಿದರು.ಆಯ್ಕೆಗಾರರು ಸ್ವತಂತ್ರರು ಮತ್ತು ಅವರು ಯಾವುದೇ ಒತ್ತಡದಲ್ಲಿ ಸಿಲುಕಿಲ್ಲ ಎಂದವರು ಸ್ಪಷ್ಟಪಡಿಸಿದರು.ಧೋನಿ ಅವರನ್ನು ತೆಗೆದುಹಾಕಲು ಸರಿಯಾದ ಕಾರಣವನ್ನು ಅಮರ್‌ನಾಥ್ ಹೇಳಿಲ್ಲ. ಖಂಡಿತವಾಗಿಯೂ ಧೋನಿ ಅವರನ್ನು ಬದಲಿಸಲು ಚರ್ಚೆ ನಡೆದಿತ್ತು ಮತ್ತು ಆಯ್ಕೆಗಾರರು ಒಪ್ಪಿಗೆ ನೀಡಿದ್ದರು. ಆದರೆ ಕೆಲವು ಆಂತರಿಕ ಕಾರಣಗಳಿಂದಾಗಿ ನಾಯಕತ್ವ ಬದಲಾವಣೆ ಸಾಧ್ಯವಾಗಲಿಲ್ಲ ಎಂದು ಅಮರ್‌ನಾಥ್ ಹೇಳಿದರು.