Saturday, May 25, 2013
Last Updated: 8:01:38 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಆರೋಗ್ಯವಾಣಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಆಧುನಿಕ ಯುಗದಲ್ಲಿ ಜೀವತಂತ್ರಜ್ಞಾನ ,ಉಪಯೋಗಗಳು
    • ಆಧುನಿಕ ಯುಗದಲ್ಲಿ ಜೀವತಂತ್ರಜ್ಞಾನ ,ಉಪಯೋಗಗಳು.

      • ಡಾ| ಜಿ. ಕೆ. ಸುಧಾಕರ್‌, ಹಿರಿಯ ಉಪನ್ಯಾಸಕರು, ಔಷಧಿ ರಸಾಯನಶಾಸ್ತ್ರ ವಿಭಾಗ | Dec 16, 2012

        ಮಾನವನ ಹಾಗೂ ಪರಿಸರದ ಅಭಿವೃದ್ಧಿಗಾಗಿ, ಜೀವಿಗಳನ್ನು ಹಾಗೂ ಅವುಗಳಲ್ಲಿ ಉತ್ಪಾದನೆಯಾಗುವ
        ಜನ್ಯ ವಸ್ತುಗಳನ್ನು ಸದುಪಯೋಗಪಡಿಸಿಕೊಳ್ಳುವ ತಂತ್ರಜ್ಞಾನಕ್ಕೆ ಜೀವತಂತ್ರಜ್ಞಾನ (ಬಯೋಟೆಕ್ನಾಲಜಿ) ಎನ್ನುತ್ತಾರೆ.

        ಈ ತಂತ್ರಜ್ಞಾನದಿಂದ ಸಸ್ಯಗಳನ್ನು ಮತ್ತು ಪ್ರಾಣಿಗಳನ್ನು ಅಭಿವೃದ್ಧಿ ಮಾಡಬಹುದಾಗಿದೆ. ಅಲ್ಲದೆ, ಕೆಲವು ಸೂಕ್ಷ್ಮ ಜೀವಿಗಳನ್ನು ನಿರ್ಧಾರಿತ ಕಾರಣಗಳಿಗಾಗಿ ಬೆಳೆಸಬಹುದಾಗಿದೆ. ಈ ಜೀವತಂತ್ರಜ್ಞಾನ, ವಿವಿಧ ಸಾಧನಗಳು ಹಾಗೂ ತಾಂತ್ರಿಕತೆಗಳನ್ನು ಒಳಗೊಂಡಿದೆ. ಇದು ವಿಜ್ಞಾನದ ವಿವಿಧ ವಿಶೇಷ ವಿಭಾಗಗಳಾದ ಕೋಶ ಶಾಸ್ತ್ರ, ಅಣುಜೀವ ಶಾಸ್ತ್ರ, ಸೂಕ್ಷ್ಮಜೀವ ಶಾಸ್ತ್ರ, ತಳಿಶಾಸ್ತ್ರ, ಜೀವ ರಸಾಯನ ಶಾಸ್ತ್ರ, ಶರೀರ ಕ್ರಿಯಾ ಶಾಸ್ತ್ರ, ತಾಂತ್ರಿಕ ಹಾಗೂ ಗಣಕ ವಿಜ್ಞಾನಗಳನ್ನೊಳಗೊಂಡ ಸಮ್ಮಿಶ್ರಿತ ವಿಜ್ಞಾನವಾಗಿದೆ.

        ಈಗಿನ ವಿಜ್ಞಾನ ಯುಗದಲ್ಲಿ ನಾವು ವಂಶವಾಹಿಗಳನ್ನು (ಜೀನ್‌ಗಳು) ಜೀವಿಗಳಿಂದ ಬೇರ್ಪಡಿಸಿ, ವಿಶ್ಲೇಷಿಸಬಹುದಾಗಿದೆ. ಅಲ್ಲದೆ, ಈ ವಂಶವಾಹಿಗಳಲ್ಲಿ ಬದಲಾವಣೆಗಳನ್ನು ಸಹ ಮಾಡಬಹುದಾಗಿದೆ. ಇಂತಹ ಬದಲಾವಣೆಗಳಿಂದ, ವಿಜ್ಞಾನಿಗಳು ಜೀವಿಗಳಲ್ಲಿ ಹೊಸದಾದ ಅಥವಾ ಬದಲಾವಣೆಯಾದ ಜನ್ಯ ಪದಾರ್ಥಗಳನ್ನು ಉತ್ಪಾದಿಸುತ್ತಿದ್ದಾರೆ. ಬಯೋಟೆಕ್ನಾಲಜಿಯ ಇಂತಹ ತಾಂತ್ರಿಕತೆ, ಕೃಷಿಯಲ್ಲಿ ಹಾಗೂ ಔಷಧಿಶಾಸ್ತ್ರ ವಿಭಾಗಗಳಲ್ಲಿ ಕ್ರಾಂತಿಯನ್ನೇ ಉಂಟುಮಾಡಿದೆ. ಇದರ ಉಪಯೋಗ, ಹೊಸ ಆಹಾರ ಧಾನ್ಯಗಳ ಅಭಿವೃದ್ಧಿ ಹಾಗೂ ಹೊಸ ತಳಿಗಳ ಉತ್ಪಾದನೆಯಲ್ಲಿ, ಔದ್ಯೋಗಿಕವಾಗಿ ರಾಸಾಯನಿಕ ವಸ್ತುಗಳ ಉತ್ಪಾದನೆ ಹಾಗೂ ತ್ಯಾಜ್ಯ ವಸ್ತುಗಳ ನಿರ್ಮೂಲನಗಳಲ್ಲಿ ಸಿದ್ಧಗೊಂಡಿದೆ. ಹೊಸ ತಳಿಗಳ ಅಭಿವೃದ್ಧಿ ಮತ್ತು ಔಷಧಗಳ ತಯಾರಿಕೆಯಲ್ಲಿ  ಈ ತಂತ್ರಜ್ಞಾನ ಬಹಳ ಉಪಯುಕ್ತವಾಗಿದೆ. ವೈರಸ್‌ ಮತ್ತು ರೋಗಾಣು ನಿರೋಧಕತೆಯಿರುವ ಹೆಚ್ಚು ತಾಪಮಾನ, ನೆಲದ ಉಪ್ಪಿನಂಶ ಇರುವಾಗಲೂ, ಕಡಿಮೆ ನೀರನ್ನು ಉಪಯೋಗಿಸಿ ಫಲ ಕೊಡುವಂತಹ ಸಸ್ಯಗಳ ಹಾಗೂ ಕಡಿಮೆ ಅವಧಿಯಲ್ಲಿ ಉತ್ತಮ ಇಳುವರಿ ಕೊಡುವಂತಹ ಸಸ್ಯಗಳ ವಿಕಾಸ, ಪಶು ತಳಿಗಳ ಅಭಿವೃದ್ಧಿ, ವಂಶವಾಹಿನಿಗಳು ಕಾರಣವಾಗಿರುವ ರೋಗಗಳ ಗುರುತಿಸುವಿಕೆ, ರೋಗ ಚಿಕಿತ್ಸೆಯಲ್ಲಿ ವಂಶವಾಹಿನಿಗಳ ಉಪಯೋಗ (ಉದಾಹರಣೆಗೆ ಅಡಿನೋಸಿನ್‌ ಡಿ ಅಮೈನೇಸ್‌ ಎ ಡಿ ಎ) ಡಿಫಿಷಿಯನ್ಸಿ ವಂಶವಾಹಿ ರೋಗ), ರಿಕಾಂಬಿನೆಂಟ್‌ ಚುಚ್ಚುಮದ್ದುಗಳ ತಯಾರಿಕೆ, ಪರಿಸರ ಅಭಿವೃದ್ಧಿ ಕೌಶಲ ತಂತ್ರದಲ್ಲಿ, ಅಳಿದು ಹೋಗುತ್ತಿರುವ ಸಸ್ಯಗಳ ರಕ್ಷಣೆ ಮತ್ತು ಅಭಿವೃದ್ಧಿ, ಕಾರ್ಖಾನೆಗಳಿಂದ ಹೊರ ಸೂಸುವ ವಿಷಯುಕ್ತ ಪದಾರ್ಥಗಳ ಶುದ್ಧೀಕರಣದಲ್ಲಿ ಸೂಕ್ಷ್ಮ ಜೀವಿಗಳ ಬಳಕೆ... ಮುಂತಾದ ಜೀವತಂತ್ರಜ್ಞಾನದ ಸಂಶೋಧನೆಗಳು ಬಹಳ ಮಹತ್ವದ್ದಾಗಿವೆ.

        ಈ ಜೀವತಂತ್ರಜ್ಞಾನ ಹೊಸದಾದ ವಿಷಯವೇನಲ್ಲ.  ಭಾರತೀಯ ಪೌರಾಣಿಕ ಗ್ರಂಥಗಳಲ್ಲಿ ಇಂತಹ ಹಲವಾರು ಉದಾಹರಣೆಗಳು ಸಿಗುತ್ತವೆ. ಉದಾಹರಣೆಗೆ, ಮಹಾಭಾರತದಲ್ಲಿ ಗಾಂಧಾರಿಯ ಭ್ರೂಣ ನೆಲದ ಮೇಲೆ ಬಿದ್ದು ಚೂರಾದಾಗ, ಆಕೆ ಅದನ್ನು  ಹೆಕ್ಕಿ, ಒಂದೊಂದು ತುಣುಕನ್ನು ಒಂದೊಂದು ಮಡಕೆಯಲ್ಲಿ ಹಾಕಿ, ಅಂಗಾಂಶ ಕೃಷಿ ಮಾಡಿದಾಗ ಬೆಳೆದಂತಹ ಮಕ್ಕಳೇ ಕೌರವರು. ಈಗಿನ ಯುಗದಲ್ಲಿ ನಾವು ಅಂಗಾಂಶ ಕೃಷಿಯನ್ನು, ಸಸ್ಯಗಳನ್ನು ಬೆಳೆಸಲು, ಪ್ರಾಣಿ ಜೀವಕೋಶಗಳನ್ನು ಬೆಳೆಸಲು ಹಾಗೂ ಅವುಗಳಿಂದ ಉಪಯುಕ್ತ ಜನ್ಯ ಪದಾರ್ಥಗಳ ಉತ್ಪಾದನೆಯಲ್ಲಿ ಉಪಯೋಗಿಸುತ್ತಿದ್ದೇವೆ. ವೈದ್ಯಕೀಯ ಕ್ಷೇತ್ರದಲ್ಲಿ ಅಂಗಾಂಶ ಜೋಡಣಾ ತಂತ್ರಜ್ಞಾನವನ್ನು ಉಪಯೋಗಿಸಿ ಮೂತ್ರಜನಕಾಂಗ, ಕಣ್ಣಿನ ಪೊರೆ, ಚರ್ಮ ಮುಂತಾದ ಅಂಗ ಹಾಗೂ ಅಂಗಾಂಶಗಳನ್ನು ಜೋಡಿಸಲಾಗುತ್ತದೆ. ಜೋಡಿಸಿದ ಅಂಗಾಂಶಗಳ ದೈಹಿಕ ಹೊಂದಾಣಿಕೆಯೂ ಬಹಳ ಮುಖ್ಯ. ಹೊಂದಾಣಿಕೆ ಇಲ್ಲದಿದ್ದರೆ ಅವುಗಳ ಜೋಡಣೆ ವ್ಯರ್ಥ. ಆದರೆ, ಇಂತಹ ಉದಾಹರಣೆಗಳೂ ಸಹ ನಮ್ಮ ಪುರಾಣಗಳಲ್ಲಿ ಉಲ್ಲೇಖೀತವಾಗಿವೆ. ಶಿವ-ಪಾರ್ವತಿಯರ ಮಗ ಗಣೇಶನ ಆನೆಯ ತಲೆ ಹೊಂದಿರುವ ಮಾನವ ದೇಹ ಸಹ ಇದಕ್ಕೆ ಉದಾಹರಣೆಯಾಗಿದೆ.

        ನಮ್ಮ ಇತಿಹಾಸವನ್ನು ಅವಲೋ ಕಿಸಿದರೆ, ಮಾನವನಿಗೆ ಸುಮಾರು ಕ್ರಿ.ಪೂ. 5000 ವರ್ಷಗಳ ಹಿಂದೆಯೇ ದ್ರಾಕ್ಷಾರಸ (ವೈನ್‌), ವಿನೆಗರ್‌, ಮೊಸರು, ಬ್ರೆಡ್‌ಗಳನ್ನು ತಯಾರಿಸುವ ಕಲೆ ಕರಗತವಾಗಿತ್ತು. ಹತ್ತೂಂಬತ್ತನೇ ಶತಮಾನದಲ್ಲಿ ಸೂಕ್ಷ್ಮ ಜೀವಿಗಳನ್ನುಪಯೋಗಿಸಿ ಹೆಚ್ಚು ಪ್ರಮಾಣದಲ್ಲಿ ಎಸೆಟೋನ್‌, ಬ್ಯೂಟೆನಾಲ್‌ ಮತ್ತು ಗ್ಲಿಸೆರಾಲ್‌ಗ‌ಳನ್ನು ಉತ್ಪಾದಿಸುವ ತಾಂತ್ರಿಕತೆಯ ಬೆಳವಣಿಗೆಯಾಗಿತ್ತು. ಇದೇ ರೀತಿ, ಹೆಚ್ಚು ಪ್ರಮಾಣದಲ್ಲಿ ಪೆನಿಸಿಲಿನ್‌ನ ಉತ್ಪಾದನೆ, ಸೂಕ್ಷ್ಮ ಜೀವಿಗಳನ್ನು ಉಪಯೋಗಿಸಿ ಯುರೇನಿಯಂ ಕಣಗಳ ಗಣಿಗಾರಿಕೆ, ರೋಗಗಳನ್ನು ಗುರುತಿಸುವಿಕೆಯಲ್ಲಿ ಮೊನೋಕ್ಲೋನಲ್‌ ರೋಗನಿರೋಧಕ ಗಳ ಉಪಯೋಗ, ತಾಂತ್ರಿಕವಾಗಿ ವಂಶವಾಹಿನಿಯನ್ನು ಬದಲಾಯಿಸಿದ ಸೂಕ್ಷ್ಮ ಜೀವಿಗಳಿಂದ ಪ್ರಾಣಿಗಳಲ್ಲಿರುವ ಇಂಟರ್‌ಫೆರಾನ್‌ಗಳ ಉತ್ಪಾದನೆ ಹಾಗೂ ಅವುಗಳ ಬಳಕೆಯಿಂದ ಪಶುಗಳನ್ನು ರೋಗಗಳಿಂದ ರಕ್ಷಿಸುವಿಕೆ, ತಾಂತ್ರಿಕವಾಗಿ ವಂಶವಾಹಿನಿಯನ್ನು ಬದಲಾಯಿಸಿದ ಸೂಕ್ಷ್ಮ ಜೀವಿಗಳಿಂದ ಇನ್ಸುಲಿನ್‌ ಉತ್ಪಾದನೆ... ಮುಂತಾದ ಸಂಶೋಧನೆಗಳು ಜೀವತಂತ್ರಜ್ಞಾನದ ಕ್ಷೇತ್ರದಲ್ಲಿ ಮೈಲಿಗಲ್ಲುಗಳಾಗಿವೆ. ಒಟ್ಟಿನಲ್ಲಿ ಹೇಳುವುದಾದರೆ, ಮಾನವನ ಹಾಗೂ ಪಶುಗಳ ಆರೋಗ್ಯ, ಔಷಧಗಳ ತಯಾರಿಕೆ, ಆಹಾರ ವಸ್ತುಗಳು ಹಾಗೂ ಪಾನೀಯಗಳ ಉತ್ಪಾದನೆ, ಕೃಷಿ, ಮೀನು ಹಾಗೂ ಇತರ ಜಲಚರಗಳ ಉಪಯೋಗ, ಜನಸಂಖ್ಯಾ ನಿಯಂತ್ರಣ, ಪರಿಸರ, ಗಣಿಗಾರಿಕೆ, ಹೈನುಗಾರಿಕೆ, ಪುಷ್ಪ ಕೃಷಿ, ಅಪರಾಧ ಪತ್ತೆ ಮತ್ತು ಇತರ ವ್ಯಾಜ್ಯಗಳನ್ನು ಬಗೆಹರಿಸುವಲ್ಲಿ ಜೀವತಂತ್ರಜ್ಞಾನದ ಕೊಡುಗೆ ಅಪಾರವಾಗಿದೆ.

        ಇದಲ್ಲದೆ, ಈ ಆಧುನಿಕ ವಿಜ್ಞಾನ ಯುಗದಲ್ಲಿ ಮಾನವನ ವಂಶವಾಹಿನಿಗಳ ಯೋಜನೆಯಡಿಯಲ್ಲಿ  (ಹ್ಯೂಮನ್‌ ಜಿನೋಮ್‌ ಪ್ರಾಜೆಕ್ಟ್), ಡಿ.ಎನ್‌.ಎ. ಯಲ್ಲಿನ ನ್ಯೂಕ್ಲಿಯೋಟೈಡ್‌ಗಳ ಅನುಕ್ರಮತೆ, ವಂಶವಾಹಿಗಳಲ್ಲಿರುವ ಬಹುರೂಪತೆಗಳು ಹಾಗೂ ಬದಲಾವಣೆಗಳು, ಬೇರೆ ಬೇರೆ ವ್ಯಕ್ತಿಗಳ ವಂಶವಾಹಿನಿಗಳಲ್ಲಿರುವ ವ್ಯತ್ಯಾಸಗಳು, ವಂಶವಾಹಿನಿಗಳ ಕಾರ್ಯವೈಖರಿ... ಮುಂತಾದ ಬಗೆಗೆ ಆಧುನಿಕ ಸುಸಜ್ಜಿತ ಪ್ರಯೋಗಾಲಯಗಳಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಮುಂದೆ ಪ್ರತಿಯೊಬ್ಬರಿಗೂ ಅವರ ವಂಶವಾಹಿನಿಗಳ ಬಗೆಗಿನ ಮಾಹಿತಿ ಮೈಕ್ರೊಚಿಪ್‌ಗ್ಳಲ್ಲಿ ಲಭ್ಯವಾಗಲಿದೆ. ಇದರಿಂದಾಗಿ ಅವರಲ್ಲಿನ ಗುಣ ಲಕ್ಷಣಗಳು, ರೋಗ ನಿರೋಧಕ ಶಕ್ತಿ, ಔಷಧಿಗಳಿಗೆ ಅವರ ದೈಹಿಕ ಪ್ರತಿಕ್ರಿಯೆ... ಮುಂತಾದ ವಿಷಯಗಳು ಮುಂದಿನ ದಿನಗಳಲ್ಲಿ ಖಚಿತವಾಗಿ ತಿಳಿಯಬಹುದು. ಇಂತಹ ತಂತ್ರಜ್ಞಾನದಿಂದ ಪ್ರತಿಯೊಬ್ಬರಿಗೂ ಸರಿಯಾದ ಔಷಧಗಳು ಅಥವಾ ಔಷಧಗಳ ಪ್ರಮಾಣವನ್ನು ನಿರ್ಣಯಿಸಿ ರೋಗಗಳಿಗೆ ಸರಿಯಾದ ಚಿಕಿತ್ಸೆ ಕೊಡುವುದು ಸಾಧ್ಯವಾಗಬಹುದಾಗಿದೆ.

        ಭಾರತದಲ್ಲಿಯೂ ಜೀವತಂತ್ರಜ್ಞಾನದ ವಿಷಯವಾಗಿ ಬಹಳ ರೀತಿಯ ಪ್ರಯೋಗಗಳು ನಡೆಯುತ್ತಿವೆ.
        ಮಣಿಪಾಲ ವಿಶ್ವವಿದ್ಯಾನಿಲಯದಲ್ಲಿನ ಮಣಿಪಾಲ್‌ ಜೀವ ವಿಜ್ಞಾನ ಕೇಂದ್ರ ದಲ್ಲಿರುವ (ಎಮ್‌,ಎಲ್‌.ಎಸ್‌.ಸಿ.) ಅತ್ಯಂತ ಆಧುನಿಕ, ಸುಸಜ್ಜಿತವಾದ ಜೀವತಂತ್ರಜ್ಞಾನ ವಿಭಾಗದ ಪ್ರಯೋ ಗಾಲಯದಲ್ಲೂ ಸಹ ಇಂತಹ ಪ್ರಯೋ ಗಗಳು ನಡೆಯುತ್ತಿವೆ. ಈ ಕೇಂದ್ರದಲ್ಲಿ ಜೀವತಂತ್ರಜ್ಞಾನ ಹಾಗೂ ಮಾನವ ತಳಿಶಾಸ್ತ್ರŒ ಎಂಬ ಎರಡು ಸ್ನಾತಕೋತ್ತರ ತರಗತಿಗಳಲ್ಲಿ ವಿದ್ಯಾರ್ಥಿಗಳಿಗೆ ಆಧುನಿಕ ಜೀವತಂತ್ರಜ್ಞಾನ, ತಳಿಶಾಸ್ತ್ರŒ ಮುಂತಾದ ವಿಷಯಗಳ ಬಗೆಗೆ ಶಿಕ್ಷಣ- ತರಬೇತಿ ನೀಡಲಾಗುತ್ತಿದೆ. ಅಲ್ಲದೆ, ಈ ಕೇಂದ್ರ ರೋಗ ಪತ್ತೆ-ಪರೀಕ್ಷೆಯಲ್ಲಿಯೂ ಮುಂಚೂಣಿಯಲ್ಲಿದ್ದು, ರೋಗಿಗಳ ಸೇವೆ ಮಾಡುತ್ತಿದೆ. ಇಲ್ಲಿ  ಫ್ಲೋ ಸೈಟೋಮೆಟ್ರಿ, ಮೈಕ್ರೊ ಅರ್ರೆ, ಲಿಕ್ವಿಡ್‌ ಸಿಂಟಿಲೇಷನ್‌ ಕೌಂಟರ್‌, ಫೋರಿಮೀಟರ್‌, ಡಿಎನ್‌ಎ ಸೀಕ್ವೆನ್ಸರ್‌, ಆರ್‌ಟಿಪಿಸಿಆರ್‌ ಮುಂತಾದ ಆಧುನಿಕ ಉಪಕರಣಗಳಿದ್ದು, ಅವುಗಳನ್ನು ಸಂಶೋಧನೆಯಲ್ಲಿ, ಶಿಕ್ಷಣಕ್ಕಾಗಿ ಹಾಗೂ ರೋಗ ಪತ್ತೆಯ ಪರೀಕ್ಷೆಗಳಲ್ಲಿ ಉಪಯೋಗಿಸಲಾಗುತ್ತಿದೆ. ಇದಲ್ಲದೆ, ಅಂಗಾಂಶ ಕೃಷಿ ಹಾಗೂ ಕ್ಯಾರಿಯೊಟೈಪಿಂಗ್‌ ಅನುಕೂಲವಿದ್ದು, ಇದರ ಉಪಯೋಗ ಕೂಡ ರೋಗಿಗಳಿಗೆ ಲಭ್ಯವಾಗುತ್ತಿದೆ.
        ಈ ಕೇಂದ್ರದಲ್ಲಿ ಪಿಸಿಆರ್‌ ತಾಂತ್ರಿಕತೆಯನ್ನು ಉಪಯೋಗಿಸಿ ಸಿಸ್ಟಿಕ್‌ ಫೈಬ್ರೋಸಿಸ್‌ ಮತ್ತು ಎಚ್‌ಬಿವಿ ರೋಗಗಳನ್ನು ಪತ್ತೆ ಮಾಡಲಾಗುತ್ತಿದೆ. ಡಿಎನ್‌ಎ ಸೀಕ್ವೆನ್ಸರ್‌ ಉಪಯೋಗಿಸಿ ಅಮೈಲಾಯೊxàಸಿಸ್‌, ಆಸ್ತಮಾ, ಗಿಲ್ಬರ್ಟ್‌ ಸಿಂಡ್ರೋಮ್‌, ತಾಲಿಸೇಮಿಯ, ವಿಲ್ನಸ್‌ ಸಿಂಡ್ರೋಮ್‌, ಕ್ಯು ಎಫ್‌ ಪಿಸಿಆರ್‌ ತಾಂತ್ರಿಕತೆಯನ್ನು ಉಪಯೋಗಿಸಿ ಡೌನ್ಸ್‌ ಸಿಂಡ್ರೋಮ್‌, ಟರ್ನರ್‌ ಸಿಂಡ್ರೋಮ್‌ ಮುಂತಾದ ವಂಶವಾಹಿನಿ ಸಂಬಂಧಿತ ರೋಗಗಳನ್ನು ಪತ್ತೆ ಹಚ್ಚಲಾಗುತ್ತಿದೆ.

        ಫ್ಲೋ ಸೈಟೋಮೆಟ್ರಿ ಎಂಬುದು ಸಂಶೋಧನಾ ಹಾಗೂ ಕ್ಲಿನಿಕಲ್‌ ಪ್ರಯೋಗಾಲಯಗಳಲ್ಲಿ ಅತ್ಯಾವಶ್ಯಕವಾಗಿರುವ ಆಧುನಿಕ ತಂತ್ರಜ್ಞಾನ. ಈ ತಂತ್ರಜ್ಞಾನವನ್ನು ವಿವಿಧ ರೀತಿಯ ಜೀವಕೋಶಗಳನ್ನು ಅಭ್ಯಸಿಸಲು, ಜೀವಕೋಶಗಳನ್ನು ಬೇರ್ಪಡಿಸಲು, ಜೀವಕೋಶಗಳನ್ನು ಗುರುತಿಸುವುದರ ಮೂಲಕ ರೋಗ ನಿರ್ಣಯ ಮಾಡಲು ಮತ್ತು ರೋಗದ ತೀವ್ರತೆಯನ್ನು ಅರಿಯಲು ಉಪಯೋಗಿಸುತ್ತಾರೆ. ಈ ತಂತ್ರಜ್ಞಾನದಿಂದ ಜೀವಕೋಶಗಳ ಸರಿಯಾದ ಸಂಖ್ಯೆ, ಜೀವಕೋಶಗಳ  ಸಾಪೇಕ್ಷ ಗಾತ್ರ ಹಾಗೂ ಸಂಕೀರ್ಣತೆ ಮತ್ತು ಜೀವಕೋಶಗಳಿಂದ ಹೊರ ಸೂಸುವ ಬೆಳಕಿನ ಕಿರಣಗಳ ಮೂಲಕ ಅವುಗಳ ಗುಣಗಳನ್ನು ತಿಳಿಯ ಬಹುದಾಗಿದೆ. ಈ ಎಲ್ಲಾ ಅಳತೆಗಳನ್ನು ದ್ರಾವಣದಲ್ಲಿರುವ ಜೀವಕೋಶಗಳನ್ನು, ಫ್ಲೋ ಸೈಟೋಮೀಟರ್‌ ಎಂಬ ಉಪಕರಣದ ಮೂಲಕ ಹಾಯಿಸು ವುದರ ಫಲಿತಾಂಶವಾಗಿ ಕಂಡು ಕೊಳ್ಳಬಹುದಾಗಿದೆ. ಈ ತಂತ್ರಜ್ಞಾನದಲ್ಲಿ ಜೀವಕೋಶಗಳಿಗೆ ಬಣ್ಣ ಹಾಕಿ, ಅವುಗಳನ್ನು ವಿಶೇಷ ದ್ರಾವಣವೊಂದರ‌ಲ್ಲಿ ಮಿಶ್ರಣ ಮಾಡಿರುತ್ತಾರೆ. ಈ ಜೀವಕೋಶಗಳಿರುವ ದ್ರಾವಣವನ್ನು ಲೇಸರ್‌ ಕಿರಣಗಳಿಗೆ ಒಡ್ಡಿದಾಗ, ಇವುಗಳಿಂದ ಹೊರ ಸೂಸುವ ಬೆಳಕನ್ನು ಫ್ಲೋ ಸೈಟೋಮೀಟರ್‌ನಲ್ಲಿರುವ ಗುರುತಿಸುವ ಸಾಧನ ಹಾಗೂ ಅದಕ್ಕೆ ಹೊಂದಿಕೊಂಡಿರುವ ಗಣಕ ಯಂತ್ರದ ಸಹಾಯದಿಂದ ಅಳತೆೆ ಮಾಡಲಾಗುತ್ತದೆ. ಫ್ಲೋ ಸೈಟೋಮೀಟರ್‌ನ್ನು ಪ್ರಚಲಿತವಾಗಿ ಎಚ್‌ಐವಿ ಪೀಡಿತರಾದ ವ್ಯಕ್ತಿಗಳಲ್ಲಿ ಟಿ-ಲಿಂಫೋಸೈಟ್‌ಗಳ ಸಂಖ್ಯೆಯನ್ನು ತಿಳಿಯಲು, ಅಬುìದ ರೋಗದ (ಕ್ಯಾನ್ಸರ್‌) ಜೀವಕೋಶಗಳ ಡಿಎನ್‌ಎ ಪ್ರಮಾಣವನ್ನು ಹಾಗೂ ಆ ಜೀವಕೋಶಗಳ ವಿಭಜನಾ ಗತಿಯನ್ನು ತಿಳಿಯಲು ಉಪಯೋಗಿಸುತ್ತಾರೆ. ಈ ತಂತ್ರಜ್ಞಾನವನ್ನು ಮಾನವನ ಜೀವಕೋಶಗಳಲ್ಲಿರುವ ವರ್ಣತಂತು (ಕ್ರೊಮೊಸೋಮ್‌)ಗಳನ್ನು ಬೇರ್ಪಡಿಸಲು ಹಾಗೂ ಅವುಗಳಲ್ಲಿರುವ ವಂಶವಾಹಿನಿಗಳ ಸಂಗ್ರಹವನ್ನು  ಮಾಡಲು, ಜೀವಕೋಶಗಳಲ್ಲಿರುವ ಮೈಟೋಕಾಂಡ್ರಿಯ, ಬ್ಯಾಕ್ಟೀರಿಯಗಳು, ಲಿಪೊಸೋಮ್‌ಗಳು, ನ್ಯೂಕ್ಲಿಯಿಕ್‌ ಆಮ್ಲಗಳ ಅಭ್ಯಾಸ ಮಾಡಲು ಬಳಸುತ್ತಾರಲ್ಲದೆ, ಪ್ರಾಣಿಗಳಲ್ಲಿ ಎಕ್ಸ್‌ ಮತ್ತು ವೈ ವರ್ಣ ತಂತುಗಳಿರುವ ವೀರ್ಯಾಣುಗಳನ್ನು ಬೇರೆ ಬೇರೆ ಮಾಡಿ, ಅವುಗಳನ್ನು ಪಶುಸಂತಾನ ಪಾಲನಾ ಕ್ರಿಯೆಯಲ್ಲಿ ಬಳಸುತ್ತಾರೆ. ಅಲ್ಲದೆ, ಆಧುನಿಕ ರಕ್ತ ಪರೀಕ್ಷಾ ಪ್ರಯೋಗಾಲಯಗಳಲ್ಲಿ ವಿವಿಧ ರೀತಿಯ ರಕ್ತದ ಕ್ಯಾನ್ಸರ್‌ಗಳನ್ನು ಗುರುತಿಸಲು, ಕೆಂಪು ರಕ್ತಕಣ, ಬಿಳಿ ರಕ್ತಕಣ, ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ತಿಳಿಯಲು ಉಪಯೋಗಿಸುತ್ತಾರೆ. ಇಂತಹ ಪರೀಕ್ಷೆಗಳನ್ನು ಮಣಿಪಾಲ್‌ ಜೀವ ವಿಜ್ಞಾನ ಕೇಂದ್ರದಲ್ಲಿ ಮಾಡಲಾಗುತ್ತದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಕೆಲವು ಔಷಧಿಗಳು, ಕೆಲವು ಕಾಯಿಲೆಗಳು, ಅಧಿಕ ಮದ್ಯಪಾನ ಸೇವನೆ, ಮತ್ತು ಬ್ಯಾಕ್ಟೀರಿಯಾ ಹಾಗೂ ವೈರಸ್‌ ಸೋಂಕುಗಳ ಕಾರಣದಿಂದ ಹೆಪಾಟೈಟಿಸ್‌ ಬರಬಹುದು...
      • ಈ ವಿಭಾಗದಲ್ಲಿಯೂ ಇದೆ
      • Copyright @ 2009 Udayavani.All rights reserved.
      • Designed & Hosted By 4cplus