Tuesday, December 23, 2014
Last Updated: 1:07:26 AM IST
 • ನಾನೆಲ್ಲಿರುವೆ:
 • ಮುಖಪುಟ ಪಯಣ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
  • ಬಿಜಾಪುರ: ಬಹುಮುಖೀ ವೈಭವ


   • ಬಿಜಾಪುರ ಜಿಲ್ಲೆಯ ಪ್ರವಾಸ ಮಾಡುವುದೆಂದರೆ ನಾಡಿನ ಬಹುಮುಖ ಸಂಸ್ಕೃತಿ, ಕಲೆ, ಇತಿಹಾಸ, ಸಾಹಿತ್ಯ, ಸಂಗೀತ ಹಾಗೂ ವಾಸ್ತುವೈಭವವನ್ನು  ಸವಿಯುವ ಪ್ರಕ್ರಿಯೆ ಎಂದೇ ಅರ್ಥ.


    ಇಂಡಿ ತಾಲೂಕು

    ಭೀಮಾ ತೀರದಲ್ಲಿರುವ ಇಂಡಿ ತಾಲೂಕು ಬಿಜಾಪುರ ಜಿಲ್ಲೆಯಲ್ಲಿರುವ ತುಸು ದೊಡ್ಡ ತಾಲೂಕು. ಈ ತಾಲೂಕಿನಲ್ಲಿ ಅನೇಕ ಧಾರ್ಮಿಕ ಪುಣ್ಯ ಕ್ಷೇತ್ರಗಳಿವೆ. ಅನೇಕ ಹಿರಿಯ ಜನಪದ ಸಾಹಿತಿಗಳು ಈ ತಾಲೂಕಿನಲ್ಲಿ ಹೆಸರುವಾಸಿಯಾಗಿದ್ದಾರೆ.

    ಇಂಚಗೇರಿ

    ಜಿಲ್ಲಾ ಕೇಂದ್ರದಿಂದ 45 ಕಿ.ಮೀ. ದೂರದಲ್ಲಿರುವ ಈ ಗ್ರಾಮದಲ್ಲಿ ಸರ್ವೋದಯದ ಕೊಂಡಿಯಂತಿರುವ ಇಂಚಗೇರಿ ಮಠ ಭಕ್ತಿಯ ತಾಣವಾಗಿದೆ. ಇಂಚಗೇರಿ ಸಂಪ್ರದಾಯವೆಂದು ಕರೆಯಲ್ಪಡುವ ಈ ಮಠದ ಶಾಖೆಗಳು ಎರಡು ನೂರಕ್ಕೂ ಅಧಿಕ ಸಂಖ್ಯೆಯಲ್ಲಿವೆ.

    ಹೊರ ರಾಜ್ಯಗಳಲ್ಲಿ ಈ ಮಠಗಳು ಆಧ್ಯಾತ್ಮಿಕ ಬೆಳಕು ಚೆಲ್ಲುತ್ತಿವೆ. ಆಗ್ರಾದಲ್ಲಿಯು ಈ ಮಠದ ಶಾಖೆಯಿರುವುದು ವಿಶೇಷ.

    12ನೇ ಶತಮಾನದಲ್ಲಿ ಆಗಿಹೋದ ಶರಣ ಕಾಡಸಿದ್ದ ಈ ಸಂಪ್ರದಾಯದ ರೂವಾರಿ ಯಾಗಿರುವರು. ಈ ಭಾಗದ ಪರಿಸರ ಮಲೆನಾಡನ್ನು ನೆನಪಿಸುವುದು.

    ತಾಂಬಾ

    ಈ ಗ್ರಾಮವು ತಾಲೂಕು ಕೇಂದ್ರದಿಂದ 20 ಕಿ.ಮೀ. ದೂರದಲ್ಲಿದೆ. ಲಕ್ಷ್ಮೀ ಗುಡಿಯ ಮುಂದೆ ಭಕ್ತಾದಿಗಳು ಸಿಡಿ ಆಡುವರು. ಕಬ್ಬಿಣದ ಕೊಕ್ಕೆಯಿಂದ ಬಟ್ಟೆಗೆ ಅಥವಾ ದೇಹದ ಬೆನ್ನಿಗೆ ಕೊಕ್ಕೆಯನ್ನು ಹಾಕಿಕೊಂಡು ಎತ್ತರದ ಕಂಬದ ತುದಿಗೆ ನೇತಾಡುವರು. ಇದೇ ಸಿಡಿ ಸಂಪ್ರದಾಯ.

    ಯುಗಾದಿಯಿಂದ ಕಾರ ಹುಣ್ಣಿಮೆಯ ತನಕ ಪ್ರತಿ ಶುಕ್ರವಾರ ಭಕ್ತರು ಈ ದೇವಾಲಯದ ಅಂಗಳದಲ್ಲಿ ಸಿಡಿ ಆಡುವರು. ಇದು ಗ್ರಾಮದೇವತೆಗೆ ಭಕ್ತಾದಿಗಳು ಮಾಡುವ ಸೇವೆಯ ಒಂದು ರೂಪ ಅಷ್ಟೇ ! ಕೆಳ ಜಾತಿಯ ಭಕ್ತಾದಿಗಳು ಸಿಡಿ ಆಡುವಂತಿಲ್ಲ !

    ಸಾಲೋಟಗಿ

    "ಇಂಡೋ ಸಾರ್ಸೆನಿಕ್‌' ಶೈಲಿಯ ವಾಸ್ತುಶಿಲ್ಪ ಕಲೆಯನ್ನು ಹೊಂದಿರುವ ಎರಡು ದೇವಾಲಯಗಳು ಇಲ್ಲಿವೆ. ಶ್ರೀ ಶಿವಯೋಗೀಶ್ವರ ಮಂದಿರ ಹುಣಸೆ ಬನದಲ್ಲಿ ತಲೆಯೆತ್ತಿದೆ. ಇನ್ನೊಂದು ಊರೊಳಗಿರುವುದು. ಕ್ರಿ.ಶ. 1570ರ ಕಾಲದಲ್ಲಿ ಶಿವಯೋಗೀಶ್ವರರು ಹಿಂದು-ಮುಸ್ಲಿಂ ಸಮನ್ವಯ ಸಾಧಿಸಿದವರು.

    "ಅಲಾದೀನ ಪೀರ' ಎಂಬ ಆಧ್ಯಾತ್ಮಿಕ ಬಿರುದನ್ನು ಬಿಜಾಪುರ ಆದಿಲ್‌ಶಾಹಿ ಮನೆತನದ ಸುಲ್ತಾನರಿಂದ ಪಡೆದಿದ್ದರು. ರಾಷ್ಟ್ರಕೂಟರ ಮೂರನೇಯ ಕೃಷ್ಣನ ಕಾಲದ ಶಾಸನವು "ಪೌಠಿಗೆ' ವಿದ್ಯಾಕೇಂದ್ರವಾಗಿತ್ತೆಂದು ಹೇಳುವುದು. ಸಾಲೋಟಗಿ ಗ್ರಾಮದ ಮೂಲ ಹೆಸರು ಪೌಠಿಗೆ. ಇಂಡಿಯಿಂದ 8 ಕಿ.ಮೀ. ದೂರದಲ್ಲಿರುವ ಈ ಗ್ರಾಮವಿಂದು ಕಬ್ಬು , ಲಿಂಬೆ ಬೆಳೆಗೆ ಹೆಸರುವಾಸಿಯಾಗಿದೆ.

    ಹಲಸಂಗಿ

    ಕರ್ನಾಟಕದ ಪಾಂಡಿಚೇರಿ ಎಂದು ಗುರುತಿಸಿಕೊಂಡ ಈ ಗ್ರಾಮ ನವೋದಯ ಕನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದೆ. ಶ್ರೀ ಅರವಿಂದ ವಿಚಾರ ಸಾಹಿತ್ಯ ಇಲ್ಲಿ ಆಗಾಧವಾಗಿ ಬಳಕೆಯಾಗಿದೆ.

    ಹಲಸಂಗಿ ಗೆಳೆಯರ ಬಳಗ ಕರ್ನಾಟಕದಲ್ಲಿ ಹೆಸರುವಾಸಿಯಾಗಿದೆ. ಮಧುರಚೆನ್ನ, ಪಿಧೂಲಾ, ಸಿಂಪಿಲಿಂಗಣ್ಣ , ಮಾದಣ್ಣ ಮುಂತಾದ ಜನಪದ ಸಾಹಿತಿಗಳು ಈ ನಾಡಿನಲ್ಲಿ ಸಾಹಿತ್ಯ ಸೇವೆ ಮಾಡಿ, ಹಲಸಂಗಿ ಗ್ರಾಮದ ಪ್ರಸಿದ್ಧಿಯನ್ನು ಹೆಚ್ಚಿಸಿದರು.


    ಕರ್ನಾಟಕ ರಾಜ್ಯದ ಯಾವ ಜಿಲ್ಲೆಯಲ್ಲಿರದಷ್ಟು ನವಿಲುಗಳು ಇಲ್ಲಿವೆ. ಡಾ. ಶಿವರಾಮ ಕಾರಂತರು ಇಲ್ಲಿರುವ ನವಿಲುಗಳ ಹಿಂಡು ಕಂಡು ನವಿಲೂರು ಎಂದು ಹಲಸಂಗಿಗೆ ಪರ್ಯಾಯ ಹೆಸರಿಟ್ಟಿದ್ದಾರೆ. ಈ ಗ್ರಾಮವು ಇಂಡಿಯಿಂದ 20 ಕಿ.ಮೀ. ದೂರದಲ್ಲಿದೆ.


   Share your views-post your Comment below
   blog comments powered by Disqus
   ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
   • Copyright @ 2009 Udayavani.All rights reserved.
   • Designed & Hosted By 4cplus