ಲಕ್ಷ್ಮೀನಾರಾಯಣ ಹರೇಕಳ | Dec 14, 2012
ಯಕ್ಷಗಾನ ಕಲಾ ಮಾಧ್ಯಮವನ್ನು ಜನಶಿಕ್ಷಣಕ್ಕೆ ಪರಿಣಾಮಕಾರಿ ಯಾಗಿ ಬಳಸಿಕೊಳ್ಳುವ ಆಧುನಿಕ ತಂತ್ರಗಾರಿಕೆ ಈಗ ಎಲ್ಲಾ ಕ್ಷೇತ್ರಕ್ಕೂ ವ್ಯಾಪಿಸಿಕೊಂಡಿದೆ. ಕೃಷಿ, ಪರಿಸರ ರಕ್ಷಣೆ, ಸಾಕ್ಷರತೆ, ಮಾರಕರೋಗ ನಿವಾರಣೆ, ಮಾದಕ ವ್ಯಸನ ಮತ್ತಿತರ ಸಾಮಾಜಿಕ ಪಿಡುಗುಗಳನ್ನು ವಸ್ತು ವಾಗಿರಿಸಿ ಹತ್ತಾರು ಜನಜಾಗೃತಿಯ ಪ್ರಸಂಗಗಳು ರಚನೆಗೊಂಡಿವೆ. ಅವು ವಿವಿಧ ಮಾಧ್ಯಮಗಳ ಮೂಲಕ ಪರಿಣಾಮಕಾರಿ ಯಾಗಿ ಬಿಂಬಿಸಲ್ಪಟ್ಟು ಜನಜೀವನದ ಮೇಲೆ ಪ್ರಭಾವ ಬೀರಿದ್ದನ್ನು ಅಲ್ಲಗಳೆಯುವಂತಿಲ್ಲ.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯ, ಪ್ರಾಧ್ಯಾಪಕ ಭಾಸ್ಕರ ರೈ ಕುಕ್ಕುವಳ್ಳಿ ಅವರು ಸಂಯೋಜಿಸಿದ ಕಥೆಗೆ, ಜಾನಪದ ವಿದ್ವಾಂಸ ಪ್ರೊ| ಅಮೃತ ಸೋಮೇಶ್ವರ ರಚಿಸಿದ ಪದ್ಯಗಳಿರುವ "ಘೋರ ಮಾರಕ' ಪ್ರಸಂಗ ದಶಕದ ಹಿಂದೆಯೇ ಮಹಾಮಾರಿ ಏಡ್ಸ್ ವಿರುದ್ಧ ನಾಡಿನಾದ್ಯಂತ ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದೆ. ಅದು ಕರಾವಳಿಯಲ್ಲಿ ಮಾತ್ರ ವಲ್ಲದೆ, ಬೆಂಗಳೂರು, ದಿಲ್ಲಿಗಳಲ್ಲೂ ಪ್ರದರ್ಶನಗೊಂಡಿದೆ. ಆಕಾಶವಾಣಿ, ದೂರದರ್ಶನಗಳಲ್ಲೂ ಪ್ರಸಾರವಾಗಿದೆ. ಆ ಬಳಿಕ ಕುಕ್ಕುವಳ್ಳಿಯವರು ಸಂಯೋಜಿಸಿದ ಕ್ರಾಂತಿ ಕಹಳೆ (ಸ್ವಾತಂತ್ರ್ಯ ವಿಜಯ), ಗುನ್ಯಾಸುರವಧೆ, ಸಾವಯವ ವಿಜಯ ಮುಂತಾದ ಜನಜಾಗೃತಿಯ ಯಕ್ಷಗಾನಗಳು ಆಟ ಕೂಟಗಳಲ್ಲಿ ರಂಜಿಸಿವೆ. ಸಾವಯವ ವಿಜಯ ಪ್ರಸಂಗ ಕರ್ನಾಟಕದ ಎಲ್ಲ ಆಕಾಶವಾಣಿ ಕೇಂದ್ರಗಳ ಮೂಲಕ ಪ್ರಸಾರಗೊಂಡಿದೆ. ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಸಾರಿದ ಕ್ರಾಂತಿ ಕಹಳೆ ಮತ್ತು ಸ್ವಾತಂತ್ರ್ಯ ವಿಜಯ ಸುವರ್ಣ ಸ್ವಾತಂತ್ರ್ಯ ಸಂಭ್ರಮದಲ್ಲಿ ಮಂಗಳೂರು ಆಕಾಶವಾಣಿಯಿಂದ ಎರಡು ಕಂತುಗಳಲ್ಲಿ ಬಿತ್ತರಿಸಲ್ಪಟ್ಟಿದೆ. "ಚಿಕೂನ್‌ಗುನ್ಯಾ' ರೋಗದ ಬಗೆಗಿನ ಗುನ್ಯಾಸುರವಧೆ ಆರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮಗಳಲ್ಲಿ ಪ್ರದರ್ಶನಗೊಂಡಿದೆ.
ಇತ್ತೀಚೆಗೆ ಮಂಗಳೂರಿನ ಮಲ್ಲಿಕಟ್ಟೆ ಲಯನ್ಸ್ ಸೇವಾಮಂದಿರದಲ್ಲಿ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿಯವರ ಸಂಯೋಜನೆಯಲ್ಲಿ ವಿಭಿನ್ನ ಮಾದರಿಯ ಜನಜಾಗೃತಿ ಯಕ್ಷಗಾನವೊಂದು ಪ್ರದರ್ಶನಗೊಂಡಿತು. ದ.ಕನ್ನಡ ಜಿಲ್ಲಾಡಳಿತ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಮಂಗಳೂರು ಲಯನ್ಸ್ ಕ್ಲಬ್‌ಗಳು ಸಂಯುಕ್ತವಾಗಿ ಆಯೋಜಿಸಿದ "ವಾಯು ಮಾಲಿನ್ಯ ಮಾಸಾಚರಣೆ' ಸಂದರ್ಭದಲ್ಲಿ ಇದನ್ನು ಏರ್ಪಡಿಸಲಾಗಿತ್ತು. ಕರ್ಕಶ ಸ್ತಂಭನ-ಧೂಮಾಸುರ ಬಂಧನ ಎಂಬ ಈ ಯಕ್ಷಗಾನ ವಾಹನ ದಟ್ಟಣೆ, ಶಬ್ದ ಮಾಲಿನ್ಯ ಹಾಗೂ ವಾಯು ಮಾಲಿನ್ಯಗಳನ್ನು ನಿಯಂತ್ರಿಸು ವಲ್ಲಿ ಚಿಂತನೆಗೆ ಹಚ್ಚಿದ ಒಂದು ಸಾರ್ಥಕ ಪ್ರಯೋಗವೆನಿಸಿತು. ಸ್ವತಃ ಕುಕ್ಕುವಳ್ಳಿಯವರೇ ಹೆಣೆದ ಕಥಾ ಹಂದರಕ್ಕೆ ಯುವ ಪ್ರಸಂಗಕರ್ತ ಡಾ| ದಿನಕರ ಎಸ್. ಪಚ್ಚನಾಡಿ ಪದ್ಯ ಬರೆದಿದ್ದರು.
ಪ್ರಸಂಗದ ಕಥೆ ಬಹಳ ಕುತೂಹಲಕರವಾಗಿ ಸಾಗುತ್ತದೆ. ಮಂಗಳಾಪುರದ ಸಾಮಂತ ಸುರಥವರ್ಮ ತನ್ನ ರಥಕ್ಕೆ ಕೀಲೆಣ್ಣೆ ತರುವ ಎಣ್ಣೆಯಣ್ಣನಿಗೆ ಕಲಬೆರಕೆ ತೈಲ ವಿತರಿಸದಂತೆ ಕಟ್ಟಪ್ಪಣೆ ಮಾಡುತ್ತಾನೆ. ಆದರೂ ಆ ದಂಧೆ ನಿಲ್ಲುವು ದಿಲ್ಲ. ಇದರಿಂದಾಗಿ ತೈಲಾಭಿಮಾನಿ ದೇವತೆ ತೈಲಿನಿ ವಿಕೃತಗೊಂಡು ಯಂತ್ರ ಮುಖದಿಂದ ಕರ್ಕಶಾಸುರನನ್ನು ವರಿಸುತ್ತಾಳೆ. ಅವರ ದಾಂಪತ್ಯದಿಂದ ಜನಿಸಿದ ಘೋರರೂಪಿ ಧೂಮಾಸುರ ಎಲ್ಲೆಡೆ ವ್ಯಾಪಿಸಿ ವಾತಾವರಣವನ್ನು ಹಾಳುಗೆಡಹುತ್ತಾನೆ. ಧೂಮ-ಕರ್ಕಶರ ಅಟಾಟೋಪದಿಂದಾಗಿ ಜನ ಜೀವನ ಅಸ್ತವ್ಯಸ್ತವಾಗುತ್ತದೆ. ಇದನ್ನು ತಿಳಿದ ಸುರಥವರ್ಮ ತನ್ನ ಸೇನಾಪತಿ ಸಾರಿಗೆವರ್ಧನನ ಮೂಲಕ ಎಣ್ಣೆಯಣ್ಣನನ್ನು ದಂಡಿಸುತ್ತಾನೆ. ಆಗ ಮರುಹುಟ್ಟು ಪಡೆದ ಶುದ್ಧ ತೈಲಿನಿ ಕರ್ಕಶಾಸುರನನ್ನು ಸ್ತಂಭನಗೊಳಿಸು ವುದಲ್ಲದೆ, ಧೂಮಾಸುರನನ್ನು ಬಂಧಿಸಿ ಸುರಥವರ್ಮನಿಗೆ ಒಪ್ಪಿಸುತ್ತಾಳೆ. ವರ್ಮ ಅವರಿಬ್ಬರನ್ನೂ ಕಾರಾಗೃಹಕ್ಕೆ ತಳ್ಳುತ್ತಾನೆ. ಅವನ ಆದೇಶದಂತೆ ಸಾರಿಗೆವರ್ಧನ ಸುಭದ್ರ ಕಾರ್ಯಪಡೆಯೊಂದನ್ನು ರಚಿಸಿ ಶಬ್ದ ಮಾಲಿನ್ಯ ಮತ್ತು ವಾಯು ಮಾಲಿನ್ಯದ ವಿರುದ್ಧ ಜನಜಾಗೃತಿ ಮೂಡಿಸುತ್ತಾನೆ.
ಈ ಪ್ರಸಂಗದ ಒಟ್ಟು ಪರಿಕಲ್ಪನೆಯೇ ಸುಂದರ. ಇದು ಏಕಕಾಲಕ್ಕೆ ಪರಿಸರ ಮಾಲಿನ್ಯ ಮತ್ತು ತೈಲ ಸಂರಕ್ಷಣೆಗೆ ಸಂಬಂಧಿಸಿದಂತೆ ಅತ್ಯುತ್ತಮ ಸಂದೇಶ ನೀಡುತ್ತದೆ. ಸುರಥ, ತೈಲಿನಿ, ಕರ್ಕಶ, ಧೂಮಾಸುರ, ಎಣ್ಣೆಯಣ್ಣ, ಸಾರಿಗೆವರ್ಧನ ಇತ್ಯಾದಿ ಹೆಸರುಗಳೂ ಅರ್ಥಪೂರ್ಣ. ಒಂದೂವರೆ ತಾಸು ಅವಧಿಯಲ್ಲಿ ಡಾ| ದಿನಕರ ಪಚ್ಚನಾಡಿ, ಪುತ್ತೂರು ದೇವರಾಜ ಹೆಗ್ಡೆ, ಪದ್ಮನಾಭ ಮಾಸ್ತರ್, ಎಂ.ಎಂ.ಸಿ. ರೈ, ಹರಿಶ್ಚಂದ್ರ ನಾಯಗ, ಸುನಿಲ್ ಪಲ್ಲ ಮಜಲು ಮುಂತಾದ ನುರಿತ ಕಲಾವಿದರು ಪಾತ್ರ ವಹಿಸಿ ಪ್ರದರ್ಶನಕ್ಕೆ ಕಳೆನೀಡಿದರು. ಪೊಳಲಿ ದಿವಾಕರ ಆಚಾರ್ಯರ ಹಾಡುಗಾರಿಕೆ, ಶರತ್ ಕುಮಾರ್ ಕದ್ರಿ, ರಾಜೇಶ್ ಕುತ್ಪಾಡಿ ಮತ್ತು ಮಯೂರ್ ನಾಯಗ ಅವರ ಹಿಮ್ಮೇಳ ಮುದ ನೀಡಿತು. ಕಾರ್ಯಕ್ರಮದ ಆರಂಭದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ ಅವರು ಪ್ರಸಂಗದ ಆಶಯ, ಹಿನ್ನೆಲೆ ಹಾಗೂ ಅದು ಮೂಡಿಸುವ ಸಮ ಕಾಲೀನ ಪ್ರಜ್ಞೆಯ ಬಗ್ಗೆ ಉಪಯುಕ್ತ ಮಾಹಿತಿ ನೀಡಿದುದು ಪ್ರೇಕ್ಷಕರ ಮಾನಸಿಕ ಸಿದ್ಧತೆಗೆ ಸಹಕಾರಿಯಾಗಿತ್ತು.
ಒಟ್ಟಿನಲ್ಲಿ ಕರ್ಕಶ ಸ್ತಂಭನ-ಧೂಮಾಸುರ ಬಂಧನ ಒಂದು ಉತ್ತಮ ಪ್ರಯೋಗ. ಇದರ ಅಸಾಧಾರಣ ಸಾಧ್ಯತೆಯನ್ನು ಸರಕಾರದ ಸಾರಿಗೆ ಹಾಗೂ ಪರಿಸರ ಇಲಾಖೆಗಳು ಇನ್ನಷ್ಟು ಚೆನ್ನಾಗಿ ಬಳಸಿಕೊಳ್ಳಬಹುದಾಗಿದೆ.