ಫಾ| ಜೋಕಿಂ ಫೆರ್ನಾಂಡೀಸ್ | Dec 23, 2012
"ಬಲಿಪೀಠದ ಮುಂದೆ ದೇವರಿಗೆ ಕಾಣಿಕೆಯನ್ನು ಅರ್ಪಿಸುವಾಗ ನಿನ್ನ ಸೋದರನಿಗೂ ನಿನಗೂ ಏನಾದರೂ ಮನಸ್ತಾಪವಿರುವುದು ನೆನಪಿಗೆ ಬಂದರೆ, ನಿನ್ನ ಕಾಣಿಕೆಯನ್ನು ಬಲಿಪೀಠದ ಮುಂದೆ ಹಾಗೆಯೇ ಇಡು. ಮೊದಲು ಹೋಗಿ ಸೋದರನೊಂದಿಗೆ ಸಂಧಾನ ಮಾಡಿಕೊಂಡು ಪ್ರೀತಿ- ವಿಶ್ವಾಸದಿಂದ ಬಾಳಲು ಸಂಕಲ್ಪ ಮಾಡಿಕೊಳ್ಳು. ಅನಂತರ ಬಂದು ನಿನ್ನ ಕಾಣಿಕೆಯನ್ನು ಅರ್ಪಿಸು'
ಧಾರ್ಮಿಕತೆ ಎಂಬುದು ಬಾಹ್ಯವಾದ ಐಶ್ವರ್ಯವಲ್ಲ ಎಂಬುದಕ್ಕೆ ಸಾಕ್ಷಿಯಾಗಿ ನಮ್ಮ ದಾರ್ಶನಿಕರೇ ಇದ್ದಾರೆ. ಬುದ್ಧ ಅರಮನೆಯನ್ನು ತೊರೆದು ಮರದಡಿಯಲ್ಲಿ ಕುಳಿತ. ಮಹಮ್ಮದ್ ಪೈಗಂಬರ್ ಕೂಡ ಸಾಧಾರಣ ಕುಟುಂಬದಲ್ಲಿ ಹುಟ್ಟಿದವರು. ಶಂಕರಾಚಾರ್ಯರು ಸಂನ್ಯಾಸ ಜೀವನವನ್ನು ಸ್ವೀಕರಿಸಿದರು. ನಾರಾಯಣ ಗುರುಗಳು ಶೋಷಿತರ ಬದುಕಿಗೆ ದನಿಯಾದರು. ಭಗವಾನ್ ಏಸುಕ್ರಿಸ್ತರು ಕೂಡಾ ಬಡಕುಟುಂಬದಲ್ಲಿಯೇ ಜನಿಸಿದವರು. ಯಹೂದ್ಯರು ರೋಮನ್ನರ ಗುಲಾಮರಾಗಿದ್ದ ಕಾಲದಲ್ಲಿ ಇಂದಿಗೆ ಸುಮಾರು 2000 ವರ್ಷಗಳ ಹಿಂದೆ ಪಶ್ಚಿಮ ಏಷ್ಯಾದ ಪ್ಯಾಲಸ್ತೀನ್ ದೇಶದ ಬೆತ್ಲಹೇಮ್ ನಗರದಲ್ಲಿ ಅವರ ಜನನವಾಯಿತು. ಒಬ್ಬ ಬಡಗಿಯ ಮಗನಾಗಿದ್ದ ಅವರ ತಣ್ತೀಬೋಧೆಗೆ ಇಡೀ ಲೋಕವೇ ತಲೆಬಾಗಿತು. ಅವರು ಶೋಷಿತರ ಪಕ್ಷ ವಹಿಸಿದರು. ಹಾಗೆಂದು, ಅವರು ಶ್ರೀಮಂತಿಕೆಯ ವಿರುದ್ದವಾಗಿದ್ದವರಲ್ಲ. ತ್ಯಾಗದಿಂದ ಶ್ರೀಮಂತಿಕೆಯನ್ನು ಹೊಂದಬೇಕು, ಸುಖಲೋಲುಪತೆಗಾಗಿ ಶ್ರೀಮಂತಿಕೆಯಲ್ಲ ಎಂಬುದು ಅವರ ನಿಲುವಾಗಿತ್ತು. ಈಶಾವಾಸ್ಯ ಉಪನಿಷತ್ತಿನಲ್ಲಿರುವ ತೇನ ತ್ಯಕ್ತೇನಾ ಭುಂಜೀಥಾ... ಎಂಬ ವಾಕ್ಯದ ಅರ್ಥವೂ ಇದೇ ಅಲ್ಲವೆ?
ಅವರು ಕುರಿ ಕಾಯುವ ಸಮುದಾಯದವರಿಗೆ ಅರಿವಿನ ಬೆಳಕು ತೋರಿದರು. ಬುದ್ಧಿವಂತರೆಂದು, ಜ್ಞಾನಿಗಳೆಂದು ಭಾವಿಸಿದವರಿಗೆ ಆ ದೇವಮಾನವನ ಇರವಿನ ಅರಿವಾಗಲಿಲ್ಲ. ಅಹಂಕಾರ ಅಳಿಯದ ಹೊರತಾಗಿ ದೇವದರ್ಶನವಾಗುವುದಾದರೂ ಹೇಗೆ? ಶ್ರೀಕೃಷ್ಣನೂ ಸಾಮಾನ್ಯ ದನ ಕಾಯುವ ಜನಾಂಗದವರೊಂದಿಗೆ ನಿಕಟವಾಗಿದ್ದ ಎಂಬುದನ್ನು ನಾವು ಕೇಳಿದ್ದೇವೆ. ಗೋಕುಲದ ಜನಸಮುದಾಯ ಆ ಪರಮಾತ್ಮನನ್ನು ಬಹಳ ಹತ್ತಿರದಿಂದ ಕಂಡಿತ್ತಲ್ಲವೆ?
ಯುದ್ಧ ಮಾರ್ಗದ ಮೂಲಕ ಶತ್ರುಗಳ ದಮನ ಮಾಡುವುದರಲ್ಲಿ ಯೇಸು ಮಹಾತ್ಮನಿಗೆ ವಿಶ್ವಾಸವಿರಲಿಲ್ಲ. ದೇವರ ಸಾಮ್ರಾಜ್ಯದಲ್ಲಿ ವೈರಿಗಳನ್ನು ಕೂಡಾ ಪ್ರೀತಿಸಿ ಗೆಲ್ಲಬೇಕೆಂದು ಅವರ ಧ್ಯೇಯವಾಗಿತ್ತು. ಇದು ತುಂಬ ಸಹನೆಯ ಮಾರ್ಗ. ಫಲ ಪಡೆಯಲು ದೀರ್ಘ ಸಮಯ ಬೇಕಾಗುತ್ತದೆ. ಇದು ಕೆಲವರಿಗೆ ಇಷ್ಟವಾಗಲಿಲ್ಲ. ಯೇಸು ಮಹಾತ್ಮನಿಂದ ಪ್ರೇರಿತರಾದ ಮಂದಿಯ ಆಂದೋಲನದಿಂದ ವಿಚಲಿತರಾಗಿ ತಾವೆಲ್ಲಿ ಅಧಿಕಾರ ಕಳೆದುಕೊಳ್ಳುತ್ತೇವೆಯೋ ಎಂಬ ಆತಂಕ ಕೆಲವರಿಗೆ. ಅಂತೂ ಕೊನೆಗೆ ಈ ದಾರ್ಶನಿಕನನ್ನು ಶಿಲುಬೆಗೇರಿಸಿ ಅಂತ್ಯಗೊಳಿಸಿದರು.
ಆದರೆ, ಇದು ಮಹಾತ್ಮನ ಭೌತಿಕ ದೇಹದ ಅಂತ್ಯ ಮಾತ್ರವಾಯಿತು. ಅವರ ದರ್ಶನದ ಬೆಳಕು ಜಗತ್ತಿನೆಲ್ಲರಿಗೆ ನಿರಂತರ ಮಾರ್ಗದರ್ಶನವಾಯಿತು. ಅವರು ಸಜ್ಜನರ ಹೃದಯದಲ್ಲಿ ಸ್ಥಾಯಿಯಾದರು! ಕನ್ನಡದ ಕವಿ ಮಂಜೇಶ್ವರ ಗೋವಿಂದ ಪೈಗಳು ಶಿಲುಬೆಯಲ್ಲಿ ತೂಗುತ್ತಿರುವ ಏಸುಸ್ವಾಮಿಯನ್ನು "ಮರಣ ವೃಕ್ಷದಲ್ಲಿ ತೂಗುತಿರುವ ಅಮರ ಫಲ' ವೆಂದು ಬಣ್ಣಿಸಿರುವುದು ತುಂಬ ಅರ್ಥಪೂರ್ಣವಾಗಿದೆ.
ಯೇಸು ಸ್ವಾಮಿಯವರನ್ನು ಅನುಸರಿಸಿದವರಿಂದ ಒಂದು ಧಾರ್ಮಿಕ ಪಂಥವೇ ರೂಪುಗೊಂಡಿತು. ಅದರಲ್ಲಿ ಯಾವುದೇ ರೀತಿಯ ರಾಜಕೀಯ ಹಿತಾಸಕ್ತಿಗಳಿರಲಿಲ್ಲ. ಕೇವಲ ಆಧ್ಯಾತ್ಮಿಕ ಆಶಯ ಮಾತ್ರ. ಇದೇ ಕ್ರೈಸ್ತಮತವಾಗಿ ಜಗದಗಲ ಹರಡಿತು. ಕ್ರಿಸ್ತ ಎಂಬುದೊಂದು ನಾಮಪದ. ಅಭಿಷಿಕ್ತ ಎಂದು ಇದರ ಅರ್ಥ. ಯೇಸು ಕ್ರಿಸ್ತ ಎಂದರೆ ಮಾನವರ ಅಭ್ಯುದಯಕ್ಕಾಗಿ ದೇವರಿಂದ ಕಳುಹಿಸಲ್ಪಟ್ಟು ಭೂಲೋಕದ ಜನಮಾನಸದಲ್ಲಿ ಅಭಿಷಿಕ್ತನಾದವನು ಎಂದರ್ಥ.
ಭಕ್ತಿಯ ಮಾರ್ಗವನ್ನು ಪ್ರೀತಿಯ ಭಾವನೆಯಲ್ಲಿ ಕಂಡುಕೊಂಡ ದೊಡ್ಡ ದರ್ಶನ ಪಂಥ ಕ್ರೈಸ್ತ ಮತ. ಯೇಸು ಅವರೇ ಹೇಳುತ್ತಾರೆ, ""ನಾನು ನಿಮ್ಮನ್ನು ಪ್ರೀತಿಸುವಂತೆಯೇ ನೀವೂ ಒಬ್ಬರನ್ನೊಬ್ಬರು ಪ್ರೀತಿಸಬೇಕು' (ಯೊವಾನ್ನ 15:12). ಯಹೂದ್ಯರಿಗಿದ್ದ ಎರಡು ಮುಖ್ಯ ದೇವಾಜ್ಞೆಗಳೆಂದರೆ ""ಸರ್ವೇಶ್ವರನಾದ ದೇವರನ್ನು ಪೂರ್ಣ ಹೃದಯದಿಂದಲೂ, ಪೂರ್ಣ ಆತ್ಮದಿಂದಲೂ, ಪೂರ್ಣ ಮನಸ್ಸಿನಿಂದಲೂ ಪ್ರೀತಿಸು' ಮತ್ತು ""ನಿನ್ನನ್ನು ನೀನು ಪ್ರೀತಿಸುವಂತೆಯೇ ನಿನ್ನ ನೆರೆಯವನನ್ನು ಪ್ರೀತಿಸು'.
ಇಂದು ಮನೆಮನೆಗಳ ನಡುವೆ, ರಾಜ್ಯ ರಾಜ್ಯಗಳ ನಡುವೆ, ದೇಶ ದೇಶಗಳ ನಡುವೆ ಸಂಘರ್ಷಗಳೇರ್ಪಡುತ್ತಿವೆ. ""ನಾವು ಇನ್ನೊಬ್ಬರಲ್ಲಿ ದೇವರನ್ನು ಕಾಣುತ್ತೇವೆ ಮತ್ತು ಅವನನ್ನು ಪ್ರೀತಿಸುತ್ತೇವೆ ' ಎಂಬ ಧ್ಯೇಯ ವಾಕ್ಯಕ್ಕೆ ಬದ್ಧರಾಗಿರುತ್ತಿದ್ದರೆ ಈ ವೈಮನಸ್ಸು ಉಂಟಾಗಲು ಸಾಧ್ಯವೇ ಇರುತ್ತಿರಲಿಲ್ಲ. ಅದೇ ರೀತಿ ಸೇವಾತತ್ಪರತೆ ಕೂಡಾ ಕ್ರೈಸ್ತ ಧರ್ಮದ ಮುಖ್ಯ ಆಶಯವಾಗಿದೆ.
ಯೇಸು ಸ್ವಾಮಿಯ ಪ್ರಾರ್ಥನೆ ""ಪಿತನೇ, ಇವರೆಲ್ಲ ಒಂದಾಗಿರಲಿ. ನೀವು ನನ್ನಲ್ಲಿ, ನಾನು ನಿಮ್ಮಲ್ಲಿ ಇರುವಂತೆಯೇ ಇವರೂ ನಮ್ಮಲ್ಲಿ ಒಂದಾಗಲಿ' ಎಂಬುದು ಎಲ್ಲ ಕಾಲಕ್ಕೂ ಅನ್ವಯವಾಗುವಂಥಾದ್ದು. ಈ ಮೂಲಕವೇ ನಾವು ಸಾಮುದಾಯಿಕ ಚಿಂತನ ಮಾರ್ಗದ ಬಾಗಿಲನ್ನು ತೆರೆಯಬಹುದಾಗಿದೆ.
.
ಕ್ರೈಸ್ತ ಧರ್ಮದ ಪವಿತ್ರ ಗ್ರಂಥ ಬೈಬಲ್ ಮತ್ತು ಹಿಂದೂ ಧರ್ಮದ ಪವಿತ್ರ ಗ್ರಂಥ ಉಪನಿಷತ್‌ಗಳ ಪ್ರಧಾನ ಆಶಯ ಒಂದೇ ಆಗಿದೆ. ಉಪನಿಷತ್‌ಗಳಲ್ಲಿ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ ಎಂಬ ಶ್ಲೋಕವು "ಪೂರ್ಣ'ದ ಕುರಿತ ಅರಿವನ್ನು ನೀಡುತ್ತದೆ. ""ಸ್ವರ್ಗದಲ್ಲಿರುವ ನಿಮ್ಮ ತಂದೆ ಪರಿಪೂರ್ಣವಾಗಿರುವಂತೆ ನೀವು ಪರಿಪೂರ್ಣರಾಗಿರಿ' ಎಂದು ಯೇಸುಸ್ವಾಮಿ ಬೋಧಿಸುತ್ತಾರೆ. ದರ್ಶನ ಪಂಥಗಳು ಬೇರೆ ಬೇರೆ. ಆಶಯ ಒಂದೇ.
ಭಗವದ್ಗೀತೆಯಲ್ಲಿ ಅರ್ಜುನನು ""ಪುರುಷನು ಯಾವುದರಿಂದ ಪ್ರೇರೇಪಿಸಲ್ಪಟ್ಟು ಪಾಪಕರ್ಮವನ್ನು ಆಚರಿಸುತ್ತಾನೆ' ಎಂದು ಕೇಳುವಂತೆಯೇ ""ಎಲ್ಲರೂ ಪಾಪದ ಆಳ್ವಿಕೆಗೆ ಅಧೀನರು' ಎಂತ ಸಂತ ಪೌಲರು ರೋಮನ್ನರಿಗೆ ಬರೆದ ಪತ್ರದಲ್ಲಿ ಕೇಳುತ್ತಾರೆ. ಯಾಕೂಬನು ಬರೆದ ಪತ್ರದಲ್ಲಿ ""ಕಾದಾಟಗಳು ಉಂಟಾಗುವುದು ಹೇಗೆ? ಇಂದ್ರಿಯಗಳಲ್ಲಿ ಗೊಂದಲವೆಬ್ಬಿಸುವ ದುರಿಚ್ಛೆಗಳಿಂದಲ್ಲವೆ?' ಎಂದು ಅರ್ಥಪೂರ್ಣವಾಗಿ ಕೇಳುತ್ತಾನೆ.
ಜಗತ್ತಿನಲ್ಲಿ ಹಿಂಸೆ, ಸಂಘರ್ಷ, ಶೋಷಣೆಗಳು ಇರುವಂತೆಯೇ ಅವುಗಳನ್ನು ದಮನಿಸಲು ದೇವಶಕ್ತಿಗಳು ಹುಟ್ಟಿಬರುತ್ತವೆ. ಜನರಿಗೆ ಪ್ರೀತಿಯ ಮಾರ್ಗವನ್ನು ತೋರಿಸುತ್ತವೆ. ಭಗವಾನ್ ಏಸು ಕೂಡಾ ದೇವಮಾನವರಾಗಿ ಉದಿಸಿ ಬಂದು ನೋವಿನಲ್ಲಿರುವ ಆರ್ತನಾದಕ್ಕೆ ಕಿವಿಯಾದರು. ಮಾನವೀಯತೆಯನ್ನು ಬೆಂಬಲಿಸುವ ದೊಡ್ಡದೊಂದು ಸಮುದಾಯ ಈ ಜಗತ್ತಿನಲ್ಲಿ ನಿರಂತರವಾಗಿರುತ್ತದೆ. ಅದು ದೇವಮಾನವರ ತಣ್ತೀಗಳನ್ನು ಅನುಸರಿಸುತ್ತದೆ. ಪ್ರತೀ ಬಾರಿ ಕ್ರಿಸ್‌ಮಸ್ ಸಂದರ್ಭದಲ್ಲಿ ಅದೇ ವಾಕ್ಯವನ್ನು ಉಚ್ಚರಿಸುತ್ತೇವೆ ""ದ್ವೇಷ ಮರೆಯಲಿ, ಪ್ರೀತಿ ಮೆರೆಯಲಿ'
ಸರ್ವೇ ಜನಾಃ ಸುಖೀನೋ ಭವಂತು