Friday, May 24, 2013
Last Updated: 6:16:32 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಸಾಪ್ತಾಹಿಕ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮನಸ್ಸಿನಲ್ಲಿ ನೆಲೆನಿಂತಿರುವ ಮೂರ್ತಿ
    • ಮನಸ್ಸಿನಲ್ಲಿ ನೆಲೆನಿಂತಿರುವ ಮೂರ್ತಿ

      • ದತ್ತಣ್ಣ | Dec 23, 2012

        ನಾಟಕ, ಸಿನೆಮಾ ಕ್ಷೇತ್ರಗಳಲ್ಲಿ ನಿರಂತರ ಕ್ರಿಯಾಶೀಲರಾಗಿದ್ದ ಎ. ಎಸ್‌. ಮೂರ್ತಿ ನಮ್ಮನ್ನಗಲಿದ್ದಾರೆ. ಎಂಟು ದಶಕಗಳಿಗಿಂತಲೂ ಹೆಚ್ಚಿನ ಜೀವಿತಾವಧಿಯಲ್ಲಿ ಒಂದು ಕ್ಷಣವನ್ನೂ ಸುಮ್ಮನೆ ಕಳೆದವರಲ್ಲ. ಸದಾ ರಂಗಭೂಮಿಯ ಬಗ್ಗೆಯೇ ಯೋಚಿಸುತ್ತ, ಬರೆಯುತ್ತ, ಶ್ರಮಿಸುತ್ತ ಬದುಕುತ್ತ ಬಂದವರು. ನಾಟಕ, ಸಿನೆಮಾ, ಕಿರುತೆರೆಗೆ ಸಂಬಂಧಿಸಿದ ಕೂಟಗಳಲ್ಲಿ ಈಗ ಅವರಿಲ್ಲ ಎಂಬುದನ್ನು ನಂಬಲು ಕಷ್ಟವಾಗುವಂತೆ ಅವರ ನೆನಪುಗಳು ದಟ್ಟವಾಗಿ ಕಾಡುತ್ತಿವೆ.

        1959-60 ಸಮಯ. ಇಂಜಿನಿಯರಿಂಗ್‌ ಕಲಿಯಲು ಹೊತ್ತು ಚಿತ್ರದುರ್ಗದಿಂದ ಬೆಂಗಳೂರಿಗೆ ಬಂದಿಳಿಯುವಾಗ ನನ್ನಲ್ಲಿ ನಾಟಕದ ಗೀಳು ಬಲವಾಗಿತ್ತು. ಬಹಳ ಸರಳವಾಗಿ ಕಾಣಿಸುವ, ಆದರೆ ಸ್ಪಷ್ಟ ಶಬ್ದಗಳಲ್ಲಿ ನೇರ ಮಾತುಗಳನ್ನಾಡುವ ಎ. ಎಸ್‌. ಮೂರ್ತಿಯವರನ್ನು ಮೊದಲು ನೋಡಿದ್ದು ಗಾಂಧಿ ಬಜಾರ್‌ನ ಕಟ್ಟಡವೊಂದರ ಮಹಡಿಯ ಮೇಲೆ ಅನೇಕ ನಾಟಕಾಸಕ್ತರೊಂದಿಗೆ. "ಚಿತ್ರಾ ಕಲಾವಿದರು' ಎಂಬ ಗುಂಪೊಂದು ಅಲ್ಲಿ ಕ್ರಿಯಾಶೀಲವಾಗಿತ್ತು. ಆ ದಿನಗಳಲ್ಲಿ  ಶಾಲಾಕಾಲೇಜುಗಳಲ್ಲಿ ಯಾವುದಾದರೂ ನಾಟಕ ಮಾಡಬೇಕೆಂದರೆ ಪರ್ವತವಾಣಿ- ಗುಂಡಣ್ಣ-ಎ. ಎಸ್‌. ಮೂರ್ತಿ-ದಾಶರಥಿ ದೀಕ್ಷಿತ್‌ ಇವರ ನಾಟಕಗಳು ತತ್‌ಕ್ಷಣ ಮನಸ್ಸಿಗೆ ಬರುತ್ತಿದ್ದವು. ಆ ದಿನಗಳಲ್ಲಿ ನಮ್ಮ ಗವರ್ನಮೆಂಟ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಅಥವಾ ಹಾಸ್ಟೆಲ್‌ನಲ್ಲಿ (?) ಮೂರ್ತಿಯವರ ಒಂದು ನಾಟಕ ಮಾಡುವ ಸಂದರ್ಭ ಒದಗಿತ್ತು.
        ಡನ್‌ಲಪ್‌ಗ್ರ್ಲ್ (ಅಥವಾ ಲೆಡೀಸ್‌ ಓನ್ಲಿ ? ). ನಮ್ಮ ರಂಗತಾಲೀಮುಗಳ ಬಳಿಕ ಕೊನೆಗೆ ಎ. ಎಸ್‌. ಮೂರ್ತಿಯವರ ಪ್ರತಿಕ್ರಿಯೆಗಳನ್ನು ಪಡೆಯುವುದಕ್ಕಾಗಿ ಒಂದೆರಡು ಬಾರಿ ನಮ್ಮ ಹಾಸ್ಟೆಲ್‌ಗೆ ಕರೆಸಿದ್ದೆವು.
        ಆ ಸಮಯದಲ್ಲಿ ನಾನೊಂದು ಹೆಣ್ಣು ಪಾತ್ರ ಮಾಡಿದ್ದನ್ನು ನೋಡಿ ಅವರ ಒಂದು ನಾಟಕದಲ್ಲಿ ಪಾತ್ರ ವಹಿಸಲು ನನ್ನನ್ನು ಕರೆದಂತೆ ಜ್ಞಾಪಕ. ಆ ನಾಟಕ ಕೆಂಪೇಗೌಡ ರಸ್ತೆಯಲ್ಲಿರುವ ಛೇಂಬರ್‌ ಆಫ್ ಕಾಮರ್ಸ್‌ ಕಟ್ಟಡದ ಸಭಾಂಗಣದಲ್ಲಿ ಮಾಡಿದಂತೆ, ಆಗ ಅದರೊಳಗೆ ಅವರ ತಮ್ಮ ರಾಮಕೃಷ್ಣರೂ ಪಾತ್ರ ಮಾಡಿದ್ದಂತೆ ಅಸ್ಪಷ್ಟ ನೆನಪು. ಆ ಸಮಯದ ಆಸುಪಾಸಿನಲ್ಲಿ ನನ್ನ ಅಣ್ಣ ಸೋಮಣ್ಣ  (ಎಚ್‌.ಜಿ. ಸೋಮಶೇಖರ ರಾವ್‌) ಅವರು ಮೈಸೂರಿನಿಂದ ಕ್ಷೇತ್ರದ ಕಾಗೆ ನಾಟಕವನ್ನು ತಂದು ಅದೇ ಸಭಾಂಗಣದಲ್ಲಿ ಮಾಡಿದ್ದು ಈಗಲೂ ನೆನಪಿದೆ. ಕೇವಲ ನಗೆನಾಟಕಗಳನ್ನು ಮಾತ್ರ ಎ. ಎಸ್‌. ಮೂರ್ತಿಯವರು ಬರೆಯುತ್ತಾರೆ ಎಂದುಕೊಂಡಿದ್ದ ನನಗೆ ಕೊಂಚ ಸೀರಿಯಸ್‌ ವಿಷಯವನ್ನು ಹಿನ್ನೆಲೆಯಾಗಿಟ್ಟುಕೊಂಡ ನಾಟಕ ಕೂಡ ಅವರಿಂದ ಸಾಧ್ಯ ಎಂಬುದು ತಿಳಿಯಿತು.

        ಇಂಜಿನಿಯರಿಂಗ್‌ ಮುಗಿಸಿ, ದೇಶ ಸುತ್ತಿ ಅಭಿನಯದ ಸೆಳೆತದಲ್ಲಿ ಮರಳಿ ಬಂದಾಗ ಮತ್ತೆ ಎ. ಎಸ್‌. ಮೂರ್ತಿಯವರ ಒಡನಾಟ ಅವರೇ ಹುಟ್ಟಿಹಾಕಿದ "ಅಭಿನಯ ತರಂಗ' ರಂಗ ಶಾಲೆಯ ಮೂಲಕ ಲಭ್ಯವಾಯಿತು. ಅವರ ರಂಗಶಾಲೆಯ ವಿದ್ಯಾರ್ಥಿಗಳಿಗೆ ಪಾಠ ಹೇಳಲು ಕೆಲವೊಮ್ಮೆ ನನ್ನನ್ನು ಅಲ್ಲಿಗೆ ಕರೆಸಿದ್ದಿದೆ. ಹಾಗೆಯೇ ಅಲ್ಲಿ ಆಗಿಂದಾಗ್ಗೆ ನಡೆಯುತ್ತಿದ್ದ ನಾಟಕ ಪ್ರದರ್ಶನಗಳು, ಸಂವಾದಗಳು, ಹಿರಿಯ ಸಾಹಿತಿಗಳು- ಕಲಾವಿದರ ಮಾತುಗಳನ್ನು ಕೇಳುವ ಅವಕಾಶ ನನಗೆ ಸಿಕ್ಕಿತ್ತು. ಅದು ನನ್ನ ಬೆಳವಣಿಗೆಗೂ ಅನುಕೂಲ ಮಾಡಿಕೊಟ್ಟಿತ್ತು.

        ಎ. ಎಸ್‌. ಮೂರ್ತಿಯವರ ನಿರಂತರ ಕ್ರಿಯಾಶೀಲತೆ ನನಗೆ ಒಂದು ಸೋಜಿಗದ ಸಂಗತಿಯಾಗಿತ್ತು. ಯಾವುದೇ ಕೆಲಸವನ್ನಾಗಲಿ ಆರಂಭಿಸಿ ಅರ್ಧದಲ್ಲಿ ನಿಲ್ಲಿಸುವವರಲ್ಲ. ಅದನ್ನು ತುದಿ ಮುಟ್ಟಿಸುವವರೆಗೂ ಕಠಿಣ ಪರಿಶ್ರಮ ಪಡುತ್ತಿದ್ದರು. ಎಡಗೈಯಲ್ಲಿ ಸಿಗರೇಟು, ಬಲಗೈಯಲ್ಲಿ ಪೆನ್ನು. ವಜ್ರಾಸನ ಹಾಕಿ ಕುಳಿತರೆಂದರೆ ನಾಟಕ ಬರೆದು ಮುಗಿಸುವವರೆಗೂ ಏಳುವವರಲ್ಲ. ಒಮ್ಮೊಮ್ಮೆ ರಾತ್ರಿ ಕುಳಿತವರು ಬೆಳಿಗ್ಗೆಯಾಗುವವರೆಗೂ ಬರೆದದ್ದೇ ಬರೆದದ್ದು.

        ಒಂದು ನೆನಪು ನನ್ನಲ್ಲಿ ಇವತ್ತಿಗೂ ಗಾಢವಾಗಿದೆ. ಕನಕಪುರ ಬಸ್‌ಸ್ಟಾಂಡ್‌ನ‌ಲ್ಲೊಂದು ಬೀದಿ ನಾಟಕ. ಅದರ ಟಿ. ವಿ. ರೆಕಾರ್ಡಿಂಗ್‌ ಆಗುವುದಿತ್ತು. ನನ್ನನ್ನು ಒಂದು ಪಾರ್ಟ್‌ ಮಾಡಲು ಮೂರ್ತಿಯವರು ಕರೆದರು. ನನಗೆ ರಂಗನಾಟಕಗಳಲ್ಲಿ ಮಾಡಿದ ಅನುಭವವಿದ್ದರೂ ಬೀದಿ ನಾಟಕ ಮಾಡಿದ ಅನುಭವವಿರಲಿಲ್ಲ. ಆ ಅಳುಕಿನಿಂದಾಗಿ ನನ್ನಿಂದ ಸಾಧ್ಯವಿಲ್ಲ ಅಂದೆ. ಏಕೆಂದರೆ, ಅದಕ್ಕೆ ತಾಲೀಮು ಅವೆಲ್ಲ ಇರಲಿಲ್ಲ.

        ಸಮಯಸ್ಫೂರ್ತಿಯಿಂದ ಮಾಡಬೇಕಾದ ಅಭಿನಯ ಅದು. ಆದರೂ ಅವರು ನನಗೆ ಧೈರ್ಯ ಹೇಳಿ ವ್ಯಾನ್‌ನಲ್ಲಿ ಕೂಡಿಸಿಕೊಂಡು ಕನಕಪುರಕ್ಕೆ ಪ್ರಯಾಣ ಪ್ರಾರಂಭಿಸಿಯೇ ಬಿಟ್ಟರು. ಇಲ್ಲಿಂದ ಅಲ್ಲಿಗೆ ಹೋಗುವಾಗಲೇ ಬೀದಿ ನಾಟಕ ಹೇಗೆ ಮಾಡಬೇಕು, ಆವತ್ತಿನ ವಿಷಯವೇನು, ಅದರಲ್ಲಿನ ನನ್ನ ಪಾತ್ರವೇನು ಅನ್ನೋದರ ಬಗ್ಗೆ ಮಾಹಿತಿಯನ್ನು ಕೊಟ್ಟುಬಿಟ್ಟಿದ್ದರು. ಅವರು ಹೇಳಿದ್ದು ಕೇಳಿ ನನಗೆ ಸ್ವಲ್ಪ ಹೆದರಿಕೆಯಾಯಿತು. "ಸ್ವಾಮಿ, ನನಗೆ ಮಾತು ನಿಂತು ಹೋಗಿಬಿಟ್ರೆ ಮುಂದೇನು ಗತಿ? ' ಅಂತ ಕೇಳಿದೆ. ಆಗ ಅವರು ಒಂದೇ ಮಾತಿನಲ್ಲಿ ನನಗೆ ಸಂಪೂರ್ಣ ಧೈರ್ಯ ತುಂಬಿದರು- "ಹತ್ತಿರದಲ್ಲಿಯೇ ನಾನು ಇರ್ತೀನಲ್ಲ ' ಅಂತ.

        ಆ ಬೀದಿ ನಾಟಕ ಚೆನ್ನಾಗಿಯೇ ಬಂತು. ನನಗೂ ಏನೂ ತೊಂದರೆ ಆಗಲಿಲ್ಲ. ಆದರೆ, ಆವತ್ತು ನಾನು ಬೀದಿನಾಟಕದ ಬಗ್ಗೆ ಚೆನ್ನಾಗಿ ತಿಳಿದುಕೊಂಡಂತಾಗಿತ್ತು. ಏಕೆಂದರೆ, ನಾಟಕದ ಮಧ್ಯೆ ಮಧ್ಯೆಯೇ ಪ್ರೇಕ್ಷಕರು ಎಸೆಯುತ್ತಿದ್ದ ಪ್ರಶ್ನೆಗಳಿಗೆ ನಮ್ಮಿಂದಲೂ ಉತ್ತರ ಬರುತ್ತಿತ್ತು , ನಮಗೆ ತೊಂದರೆಯಾದಾಗ ಮೂರ್ತಿಯವರ ಮಧ್ಯಪ್ರವೇಶವೂ ಇತ್ತು. ಅವತ್ತೇ ನನಗೆ ಗೊತ್ತಾದದ್ದು ಎ. ಎಸ್‌. ಮೂರ್ತಿಯವರು ಬೀದಿ ನಾಟಕದ ಸೂಕ್ಷ್ಮತೆಗಳನ್ನು ಎಷ್ಟು ಚೆನ್ನಾಗಿ ಗ್ರಹಿಸಿದ್ದರು ಎಂದು.

        ಅವರದು ದೊಡ್ಡ ಸಂಸಾರ. "ಅಭಿನಯ ತರಂಗ'ದ ವಿದ್ಯಾರ್ಥಿಗಳಷ್ಟೇ ಅಲ್ಲ, ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಎಲ್ಲರನ್ನೂ ರಂಗಭೂಮಿಯಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದರು. ಅವರ ಮಾರ್ಗದರ್ಶನದಲ್ಲಿ ಪ್ರಾರಂಭವಾದ "ಬಿಂಬ' ಸಂಸ್ಥೆ ರಂಗಭೂಮಿಯ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಮಾಡಿಕೊಟ್ಟಿದೆ. ಪ್ರತಿವರ್ಷ "ಬಿಂಬ'ದಲ್ಲಿ ನಡೆಯುವ ಮಕ್ಕಳ ರಂಗತರಬೇತಿ ಶಿಬಿರಗಳಲ್ಲಿ ನೂರಾರು ಮಂದಿ ಪುಟಾಣಿಗಳು ಭಾಗವಹಿಸಿ ಪೂರ್ಣ ಪ್ರದರ್ಶನಗಳನ್ನು ಕೊಡುತ್ತಿದ್ದುದು ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತಿತ್ತು. ಈ ಸಂಸ್ಥೆಗಳಲ್ಲಿ ಬೆಳೆದು ಬಂದ ಅದೆಷ್ಟೋ ಮಂದಿ ಈಗ ಪ್ರಸಿದ್ಧ ರಂಗಕರ್ಮಿಗಳಾಗಿಯೂ ಸಿನೆಮಾ, ಟಿ. ವಿ. ಕ್ಷೇತ್ರದಲ್ಲೂ ಪ್ರತಿಭಾವಂತರಾಗಿಯೂ ಬೆಳೆದಿರುವುದು ಎಲ್ಲರಿಗೂ ತಿಳಿದ ವಿಷಯ.

        ಈ ಸಂಸ್ಥೆ ಬೆಂಗಳೂರಿನ ಹನುಮಂತ ನಗರದಲ್ಲೂ ವಿಜಯನಗರದಲ್ಲೂ ಅವರ ಇಬ್ಬರು ಮಕ್ಕಳ ಮೂಲಕ ಈಗಲೂ ಬಹಳ ಚೆನ್ನಾಗಿ ನಡೆಯುತ್ತಿದೆ. ರಂಗಭೂಮಿಯಷ್ಟೇ ಅಲ್ಲ, ಸಾಂಸ್ಕೃತಿಕ ಕ್ಷೇತ್ರದ ಎಲ್ಲ ಪ್ರಕಾರಗಳ ಜನರೊಂದಿಗೂ ಅವರಿಗೆ ಸ್ನೇಹಾಚಾರ. ಅವರ ಯಾವುದೇ ಕಾರ್ಯಕ್ರಮಕ್ಕೆ  ಕರೆದರೆಂದರೆ ಯಾರೂ ಒಲ್ಲೆ ಎನ್ನುವವರಿಲ್ಲ. ಹಾಗಾಗಿ,  ಅಲ್ಲಿನ ವಿದ್ಯಾರ್ಥಿಗಳಿಗೆ ರಂಗಭೂಮಿಯ ಬಗ್ಗೆ ಸಮಗ್ರ ಅಭ್ಯಾಸ ಮಾಡಿಸುವುದಷ್ಟೇ ಅಲ್ಲ, ದೊಡ್ಡ ದೊಡ್ಡ ಸಾಹಿತಿಗಳು, ಕಲಾವಿದರ ಮಾತುಗಳನ್ನು ಕೇಳುವ ಸದವಕಾಶವನ್ನೂ ಒದಗಿಸಿಕೊಡುತ್ತಿದ್ದರು. ಅದು ವಿದ್ಯಾರ್ಥಿಗಳ ಕಲಿಕೆಯ ಮಟ್ಟವನ್ನು ಹೆಚ್ಚಿಸುತ್ತಿತ್ತು.

        (ಮುಂದೆಯೂ ಅದೇ ರೀತಿ ನಡೆಯುತ್ತದೆ ಎಂಬ ನಂಬಿಕೆ ನನ್ನಲ್ಲಿದೆ).

        ಎ. ಎಸ್‌. ಮೂರ್ತಿಯವರು ನಾಟಕಕಾರರಾಗಿಯೂ ನಿರ್ದೇಶಕರಾಗಿಯೂ ನಟರಾಗಿಯೂ, ವಿಮರ್ಶಕರಾಗಿಯೂ ಸಾಕಷ್ಟು ಕೆಲಸ ಮಾಡಿದವರು. ಅವರ ಜಂಬೂ ಸವಾರಿ ನಾಟಕ  ಕೆ. ಎಸ್‌.ಎಲ್‌. ಸ್ವಾಮಿಯವರ ಮೂಲಕ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಸಿನೆಮಾ ರೂಪ ಪಡೆದದ್ದು ಇದೀಗ ಇತಿಹಾಸ.
        ಎಲ್ಲರೊಂದಿಗೆ ಚೆನ್ನಾಗಿ ಬೆರೆಯುತ್ತಿದ್ದ ಅವರು ತಮಗೆ ತಾತ್ತಿ$Ìಕವಾಗಿ ಒಪ್ಪಿಗೆಯಾಗದಿರುವ ಸಂಗತಿಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದೂ ಇದೆ. "ಆಕಾಶವಾಣಿ ಈರಣ್ಣ'ನ ಸ್ವರ ಎಲ್ಲರ ಕಿವಿಯಲ್ಲೂ ಮತ್ತೆ ಮತ್ತೆ ಅನುರಣಿಸುತ್ತಿರುವಾಗಲೇ, ದೂರದರ್ಶನದ ವ್ಯವಸ್ಥೆಯಲ್ಲಿ ತಮಗೆ ಇಷ್ಟವಾಗದ ಕೆಲವು ಧೋರಣೆಗಳ ಬಗ್ಗೆ ಅಲ್ಲಿಂದಲ್ಲೇ ಪ್ರತಿಭಟಿಸಿದ್ದು, ಅವರ ಈ ಪ್ರತಿಭಟನೆಗೆ ಒಂದು ದೊಡ್ಡ ಸಮೂಹವೇ ನೈತಿಕ ಬೆಂಬಲ ನೀಡಿದ್ದು , ಈ ವಿಷಯದಲ್ಲಿ ಅವರು ಗೆದ್ದು ಬಂದದ್ದು  ಎಲ್ಲರಿಗೂ ತಿಳಿದ ಸಂಗತಿ.

        ರಂಗಭೂಮಿಯ ತಪಸ್ಸಿನಲ್ಲಿ ತೊಡಗಿರುವ ರೀತಿಯಲ್ಲಿ  ಕುಳಿತಿರುವ ಆ ಸರಳ ವ್ಯಕ್ತಿಯ ಚಿತ್ರ ಕಣ್ಣೆದುರು ಮತ್ತೆ ಮತ್ತೆ ಬರುತ್ತಿದೆ.  ಮಕ್ಕಳೊಂದಿಗೆ ಆಡುತ್ತಲೇ ನಾಟಕ ಮಾಡಿಸುತ್ತಿದ್ದ ಕ್ಷಣಗಳು ಮತ್ತೆ ಮತ್ತೆ ಕಾಣಿಸುತ್ತಿವೆ.  ಸಿನೆಮಾ, ಟಿ. ವಿ. ಗಳ ಪ್ರಸ್‌ಮೀಟ್‌ಗಳಲ್ಲಿ ಅವರು ಎಂದಿಗೂ ಸುಮ್ಮನಿದ್ದಿದ್ದಿಲ್ಲ. ಇನ್ನೇನು ಪ್ರಶ್ನೋತ್ತರ ಮುಗಿದೇ ಹೋಯಿತು, ಹೊಸ ವಿಷಯ ಏನೂ ಬರಲಿಲ್ಲವಲ್ಲ ಎಂದು ಬೇರೆಯವರೆಲ್ಲ ಪರದಾಡುತ್ತಿರುವಾಗ ಒಂದು ಹೊಸ ಪ್ರಶ್ನೆಯ ಮೂಲಕ ಅಲ್ಲಿಯವರೆಗೂ ಹೇಳದ ವಿಷಯಗಳನ್ನು ಹೊರತರುತ್ತಿದ್ದ ಈ ಉತ್ಸಾಹದ ಚಿಲುಮೆ ಎಲ್ಲಿ ಹೋಯಿತು ಎಂದು ಕಣ್ಣುಗಳು ಅಭಿಮಾನದಿಂದ ಹುಡುಕುತ್ತಿವೆ.

        ಅವರ ಆಪ್ತ ದನಿ, ವಿಶ್ವಾಸ, ಪ್ರೀತಿಯ ಮುಖಭಾವ ಅಚ್ಚಳಿಯದೆ ಮನಸ್ಸಿನಲ್ಲಿ ಉಳಿದಿರುವಾಗ ಅವರು ನಮ್ಮೊಡನಿಲ್ಲ ಎಂಬುದನ್ನು ನಂಬುವುದು ಕಷ್ಟವಾಗುತ್ತಿದೆ.

        (ಪೀಕೆಗೆ ಹೇಳಿದಂತೆ)

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picವಿಷು ಇಡೀ ದೇಶದ ಹಬ್ಬ. ಭಾರತೀಯ ಸಂಸ್ಕೃತಿ ಕೃಷಿಯೊಂದಿಗೆ ತಳುಕು ಹಾಕಿಕೊಂಡಿರುವುದರ ಸಂಕೇತವಾಗಿ ಈ ಹಬ್ಬ ಜನಮಾನಸದಲ್ಲಿ ಭದ್ರವಾಗಿ ನೆಲೆಯೂರಿದೆ...
      image
      • Copyright @ 2009 Udayavani.All rights reserved.
      • Designed & Hosted By 4cplus