Saturday, May 18, 2013
Last Updated: 8:15:43 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಆರೋಗ್ಯವಾಣಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ನಿಕೋಟಿನ್‌ ದುರ್ಬಳಕೆ
    • ಧೂಮಪಾನಿಗಳು ಶ್ವಾಸಕೋಶದ ಕ್ಷಯ ಹಾಗೂ ನ್ಯುಮೋನಿಯಾಕ್ಕೆ ತುತ್ತಾಗುವ ಅಪಾಯವೂ ಹೆಚ್ಚು.

      • ಡಾ| ಜಿ. ಕೆ. ಸುಧಾಕರ್‌,ಹಿರಿಯ ಉಪನ್ಯಾಸಕರು, ಔಷಧಿ ರಸಾಯನಶಾಸ್ತ್ರ ವಿಭಾಗ | Dec 16, 2012

        ನಿಕೋಟಿನಾ ಟಬ್ಯಾಕಂ ಎಂಬ ಗಿಡದ ಎಲೆಯಲ್ಲಿ ನಿಕೋಟಿನ್‌ ಎಂಬ ಅಂಶವಿರುತ್ತದೆ. ನಿಕೋಟಿನ್‌ ಎಂಬುದು ಕೊಕೈನ್‌, ಹೆರಾಯಿನ್‌, ಮಾರ್ಫಿನ್‌ ಅಥವಾ ಪೆಥಿಡೈನ್‌ ರೀತಿಯ ಒಂದು ಅಡಿಕ್ಟಿವ್‌ ಅಥವಾ ಚಟಕಾರಕ. ಇನ್ನಿತರ ಅಡಿಕ್ಟಿವ್‌ಗಳಲ್ಲಿ ಪ್ರಮುಖವಾಗಿ ಇರುವಂತಹ ಯಾವುದೇ ರೀತಿಯ ಔಷಧೀಯ ಅಂಶಗಳು ನಿಕೋಟಿನ್‌ನಲ್ಲಿ ಇಲ್ಲ. ನಿಕೋಟಿನ್‌ನ್ನು ಹೆಚ್ಚಾಗಿ ಸಿಗರೇಟ್‌, ಬೀಡಿ, ಸಿಗಾರ್‌ ಅಥವಾ ಹುಕ್ಕಾಗಳಲ್ಲಿ  ಸೇದುವಿಕೆಗಾಗಿ  ಉಪಯೋಗಿಸುತ್ತಾರೆ. ಇದರ ಎಲೆಯ ಹುಡಿಯನ್ನು ಜಗಿಯಲಿಕ್ಕಾಗಿಯೂ, ನಯವಾಗಿ ಹುಡಿಮಾಡಿದ ತಂಬಾಕು ಹುಡಿಯನ್ನು ಪಾನ್‌ ಮಸಾಲ, ಗುಟ್ಕಾ ಇತ್ಯಾದಿಗಳಲ್ಲಿಯೂ ಇತರ ಸಾಮಗ್ರಿಗಳ ಜೊತೆಯಲ್ಲಿ ಉಪಯೋಗಿಸುತ್ತಾರೆ. ನಶ್ಯದಲ್ಲಿಯೂ ಇದರ ಎಲೆಯ ಹುಡಿಯನ್ನು  ಉಪಯೋಗಿಸುತ್ತಾರೆ. ಸಿಗರೇಟ್‌, ಬೀಡಿ, ಪಾನ್‌ ಮಸಾಲ, ಗುಟ್ಕಾ ಅಥವಾ ನಶ್ಯ... ಇವೆಲ್ಲವೂ ಸಹ ಮನುಷ್ಯನು ನಿಕೋಟಿನ್‌ನ್ನು  ದೇಹದೊಳಕ್ಕೆ ತಲುಪಿಸಿ, ಬಿಡುಗಡೆಗೊಳಿಸಿಕೊಳ್ಳುವ  ವಿವಿಧ ಮಾದರಿಗಳು.

        ಕೊಕೈನ್‌ ಅಥವಾ ಹೆರಾಯಿನ್‌ಗೆ ಹೋಲಿಸಿದರೆ ನಿಕೋಟಿನ್‌ ಬಹಳ ನಿಧಾನವಾಗಿ ಕಾರ್ಯವೆಸಗುವ ಒಂದು ಚಟಕಾರಕ  ಅಥವಾ  ಅಡಿಕ್ಟಿವ್‌. ಆದರೆ, ಇದು ಕೆಲವೇ ತಿಂಗಳು ಅಥವಾ ಒಂದೆರಡು ವರ್ಷಗಳಲ್ಲಿ ತನ್ನ ಮರಣಾಂತಿಕ ಹಾಗೂ ಅಹಿತಕರ ಅಡ್ಡ ಪರಿಣಾಮಗಳನ್ನು  ತೋರಿಸಬಲ್ಲದು. 15 ವರ್ಷ ಅಥವಾ ಅದಕ್ಕಿಂತಲೂ ಹೆಚ್ಚು ಸಮಯಗಳ ಕಾಲ ಇರುವ ನಿಕೋಟಿನ್‌ ದುರಭ್ಯಾಸವು ಬಹಳ ಗಂಭೀರ ದುಷ್ಪರಿಣಾಮಗಳನ್ನು ಉಂಟುಮಾಡಬಲ್ಲದು. ಹಾಗಾಗಿ ಧೂಮಪಾನ, ತಂಬಾಕು ಜಗಿಯುವುದು ಅಥವಾ ಹುಕ್ಕಾ ಸೇದುವುದು... ಇತ್ಯಾದಿ ಯಾವುದೇ ರೂಪದಲ್ಲಿಯೂ ನಿಕೋಟಿನ್‌ನ್ನು  ಸೇವಿಸುವುದು ಬಹಳ ಆಪಾಯಕಾರಿಯಾದುದು. ಆದರೆ ಇದು ಎಚ್ಚರ ವಹಿಸಿದರೆ, ತಪ್ಪಿಸಿಕೊಳ್ಳಬಹುದಾದ ಆರೋಗ್ಯದ ಅಪಾಯ.

        ನಿಮ್ಮ ದೇಹವನ್ನು  ನಿಕೋಟಿನ್‌ ಯಾವ ರೂಪದಲ್ಲಿ ಸೇರುತ್ತದೆ ಎಂಬುದನ್ನು  ಆಧರಿಸಿಕೊಂಡು, ಅಂದರೆ ದೇಹದಲ್ಲಿ ನಿಕೋಟಿನ್‌ ಬಿಡುಗಡೆಗಾಗಿ, ನೀವು ಯಾವ ಕ್ರಮವನ್ನು  ಅನುಸರಿಸುತ್ತಿದ್ದೀರಿ ಎಂಬುದನ್ನು  ಆಧರಿಸಿಕೊಂಡು, ನಿಮ್ಮ  ಮೇಲೆ ನಿಕೋಟಿನ್‌ ಪ್ರಭಾವ ಎಷ್ಟೆಂಬುದು ನಿರ್ಧಾರವಾಗುತ್ತದೆ. ತಂಬಾಕು ಜಗಿಯುವುದು ಹಾಗೂ ನಶ್ಯ ಸೇದುವುದು ಅದನ್ನು  ಉಪಯೋಗಿಸುವವರಿಗಷ್ಟೇ ಅಪಾಯಕಾರಿಯಾಗಿರುತ್ತದೆ. ಆದರೆ, ಧೂಮಪಾನ ಮಾಡುವುದರಿಂದ, ಅದನ್ನು ಸೇದುವವನ ಆಸುಪಾಸು ಇರುವವರಿಗೂ ಸಹ ಪರೋಕ್ಷ ಧೂಮಪಾನದ ಅಪಾಯವಿದೆ. ( ಎನ್ವಿರೋನ್‌ಮೆಂಟಲ್‌ ಟೊಬ್ಯಾಕೊ ಸ್ಮೋಕ್‌). ಸಿಗರೇಟ್‌ ಸೇದುವಿಕೆಯಿಂದ ಆಗಬಹುದಾದ ಮೊದಲ ಅಪಾಯ ಎಂದರೆ, ಶ್ವಾಸಕೋಶ ಹಾಗೂ ಉಸಿರಾಟದ ಅಂಗಗಳಲ್ಲಿ ಆಗಬಹುದಾದ ಕ್ಯಾನ್ಸರ್‌. ಹೃದಯದ ರಕ್ತನಾಳದ ಕಾಯಿಲೆಗಳಾದ ಹೃದಯಾಘಾತ, ಲಕ್ವಾಗಳಿಗೂ, ನಿಕೋಟಿನ್‌ ಬಳಕೆಗೂ ಸಂಬಂಧವಿದೆ. ಈ ಅಪಾಯಕಾರಿ ಪರಿಣಾಮಗಳು  ಕೇವಲ ಧೂಮಪಾನ ಮಾಡುವವರಲ್ಲಷ್ಟೇ ಆಲ್ಲದೆ , ಧೂಮಪಾನಿ ಸೇದಿ ವಾತಾವರಣಕ್ಕೆ ಉಗುಳಿಬಿಟ್ಟ ಹೊಗೆಯನ್ನು  ಒಳಗೆಳೆದುಕೊಳ್ಳುವವರಲ್ಲಿಯೂ, ಅಂದರೆ ಆತನ ಸುತ್ತಮುತ್ತಲಿರುವವರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಈ ಪರೋಕ್ಷ ಧೂಮಪಾನಿಗಳ ಮೇಲಾಗುವ ಪರಿಣಾಮವನ್ನು ಆತನ ರಕ್ತದಲ್ಲಿರುವ ಕಾರ್ಬಾಕ್ಸಿ ಹಿಮೊಗ್ಲೋಬಿನ್‌ನಿಂದ ಅಥವಾ ವೈನ್‌ನಲ್ಲಿ ನಿಕೋಟಿನ್‌ ಒಡೆದಾಗ ಬರುವ ಕ್ಯಾಟಿನೈಸ್‌ ಅಂಶದ ಮಟ್ಟದಿಂದ ಪತ್ತೆ ಮಾಡಬಹುದು.

        ನಿಕೋಟಿನ್‌ ದುರ್ಬಳಕೆ
        ಹಾಗೂ ಕ್ಯಾನ್ಸರ್‌


        ಧೂಮಪಾನಕ್ಕೆ ಸಂಬಂಧಿಸಿದ ಮೊದಲ ಕ್ಯಾನ್ಸರ್‌ ಅಂದರೆ ಶ್ವಾಸಕೋಶದ ಕ್ಯಾನ್ಸರ್‌. ಸುಮಾರು 90%ದಷ್ಟು  ಕ್ಯಾನ್ಸರ್‌ ರೋಗಿಗಳು ಧೂಮಪಾನಿಗಳು. ಶ್ವಾಸಕೋಶದ ಕ್ಯಾನ್ಸರಷ್ಟೇ  ಅಲ್ಲದೆ, ಧೂಮಪಾನದ ಇನ್ನಿತರ ದುಷ್ಟ ಪರಿಣಾಮಗಳು ಅಂದರೆ, ಬಾಯಿಯ ಕ್ಯಾನ್ಸರ್‌, ಗಂಟಲಿನ ಕ್ಯಾನ್ಸರ್‌, ಧ್ವನಿಪೆಟ್ಟಿಗೆಯ ಕ್ಯಾನ್ಸರ್‌, ಅನ್ನನಾಳದ ಕ್ಯಾನ್ಸರ್‌ ಹಾಗೂ ಮೂತ್ರಕೋಶದ ಕ್ಯಾನ್ಸರ್‌. ತಂಬಾಕು ಜಗಿಯುವುದರಿಂದ ಬಾಯಿ, ಗಂಟಲು, ಅನ್ನನಾಳ, ಹೊಟ್ಟೆ , ಪ್ಯಾಂಕ್ರಿಯಾಸ್‌ ಗ್ರಂಥಿಗಳಲ್ಲಿ  ಕ್ಯಾನ್ಸರ್‌ ಆಗುವ ಅಪಾಯ ಹೆಚ್ಚಾಗುತ್ತದೆ.

        ನಿಕೋಟಿನ್‌ ದುರ್ಬಳಕೆ ಹಾಗೂ
        ರಕ್ತನಾಳಗಳ ಕಾಯಿಲೆ

        ನಿಕೋಟಿನ್‌ ದೇಹದಲ್ಲಿ ಕ್ಯಾಟೆಕೋಲಮೈನ್‌  ಎಂಬ ಹಾರ್ಮೋನ್‌ನ್ನು ಬಿಡುಗಡೆಗೊಳಿಸುತ್ತದೆ. ಇದು ಹೃದಯದ ಬಡಿತ ಹಾಗೂ ರಕ್ತದ ಒತ್ತಡವನ್ನು ಹೆಚ್ಚಿಸುತ್ತದೆ. ಮಾತ್ರವಲ್ಲದೆ, ರಕ್ತನಾಳಗಳ ಗೋಡೆಗೆ ಹಾಗೂ ಹೃದಯದ ಸ್ನಾಯುಗಳಿಗೆ ಹಾನಿಯುಂಟು ಮಾಡುತ್ತದೆ. ರಕ್ತನಾಳಗಳ ಗೋಡೆಗೆ ಹಾನಿಯಾಗುವುದರಿಂದ, ಅಲ್ಲಿ ಕೊಲೆಸ್ಟ್ರಾಲ್‌ ಸಂಗ್ರಹಣೆ ಹೆಚ್ಚುತ್ತದೆ, ರಕ್ತ ಪರಿಚಲನೆಯ ಹಾದಿಯು ಸಪೂರವಾಗುತ್ತದೆ.ಇದರಿಂದಾಗಿ, ರಕ್ತಪರಿಚಲನೆಯಲ್ಲಿ ಅಡಚಣೆ ಉಂಟಾಗುವುದರಿಂದ, ಅಂಗಾಂಶಗಳಿಗೆ ಆಮ್ಲಜನಕ ಪೂರೈಕೆ  ಕಡಿಮೆಯಾಗುತ್ತದೆ. ಇದು ಹೃದಯಘಾತವಾಗಲು ಇರುವ  ಪ್ರಮುಖ ಕಾರಣಗಳಲ್ಲಿ ಒಂದು. ಒಂದು ವೇಳೆ, ಮೆದುಳಿನ ರಕ್ತನಾಳಗಳಲ್ಲಿ ಅಡಚಣೆಯಾದರೆ, ಲಕ್ವಾ ಉಂಟಾಗುವ ಅಪಾಯವಿದೆ. ಮೂತ್ರಪಿಂಡದ ರಕ್ತನಾಳದಲ್ಲಿ  ಅಡಚಣೆಯಾದರೆ, ಮೂತ್ರಪಿಂಡ ವೈಫಲ್ಯ ಉಂಟಾಗಬಹುದು, ಅಧಿಕ ರಕ್ತದ ಒತ್ತಡದ ಸಾಧ್ಯತೆಯೂ ಇದೆ. ಇತರ ರಕ್ತನಾಳಗಳಿಗೆ ಹಾನಿಯಾದರೆ, ಸಂಬಂಧಿತ ಇತರ ಅಂಗಗಳಾದ ಕಣ್ಣು, ಕೈ -ಕಾಲುಗಳಿಗೂ ಹಾನಿಯಾಗುವ ಅಪಾಯವಿದೆ.

        ಧೂಮಪಾನ ಹಾಗೂ
        ಶ್ವಾಸಕೋಶದ ಕಾಯಿಲೆಗಳು

        ಶ್ವಾಸಕೋಶದ ಕ್ಯಾನ್ಸರ್‌ ಮಾತ್ರವೇ ಅಲ್ಲದೆ, ಧೂಮಪಾನಿಗಳಿಗೆ ದೀರ್ಘ‌ಕಾಲಿಕ ಶ್ವಾಸಕೋಶದ ಅಪಾಯಗಳಾದ  ಶ್ವಾಸನಾಳದ ಉರಿಯೂತ , ಎಂಫೆೈಸೆಮಾ, ನಿರಂತರ ಕೆಮ್ಮು ಹಾಗೂ ಸೋಂಕುಗಳ ಅಪಾಯ ಹೆಚ್ಚು . ಧೂಮಪಾನಿಗಳು ಶ್ವಾಸಕೋಶದ ಕ್ಷಯ ಹಾಗೂ ನ್ಯುಮೋನಿಯಾಕ್ಕೆ ತುತ್ತಾಗುವ ಅಪಾಯವೂ ಹೆಚ್ಚು. ಧೂಮಪಾನ ಮಾಡುವವರ ರಕ್ತದಲ್ಲಿ ಕಾರ್ಬನ್‌ ಮೊನಾಕ್ಸೆ„ಡ್‌ ಸೇರಿಕೊಳ್ಳುತ್ತದೆ. ಇದರಿಂದ ರಕ್ತದ ಅಮ್ಲಜನಕ ಸಾಗಾಣಿಕೆಯ ಸಾಮರ್ಥ್ಯ ಕುಂದುತ್ತದೆ. ಪರಿಣಾಮವಾಗಿ, ಧೂಮಪಾನಿಗೆ ಉಸಿರಾಟ ಕಷ್ಟವಾಗುತ್ತದೆ. ಉಸಿರು ಕಟ್ಟಿಕೊಳ್ಳುತ್ತದೆ, ಆಂಜೈನಾ ಎಂಬ ಹೃದಯದ ನೋವು ಕಾಣಿಸಿಕೊಳ್ಳುತ್ತದೆ. ವ್ಯಕ್ತಿಯು ತನ್ನ ಜೀವನದ ಆರಂಭದಿಂದಲೇ , ಅಂದರೆ ಬಹಳ ಬೇಗನೆ ಧೂಮಪಾನವನ್ನು  ಆರಂಭಿಸಿದ್ದರೆ, ಶ್ವಾಸಕೋಶದ ಕಾಯಿಲೆಗಳಾಗುವ ಅಪಾಯ ಇನ್ನೂ ಹೆಚ್ಚು . ಮಾತ್ರವಲ್ಲ;  ಶ್ವಾಸಕೋಶವನ್ನು ಮತ್ತೆ ಮೊದಲಿನಂತಾಗಿಸುವುದು ಅಸಾಧ್ಯ.

        ತಂಬಾಕು ಹಾಗೂ
        ಅಪಾಯಕಾರಿ ಅಂಶಗಳು

        ಜಗಿಯುವ ಅಥವಾ ಸೇದುವ ಯಾವುದೇ ರೂಪದಲ್ಲಿರುವ ತಂಬಾಕಿನಲ್ಲಿ , ಅಮೋನಿಯಾ, ಕಾರ್ಬನ್‌ ಮೋನಾಕ್ಸೆ„ಡ್‌, ಹೈಡ್ರೋಜನ್‌ ಸಯನೈಡ್‌, ಆರ್ಸೆನಿಕ್‌, ಬೆನ್‌ಝೋಪೈರಿನ್‌... ಇತ್ಯಾದಿ ಅನೇಕ ವಿಧದ  ವಿಷಕಾರಿ ಅಂಶಗಳಿರುತ್ತವೆ. ಕ್ಯಾನ್ಸರ್‌ ಉಂಟಾಗಲು ಹಾಗೂ ರಕ್ತನಾಳಗಳು ಪೆಡಸಾಗಲು ತಂಬಾಕಿನಲ್ಲಿರುವ  ಈ ಎಲ್ಲಾ ಅಂಶಗಳ ಪಾಲು ಹೆಚ್ಚು ಎಂಬುದನ್ನು  ಆಧ್ಯಯನಗಳು ದೃಢಪಡಿಸಿವೆ. ನಿಕೋಟಿನ್‌ ದುರ್ಬಳಕೆಯಿಂದ ನಮಗೇ  ಸ್ವತ: ಉತ್ತಮ ಆರೋಗ್ಯ ದೊರೆಯುವುದಷ್ಟೇ ಅಲ್ಲದೆ, ಇತರರನ್ನೂ ಸಹ ಸಿಗರೇಟಿನ ಹೊಗೆ ಹರಡಿ ಉಂಟಾಗುವ ಅಪಾಯದಿಂದ ತಪ್ಪಿಸ ಬಹುದು. ಮಾತ್ರವಲ್ಲದೆ, ತಂಬಾಕು, ಧೂಮಪಾನ, ಗುಟ್ಕಾ... ಇತ್ಯಾದಿ ಎಲ್ಲ ದುರಭ್ಯಾಸಗಳನ್ನು  ಬಿಟ್ಟು ಬಿಡುವುದು ಉತ್ತಮ; ಅದು ಪರಿಸರವನ್ನು  ಕಾಪಾಡುವಲ್ಲಿಯೂ ಸಹಾಯಕ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಮೆದುಳಿನ ರಕ್ತನಾಳವು ಒಡೆಯುವುದು ಮತ್ತು ಸುತ್ತಮುತ್ತಲಿನ ಅಂಗಾಂಶಗಳಿಗೆ ರಕ್ತಸ್ರಾವವಾಗುವುದರಿಂದ ಇದು ಸಂಭವಿಸುತ್ತದೆ...
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus