Friday, May 24, 2013
Last Updated: 1:05:17 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಬಾಲಶ್ರೀ ಮೇಘಾ
    • ಮೇಘಾ ಹೊಸದಿಲ್ಲಿಯಲ್ಲಿ ಬಾಲಶ್ರೀ ಪ್ರಶಸ್ತಿ ಸ್ವೀಕರಿಸಿದ ಕ್ಷಣ...

      • Udayavani | Dec 14, 2012

        ಈಕೆ  ಕು| ಮೇಘಾ ಶೆಟ್ಟಿ. "ಬೆಳೆಯುವ ಸಿರಿ ಮೊಳಕೆಯಲ್ಲಿ' ಎಂಬಂತೆ ಎಳವೆಯಲ್ಲಿಯೇ ಈಕೆಯ ಕಲಾಕೌಶಲ್ಯ ಎಲ್ಲೆಡೆ ಪಸರಿಸತೊಡಗಿದೆ. ಉಡುಪಿ ಜಿಲ್ಲೆಗೆ ಪ್ರಪ್ರಥಮ ಬಾರಿಗೆ ರಾಷ್ಟ್ರಮಟ್ಟದ "ಬಾಲಶ್ರೀ' ಪ್ರಶಸ್ತಿ ಗೆದ್ದುಕೊಟ್ಟ ಹೆಗ್ಗಳಿಕೆ ಮೇಘಾರದ್ದು.

        ಮೇಘಾರ ತಂದೆ ಹಾವಂಜೆ ಜಯರಾಮ ಶೆಟ್ಟಿ ಪ್ರಗತಿಪರ ಕೃಷಿಕ. ತಾಯಿ ಉಷಾ ಶೆಟ್ಟಿ ಸರಕಾರಿ ಉದ್ಯೋಗಿ. ಎಳೆಯ ಮೇಘಾ ಅಂಬೆಗಾಲಿಡುತ್ತ, ಆಟ ಆಡುವ ಗೊಂಬೆ ಗಳ ಮೇಲೆಯೇ ಕಡ್ಡಿ, ಪೆನ್ಸಿಲ್‌, ಪೆನ್ನುಗಳಿಂದ ಗೀಚುತ್ತಿದ್ದುದನ್ನು ಹೆತ್ತವರು ಈಗಲೂ ನೆನಪಿಕೊಳ್ಳುತ್ತಾರೆ. ಈಕೆಯ ಹಿರಿಯರು ಯಾರೂ ಕಲಾವಿದರ‌ಲ್ಲ. ಆದರೂ ಹೆತ್ತವರು ಈ ಅಮೂಲ್ಯ ಪ್ರತಿಭೆಯನ್ನು ಮುತುವರ್ಜಿ ಯಿಂದ ಪ್ರೋತ್ಸಾಹಿಸಿದ್ದಾರೆ.

        2002-08ರಲ್ಲಿ ಬ್ರಹ್ಮಾವರದ ನಿರ್ಮಲಾ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾಗಿದ್ದ ಮೇಘಾ,  ಸ್ಲೇಟು, ಕಾಗದಗಳ ಮೇಲೆ ಏನಾದರೂ "ತೋಚಿದ್ದನ್ನು ಗೀಚು'ತ್ತಿದ್ದಾಗ ಅವು ಸುಂದರ ಚಿತ್ರಗಳಾಗಿ, ಸಹಪಾಠಿಗಳನ್ನು ಖುಷಿ ಪಡಿಸುತ್ತಿದ್ದುವು. ಪ್ರೋತ್ಸಾಹಿಸಿ ಬೆನ್ನುತಟ್ಟುವ ಶಿಕ್ಷಕರು ಮೇಘಾರ ಪ್ರತಿಭೆಯನ್ನು ಬೆಳಗುವಲ್ಲಿ ನೆರವಾದರು. ಪರಿಣಾಮವಾಗಿ 2006ರಲ್ಲಿ "ಕಲಾವಿಕಾಸ ಪರಿಷತ್‌' ಹಾಗೂ "ಕನ್ನಡ ಮಕ್ಕಳ ಮನೆ - ಬೆಂಗಳೂರು' ಇವರ ಪ್ರಾಥಮಿಕ ಶಾಲಾ ಕಿರಿಯರ ವಿಭಾಗದ "ಚಿಗುರು ಕಲಾ' ಮತ್ತು "ಕಲಾಕಿರಣ'  ಪ್ರಶಸ್ತಿ ಮೇಘಾರನ್ನು ಹುಡುಕಿ ಬಂತು.

        ಉಡುಪಿಯ "ದೃಶ್ಯ ಸ್ಕೂಲ್‌ ಆಫ್‌ ಆರ್ಟ್ಸ್'ನಲ್ಲಿ ಕಲಾ ತರಬೇತಿ ಪಡೆದಿರುವ ಮೇಘಾ, ಆವೆಮಣ್ಣಿನ ಕಲಾಕೃತಿ ರಚನೆಯನ್ನು ಕಲಿತದ್ದು ಕಲಾವಿದ ವೆಂಕಿ ಪಲಿಮಾರ್‌ ಅವರ ಮಾರ್ಗದರ್ಶನದಲ್ಲಿ. 

        ಮೇಘಾ ಪ್ರಾಥಮಿಕ ಶಾಲೆಯಲ್ಲಿರುವಾಗಲೇ  ತಾಲೂಕು- ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದುಕೊಂಡ ಪ್ರತಿಭಾವಂತೆ. ಇನಾಯತ್‌ ಆರ್ಟ್‌ ಗ್ಯಾಲರಿ, ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌, ಜಯಂಟ್ಸ್‌ ಇಂಟರ್‌ನ್ಯಾಶನಲ್‌, ಲಯನ್ಸ್‌ , ಧರ್ಮಸ್ಥಳ ಶಾಂತಿವನ ಟ್ರಸ್ಟ್‌ನ ಅಂಚೆ ಕುಂಚ ಸ್ಪರ್ಧೆ ಹೀಗೆ ಹತ್ತು-ಹಲವು ಸಂಘ-ಸಂಸ್ಥೆಗಳು ಆಯೋಜಿಸಿದ ಚಿತ್ರಕಲಾ ಸ್ಪರ್ಧೆಗಳಲ್ಲಿ ಪ್ರಶಸ್ತಿ -ಸಮ್ಮಾನಗಳು ದೊರೆತಿವೆ. 2006ರಲ್ಲಿ "ಗುರುಜಯಂತಿ ಚಿತ್ರಕಲಾ ಸ್ಪರ್ಧೆ'ಯಲ್ಲಿ ಪ್ರಥಮ ಸ್ಥಾನ ಪಡೆದು ಕೊಂಡದ್ದಲ್ಲದೆ ಉಡುಪಿ ಜಿಲ್ಲಾ ಪ್ರಾಥಮಿಕ ಶಾಲಾ ಮಕ್ಕಳ ವಿಭಾಗದಲ್ಲಿ 100ಕ್ಕೂ ಹೆಚ್ಚು ಪ್ರಶಸ್ತಿ, ನಗದು ಪುರಸ್ಕಾರಗಳನ್ನು  ಗೆದ್ದಿರುವುದು ಮೇಘಾ ಹಿರಿಮೆ.

        ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕಾರಗಳಲ್ಲಿ, ಎರಡು ಬಾರಿ ಮಂಗಳೂರಿನ "ಚಕ್ರಪಾಣಿ ಸ್ಕೂಲ್‌ ಆಫ್‌ ಆರ್ಟ್ಸ್'ನ "ಚಿಗುರು ಕಲಾ ಪ್ರಶಸ್ತಿ', ವನ್ಯಜೀವಿ ಸಪ್ತಾಹದ ವತಿಯಿಂದ ಮಂಗಳೂರಿನಲ್ಲಿ ಮತ್ತು ಮಾತಾ ಅಮೃತಾನಂದ ಮಯಿ ಮಠದ ಅಮೃತಸಂಗಮದಲ್ಲಿ ನಡೆದ ಚಿತ್ರಕಲಾಸ್ಪರ್ಧೆಯಲ್ಲಿ ಪ್ರಶಸ್ತಿ, ಉಡುಪಿ ಸಂಸ್ಕೃತ ಮಹಾಪಾಠ ಶಾಲೆಯ ಭಾವೀ ಸಮೀರ ವಾದಿರಾಜರ ಚಿತ್ರರಚನೆೆ ಮತ್ತು ಉಡುಪಿ ಅಂಚೆ ಇಲಾಖೆಯ ಅಂಚೆ ಚೀಟಿ ವಿನ್ಯಾಸದಲ್ಲಿ ರಾಜ್ಯಮಟ್ಟದಲ್ಲಿ ಬಹುಮಾನ, ಬೆಂಗಳೂರು ಜವಾಹರ ಬಾಲಭವನ ಮತ್ತು ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಸಾಧಾರಣ ಚಿತ್ರಕಲಾ ಪ್ರತಿಭೆ ಪುರಸ್ಕಾರ- ಹೀಗೆ ಮೇಘಾ ಸಾಧನೆಯ ತುರಾಯಿಯ ಗರಿಗಳು ಅನೇಕ. 2010ರಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನದ ದಶಮಾನೋತ್ಸವ ಸಂಭ್ರಮದಲ್ಲಿ "ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ'ವನ್ನು ನಡೆಸಿಕೊಟ್ಟಿದ್ದಾರೆ. ಈ ಎಲ್ಲ ಸಾಧನೆ ಗಳಿಗೆ ಕಲಶವಿಟ್ಟಂತೆ ರಾಜ್ಯ ಮಕ್ಕಳ ಕಲ್ಯಾಣ ಇಲಾಖೆಯಿಂದ ಬೆಂಗಳೂರಿನ ಬಾಲಭವನ ಸೊಸೈಟಿ ಆಶ್ರಯದಲ್ಲಿ ಸೃಜನಾ ತ್ಮಕ ಕಲೆ - "ನನ್ನ ಹಳ್ಳಿ' ಚಿತ್ರರಚನೆಗೆ 2008ರ ಪ್ರತಿಷ್ಠಿತ "ಕಲಾಶ್ರೀ' ಪ್ರಶಸ್ತಿಗೆ ಭಾಜನರಾಗಿದ್ದು, ಸಾರಿಗೆ ಸಚಿವ ಆರ್‌. ಅಶೋಕ್‌ರಿಂದ "ಕಲಾಶ್ರೀ' ಪ್ರಶಸ್ತಿ ಸ್ವೀಕರಿಸಿರು ವುದು ಮೇಘಾ ಎಂತಹ ಪ್ರತಿಭೆ ಎನ್ನುವುದಕ್ಕೆ ಸಾಕ್ಷಿಗಳು.

        ಬಾಲಶ್ರೀ

        2009-12ರಲ್ಲಿ  ಕೋಟದ ವಿವೇಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯಿಂದ ರಾಷ್ಟ್ರ ಮಟ್ಟದ "ಬಾಲಶ್ರೀ' ಪ್ರಶಸ್ತಿಗಾಗಿ ಚಿತ್ರಕಲೆ, ಕ್ಲೇ ಮಾಡೆಲಿಂಗ್‌, ಕರಕುಶಲ ಕಲೆ ಹಾಗೂ ಸಾಮಾನ್ಯ ಜ್ಞಾನದಲ್ಲಿ ವಿವಿಧ ಹಂತದ ಸ್ಪರ್ಧೆಗಳು ನಡೆದು, ಸೃಜನಾತ್ಮಕ ಕಲೆಯಲ್ಲಿ  ಪ್ರತಿಷ್ಠಿತ "ಬಾಲಶ್ರೀ' ರಾಷ್ಟ್ರ ಪ್ರಶಸ್ತಿ (2008-09)ಗೆ ಮೇಘಾ ಆಯ್ಕೆಗೊಂಡಿದ್ದಾರೆ.

        ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಈಕೆ ರಾಷ್ಟ್ರೀಯ "ಬಾಲಶ್ರೀ' ಪ್ರಶಸ್ತಿಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ರಾಜ್ಯ ಸಚಿವೆ ಪುರಂದೇಶ್ವರಿ ಅವರಿಂದ ಸ್ವೀಕರಿಸಿ ಆ ಮೂಲಕ ಹೆತ್ತವರಿಗೆ, ಊರಿಗೆ, ಕಲಿತ ವಿದ್ಯಾಸಂಸ್ಥೆಗಳಿಗೆ ಕೀರ್ತಿ ತಂದಿದ್ದಾರೆ.

        ಈಕೆ ಕೇವಲ ಚಿತ್ರಕಲಾವಿದೆ ಮಾತ್ರವಲ್ಲ, ಇತರ ಪಠ್ಯೇತರ ಚಟುವಟಿಕೆಗಳಲ್ಲೂ ಎತ್ತಿದ ಕೈ. ಇಷ್ಟೆಲ್ಲ ಚಟುವಟಿಕೆಗಳ ನಡುವೆ ಅಧ್ಯಯನವನ್ನು ಅಷ್ಟೇ ಮುತುವರ್ಜಿಯಿಂದ ನಡೆಸುತ್ತಿದ್ದಾರೆ.ಈಗ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಪಿಯುಸಿ (ವಿಜ್ಞಾನ)ಯಲ್ಲಿ ಓದುತ್ತಿದ್ದು, ಮುಂದೆ ಡಾಕ್ಟರ್‌ ಆಗುವ ಆಸೆ ಆಕೆಗಿದೆ.

        ನರಸಿಂಹ ಆಚಾರ್‌

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus