Saturday, December 20, 2014
Last Updated: 9:40:47 AM IST
 • ನಾನೆಲ್ಲಿರುವೆ:
 • ಮುಖಪುಟ ಪಯಣ
 • ವಿಡಿಯೋ ಗ್ಯಾಲರಿ
 • ಉದಯವಾಣಿ
 • ವೆ ಬ್
 • ಹುಡುಕಿ
  • ಬಿಜಾಪುರ ಜನಪದ ಸೊಗಡು


   • ಬರದನಾಡು; ಬಿಸಿಲಗೂಡಿನಂತಿರುವ ಬಿಜಾಪುರ ಜಿಲ್ಲೆಯಲ್ಲಿ ಕಲೆಗೆ, ಕಲಾವಿದರಿಗೆ ಬರವಿಲ್ಲ ! ಈ ನೆಲದಲ್ಲಿ ಹುಟ್ಟಿ ಬೆಳೆದ ಜನಪದ ಕಲೆಯು ಅದ್ಭುತವಾಗಿದೆ !

    ಬಿಜಾಪುರದಲ್ಲಿರುವಷ್ಟು ವಿಭಿನ್ನವಾದ ಜನಪದ ಕಲೆಗಳು, ನಾಡಿನ ಬೇರೆ ಯಾವ ಭಾಗದಲ್ಲೂ ಕಂಡುಬರುವುದಿಲ್ಲ !


    ಈ ಕಲೆಗಳನ್ನು ವಾದ್ಯಪ್ರಧಾನ, ನೃತ್ಯಪ್ರಧಾನ, ಗೀತಪ್ರಧಾನ ಎಂದು ವಿಂಗಡಿಸಬಹುದು. ಎಲ್ಲ ಕಲೆಯು ಗ್ರಾಮೀಣ ಬದುಕಿನ ಉತ್ಸಾಹ, ಸಂಸ್ಕೃತಿ, ಸಂಸ್ಕಾರವನ್ನು ಬಿಂಬಿಸುತ್ತವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಡೊಳ್ಳು ಕುಣಿತ, ಕೃಷ್ಣ ಪಾರಿಜಾತ, ಬಯಲಾಟ, ಚೌಡಕಿ ಪದ, ಕೋಲಾಟ, ಕೋಲೇಬಸವ, ವೀರಭದ್ರ ಕುಣಿತ, ಜೋಕುಮಾರ, ಗೀಗೀಪದ, ಕರಡಿ ಮಜಲು, ಏಕತಾರಿ ಪದ, ಗೊಂದಲಿಗರ ಮೇಳ, ಕೊಂಬುವಾದ್ಯ, ತೊಗಲು ಗೊಂಬೆಯಾಟ, ಲಾವಣಿ ಪದ, ಹಂತಿಪದ, ಗುಳ್ಳವ್ವ, ಗುರ್ಜಿ, ಗಂಗೆಗೌರಿ, ಬುಡಬುಡಿಕೆ, ಸುಡಗಾಡು ಸಿದ್ಧ , ಅಲಾವಿಹೆಜ್ಜೆ ಕುಣಿತ, ಮರಗಾಲು, ಕೀಲು ಕುದುರೆ ಕುಣಿತ...

    ಇದರೊಂದಿಗೆ ಜನಪದ ಕ್ರೀಡೆಗಳನ್ನು ನೋಡಬಹುದು. ಹಾಗೇ ಹಚ್ಚೆ ಹಾಕುವ, ಕೌದಿ ಹೊಲಿಯುವ, ಭಜನಾ ಮಂಡಳಿ, ಹಲಗೆ ಮೇಳ, ಸುಂದರಿವಾದನ ಹೀಗೆ ಮುಂತಾದ ಜನಪದ ಕಲೆಗಳನ್ನು ಇಂದಿಗೂ ಕಾಣಬಹುದು.


    ದೊಡ್ಡಾಟ: ಇದು ಜನಪದ ಕಲೆಯ ಗಂಡುಮೆಟ್ಟಿನ ಕಲೆಯೆಂದು ಹೇಳಬಹುದು. ಇದರಲ್ಲಿ ಗಂಡಸರು ಪಾಲ್ಗೊಂಡು ನಡೆಸುವ ಮನರಂಜನೆ ಕಲೆ, ಸ್ತ್ರೀ ವೇಷವನ್ನು ಗಂಡಸರು ಧರಿಸುವರು. ಜಾತ್ರೆ, ಉತ್ಸವಗಳಲ್ಲಿ ರಾತ್ರಿ ಹತ್ತು ಗಂಟೆಗೆ ಆರಂಭವಾಗಿ ಬೆಳಗಿನ ಜಾವ ಆರು ಗಂಟೆಗೆ ಮಂಗಲವಾಗುವ ದೊಡ್ಡಾಟ. ಇದರಲ್ಲಿ ಸಂಗೀತ, ಕುಣಿತ ಪ್ರಧಾನವಾಗಿರುವುದು.


    "ಶ್ರೀಕೃಷ್ಣ ಪಾರಿಜಾತ', "ಸಂಗ್ಯಾಬಾಳಾÂ' ಮುಂತಾದ ಬಯಲಾಟ, ದಡ್ಡಿನಾಟಗಳು ಇದರಲ್ಲಿವೆ.
    ವೀರಭದ್ರ ಕುಣಿತ: ಗುಗ್ಗಳ ಹೊರುವುದೆಂದು ಕರೆಯಲ್ಪಡುವ ಈ ಕಲೆಯು ಸಂಪ್ರದಾಯ ಮತ್ತು ಭಕ್ತಿಭಾವವನ್ನು ಹೊಂದಿದೆ. ಪುರವಂತರು ವೀರಭದ್ರ ದೇವರ ಕುಣಿತ ಆರಂಭಿಸಿ, ಶಿವಶರಣರ ವಚನಗಳನ್ನು, ಒಡಪುಗಳನ್ನು ಹೇಳುತ್ತ ಕುಣಿಯುವರು.ದೇಹದ ಕೆಲಭಾಗಗಳಿಗೆ ಶಸ್ತ್ರ ಹಾಕಿಕೊಳ್ಳುವರು. ಹರಿತವಾದ ಕಬ್ಬಿಣದ ತಂತಿ, ತಾಮ್ರದ ತಂತಿ, ಚಾಕುಗಳಿಂದ ಕೆನ್ನೆ, ಕೈ, ರಟ್ಟೆ , ಹೊಟ್ಟೆ ಚರ್ಮದಲ್ಲಿ ಚುಚ್ಚಿಕೊಳ್ಳುವರು. ಮದುವೆ, ಜಾತ್ರೆಗಳಲ್ಲಿ ಗುಗ್ಗಳವನ್ನು ಕಾಣಬಹುದು.


    ಡೊಳ್ಳು ಕುಣಿತ: ಜನಪದ ಕಲೆಯಲ್ಲಿ ಎದೆಗುಂಡಿಗೆ ನಡುಗಿಸುವಂತಹ ಕಲೆಯಿದು. ಬೀರಪ್ಪ ದೇವರ ಭಕ್ತರು ಡೊಳ್ಳು ಕುಣಿತವನ್ನು ಆಚರಿಸುವರು. ಡೊಳ್ಳು ಕುಣಿತದ ಮೆರವಣಿಗೆ, ಡೊಳ್ಳಿನ ಪದ ಕೇಳಲು ನೋಡಲು ಬಲು ಚೆಂದ !

    ಚೌಡಿಕೆ ಪದ: ಶಕ್ತಿ ದೇವತೆಗಳಾದ ಎಲ್ಲಮ್ಮ , ಹುಲಿಗೆಮ್ಮ ಇವರ ಆರಾಧ್ಯ ದೇವತೆ. ಜೋಗುತಿಯರು ಈ ಕಲೆಯನ್ನು ಜೀವಂತಗೊಳಿಸಿದ್ದಾರೆ !

    ""ಹುಟ್ಟಿ ಬಂದೆ ಎಲ್ಲಮ್ಮನಾಗಿ | ನಿನ್ನ ಮದುವಿ ಮಾಡಿ
    ಕೊಟ್ಟಾರಲ್ಲ ಜಮದಗ್ನಿಗೆ ||'

    ಎಂದು ಚೌಡಿಕೆ ವಾದ್ಯ ನುಡಿಸುತ್ತ, ಎಲ್ಲಮ್ಮ ದೇವಿಯ ಜೀವನ ಚರಿತ್ರೆ ಹಾಡುವರು.


    ಚೌಡಿಕೆ ಪದವನ್ನು ಜೋಗುತಿ, ಗಂಡು ಜೋಗಪ್ಪ ಇಬ್ಬರು ಸೇರಿ ಹಾಡುವರು. ಗ್ರಾಮೀಣ ಪ್ರದೇಶದಲ್ಲಿ ದೇವಿಯ ವಾರದ ದಿನಗಳಾದ ಮಂಗಳ, ಶುಕ್ರವಾರ ದಿವಸ ಈ ಹಾಡು ಹೇಳಿ ಭಿಕ್ಷೆ ಪಡೆಯುತ್ತಾರೆ.
    ಜೋಕುಮಾರ: ಕೇರಿಯ ಹೆಣ್ಣು ಮಕ್ಕಳು, ಕುಂಬಾರ ಮನೆಯಿಂದ ಕೆಸರು ತಂದು ಜೋಕುಮಾರನ ಮೂರ್ತಿಯನ್ನು ಮಾಡುವರು.

    ಅದಕ್ಕೆ ಅಗಲವಾದ ಕಣ್ಣು , ಕಂಡುಗಣ್ಣು , ಕೋರೆಮೀಸೆ, ಉದ್ದನೆಯ ಶಿಶ°ವನ್ನು ಮಾಡಿ ಬುಟ್ಟಿಯಲ್ಲಿಟ್ಟುಕೊಂಡು ತಲೆಮೇಲೆ ಹೊತ್ತು ಗಲ್ಲಿ ತುಂಬಾ ತಿರುಗುವರು. ಜೋಕುಮಾರನ ಕೀಟಲೆ, ತುಂಟಾಟದ ಪದ ಹಾಡಿ ಭಕ್ತರಿಂದ ಜೋಳ, ಗೋಧಿಹಿಟ್ಟು , ಹಣ, ಭಿಕ್ಷೆ ಪಡೆಯುವರು.

    ಕೋಲೆತ್ತು: ಕೋಲೇ ಬಸವನೆಂದು ಕರೆಯಿಸಿಕೊಳ್ಳುವ ಈ ಕಲೆ ತುಂಬಾ ಮನರಂಜನಾತ್ಮಕವಾದದ್ದು.
    ಈ ಬಸವ ಹೇಳಿದಕ್ಕೆಲ್ಲಾ ತಲೆ ಅಲ್ಲಾಡಿಸುತ್ತಾನೆ. ಸೀತೆ, ರಾಮನ ವಿವಾಹ ಪ್ರಸಂಗವನ್ನು ಅಭಿನಯಿಸಿ ತೋರಿಸುತ್ತಾನೆ.

    ಬಸವನ ಬೆನ್ನ ಮೇಲೆ ಸಣ್ಣ ಮಕ್ಕಳನ್ನು ಕೂಡ್ರಿಸಿ ಶಿವನಾಮ ಹಾಡಿ ಹೊಗಳುವರು. ಇದರಿಂದ ಮಕ್ಕಳಿಗೆ ಧೈರ್ಯ ಬರುವುದೆಂದು ನಂಬುವರು.

    ಈ ಜನಪದ ಕಲೆಗಳ ಮೇಲೆ ಅನೇಕ ವಿದ್ವಾಂಸರು ಸಂಶೋಧನೆ ಮಾಡಿ ಪ್ರೌಢ ಪ್ರಬಂಧ ಬರೆದು, ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್‌ ಪಡೆದಿದ್ದಾರೆ. ಆದರೆ ಈ ಕಲೆಯನ್ನು ನಂಬಿಕೊಂಡು ಬದುಕಿದ ಬಡ ಕಲಾವಿದರ ಬಾಳು ಗೋಳಾಗಿದೆ !


   Share your views-post your Comment below
   blog comments powered by Disqus
   ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟTop 20
   • Copyright @ 2009 Udayavani.All rights reserved.
   • Designed & Hosted By 4cplus