ಚೇತನ್ ನಾಡಿಗೇರ್ | Dec 23, 2012
ಯಾರಾದರೂ ಯಾವ ತರಹ ಸಿನಿಮಾ ಮಾಡ್ತೀಯ ಎಂದರೆ, ನಿರ್ದೇಶಕ ಅನಿಲ್ ಯಾವಾಗಲೂ "ನಮ್ ಬಾಸ್ ತರಹ ಸಿನಿಮಾ ಮಾಡ್ತೀನಿ' ಅಂತ ಹೇಳುತ್ತಿದ್ದರಂತೆ. ಆ ಬಾಸ್ ಯಾರು ಎಂದು ಕೇಳಿದರೆ, ಪಕ್ಕದಲ್ಲಿದ್ದ ರವಿಚಂದ್ರನ್ ಕಡೆ ತೋರಿಸುತ್ತಾರೆ ಅನಿಲ್. ಅದು ಅನಿಲ್‌ಗೆ ಬಯಸದೇ ಬಂದ ಭಾಗ್ಯ. ಯಾವ ಬಾಸ್ ತರಹ ಸಿನಿಮಾ ಮಾಡ್ತೀನಿ ಅಂತ ಅನಿಲ್ ಮಾತಾಡುತ್ತಿದ್ದರೋ, ಅದೇ ಬಾಸ್ ಬಂದು ಅನಿಲ್ ಚಿತ್ರಕ್ಕೆ ಚಾಲನೆ ಕೊಟ್ಟರೆ ಹೇಗೆ?

"ದಿಲ್‌ವಾಲಾ' ಚಿತ್ರದ ಮುಹೂರ್ತದಲ್ಲೂ ಅನಿಲ್‌ಗೆ ಅದೇ ಆಗಿತ್ತು. "ರವಿ ಸಾರ್ ಮುಹೂರ್ತಕ್ಕೆ ಬಂದರೆ ಚಿತ್ರ ಹಿಟ್ ಆಗತ್ತೆ. ನನ್ನ ಸಿನಿಮಾ ಸಹ 100 ಪರ್ಸೆಂಟ್ ಹಿಟ್ ಆಗುತ್ತೆ' ಎಂದು ಮುಹೂರ್ತದ ದಿನವೇ ಹೇಳುವಷ್ಟು ಖುಷಿಯಾಗಿದ್ದರು ಅನಿಲ್. ಸಿನಿಮಾದಲ್ಲಿ ಒಂದಿಷ್ಟು ಫ್ರೆಶ್ ದೃಶ್ಯಗಳಿರುವುದರಿಂದ ತನ್ನ ಮಾತು ನಿಜವಾಗುವುದು ಖಂಡಿತಾ ಎಂದರು.
ಸುಮಂತ್ ಶೈಲೇಂದ್ರ "ದಿಲ್‌ವಾಲಾ' ಚಿತ್ರದ ನಾಯಕ. ಸುಮಂತ್‌ಗಿದು ಎರಡನೆಯ ಚಿತ್ರ. ಮೊದಲ ಚಿತ್ರ "ಆಟ' ಸೋತ ಒಂದು ವರ್ಷದ ಬಳಿಕ ಮಗನಿಗೆ ಇನ್ನಷ್ಟು ತರಬೇತಿ ಕೊಡಿಸಿ, ಮತ್ತೂಮ್ಮೆ ಪ್ರೇಕ್ಷಕರೆದುರು ಬಿಡುತ್ತಿದ್ದಾರೆ ನಿರ್ಮಾಪಕ ಶೈಲೇಂದ್ರ ಬಾಬು. ಜನ ನೋಡುವುದಕ್ಕೆ ಮುನ್ನ ಮಾಧ್ಯಮದವರು ಮತ್ತು ಆತ್ಮೀಯರೆದುರು ಇತತೀಚೆಗೆ ಭರ್ಜರಿಯಾಗಿ ಲಾಂಚ್ ಮಾಡಿದರು ಬಾಬು. ಕ್ಯಾಪಿಟಲ್ ಹೋಟೆಲ್‌ನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಅಂಬರೀಷ್, ರವಿಚಂದ್ರನ್, ರಾಜೇಂದ್ರ ಸಿಂಗ್ ಬಾಬು, ಶಿವಮಣಿ ಮುಂತಾದವರನ್ನು ಅವರು ಕರೆಸಿದ್ದರು.
ಅಂಬರೀಷ್ ಎಂದಿನಂತೆ ಕಾರ್ಯಕ್ರಮ ಮುಗಿಯುವ ಸಮಯಕ್ಕೆ ಬಂದರು. ಅವರು ಬರುವ ಎಷ್ಟೋ ಸಮಯ ಮೊದಲು ರವಿಚಂದ್ರನ್ ಮುಂತಾದವರೆಲ್ಲಾ ನಾಲ್ಕು ಒಳ್ಳೆಯ ಮಾತಾಡಿ, ಶುಭ ಹಾರೈಸಿ, ಆದರ ಸ್ವೀಕರಿಸಿ ಹೊರಟಿದ್ದರು. ಮೊದಲು ಮಾತನಾಡಿದ್ದು ರವಿಚಂದ್ರನ್. ಸುಮಂತ್ ಹಾಗೂ ಶೇಲೇಂದ್ರ ಅವರಿಗೆ ಶುಭ ಹಾರೈಸುತ್ತಲೇ ಮೊದಲು ಟೈಟಲ್ ಬದಲಾಯಿಸಿ ಎಂದು ಸಲಹೆ ನೀಡಿದರು. ಅಷ್ಟೇ ಅಲ್ಲ, ಚಿತ್ರೀಕರಣವನ್ನ 10 ದಿನಕ್ಕೊಮ್ಮೆ ನಿಲ್ಲಿಸಿ, ಸರಿ-ತಪ್ಪುಗಳನ್ನು ಅರ್ಥ ಮಾಡಿಕೊಳ್ಳಿ ಎಂದೂ ಹೇಳಿದರು.