Thursday, May 23, 2013
Last Updated: 8:04:19 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಹಾರುವುದು ಹೇಗೆ?
    • ಹಕ್ಕಿಗಳಿಗಾಗಿ ಬರೆದ ಮಹೋನ್ನತ ಕೃತಿ
    • ಹಾರುವುದು ಹೇಗೆ

      • Udayavani | Dec 23, 2012

        ನಮ್ಮೂರಲ್ಲಿ ಬೆಳೆದ, ಕನ್ನಡ ಮಾಧ್ಯಮದಲ್ಲಿ ಓದಿದ, ಕುಮಾರವ್ಯಾಸನನ್ನು ಕೇಳಿ ಬೆಳೆದ ಆ ಹುಡುಗಿ, ಒಂಬತ್ತು ವರ್ಷಗಳ ಹಿಂದೆ ಅಮೆರಿಕಾಕ್ಕೆ ಹೋದಳು. ಅವಳ ಅಪ್ಪ ಬಡವನಾಗಿದ್ದ. ಅವಳನ್ನು ಕಳಿಸುವುದಕ್ಕೆ ವಿಮಾನ ನಿಲ್ದಾಣಕ್ಕೂ ಅವನು ಬರಲಿಲ್ಲ. ಅವನ ಅಮ್ಮನಿಗೆ ಮಗಳು ಒಬ್ಬಳೇ ವಿದೇಶಕ್ಕೆ ಹೋಗುತ್ತಾಳೆ ಅನ್ನುವುದು ಗೊತ್ತಾಗಿ ಗಾಬರಿ ಆಗಿತ್ತು.

        ಅವಳು ಅಮೆರಿಕದಲ್ಲಿ ಮೂರು ವರ್ಷ ಇದ್ದಳು. ಆಮೇಲೆ ಬೆಂಗಳೂರಿಗೆ ಬಂದಳು. ಲಕ್ಷರೂಪಾಯಿ ಸಂಬಳ ಬರುತ್ತಿತ್ತು. ನೋಡನೋಡುತ್ತಿದ್ದಂತೆ ಸಣ್ಣ ಮನೆ ಹೋಗಿ, ಅಪ್ಪ ಸ್ಕೂಟರಿನಲ್ಲಿ ಓಡಾಡಲು ಆರಂಭಿಸಿದ. ಮಗಳು ತನ್ನ ಪಾಲಿನ ದೇವರಂತೆ ಕಂಡಳು. ತಲೆಯೆತ್ತಿ ನಡೆಯುವುದನ್ನು ಅಭ್ಯಾಸ ಮಾಡಿಕೊಂಡ. ಅವನಿಗೂ ಮದುವೆ ಇತ್ಯಾದಿ ಕಾರ್ಯಕ್ರಮಗಳಿಗೆ ಆಹ್ವಾನ ಬರತೊಡಗಿತು. ಅವನ ಹುಂಬತನಕ್ಕೆ ಬೆಲೆ ಬಂತು. ಅವನ ಗೀಳುಗಳಿಗೆ ಅರ್ಥ ಬಂತು. ಅವನನ್ನು ನೋಡಿ ಯಾರೂ ನಗುತ್ತಿರಲಿಲ್ಲ. ಮಗಳು ಎರಡನೇ ಸಾರಿ ಅಮೆರಿಕಾಕ್ಕೆ ಹೋಗುವಾಗ ಅವನು ಒಬ್ಬನೇ ಬೆಂಗಳೂರಿಗೆ ಬಂದು, ಅವಳನ್ನು ವಿಮಾನ ಹತ್ತಿಸಿ, ವಿಮಾನದಲ್ಲೇ ಬಜ್ಪೆಗೆ ಹೋಗಿ ಅಲ್ಲಿಂದ ಟ್ಯಾಕ್ಸಿಯಲ್ಲಿ ಮನೆಗೆ ಹೋದ.

        ಅದಾಗಿ ನಾಲ್ಕೆದು ವರುಷಗಳಲ್ಲಿ ಅವಳ ಮದುವೆಯಾಯಿತು. ಮದುವೆ ಸರಿಹೋಗಲಿಲ್ಲ ಅಂತ ಅವಳು ಅವನನ್ನೂ ಬಿಟ್ಟದ್ದೂ ಆಯಿತು. ಒಂದು ಕಾಲಕ್ಕೆ ಇಡೀ ಸಮಾಜವನ್ನೇ ತಲ್ಲಣಿಸುವ ಸುದ್ದಿಯಾಗಬಹುದಾಗಿದ್ದ ಅದು, ಒಂದು ಸಾಧಾರಣ ಸಂಗತಿಯಾಗಿ ಕಂಡಿತು. ಅವಳು ವ್ಯಕ್ತಿತ್ವ ವಿಕಸನ ಶಿಬಿರ ಸೇರಿಕೊಂಡಳು. ಅವನನ್ನೂ ಆ ಮದುವೆಯನ್ನೂ ಮರೆತಳು. ಬೇಡದ ಮದುವೆಯಿಂದ ಹೊರಗೆ ಬರುವುದು ಹೇಗೆ ಅನ್ನುವ ಪುಸ್ತಕ ಅವಳಿಗೆ ಸಿಕ್ಕಿ ಸಂತೋಷವಾಯಿತು.

        ಗಾಯಗಳನ್ನು ಮರೆಯುವುದನ್ನು ಕಲಿಸಿದ್ದು ಯಾವುದು? ಅವಳ ಸಂಪಾದನೆಯಾ? ಸ್ಥಾನಮಾನವಾ ಅಂತ ಯಾರೋ ಕೇಳಿದರು. ನಮ್ಮೂರಿನ ಹುಡುಗರಿಗೆಲ್ಲ ಗಾಬರಿಯಾಗಿತ್ತು. ಎಷ್ಟು ಸುಲಭವಾಗಿ ಅವನು ಬೇಡ ಅಂದುಬಿಟ್ಟಳು. ಅವನು ಕೂಡ ಅಷ್ಟೇ ಸರಳವಾಗಿ ಮದುವೆ ಮುರಿಯೋಣ ಅನ್ನುವ ನಿರ್ಧಾರಕ್ಕೆ ಬಂದಿರಬಹುದು. ಸಂಬಂಧಗಳಿಂದ ಕಳಚಿಕೊಳ್ಳುವುದು ಅದೆಷ್ಟು ಸುಲಭ.

        ಅಷ್ಟಕ್ಕೂ ಅವರಿಬ್ಬರ ಮಧ್ಯೆ ಹೊಂದಾಣಿಕೆ ಆಗದೇ ಇದ್ದದ್ದು ಏನು? ನಾನು ನನ್ನ ಗೆಳೆಯನಿಗೆ ´ೋನ್‌ ಮಾಡುತ್ತಿದ್ದೆ. ನನ್ನ ಗೆಳತಿಯರ ಜೊತೆ ಮಾತಾಡುತ್ತಿದ್ದೆ. ಯಾರ ಜೊತೆಗೆ ಗಂಟೆಗಟ್ಟಲೆ ಮಾತಾಡ್ತೀಯ ಅಂತ ಅವನು ರೇಗುತ್ತಿದ್ದ. ನನಗೊಂದು ಪಂಜರ ಮಾಡಿಕೊಡಲು ನೋಡಿದ. ಹೊರಗೆ ಬಂದುಬಿಟ್ಟೆ ಅಂತ ಅವಳೆಂದಳು.

        ಅವಳ ತಪ್ಪಿಲ್ಲ. ಅವನ ತಪೂ³ ಇಲ್ಲವೇನೋ? ಅವಳ ಅಪ್ಪ ಕೂಡ ಒಂದು ಕಾಲದಲ್ಲಿ ಅವಳ ಅಮ್ಮನನ್ನು ಹೀಗೇ ಹದ್ದುಬಸ್ತಿನಲ್ಲಿಡಲು ಹವಣಿಸಿರಬಹುದು. ಅಮ್ಮ ಅದನ್ನು ಒಪ್ಪಿಕೊಂಡು ಬದುಕಿರಬಹುದು.
        ಯಾಕೆಂದರೆ ಅವಳಿಗೆ ಆರ್ಥಿಕ ಸ್ವಾತಂತ್ರ್ಯವೇ ಇರಲಿಲ್ಲ. ಬಿಟ್ಟು ಹೋಗುವುದು ಎಲ್ಲಿಗೆ ಎಂಬ ಪ್ರಶ್ನೆಯಿತ್ತು. ನೀನು ದುಡ್ಡಿದ್ದರೆ ನಿನ್ನ ಗಂಡನನ್ನು ಬಿಟ್ಟು ಹೋಗುತ್ತಿದ್ದೆಯಾ ಅಂತ ಆಕೆಯನ್ನು ಯಾರೋ ಕೇಳಿದರಂತೆ.
        ಬಿಟ್ಟು ಹೋಗಬೇಕೋ ಬೇಡವೋ ಅನ್ನುವುದನ್ನು ನಿರ್ಧಾರ ಮಾಡುವುದು ದುಡ್ಡಲ್ಲ, ಪ್ರೀತಿ ಅಂದರಂತೆ ಆಕೆ. ಆ ಗುಣ ಮಗಳಿಗೇಕೆ ಬರಲಿಲ್ಲ ಅಂತ ಆಕೆ ಕೇಳಲಿಲ್ಲ. ಮಗಳ ಮನಸ್ಸೇ ಬೇರೆೆ, ನನ್ನ ಕಾಲವೇ ಬೇರೆ. ಅವಳು ಬೇಡವೆಂದರೆ ಹೊರಗೆ ಬಂದುಬಿಡಲಿ ಅಂದುಬಿಟ್ಟಿದ್ದರು.

        ಹೇಗೆ ಎಲ್ಲವೂ ಬದಲಾಗುತ್ತ ಹೋಗುತ್ತದೆ ಅಂತ ಅಚ್ಚರಿಯಿಂದ ಊರಿನ ಮಂದಿ ನೋಡುತ್ತಾ ಕೂತರು. ಮದುವೆ, ಸಂಬಂಧ ಕೂಡ ನಿರರ್ಥಕ ಅನ್ನಿಸಿಬಿಟ್ಟಿದೆ. ಅದರ ಸಾರ್ಥಕ್ಯ ಇರುವುದು ಸಾಂಗತ್ಯದಲ್ಲಿ, ಅನುಸಂಧಾನದಲ್ಲಿ, ಹೊಂದಾಣಿಕೆಯಲ್ಲಿ.  ಒತ್ತಾಯದಲ್ಲಿ ಅಲ್ಲ. ಹಕ್ಕಿಯನ್ನು ಹಾರಬಿಡು, ಅದಾಗಿಯೇ ನಿನ್ನನ್ನು ಹುಡುಕಿಕೊಂಡು ಬರುತ್ತದೆ. ಹಕ್ಕಿಯನ್ನು ಪಂಜರದಲ್ಲಿಡು, ಬಾಗಿಲು ತೆಗೆದೊಡನೆ ಹಾರಿ ಹೋಗುತ್ತದೆ. ಪ್ರೀತಿ ಹಕ್ಕಿಯಂತೆ.

        ಇಂಥ ನಿರರ್ಥಕತೆಯನ್ನು ಅಕ್ಷರಗಳಲ್ಲಿ ಹಿಡಿಯುವುದು ಹೇಗೆ? ಅದನ್ನು ಸಾಹಿತ್ಯ ನಿಜಕ್ಕೂ ಹಿಡಿಯಲು ನೋಡುತ್ತಿದೆಯಾ? ಅಂಥ ಯಾವ ಸೂಚನೆಯೂ ಇಲ್ಲ. ಯಾಕೆಂದರೆ ಸಾಹಿತ್ಯ ಜಗತ್ತು ಇನ್ನೂ ಅವಮಾನಗಳನ್ನು ದಾಖಲಿಸುವುದರಲ್ಲೇ ನಿರತವಾಗಿದೆ. ಅದನ್ನು ದಾಟಿ ಬಂದು ಎಷ್ಟೋ ವರ್ಷಗಳಾದ ನಂತರವೂ.

        ನಿರರ್ಥಕತೆ ಸಾಹಿತ್ಯ ಜಗತ್ತನ್ನು ಕೂಡ ಪ್ರವೇಶಿಸಿದೆಯೋ ಎಂಬ ಗುಮಾನಿ ಕೆಲವರನ್ನಾದರೂ ಕಾಡತೊಡಗಿದೆ.  ಇವತ್ತು ಇಡೀ ನಾಡಿಗೆ ಸಲ್ಲಬಲ್ಲ ಬರಹಗಾರರ ಸಂಖ್ಯೆ ಕ್ಷೀಣಿಸುತ್ತಿದೆ. ಒಂದು ಪಂಗಡಕ್ಕೆ, ಒಂದು ವರ್ಗಕ್ಕೆಂದು ಬರೆಯುವುದು ಎಷ್ಟು ಅಪಾಯಕಾರಿ ಎಂಬುದನ್ನು ನಮಗೆ ನವ್ಯ, ಬಂಡಾಯ ಮತ್ತು ದಲಿತ ಚಳವಳಿಗಳು ತೋರಿಸಿಕೊಟ್ಟಿವೆ. ಇದೇ ಅವಸ್ಥೆಯನ್ನು ಆಫ್ರಿಕಾ ಖಂಡದ ಲೇಖಕರೂ ಅನುಭವಿಸುತ್ತಿದ್ದಾರೆ. ಆದರೆ ಆಫ್ರಿಕನ್‌ ಲೇಖಕರಿಗೆ ಇರುವ ಅನುಕೂಲ ಕನ್ನಡದ ಕತೆಗಾರರಿಗೋ ಕವಿಗಳಿಗೋ ಇಲ್ಲ. ನಮಗಿಂತ ಅಲ್ಪಸಂಖ್ಯಾತ ಭಾಷೆಗಳ ಕವಿಗಳೆಲ್ಲ ಜಾಗತಿಕ ಮಟ್ಟದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನೈಜೀರಿಯಾದ ವೋಲೆ ಸೋಯಿಂಕಾ, ನಾರ್ವೆಯ ಸಿಂಗ್ರಿಡ್‌, ಪೆರುವಿನ ಮಾರಿಯೋ ವರ್ಗಾಸ್‌ ಯೋಸಾ, ರೋಮಾನಿಯಾದ ಹೆರ್ಟಾ ಮುಲ್ಲರ್‌ ಮುಂತಾದವರು ತಮ್ಮ ಜನಕ್ಕಿಂತ ಹೆಚ್ಚಾಗಿ ಜಗತ್ತಿಗೇ ಗೊತ್ತಾಗುವಂತೆ ಬರೆಯುತ್ತಾರೆ.

        ಒಬ್ಬ ಬರಹಗಾರನ ಜಗತ್ತು ಸಂಕುಚಿತವಾಗುತ್ತ ಹೋದ ಹಾಗೆ ಅವನ ಶಕ್ತಿ ಕ್ಷೀಣಿಸುತ್ತಾ ಬರುತ್ತದೆ. ಶಿವರಾಮ ಕಾರಂತರು ಚೋಮನನ್ನು ಒಳಗೊಳ್ಳಲು ಯತ್ನಿಸಿದ್ದು, ಶಾಂತಿನಾಥ ದೇಸಾಯರು ಓಂ ಣಮೋ ಬರೆದದ್ದು, ಚಿತ್ತಾಲರು ಪುರುಷೋತ್ತಮ, ಶಿಕಾರಿಗಳ ಮೂಲಕ ಮತ್ತೂಂದು ಜಗತ್ತಿಗೆ ಕಾಲಿಟ್ಟದ್ದು, ಕುವೆಂಪು ಮಲೆಗಳಲ್ಲಿ ಮದುಮಗಳು ಕಾದಂಬರಿಯ ಮೂಲಕ ಇಡೀ ಜಗತ್ತನ್ನು ಕನ್ನಡದ ಕನ್ನಡಿಯಲ್ಲಿಟ್ಟು ನೋಡಿದ್ದು, ದೇವನೂರು ಮಹಾದೇವ ಕುಸುಮಬಾಲೆಯನ್ನು ಬರೆಯುತ್ತಲೇ ಅದು ನಮ್ಮಂಥ ಯಾವ ದೇಶದ ಜಾನಪದ ಕತೆಯೂ ಆಗಬಹುದಾಗುವಂತೆ ಮಾಡಿದ್ದನ್ನು ನೋಡುತ್ತಿದ್ದರೆ, ಇವತ್ತಿನ ಲೋಕದ ಸೀಮಿತ ಪರಿಧಿ ನಿಮಗೆ ಹೊಳೆಯುತ್ತದೆ.

        ಯುನೈಟೆಡ್‌ ಸ್ಟೇಟ್ಸ್‌ಆಫ್‌ ಅಮೆರಿಕದ ಉದಾಹರಣೆ ತೆಗೆದುಕೊಂಡರೆ ನಿಮಗೆ ಈ ವೈರುದ್ಧ$Â ಸ್ಪಷ್ಟವಾಗುತ್ತದೆ. ಕಳೆದ ಇಪ್ಪತ್ತು ವರುಷಗಳಲ್ಲಿ ಅಮೆರಿಕಾದ ಯಾವೊಬ್ಬ ಬರಹಗಾರ ಕೂಡ ನೊಬೆಲ್‌ ಪ್ರಶಸ್ತಿ ಪಡೆದಿಲ್ಲ. 1980ರಲ್ಲಿ ಪೋಲೆಂಡಿನಲ್ಲಿ ಹುಟ್ಟಿದ ಜೆಸ್ಲಾ ಮಿಲೋಸ್‌ ನಂತರ ನೊಬೆಲ್‌ ಪ್ರಶಸ್ತಿಗೆ ಪಾತ್ರವಾಗುವುದಕ್ಕೆ ಟೋನಿ ಮಾರಿಸನ್‌ ಬರಬೇಕಾಯಿತು. 1983ರ ನಂತರ ಅಮೆರಿಕಾಕ್ಕೆ ಬಂದ 163 ನೊಬೆಲ್‌ ಪ್ರಶಸ್ತಿಗಳು ಮೆಡಿಸಿನ್‌, ಫಿಸಿಕ್ಸ್‌, ಇಕನಾಮಿಕ್ಸ್‌ ಮತ್ತು ಕೆಮಿಸ್ಟ್ರಿಗೆ ಸಂದಿವೆ. ಆರ್ಥಿಕವಾಗಿ ಮುಂದುವರಿಯುತ್ತ ಹೋದ ಹಾಗೆ ನಮ್ಮ ಆದ್ಯತೆಗಳು ಹೇಗೆ ಬದಲಾಗುತ್ತವೆ ಅನ್ನುವುದನ್ನೂ ಇದು ಸೂಚಿಸುವಂತಿದೆ.

        ಇಂಥ ಹೊತ್ತಲ್ಲಿ ನಮ್ಮ ಜಗತ್ತನ್ನು ನಾವು ವಿಸ್ತರಿಸಿಕೊಳ್ಳದೇ ಹೋದರೆ, ಏನಾಗುತ್ತದೆ ಅನ್ನುವುದಕ್ಕೆ ಪಕ್ಕದ ಆಂಧ್ರದಲ್ಲೇ ಉದಾಹರಣೆಗಳು ಸಿಗುತ್ತವೆ. ತೆಲುಗು ಸಾಹಿತ್ಯ ಯಂಡಮೂರಿ ಮತ್ತು ನಕ್ಸಲ್‌ಬಾರಿಯ ನಡುವೆ ಸಿಕ್ಕಿ ನಲುಗಿಹೋಗಿದೆ. ಸೂಕ್ಷ್ಮಜ್ಞತೆ ಕಳಕೊಂಡು ಪ್ರತಿಯೊಂದು ಸಾಲು ಕೂಡ ಸಶಬ್ದವಾಗಿಯೇ ನಮಗೆ ಕೇಳಿಸುತ್ತದೆ. ಮೌನವೆಂಬುದು ಅಪರಾಧವೆಂಬಂತೆ ಭಾಸವಾಗುವ ಸಾಹಿತ್ಯ ಅಸಹನೀಯವೂ ಆಗುತ್ತದೆ.

        ಇಂಥ ಹೊತ್ತಲ್ಲಿ ನಾವು ನಮ್ಮ ನಮ್ಮ ವೃತ್ತದೊಳಗೆ ನಿಂತುಕೊಂಡು ಅದನ್ನೇ ನಮ್ಮ ಜಗತ್ತನ್ನಾಗಿ ಮಾಡಿಕೊಂಡು ಬರೆಯುತ್ತಿದ್ದೇವೆ. ಒಬ್ಬ ಬರೆಯುವುದು ಮತ್ತೂಬ್ಬನಿಗೆ ಹಳಹಳಿಕೆಯಂತೆ, ಸ್ವಂತದ ಆಲಾಪದಂತೆ, ಆತ್ಮರತಿಯಂತೆ ಕೇಳಿಸುತ್ತಿದೆ. ಬರವಣಿಗೆ ಕೂಡ ನಿರರ್ಥಕ ಎನ್ನಿಸುವ ಜಗತ್ತು ಕ್ರಮೇಣ ಸƒಷ್ಟಿಯಾಗುತ್ತಿದೆ.

        ಇವತ್ತು ಅಮೆರಿಕದಂಥ ರಾಷ್ಟ್ರಗಳ ಪ್ರಜೆಗಳಿಗೆ ಮೋಟಿವೇಷನ್‌ ಮಾಡುವ ಪುಸ್ತಕಗಳು ಬೇಕು. ರಾಬಿನ್‌ ಶರ್ಮ, ರಾಂಡಿ ಪಾಶ್‌, ದೀಪಕ್‌ ಛೋಪ್ರಾಗಳು ಬೇಕು. ಸೆಲ್ಪ್ ಹೆಲ್ಪ್ ಪುಸ್ತಕಗಳು ಬೇಕು. ಅದನ್ನು ಓದುತ್ತಿರುವವರೆಲ್ಲ ಹಳ್ಳಿಗಳಿಂದ, ಬಡತನದಿಂದ ಬಂದವರು. ಬರೆದವರು ಕೂಡ. ಅಂಥ ಯಾವ ಪುಸ್ತಕದ ನೆರವೂ ಇಲ್ಲದೇ, ರಾಮಾಯಣ, ಮಹಾಭಾರತಗಳನ್ನು, ನಮ್ಮ ನಡುವಿನ ಕತೆಗಾರರನ್ನು ಓದಿಕೊಂಡು ಸ್ಪೂರ್ತಿಗೊಂಡು ಬೆಳೆದೆವು ಎಂಬುದನ್ನು ಅವರೇ ಮರೆಯುವಂತೆ ಮಾಡುವುದಕ್ಕೆ ಇಂಥ ಒಂದು ಪುಸ್ತಕ ಸಾಕು. ಇವತ್ತು ಇಂಥ ಪುಸ್ತಕಗಳು ಕನ್ನಡಕ್ಕೂ ದಾಳಿ ಇಡುತ್ತಿವೆ.

        ಸರಳೀಕರಣವೇ ಶತ್ರು. ಪರಿಶುದ್ಧವಾಗುವಂತೆ ಸ್ನಾನ ಮಾಡುವುದು ಹೇಗೆ, ಉಗುರು ಕತ್ತರಿಸುವುದು ಹೇಗೆ, ಹಿರಿಯರ ಜೊತೆ ಮಾತಾಡುವುದು ಹೇಗೆ, ಸಂದರ್ಶನಕ್ಕೆ ಹಾಜರಾಗುವುದು ಹೇಗೆ ಎಂಬಿತ್ಯಾದಿ ಪುಸ್ತಕಗಳೇ ಜನಪ್ರಿಯವಾಗುತ್ತಿವೆ.

        ನಾವು ಸ್ವಪ್ರಯತ್ನದಿಂದ ಏನನ್ನೂ ಕಲಿಯಬೇಕಿಲ್ಲ ಅನ್ನುವುದನ್ನು ಇದು ಸೂಚಿಸುತ್ತದೆಯಾ? ಮುಂದೊಂದು ದಿನ ಹಕ್ಕಿಗಳಿಗೆ ಹಾರುವುದನ್ನು ಕಲಿಸುವ, ಮೀನಿಗೆ ಈಜುವುದನ್ನು ಕಲಿಸುವ ಪುಸ್ತಕಗಳೂ ಬರಬಹುದಾ?

        ಈ ವಿಚಿತ್ರ ಸಂದಿಗ್ಧತೆಯಲ್ಲಿ ನಾವಿದ್ದೇವಾ?

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
      image
      • Copyright @ 2009 Udayavani.All rights reserved.
      • Designed & Hosted By 4cplus