Udayavani | Dec 23, 2012
ಈಕೆಯ ಹೆಸರು ಅಖೀಲಾ. ಯಾವ ಅಖೀಲಾ ಅಂತ ನೀವು ಕೇಳಿದರೆ ನಾವು ತೋರಿಸಬೇಕಾದುದು ಸದ್ಯಕ್ಕೆ "ಪದೇ ಪದೇ' ಸಿನಿಮಾವನ್ನು. ಏಕೆಂದರೆ ಸದ್ಯಕ್ಕೆ ಸೌಂಡ್ ಮಾಡುತ್ತಿರುವ ಸಿನಿಮಾವದು. ಆ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದವಳು ಈ ಅಖೀಲಾ. ಪಕ್ಕಾ ಕನ್ನಡದ ಹುಡುಗಿ. ಮಾಡಿರೋದು ಕಂಪ್ಯೂಟರ್ ಇಂಜಿನಿಯರಿಂಗ್. ಆದರೆ ಹುಡುಗಿಯ ಆಸಕ್ತಿ ಇದ್ದಿದ್ದು ಮಾಡೆಲಿಂಗ್, ಸಿನಿಮಾ ಕಡೆಗೆ. ತಾನೂ ಬಣ್ಣದ ಲೋಕದಲ್ಲಿ ಮಿಂಚಬೇಕೆಂಬ ಆಸೆಯಿಂದ ಬಂದ ಹುಡುಗಿಗೆ ಸಿಕ್ಕಿದ್ದು "ಪದೇ ಪದೇ' ಸಿನಿಮಾ. ಈ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಗಾಂಧಿನಗರಕ್ಕೆ ಎಂಟ್ರಿಕೊಟ್ಟವಳು ಅಖೀಲಾ. ಆ ಸಿನಿಮಾದಲ್ಲಿ ಅಖೀಲಾಗೆ ತೀರಾ ಇನೋಸೆಂಟ್ ಪಾತ್ರ.
ಹೋಮ್ಲಿ ಲುಕ್‌ನಲ್ಲೇ ಇಡೀ ಸಿನಿಮಾದುದ್ದಕ್ಕೂ ಕಾಣಿಸಿಕೊಂಡ ಅಖೀಲಾ ಇಲ್ಲಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾಳಂತೆ. ಮೊದಲ ಸಿನಿಮಾದಲ್ಲೇ ಪರ್‌ಫಾರ್ಮನ್ಸ್‌ಗೆ ಒಳ್ಳೆಯ ಅವಕಾಶವಿತ್ತು ಎಂದು ಖುಷಿಯಾಗುತ್ತಾಳೆ.
ಅಂದಹಾಗೆ, "ಪದೇ ಪದೇ' ಮುಗಿಯುತ್ತಿದ್ದಂತೆ ಅಖೀಲಾ ಒಪ್ಪಿಕೊಂಡ ಚಿತ್ರ "ಡಕೋಟಾ ಫ್ಯಾಮಿಲಿ'. ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರದಲ್ಲಿ ಅಖೀಲಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. "ಡಕೋಟಾ ಫ್ಯಾಮಿಲಿ' ಕಾಮಿಡಿ ಸಿನಿಮಾದರೂ ಕಥೆ ಬಿಚ್ಚಿಕೊಳ್ಳುವುದು ಅಖೀಲಾಳ ಎಂಟ್ರಿ ಮೂಲಕವಂತೆ. ಹಾಗಾಗಿ ಅಖೀಲಾ ಖುಷಿಯಾಗಿದ್ದಾಳೆ.
ಅಂದಹಾಗೆ, ಅಖೀಲಾಗೆ ಬರೀ ಕನ್ನಡವಷ್ಟೇ ಅಲ್ಲದೇ, ತೆಲುಗಿನಿಂದಲೂ ಒಂದಷ್ಟು ಆಫರ್ ಬರುತ್ತಿವೆಯಂತೆ. ಆದರೆ ಅಖೀಲಾಗೆ ಮೊದಲು ಕನ್ನಡದಲ್ಲಿ ಒಳ್ಳೆಯ ಪಾತ್ರ ಮಾಡಿ ಗುರುತಿಸಿಕೊಂಡ ನಂತರ ಬೇರೆ ಭಾಷೆಗೆ ಹೋಗುವ ಆಸೆ. ಜೊತೆಗೆ ಕನ್ನಡಲ್ಲಿ ಕ್ಲಿಕ್ ಆಗುತ್ತೇನೆಂಬ ವಿಶ್ವಾಸ. ಇಂತಿಪ್ಪ, ಅಖೀಲಾಗೆ ಒಂದು ಆಸೆ ಇದೆ; ಅದು ನಾಯಕಿ ಪ್ರಧಾನ ಚಿತ್ರದಲ್ಲಿ ನಟಿಸಬೇಕೆಂಬುದು. ಅದರಲ್ಲೂ ತುಂಬಾ ಬಬ್ಲಿ ಪಾತ್ರದಲ್ಲಿ ಕಾಣಿಸಿಕೊಳ್ಳ ಬೇಕೆಂದು. ಏಕೆಂದರೆ ಮೂಲತಃ ಅಖೀಲಾ ಸ್ವಲ್ಪ ಬಬ್ಲಿ ಗರ್ಲ್.
ಸದ್ಯ ಪದೇ ಪದೇ ಚಿತ್ರದ ನಿರೀಕ್ಷೆ ಯಲ್ಲಿರುವ ಅಖೀಲಾಗೆ ಆ ಸಿನಿಮಾ ತೆರೆಕಂಡ ನಂತರ ಇನ್ನಷ್ಟು ಒಳ್ಳೆಯ ಪಾತ್ರಗಳು ಸಿಗುವ ನಿರೀಕ್ಷೆ ಇದೆ.