Udayavani | Dec 23, 2012
ಮಕ್ಕಳಿಗೆ ಸಂಸ್ಕೃತಿಯ ಅರಿವುವನ್ನು ಮೂಡಿಸಿ - ಎಲ್. ವಿ. ಅಮೀನ್
ಮುಂಬಯಿ: ಹಿರಿಯ ಚೇತನಗಳ ವಿಚಾರ-ಮಂಥನದಲ್ಲಿ ತುಳುನಾಡ ಸಂಸ್ಕೃತಿಯನ್ನು ಒಟ್ಟುಗೂಡಿಸಿ, ತುಳುನಾಡ ಮಣ್ಣಿನ ಗುಣವನ್ನು ಮಹಾರಾಷ್ಟ್ರದಲ್ಲಿ ಮೇಳೈಸುತ್ತಿರುವ ಕಾಂದಿವಲಿ ಕನ್ನಡ ಸಂಘದ ಕಾರ್ಯ ಶ್ಲಾಘನೀಯ. ಇಂದಿನ ಯುವಪೀಳಿಗೆಗೆ ನಮ್ಮ ಧರ್ಮ, ತಾಯಿಯ ಮಮತೆ, ವಾತ್ಸಲ್ಯಭರಿತ ಪ್ರೀತಿಯನ್ನು ಅರಿತುಕೊಂಡು ಕಣ್ಣಿಗೆ ಕಾಣುವ ದೇವರೆಂದು ಭಾವಿಸಿ ಅವಳನ್ನು ಆರೈಕೆ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಯುವಪೀಳಿಗೆಯನ್ನು ದಾರಿ ತಪ್ಪಿಸುತ್ತಿರುವ ಪಾಶ್ಚಾತ್ಯ ಸಂಸ್ಕೃತಿಯ ಬಗ್ಗೆ ಅವರಿಗೆ ತಿಳಿಹೇಳಿ, ತುಳುನಾಡಿನ ಸಂಸ್ಕೃತಿಯತ್ತ ವಾಲುವಂತೆ ಪಾಲಕರು, ಸಂಘ-ಸಂಸ್ಥೆಗಳು ಮುಂದಾಗಬೇಕು ಎಂದು ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಎಲ್. ವಿ. ಅಮೀನ್ ಅವರು ಅಭಿಪ್ರಾಯಿಸಿದರು.
ಡಿ. 22 ರಂದು ಸಂಜೆ ಕಾಂದಿವಲಿಯ ಸಮತಾ ನಗರದ ಕ್ರೀಡಾ ಭವನದಲ್ಲಿ ನಡೆದ ಕಾಂದಿವಲಿ ಕನ್ನಡ ಸಂಘದ 18 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಅವರು, ಕಾಂದಿವಲಿ ಕನ್ನಡ ಸಂಘವು ಕಳೆದ 18 ವರ್ಷಗಳಿಂದ ಮಾಡುತ್ತಿರುವ ಕಾರ್ಯವನ್ನು ಕಂಡಾಗ ಸಂತೋಷವಾಗುತ್ತದೆ. ಪರಿಸರದ ತುಳು-ಕನ್ನಡಿಗರಲ್ಲಿ ಭಾಷಾಭಿಮಾನವನ್ನು ಬೆಳೆಸುವುದರ ಜೊತೆಗೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿ ಸ್ಪಂದಿಸುತ್ತಿದೆ ಎಂದು ನುಡಿದರು.
ಸಮನ್ವಯತೆ ಚಿಂತನೆಯ ಮೂಲಕ ಎಲ್ಲಾ ಕನ್ನಡ, ಜಾತ್ಯಾತೀತ ಸಂಸ್ಥೆಗಳು ಒಂದಾಗಿ ಇಂದು ತುಳು-ಕನ್ನಡಿಗ ಆರ್ಥಿಕವಾಗಿ ಹಿಂದುಳಿದವರಿಗೆ ಸಹಕರಿಸುತ್ತಿವೆ. ಅಲ್ಲಲ್ಲಿ ಸಂಘ-ಸಂಸ್ಥೆಗಳು ತಲೆಎತ್ತುವ ಬದಲು ನಗರದಲ್ಲಿ ಮುಖ್ಯ ಜಾತ್ಯಾತೀತ ಒಕ್ಕೂಟ ಕನ್ನಡ ಸಂಸ್ಥೆಯೊಂದು ಸ್ಥಾಪನೆಗೊಂಡು, ಉಳಿದ ಕನ್ನಡಪರ ಸಂಘ-ಸಂಸ್ಥೆಗಳು ಸಂಸ್ಥೆಯ ಸ್ಥಳೀಯ ಸಮಿತಿಗಳಾಗಿ ಕಾರ್ಯನಿರ್ವಹಿಸಿದಾಗ ಇನ್ನಷ್ಟು ಉತ್ತಮ ಕಾರ್ಯಗಳು ನಡೆಯಲು ಸಾಧ್ಯವಿದೆ ಎಂದು ಇನ್ನೋರ್ವ ಅತಿಥಿ ಸಾಯಿಕೇರ್ ಲಾಜಿಸ್ಟಿಕ್ಸ್‌ನ ಕಾರ್ಯಾಧ್ಯಕ್ಷ ಸುರೇಂದ್ರ ಎ. ಪೂಜಾರಿ ಅವರು ನುಡಿದರು.
ಮ್ಹಾಡಾದ ನಿರ್ದೇಶಕ ಭರತ್ ಪಿ. ಪಾರೀಕ್ ಅವರು ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ, ಹಲವು ಹಿರಿಯ ಹೊಟೇಲ್ ಉದ್ಯಮಿಗಳಿಂದ ಸಾಕಾರಗೊಂಡ ಈ ಸಂಸ್ಥೆಯ ಕಾರ್ಯಚಟುವಟಿಕೆ ಅಭಿನಂದನೀಯ. 35 ವರ್ಷಗಳಿಂದ ಪರಿಸರದಲ್ಲಿ ಕಾರ್ಯನಿರತವಾಗಿರುವ ಈ ಸಂಸ್ಥೆಯು ಕನ್ನಡಿಗರ ಅಭಿಮಾನದ ಸಂಸ್ಥೆಯಾಗಿ ಬೆಳೆಯಲಿ ಎಂದರು. ಕಾಂದಿವಲಿ ಪ್ರಜ್ಞಾ ಎಂಟರ್‌ಪ್ರೈಸಸ್‌ನ ಯಶವಂತ ಶೆಟ್ಟಿ ಮತ್ತು ಕಲೀನಾದ ಸಿಎ ಪ್ರಕಾಶ್ ಶೆಟ್ಟಿ ಅವರು ಗೌರವ ಅತಿಥಿಗಳಾಗಿ ಉಪಸ್ಥಿರಿದ್ದು ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಸಂಸ್ಥೆಯ ಹಿರಿಯ ಸಾಧಕ ಮಾಜಿ ಕಾರ್ಯದರ್ಶಿ ವಾಸು ಪುತ್ರನ್ ದಂಪತಿಯನ್ನು ಅತಿಥಿ-ಗಣ್ಯರು ಶಾಲು ಹೊದಿಸಿ, ಫಲಪುಷ್ಮ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿದರು.
ಸಮ್ಮಾನಕ್ಕೆ ಉತ್ತರಿಸಿದ ವಾಸು ಪುತ್ರನ್ ಅವರು, ನನ್ನ ಸೇವೆಗೆ ದೊರೆತ ಪ್ರತಿಫಲ ಈ ಸಮ್ಮಾನವಾಗಿದೆ. ಈ ಸಂಸ್ಥೆಯ ಪ್ರೇರಣೆಯ ಮೂಲಕ ಪ್ರಸ್ತುತ ಬೊರಿವಲಿಯಲ್ಲಿ ತುಳು ಸಂಘವನ್ನು ಸ್ಥಾಪಿಸಲಾಗಿದೆ. ಸಮಾಜ ಸೇವೆಯಲ್ಲಿ ಸಮಾನ ಮನಸ್ಕ ದೃಷ್ಟಿಯಿಂದ ಕೆಲಸ ಮಾಡಿದಾಗ ಮಾತ್ರ ಯಾವುದೇ ಕಾರ್ಯಗಳು ಸಫಲತೆಯನ್ನು ಕಾಣಲು ಸಾಧ್ಯ ಎಂದರು.
ಮಹಿಳಾ ವಿಭಾಗದ ಶೈಲಜಾ ಶೆಟ್ಟಿ ಅವರು ಪ್ರಾರ್ಥನೆಗೈದರು. ಸಂಘದ ಅಧ್ಯಕ್ಷ ಕೇಶವ ಟಿ. ಪೂಜಾರಿ ಅವರು ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಪೊಲ್ಯ ಜಯಪಾಲ ಶೆಟ್ಟಿ, ಜೆ. ಎಂ. ಕೋಟ್ಯಾನ್ ಅವರು ಅತಿಥಿಗಳನ್ನು ಪರಿಚಯಿಸಿದರು. ಸವಿತಾ ಜೆ. ಪೂಜಾರಿ ಅವರು ಸಮ್ಮಾನಿತರನ್ನು ಪರಿಚಯಿಸಿದರು.
ಗೌರವ ಕಾರ್ಯಾಧ್ಯಕ್ಷ ಶ್ಯಾಮರಾಜ ಟಿ. ಶೆಟ್ಟಿ, ಉಪಾಧ್ಯಕ್ಷ ಶ್ರೀಧರ ಶೆಟ್ಟಿ, ಜತೆ ಕೋಶಾಧಿಕಾರಿ ಗೋವಿಂದ ಪಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನೋದಾ ಡಿ. ಶೆಟ್ಟಿ, ಸಾಹಿಲ್ ಕುಮಾರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಣೇಶ್ ಎರ್ಮಾಳ್ ಮತ್ತು ಸುಕನ್ಯಾ ಭಟ್ ಅವರಿಂದ ರಸಮಂಜರಿ, ನೃತ್ಯ ಸಂಭ್ರಮ ನಡೆಯಿತು. ವೀರಕೇಸರಿ ಕಲಾವೃಂದದ ಗೌರವ ಕಾರ್ಯದರ್ಶಿ ರಮೇಶ್ ಶಿವಪುರ ಅವರ ನಿರ್ದೇಶನದಲ್ಲಿ ಸಂಘದ ಸದಸ್ಯರಿಂದ, ಮಕ್ಕಳಿಂದ, ಮನೋರಂಜನಾ ಕಾರ್ಯಕ್ರಮಗಳು ಜರಗಿತು. ರಘುನಾಥ ಎನ್. ಶೆಟ್ಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಯೋಗೇಶ್ ಹೆಜ್ಮಾಡಿ ಅವರು ವಂದಿಸಿದರು.