ಬಿಜಾಪುರದಿಂದ 60 ಕಿ.ಮೀ. ದೂರದಲ್ಲಿರುವ ಸಿಂದಗಿ ಧಾರ್ಮಿಕವಾಗಿ ಪ್ರಸಿದ್ಧಿ ಪಡೆದಿದ್ದು ಇಲ್ಲಿನ ಐತಿಹಾಸಿಕ ಸ್ಥಳಗಳು ಆಕರ್ಷಣೀಯವಾಗಿವೆ.
ಈ ತಾಲೂಕಿನಲ್ಲಿ ಒಂದೆರಡು ಪ್ರಮುಖವಾದ ಐತಿಹಾಸಿಕ ಪ್ರದೇಶಗಳಿವೆ. ಸಿಂದಗಿ ತಾಲೂಕು ಪ್ರದೇಶದ ಕೇಂದ್ರ ಬಿಂದು. ಬಿಜಾಪುರದಿಂದ 60 ಕಿ.ಮೀ. ದೂರದಲ್ಲಿರುವ ಸಿಂದಗಿ ಧಾರ್ಮಿಕವಾಗಿ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ.
ಸಿಂಧೂ ಬಲ್ಲಾಳ ಎಂಬ ಅರಸ ಆಳುತ್ತಿದ್ದರಿಂದ ಈ ಊರಿಗೆ ಸಿಂದಗಿ ಎಂದು ಕರೆಯುವರು. 15ನೇ ಶತಮಾನದಲ್ಲಿ ನಿರ್ಮಾಣಗೊಂಡ ಸಾರಂಗ ಮಠ ಇಲ್ಲಿದೆ. ಸೆಗಣಿಯಲ್ಲಿ ಉದ್ಭವಿಸಿದ ಸಂಗಮನಾಥ ಲಿಂಗ ದೇವಾಲಯವಿದೆ.

ಕ್ರಿ.ಶ. 1660ರಲ್ಲಿ ಭೀಮಾಶಂಕರ ಮಠದ ಪೀಠಾಧೀಶರಾದ ಭೀಮಾಶಂಕರ ಸ್ವಾಮಿ ಮನುಮತ ಸ್ಥಾಪಿಸಿದವರು. ಇಲ್ಲಿ ಆಶ್ವಿàಜ ಮಾಸದಲ್ಲಿ ಬಿಂದಿಗೆ ಪೂಜೆ ನಡೆಯುವುದು. ಇಲ್ಲಿರುವ ಖಾಲಿ ಬಿಂದಿಗೆಗೆ ಎಂಟರಿಂದ ಹತ್ತು ಕೊಡ ನೀರು ಸುರುವಿದರೂ ಬಿಂದಿಗೆ ತುಂಬುವುದಿಲ್ಲ. ಇದು ಇಂದಿನ ವೈಜ್ಞಾನಿಕ ಯುಗದ ಪವಾಡವಾಗಿದೆ. ಹಾಗೂ ವಿಜ್ಞಾನಕ್ಕೆ ಸವಾಲಾಗಿದೆ. ಸಿಂದಗಿ-ಬಿಂದಗಿ ಎಂಬ ಮಾತು ಇಲ್ಲಿ ಚಲಾವಣೆಯಲ್ಲಿದೆ.
ಶಾಂತವೀರ ಮಠ, ಜಕ್ಕಪ್ಪಯ್ಯನ ಸಮಾಧಿ, ರಮಾನಂದ ತೀರ್ಥರ ಸ್ಮಾರಕ ಇಲ್ಲಿವೆ.

ಕೊಂಡಗೂಳಿ
ಕನ್ನಡ ಸಾಹಿತ್ಯದ ಅಮೂಲ್ಯ ಕೃತಿ ಕೇಶಿರಾಜನ "ಶಬ್ದಮಣಿ ದರ್ಪಣ' ರಚನೆಗೊಂಡದ್ದು ಈ ಊರಿನಲ್ಲಿ . ಕಲ್ಯಾಣ ಚಾಲುಕ್ಯ ಅರಸು 6ನೇ ವಿಕ್ರಮಾದಿತ್ಯನ ದಂಡನಾಯಕನಾಗಿ ಸೇವೆ ಸಲ್ಲಿಸಿದ ಕೇಶಿರಾಜನ ದೇವಾಲಯ ಈ ಊರಿನಲ್ಲಿದೆ.
ಈತ ವೀರಶೈವ ಧರ್ಮದ ಆದಿಕವಿ ಎಂದು ಗುರುತಿಸಲ್ಪಟ್ಟಿದ್ದಾನೆ. ಬಸವಪೂರ್ವ ಯುಗದಲ್ಲಿ ವಚನ ಸಾಹಿತ್ಯ ರಚನೆ ಮಾಡಿದ ಕವಿ. ಕ್ರಿ.ಶ. 1107ರ ಕಾಲದ ಶಾಸನಗಳು ಈ ಗ್ರಾಮದಲ್ಲಿ ದೊರೆತಿವೆ. ಅವುಗಳೆಲ್ಲಾ ಅನಾಥವಾಗಿ ಬಯಲಲ್ಲಿ ಬಿದ್ದಿವೆ.
ಗೋಲಗೇರಿ

ಶಿವಭಕ್ತ ಗೋಲ್ಲಾಳೇಶ್ವರನ ದೇವಾಲಯವಿರುವ ತಾಣವಿದು. ಇದು ಬಿಜಾಪುರದಿಂದ 75 ಕಿ.ಮೀ. ದೂರದಲ್ಲಿದೆ. ಗೋಲ್ಲಾಳನು ಗೋಲಗೇರಿಯಲ್ಲಿ ಲಿಂಗ ಸ್ಥಾಪಿಸುವ ಕುರಿತು ಚಿಂತಿಸಿದನು. ಶ್ರೀಶೈಲಕ್ಕೆ ಹೊರಡುವ ಭಕ್ತಾದಿಗಳಿಗೆ ಅಲ್ಲಿಂದ ಶಿವಲಿಂಗ ತರಲು ಹೇಳಿದ, ಅವರು ಮರೆತುಬಂದರು. ಗೋಲ್ಲಾಳನಿಗೆ; ಕುರಿಯ ಹಿಕ್ಕೆಯನ್ನು ಶಿವಲಿಂಗವೆಂದು ನೀಡಿದರು. ಆತ ಅದನ್ನೇ ಪೂಜಿಸಿದ ಪವಾಡ ಕಥೆಯಿದೆ.
ಶ್ರಾವಣ ಮಾಸದಲ್ಲಿ ಗೋಲ್ಲಾಳೇಶ್ವರನಿಗೆ ನಿತ್ಯಪೂಜೆ. ಆ ತಿಂಗಳು ಪೂರ್ತಿ ಭಕ್ತರು ಮಾಂಸ-ಮದ್ಯ ಸೇವಿಸುವುದಿಲ್ಲ. ಇಲ್ಲಿರುವ ಎತ್ತರದ ರಥ ಗಮನ ಸೆಳೆಯುವುದು.