Thursday, June 20, 2013
Last Updated: 5:03:52 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಒಗ್ಗರಣೆ ಸದ್ದಿನಲ್ಲಿ ಕಳೆದುಹೋಗುವವರು...
    • ಒಗ್ಗರಣೆ ಸದ್ದಿನಲ್ಲಿ ಕಳೆದುಹೋಗುವವರು...

      • ಜಯಶ್ರೀ ಬಿ. | Dec 21, 2012

        ನಾನೊಬ್ಬಳು ಸ್ತ್ರೀವಾದಿ' ಹೀಗೆ ನೀವೇನಾದರೂ ಎಂದರೆ ಜನರು ನಿಮ್ಮನ್ನು ಮಿಕಿಮಿಕಿ ನೋಡುವುದು ಖಚಿತ. ಇದಕ್ಕೆ ಕಾರಣ, ಜನಮಾನಸದಲ್ಲಿ ಸ್ತ್ರೀವಾದದ ಬಗ್ಗೆ ಬೇರೂರಿರುವ ಅನುಮಾನಗಳು ಮತ್ತು ಸ್ಥಾಪಿತ ಕಲ್ಪನೆಗಳು. ಹೆಚ್ಚಿನ ಜನರು ಕೂಡಾ ಸ್ತ್ರೀವಾದಿಗಳೆಂದರೆ ಪುರುಷ ಸಂಕುಲವನ್ನೇ ದ್ವೇಷಿಸುವವರೆಂದೂ, ಅಸಡ್ಡಾಳವಾಗಿ ಡ್ರೆಸ್‌ ಮಾಡಿಕೊಂಡು ಜಗತ್ತಿಗೆ ಕ್ಯಾರೆ ಎನ್ನದೆ ಬದುಕುವವರೆಂದೂ ತಿಳಿದುಕೊಂಡಿದ್ದಾರೆ. ಹಾಗೇನಿಲ್ಲ.  ಸ್ತ್ರೀವಾದವೆಂದರೆ ಮಾನವತಾವಾದವೇ ಆಗಿದೆ. ಜನಸಂಖ್ಯೆಯ ಅರ್ಧದಷ್ಟು ಮಹಿಳೆಯರಿರುವಾಗ ಮಹಿಳೆಯರಿಗೆ ಸಿಗಬೇಕಾದ ಆದರ, ಗೌರವ, ಸವಲತ್ತುಗಳಿಗಾಗಿ ದನಿಯೆತ್ತುವುದು ಯಾಕೆ ತಪ್ಪೆನಿಸುತ್ತದೆ? ಆಶ್ಚರ್ಯವೆಂದರೆ, ಮಹಿಳಾಪರ ಸಾಹಿತ್ಯ ಬರೆಯುವ ಲೇಖಕಿಯರು ಕೂಡ ನಾನು ಸ್ತ್ರೀವಾದಿಯಲ್ಲ ಎನ್ನುತ್ತಾರೆ. ಬಹುಶಃ ಅವರು ತೀವ್ರ ಸ್ತ್ರೀವಾದವನ್ನು ಉದ್ದೇಶಿಸಿ ಹೇಳುತ್ತಿರಬಹುದು. ಹಾಗೆ ನೋಡುವುದಿದ್ದರೆ, ಪುರುಷ ಸಮುದಾಯವನ್ನೇ ಧಿಕ್ಕರಿಸಿ, ಇನ್ನೂ ಸರಳವಾಗಿ ಹೇಳುವುದಿದ್ದರೆ ಸಮಾಜವನ್ನು , ಸಮುದಾಯವನ್ನು ಧಿಕ್ಕರಿಸಿ ಯಾವುದೇ ವಾದ ಹೆಚ್ಚುಕಾಲ ಬಾಳುವುದಿಲ್ಲ.

        ಸ್ತ್ರೀವಾದದ ಬಗೆಗಿನ ಪ್ರಮುಖ ಆಪಾದನೆ ಅದು ಪಾಶ್ಚಾತ್ಯ ಸಂಸ್ಕೃತಿಯನ್ನು ಬೆಂಬಲಿಸುತ್ತದೆ, ನಮ್ಮ ಸಂಸ್ಕೃತಿಯಿಂದ ಹೆಣ್ಣು ಮಕ್ಕಳನ್ನು ವಿಮುಖವಾಗಿಸುತ್ತದೆ ಎಂದು. ಒಂದು ಥಿಯರಿಯಾಗಿ ಸ್ತ್ರೀವಾದ ಪಾಶ್ಚಿಮಾತ್ಯ ಪ್ರಭಾವಕ್ಕೊಳಗಾಗಿರುವುದು ಹೌದಾದರೂ ಭಾರತದಲ್ಲಿಯೇ ಸ್ತ್ರೀವಾದದ ಇತಿಹಾಸವಿದೆ. ಚೆನ್ನಮಲ್ಲಿಕಾರ್ಜುನನನ್ನು ಅರಸಿ ಮುನ್ನಡೆದ ಅಕ್ಕಮಹಾದೇವಿ, ನೀಲ ಮೇಘಶ್ಯಾಮನಿಗೋಸ್ಕರ ರಾಜವೈಭವವನ್ನು ಧಿಕ್ಕರಿಸಿದ ಮೀರಾಬಾಯಿ ಎಲ್ಲರೂ ಒಂದಲ್ಲ ಒಂದು ರೀತಿ ತಮ್ಮ ಆತ್ಮಗೌರವಕ್ಕಾಗಿ ಹೋರಾಡಿದವರೇ. ಸ್ತ್ರೀವಾದಿಗಳೆಂದರೆ ಮಹಿಳೆಯರೇ ಆಗಬೇಕೆಂದಿಲ್ಲ. ಯಾರು ಹೆಣ್ಣು ಮಕ್ಕಳ ಬಗ್ಗೆ, ಅವರ ಅಭ್ಯುದಯದ ಬಗ್ಗೆ ಕಾಳಜಿಯಿಟ್ಟುಕೊಂಡಿರುತ್ತಾರೋ ಅವರೆಲ್ಲ ಸ್ತ್ರೀವಾದಿಗಳೇ.

        ಸ್ತ್ರೀವಾದದ ಬಗೆಗಿನ ಪ್ರಮುಖ ಆಪಾದನೆ ಎಂದರೆ ಅದು ಅಕಾಡೆಮಿಕ್‌ ಆಗಿದ್ದು ಚರ್ವಿತಚರ್ವಣವಾಗಿದೆ ಎಂದು. ಇದು ಸತ್ಯವೇ ಆದರೂ ಜಗತ್ತಿನ ಹೆಚ್ಚಿನ ಜ್ಞಾನಶಾಖೆಗಳಿಗೂ ಯಾವುದಾದರೊಂದು ಸಿದ್ಧಾಂತದ ಅಡಿಪಾಯ ಇರಲೇಬೇಕಾಗುತ್ತದೆ. ಅದೂ ಅಲ್ಲದೆ ಸ್ತ್ರೀವಾದವೆಂದರೆ ಕೇವಲ ಸಂಕುಚಿತವಾದ, ಕಣ್ಣಿಗೆ ಪಟ್ಟಿ ಕಟ್ಟಿದ ಕುದುರೆಯಂತೆ ಇತರ ಜ್ಞಾನಶಾಖೆಗಳೊಂದಿಗೆ, ವಾಸ್ತವದೊಂದಿಗೆ ಸಂಬಂಧ ಇಲ್ಲದ, ಪುರುಷ ದ್ವೇಷಿ ಥಿಯರಿಯೇನೂ ಅಲ್ಲ. ಮನಃಶಾಸ್ತ್ರ , ಮಾರ್ಕ್ಸ್ವಾದ, ಚರಿತ್ರೆ, ಧರ್ಮ ಹೀಗೆ ಮಾನವ ಜೀವನಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳಲ್ಲೂ ಮಹಿಳೆಯರ ಪಾಲಿದೆ ಹಾಗೂ ಅವರ ಬಗ್ಗೆ ಅಧ್ಯಯನ ನಡೆಸುವುದು ಉಚಿತವೇ ಆಗಿದೆ. ಹಾಗೆ ನೋಡುವುದಿದ್ದರೆ, ಮಹಿಳಾ ಅಧ್ಯಯನವನ್ನು ನಡೆಸಬೇಕಾದ ಅನಿವಾರ್ಯತೆಯೇ ಅದರ ಪ್ರಸ್ತುತತೆಯನ್ನು ಸೂಚಿಸುತ್ತದೆ.

        ಸ್ತ್ರೀವಾದದ ಕುರಿತಾದ ಇನ್ನೊಂದು ಅಪವಾದ ಅದು ಕೇವಲ ವಿದ್ವತ್ತಿನ ಚರ್ಚೆಗೆ, ವೇದಿಕೆಯ ಭಾಷಣಗಳಿಗೆ ಸೀಮಿತವಾಗಿದೆ ಎಂದು. ಹಾಗೆ ನೋಡುವುದಿದ್ದರೆ ಭಾರತದ ಹೆಚ್ಚಿನ ಯೋಜನೆಗಳೂ, ಆಶ್ವಾಸನೆಗಳೂ ಕಾರ್ಯದಲ್ಲಿ ಕಂಡುಬರುವುದು ಅಷ್ಟಕ್ಕಷ್ಟೆ . ನಿಧಾನವಾಗಿಯಾದರೂ ಹೆಚ್ಚಿನ ಹೆಣ್ಣು ಮಕ್ಕಳ ವಿದ್ಯಾಭ್ಯಾಸ, ಉದ್ಯೋಗಕ್ಕೆ ಹೋಗುವ ಯುವತಿಯರು, ವಿವಾಹದ ವಿಷಯದಲ್ಲಿ ಅವರಿಗೆ ಹೆಚ್ಚಿದ ಆಯ್ಕೆಯ ಸ್ವಾತಂತ್ರ್ಯ, ತಮ್ಮ ಪ್ರತಿಭೆಯನ್ನು ಸಾಣೆ ಹಿಡಿಯಲು ಅವರಿಗಿರುವ ಅವಕಾಶಗಳು ಇವೆಲ್ಲ ಸ್ತ್ರೀವಾದದ ಗುಣಾತ್ಮಕ ಅಂಶಗಳು. ಭಾರತದಲ್ಲಿ ಸತಿ ನಿರ್ಮೂಲನಕ್ಕೆ ಹೋರಾಡಿದ ರಾಜಾರಾಮ್‌ ಮೋಹನರಾಯ್‌, ವಿಧವಾ ವಿವಾಹ, ಸರಳ ವಿವಾಹ ಸಮರ್ಥಿಸಿದ ಸ್ವಾಮಿ ದಯಾನಂದ ಸರಸ್ವತಿ, ಭಗಿನಿಯರೇ ಎಂದು ಗೌರವಿಸಿದ ಸ್ವಾಮಿ ವಿವೇಕಾನಂದ, ಮಹಿಳೆಯರನ್ನು ಸ್ವಾತಂತ್ರ್ಯ ಸಂಗ್ರಾಮದ ಭಾಗವಾಗಿಸಿದ ಗಾಂಧೀಜಿ, ಅಂಬೇಡ್ಕರ್‌ ಇವರೆಲ್ಲ ಮಹಿಳಾ ಸ್ವಾತಂತ್ರ್ಯದ ಪ್ರತಿಪಾದಕರೇ ಆಗಿದ್ದರು. ಸ್ವಾತಂತ್ರ್ಯ ಸಿಕ್ಕಿ ಇಷ್ಟು ವರ್ಷಗಳಾದರೂ ದೇಶದ ಹತ್ತು ಹಲವು ಸಮಸ್ಯೆಗಳು ಉದಾಹರಣೆಗೆ ಕೋಮುಗಲಭೆ, ಭ್ರಷ್ಟಾಚಾರ, ಬಡತನ ಇವೆಲ್ಲ ಹಾಗೆಯೇ ಇವೆ. ಅವುಗಳ ಬಗ್ಗೆ ಮಾತನಾಡಿದರೆ ಅವು ಚರ್ವಿತಚರ್ವಣ ಎನಿಸುವುದಿಲ್ಲ. ಹೆಣ್ಣು ಮಕ್ಕಳ ಸಮಸ್ಯೆಗಳೆಲ್ಲವೂ ಚರ್ಚಾತೀತವಾಗಿದ್ದಲ್ಲಿ ಈ ಲಾಜಿಕ್‌ ಸರಿ. ಸಮಾಜದ ಪ್ರಮುಖ ಅಂಗವಾದ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿದರೆ ಅವೆಲ್ಲ ಹಳಸಲುವಾದಗಳೆಂದು ಪರಿಗಣಿಸಲ್ಪಡುತ್ತವೆ?
        ಅದೇ ರೀತಿ ಸ್ತ್ರೀಯರ ಬರಹಗಳೆಲ್ಲ ಕಳಪೆ ಗುಣಮಟ್ಟದ್ದೆಂದೂ, ಅಡುಗೆಮನೆ ಸಾಹಿತ್ಯವೆಂದೂ ಕರೆಯಲ್ಪಡುತ್ತದೆ. ಅಡುಗೆಮನೆ, ಕಾರ್ಯಕ್ಷೇತ್ರ (ಈಗೀಗ)ಗಳ ಹೊರತಾಗಿ, ವ್ಯಾಪಕ ಅನುಭವಗಳನ್ನು ಪಡೆಯಲು ಓರ್ವ ಮಹಿಳಾ ಲೇಖಕಿಗೆ ಎಷ್ಟು ಸಾಧ್ಯ? ಭೈರಪ್ಪನವರಂತಹ ಸಾಹಿತಿ "ಆವರಣ', "ಮಂದ್ರ' ಕಾದಂಬರಿಗಳನ್ನು ಬರೆಯಲು ತಿಂಗಳುಗಟ್ಟಲೆ ರಿಸರ್ಚ್‌ ಮಾಡುತ್ತಾರಂತೆ. ಅದೇ ಒಂದು ಮಹಿಳಾ ಸಾಹಿತಿಗೆ ತನ್ನ ಸಂಸಾರದ ಬಾಧ್ಯತೆಗಳನ್ನೆಲ್ಲ ಬಿಟ್ಟು ದೇಶದುದ್ದಗಲ ಸಂಚರಿಸುವ ಸ್ವಾತಂತ್ರ್ಯ, ಅನುಕೂಲಗಳು ಈ ದೇಶದಲ್ಲಿ ಸದ್ಯಕ್ಕೆ ಇಲ್ಲ. ಮಹಿಳೆಯರ ಈ ತೆರನಾದ ಸಮಸ್ಯೆಗಳನ್ನು ಲಘುವಾಗಿ ಪರಿಗಣಿಸುವವರೇ ಜಾಸ್ತಿ.

        ಈ ಎಲ್ಲ ಸಮಸ್ಯೆಗಳು ಗಂಡಸರಿಗೆ ಇಲ್ಲವೆಂದಲ್ಲ. ಸಂಸಾರ ತೂಗಿಸುವ ಹೊರೆ, ಸಾಲಬಾಧೆ, ಕೆಲಸದ ಒತ್ತಡಗಳಿಂದ ಅವರೂ ಕುಸಿಯುತ್ತಾರೆ. (ಆಧುನಿಕ, ಬಂಡವಾಳಶಾಹಿ ಜಗತ್ತಿನ, ತೃತೀಯ ರಾಷ್ಟ್ರಗಳಲ್ಲಿ ಇವು ಸಾಮಾನ್ಯವೇ ಆಗಿಬಿಟ್ಟಿದೆ). ಆದರೆ ಈ ಸಮಸ್ಯೆಗಳ ತೀವ್ರತೆ ಹಾಗೂ ನಿಭಾಯಿಸಲಾಗದ ಅಸಹಾಯಕತೆ ಮಹಿಳೆಯರಲ್ಲಿ ಜಾಸ್ತಿ. ಗ್ಯಾಂಗ್‌ರೇಪ್‌ ಮಾಡಲ್ಪಟ್ಟು ಅವಮಾನ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಹತ್ತೂಂಬತ್ತರ ಬಾಲೆ, ಏಕಾಕಿತನದಿಂದ ಮನನೊಂದು ಬಾವಿಗೆ ಹಾರಿದ ಎಪ್ಪತ್ತರ ವೃದ್ಧೆ , ಕುಡುಕ ಗಂಡ, ಸಾಲಗಾರರ ಬಾಧೆ ತಾಳಲಾಗದೆ ತನ್ನ ಮಕ್ಕಳನ್ನು ಕೊಂದು ತಾನೂ ವಿಷ ಕುಡಿದ ಗೃಹಿಣಿ ಹೀಗೆ ಅವರ ಸಮಸ್ಯೆಗಳು ಹೆಚ್ಚು ಸಂಕೀರ್ಣವೂ, ಭಾವನಾತ್ಮಕವೂ ಆಗಿವೆ. ಇನ್ನು ಅವಿವಾಹಿತೆಯರು, ವಿಧವೆಯರ ಸಮಸ್ಯೆಗಳೇ ಬೇರೆ. "ಮದುವೆ' ಎನ್ನುವ ಸಾಮಾಜಿಕ ಪರಿಕಲ್ಪನೆ ನಮ್ಮ ಸಮಾಜದಲ್ಲಿ ಎಷ್ಟು ಆಳವಾಗಿ, ಗಾಢವಾಗಿ ಬೇರೂರಿದೆ ಎಂದರೆ ಅವಿವಾಹಿತೆಯರು, ವಿಧವೆಯರು, ಬಂಜೆಯರನ್ನು ಕುಹಕದಿಂದಲೋ, ಅನುಕಂಪದಿಂದಲೋ ನೋಡುವವರೇ ಜಾಸ್ತಿ. ಒಂದು ವೇಳೆ ಜವಾಬ್ದಾರಿಯುತ ಹುದ್ದೆಯಲ್ಲಿದ್ದು ಕೈತುಂಬಾ ಸಂಪಾದಿಸುತ್ತಿದ್ದರೂ ಅವರ ಚಲನವಲನಗಳನ್ನು ಕೆಟ್ಟ ಕುತೂಹಲದಿಂದ ಎಲ್ಲರೂ ಗಮನಿಸುತ್ತಿರುತ್ತಾರೆ. ಅವರನ್ನು ಒಂದು ರೀತಿಯ ಕ್ಯಾಶ್‌ ಕೌ ತರ ಶೋಷಿಸುವವರೂ ಇಲ್ಲದಿಲ್ಲ.
        ಇನ್ನು , "ಉದ್ಯೋಗಂ ಸ್ತ್ರೀ ಲಕ್ಷಣಂ' ಆಗಿರುವ ಈ ಕಾಲದಲ್ಲಿ ಉದ್ಯೋಗವನ್ನು , ಮನೆಯನ್ನು ನಿಭಾಯಿಸುವುದು ಸುಲಭವೇನಲ್ಲ. ಎಷ್ಟೋ ಮಹಿಳೆಯರು ತಮಗೆ ಬರಬೇಕಾದ ಪ್ರಮೋಶನ್ನು , ವಿದೇಶ ಪ್ರವಾಸಗಳನ್ನು ಮಕ್ಕಳು ಚಿಕ್ಕವರೆಂದೋ, ಗಂಡನಿಗೆ ಹಿಡಿಸುವುದಿಲ್ಲವೆಂದೋ ಬಿಟ್ಟುಬಿಡುತ್ತಾರೆ. ಮನೆಕೆಲಸಗಳನ್ನು ಹಂಚಿಕೊಳ್ಳುವುದು, ಮಕ್ಕಳನ್ನು ನೋಡಿಕೊಳ್ಳುವುದು ಹೀಗೆ ಮನೆಮಂದಿಯ ಸಹಕಾರ ಸಿಕ್ಕರೆ ಸರಿ. ಇಲ್ಲವಾದಲ್ಲಿ ಎರಡೂ ಕಡೆ ದುಡಿದು ವಯಸ್ಸಿಗೆ ಮೀರಿದ ವೈರಾಗ್ಯ ಬಂದರೂ ಆಶ್ಚರ್ಯವಿಲ್ಲ. ಶಾರೂಖ್‌ ಖಾನ್‌, ರಾಣಿ ಮುಖರ್ಜಿ ನಟಿಸಿರುವ ಚಲೆ¤ ಚಲೆ¤ ಸಿನೆಮಾವನ್ನು ಇಲ್ಲಿ ನಾವು ನೆನೆಸಿಕೊಳ್ಳಬಹುದು.

        ಭಾರತದಂತಹ ದೇಶದಲ್ಲಿ ಮಹಿಳೆಯರು ಅನೇಕ ಸಾಮಾಜಿಕ, ಸಾಂಸ್ಕೃತಿಕ ಕಟ್ಟುಪಾಡುಗಳಿಂದ ಹೊರತಾಗಿರಲು ಸಾಧ್ಯವಿಲ್ಲ. ಸೂಕ್ತ ಪ್ರೋತ್ಸಾಹ ಸಿಗದಿದ್ದಲ್ಲಿ ಅವರು ತಮ್ಮ ಮಹತ್ವಾಕಾಂಕ್ಷೆಗಳನ್ನು ಗಂಟುಮೂಟೆ ಕಟ್ಟಿ ಅಟ್ಟದಲ್ಲಿಡಬೇಕಾದೀತು. ಬರಹಗಾರ್ತಿ ಆಗಬೇಕೆಂದುಕೊಂಡ ಹುಡುಗಿ ಅಡುಗೆಮನೆಯ ಒಗ್ಗರಣೆ ಸದ್ದಿನಲ್ಲಿ ಕಳೆದುಹೋಗುತ್ತಾಳೆ. ಎಂಎ, ಎಂಎಸ್ಸಿ ಮಾಡಿದವರ ಟ್ಯಾಲೆಂಟ್‌ ಮಕ್ಕಳ ಹೋಂವರ್ಕ್‌ ಮಾಡಿಸಲು ಸೀಮಿತವಾಗುತ್ತದೆ. ನನಗೆ ತಿಳಿದ ಗೃಹಿಣಿಯೋರ್ವರು ತನ್ನ ಜಿಂದಗಿಯೆಲ್ಲ ಮೆದುವಾದ ಚಪಾತಿ ತಯಾರಿಸುವಲ್ಲಿ , ಬಾಯಲ್ಲಿಟ್ಟರೆ ಕರಗುವ ಚಕ್ಕುಲಿ, ಕೋಡುಬಳೆ ತಯಾರಿಸುವುದರಲ್ಲಿ ಮುಗಿದು ಹೋಯಿತೆಂದು ಅಲವತ್ತುಕೊಳ್ಳುತ್ತಿದ್ದರು. ಸ್ವಂತಕ್ಕೆಂದು ಸ್ವಲ್ಪ ಚಿನ್ನ ಬಿಟ್ಟರೆ ಹೆಣ್ಣುಮಕ್ಕಳ ಹೆಸರಿನಲ್ಲಿ ಸ್ವಂತ ಮನೆಯಾಗಲಿ ದುಡ್ಡು ಕಾಸಾಗಲಿ ಹೆಚ್ಚೇನಿರುವುದಿಲ್ಲ. ಕೆಲವು ಹೆಣ್ಣು ಮಕ್ಕಳು ಎಷ್ಟು ಮುಗೆœಯರಿರುತ್ತಾರೆಂದರೆ ಬ್ಯಾಂಕಿನ ವಹಿವಾಟು ಇರಲಿ, ತಮಗೆ ಸಿಗಬೇಕಾದ ಇತರ ಸವಲತ್ತಿರಲಿ, ಇನ್ನೊಬ್ಬರ ಸಹಾಯವಿಲ್ಲದೆ ಅವರಿಗೆ ವ್ಯವಹರಿಸಲು ಸಾಧ್ಯವಿಲ್ಲ. ಇನ್ನು ಆಧುನಿಕ ತಂತ್ರಜ್ಞಾನದ ಬಳಕೆ ದೂರವೇ ಉಳಿಯಿತು.

        ಸ್ತ್ರೀಯನ್ನು ಮಾತೆಯೆಂದೂ, ಶಕ್ತಿಯೆಂದೂ ಪೂಜಿಸುವ ಈ ಭವ್ಯನಾಡಿನಲ್ಲಿ ಪ್ರೀತಿಸಿದವನನ್ನು ಮದುವೆಯಾದ ತಪ್ಪಿಗೆ ಮರ್ಯಾದಾ ಹತ್ಯೆಗಳು ನಡೆಯುತ್ತವೆ. ದಲಿತ ಯುವಕ ಮೇಲ್ವರ್ಗದ ಯುವತಿಯನ್ನು ಮದುವೆಯಾದರೆ ಅವನ ತಂಗಿಯ ಮೇಲೆ ಸಾಮೂಹಿಕ ಅತ್ಯಾಚಾರವನ್ನು ನಡೆಸಲಾಗುತ್ತದೆ. ವರದಕ್ಷಿಣೆ ತಾರದಿದ್ದಲ್ಲಿ ಗ್ಯಾಸ್‌ಸ್ಟವ್‌ ಸಿಡಿದೋ, ಆತ್ಮಹತ್ಯೆ ಮಾಡಿಕೊಂಡೋ ಮದುವೆಯಾದ ಆರು ತಿಂಗಳಿಗೆ ಸಾಯುತ್ತಾರೆ. ಮೀನು ಸಾರು ಮಾಡಿಲ್ಲವೆಂದೋ, ಟಿವಿ ರಿಮೋಟ್‌ ಕೊಡಲಿಲ್ಲವೆಂದೋ ಶುರುವಾದ ಜಗಳ ಕೊಲೆಯಲ್ಲಿ ಪರ್ಯವಸಾನವಾದರೂ ಅತಿಶಯವೇನಿಲ್ಲ. ಪರಿಸ್ಥಿತಿ ಹೀಗಿರುವಾಗ ಮಹಿಳಾ ಸಬಲೀಕರಣದ ಬಗ್ಗೆ ಜಿಜ್ಞಾಸೆ ನಡೆಸುವುದು ಹೇಗೆ ಅಪ್ರಸ್ತುತ ಎನಿಸುತ್ತದೆ?

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಒಂದು ವರ್ಷದ ಹಿಂದೆ ಆಕೆಗೆ ಕ್ಯಾನ್ಸರ್‌. ಆಕೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಆಕೆ ಮತ್ತೂಮ್ಮೆ ಬಣ್ಣ ಹಚ್ಚುವುದೇ ಸಂಶಯ ಹೆಚ್ಚಾಗುತ್ತಿದೆ..
      • ಈ ವಿಭಾಗದಲ್ಲಿಯೂ ಇದೆ
      • ಕೊಲೆಸ್ಟರಾಲ್‌ ನಿಯಂತ್ರಣಕ್ಕಾಗಿ
        ಮೆಂತ್ಯೆಯನ್ನು ಹುರಿದು ಪುಡಿ ಮಾಡಿ ಬೆಳಗ್ಗೆ ಅಥವಾ ಮಧ್ಯಾಹ್ನ ಆಹಾರಕ್ಕೆ ಮೊದಲು ಬಿಸಿನೀರಿನಲ್ಲಿ ಅಥವಾ ಮಜ್ಜಿಗೆಯಲ್ಲಿ ಕದಡಿ ಕೊಡಿ. ಪ್ರಮಾಣ 1/2 - 1 1/2 ಚಮಚ...
      image
      • Copyright @ 2009 Udayavani.All rights reserved.
      • Designed & Hosted By 4cplus