Wednesday, May 22, 2013
Last Updated: 8:37:10 PM IST
  • ನಾನೆಲ್ಲಿರುವೆ:
  • ಮುಖಪುಟ ರಾಜ್ಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮಕ್ಕಳ ಸಮ್ಮೇಳನ
    • ''''ಅಖೀಲ ಕರ್ನಾಟಕ ಮಕ್ಕಳ ಸಮ್ಮೇಳನ''ದಲ್ಲಿ ಡಾ.ಚಂದ್ರಶೇಖರ ಕಂಬಾರ.

      • Udayavani | Dec 23, 2012

        ಬೆಂಗಳೂರು: ಮಕ್ಕಳ ಮೇಲೆ ಇಂಗ್ಲೀಷ್‌ ಕಲಿಕೆಯನ್ನು ಹೇರುವ ಮೂಲಕ ಮಕ್ಕಳಲ್ಲಿ ಯಾಂತ್ರಿಕತೆ ಬೆಳೆಸಲಾಗುತ್ತಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಕಳವಳ ವ್ಯಕ್ತಪಡಿಸಿದ್ದಾರೆ.

        ನಗರದಲ್ಲಿ ಭಾನುವಾರದಿಂದ ಮೂರು ದಿನಗಳ ಕಾಲ ಕರ್ನಾಟಕ ಬಾಲವಿಕಾಸ ಅಕಾಡೆಮಿ ಹಾಗೂ ಅಖೀಲ ಕರ್ನಾಟಕ ಮಕ್ಕಳ ಕೂಟ ಜಂಟಿಯಾಗಿ ಆಯೋಜಿಸಿರುವ 'ಅಖೀಲ ಕರ್ನಾಟಕ ಮಕ್ಕಳ ಸಮ್ಮೇಳನ' ಉದ್ಘಾಟಿಸಿ ಅವರು ಮಾತನಾಡಿದರು.

        ಆಂಗ್ಲ ಮಾಧ್ಯಮ ಕಲಿತರೆ ಮಾತ್ರ ಮಕ್ಕಳಿಗೆ ಭವಿಷ್ಯವಿದೆ ಎಂದು ಭಾವಿಸಿರುವ ಪೋಷಕರು ಮಕ್ಕಳನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಸುಶಿಕ್ಷಿತ ಮಕ್ಕಳು ಎಂದರೆ ಇಂಗ್ಲೀಷ್‌ ಭಾಷೆ ಕಲಿತವರು ಎಂದು ಬಿಂಬಿಸಲಾಗುತ್ತಿದೆ. ಹುಟ್ಟಿದ ಮಣ್ಣಿನಲ್ಲೇ ತಮ್ಮ ಮಕ್ಕಳನ್ನು ಪರಕೀಯರಂತೆ ಬೆಳೆಸುತ್ತಿರುವ ಪೋಷಕರು, ಸೂಕ್ತ ಮಾರ್ಗದರ್ಶನ ನೀಡದೆ 'ರೋಬೋ' ತರಹದ ವ್ಯಕ್ತಿತ್ವ ರೂಪಿಸುತ್ತಿದ್ದಾರೆ ಎಂದರು.

        ಆಧುನಿಕತೆಯ ಭರಾಟೆಯಲ್ಲಿ ಇಂಗ್ಲೀಷ್‌ ಭಾಷೆ ಕಲಿಕೆ ಮಕ್ಕಳಲ್ಲಿ ಮಾಹಿತಿ ಹೆಚ್ಚಾಗುತ್ತಿದೆಯೇ ಹೊರತು, ಜ್ಞಾನ ಕುಂಠಿತವಾಗುತ್ತಿದೆ. ಅಲ್ಲದೇ, ಇಂಗ್ಲೀಷ್‌ ಹೇರಿಕೆಯಿಂದ ಮಕ್ಕಳು ಸಂಬಂಧಗಳಿಂದ ವಂಚಿತರಾಗುತ್ತಿರುವ ಅಪಾಯ ಎದುರಾಗಿದೆ ಎಂದರು.

        ಇತ್ತೀಚಿನ ದಿನಗಳಲ್ಲಿ ಪಠ್ಯೇತರ ಚಟುವಟಿಕೆಗಳು ಮಕ್ಕಳಲ್ಲಿ ಕಡಿಮೆಯಾಗುತ್ತಿದೆ. ಸೃಜನಶೀಲತೆಯನ್ನು ಹೆಚ್ಚಿಸುವ ದೃಷ್ಟಿಯಲ್ಲಿ ಪ್ರತಿ ಶನಿವಾರಗಳಂದು ಶಾಲೆಗಳಲ್ಲಿ ಕಥೆ ಹೇಳುವ ತರಗತಿ ಆರಂಭಿಸಬೇಕು. ಜಾನಪದ ಕಥೆ, ಚರ್ಚೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.

        ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಮಹೇಶ್‌ ಟೆಂಗಿನಕಾಯಿ ಮಾತನಾಡಿ, ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವ ನೇರವಾಗಿ ದೇಸಿ ಮಕ್ಕಳ ಮೇಲೆ ಬೀಳುತ್ತಿರುವುದು ಆಘಾತವುಂಟು ಮಾಡಿದೆ. ಮಕ್ಕಳ ಕನಸುಗಳನ್ನು ನನಸು ಮಾಡುವ ಹಾಗೂ ಸಂಸ್ಕೃತಿ ಬೆಳೆಸುವ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.

        ಪ್ರೋತ್ಸಾಹ ನೀಡಿ

        ಅಂಗವಿಕಲ ಮಕ್ಕಳಿಗೆ ಸರ್ಕಾರದ ಸೌಲಭ್ಯಗಳು ಸೂಕ್ತ ಸಮಯಕ್ಕೆ ಲಭ್ಯವಾಗುತ್ತಿಲ್ಲ. ಇದರಿಂದ ಅಂಗವಿಕಲ ಮಕ್ಕಳು ಹೆಚ್ಚು ಅವಕಾಶ ವಂಚಿತರಾಗುತ್ತಿದ್ದಾರೆ ಎಂದು ಸಮ್ಮೇಳನದ ಬಾಲಾಧ್ಯಕ್ಷ ಭರತ್‌ ಸ. ಜಗನ್ನಾಥ್‌ ವಿಷಾದಿಸಿದರು.

        ಮಕ್ಕಳಿಗೆ ಆಟವಾಡಲು ಮೈದಾನಗಳೇ ಇಲ್ಲದೇ ದೇಸಿ ಆಟಗಳನ್ನು ಮಕ್ಕಳು ಮರೆಯುವಂತಹ ಪರಿಸ್ಥಿತಿಗೆ ಬಂದಿದ್ದಾರೆ. ಹೀಗಾಗಿ, ಬಡಾವಣೆಗೊಂದು ಆಟದ ಮೈದಾನದ ಅವಶ್ಯಕತೆ ಇದೆ ಎಂದರು.

        ಕಾರ್ಯಕ್ರಮದಲ್ಲಿ ಅಖೀಲ ಕರ್ನಾಟಕ ಮಕ್ಕಳ ಕೂಟದ ಅಧ್ಯಕ್ಷ ಟಿ.ವಿ.ಮಾರುತಿ, ಸಮ್ಮೇಳನದ ಉಪಾಧ್ಯಕ್ಷೆ ವಿ.ಶಿವಲೀಲಾ, ಎ.ಆರ್‌.ಗೋಪಾಲ್‌, ಸಹ ಸಂಚಾಲಕ ಎಸ್‌.ವಿ.ವೆಂಕಟಾಚಲಂ ಉಪಸ್ಥಿತರಿದ್ದರು.

        ಸಮ್ಮೇಳನಕ್ಕೂ ಮುನ್ನ ಬೆಳಗ್ಗೆ 8.30ಕ್ಕೆ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಿಂದ ಸಮ್ಮೇಳನದ ಬಾಲಾಧ್ಯಕ್ಷ ಭರತ್‌ ಹಾಗೂ ಉಪಾಧ್ಯಕ್ಷೆ ಶಿವಲೀಲಾ ಅವರನ್ನು ಮೆರವಣಿಗೆ ಮೂಲಕ ಕಲ್ಯಾಣಮ್ಮ ಆಟದ ಮೈದಾನಕ್ಕೆ ಕರೆತರಲಾಯಿತು.

        ಚಿಣ್ಣರ ಕಲರವ...

        ಬೆಂಗಳೂರು: ನಗರದ ಕಲ್ಯಾಣಮ್ಮ ಮಕ್ಕಳ ಕೂಟದ ಆಟದ ಮೈದಾನದಲ್ಲಿ ಭಾನುವಾರ ಚಿಣ್ಣರದೇ ಕಲರವ...

        ರಾಜ್ಯದ ವಿವಿಧ ಶಾಲೆಗಳಿಂದ ಆಗಮಿಸಿದ್ದ ಸುಮಾರು 500 ಕ್ಕೂ ಹೆಚ್ಚು ಮಕ್ಕಳು ಅಲ್ಲಿ ಸಮಾವೇಶಗೊಂಡಿದ್ದರು. ಭಾನುವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಮಕ್ಕಳ ಸಮ್ಮೇಳನದಲ್ಲಿ ಮೊದಲ ದಿನ ಕಂಡು ಬಂದ ದೃಶ್ಯವಿದು.

        ಸಾಕಷ್ಟು ಮಂದಿ ಹೈಸ್ಕೂಲ್‌ ವಿದ್ಯಾರ್ಥಿಗಳು ಅಲ್ಲಿದ್ದರಾದರೂ ಸಮ್ಮೇಳನಕ್ಕೂ ತಮಗೂ ಸಂಬಂಧವೇ ಇಲ್ಲವೆಂಬಂತೆ ನಡೆದುಕೊಂಡಿದ್ದು ಕಂಡುಬಂತು.

        ಸಮ್ಮೇಳನ ಉದ್ಘಾಟಿಸಿದ ಡಾ.ಚಂದ್ರಶೇಖರ ಕಂಬಾರ ಅವರು ಮಾತನಾಡುತ್ತಿದ್ದರೆ, ಅಕ್ಕ ಪಕ್ಕದಲ್ಲಿ ಕುಳಿತಿದ್ದ ಸ್ನೇಹಿತರೊಂದಿಗೆ ಹರಟುತ್ತಾ, ಹೊರಗಿನಿಂದ ಐಸ್‌ಕ್ರೀಂ ತಂದು ತಿನ್ನುತ್ತಾ, ಆಟದ ಮೈದಾನದಲ್ಲಿದ್ದ ಜಾರುಬಂಡೆ ಹತ್ತಿ ಆಟವಾಡುತ್ತಾ ಈ ಮಕ್ಕಳು ತಮ್ಮದೇ ಲೋಕದಲ್ಲಿ ಮುಳುಗಿ ಹೋಗಿದ್ದರು.

        ಮೂರು ದಿನಗಳ ಕಾಲ ವಿಶೇಷಗೋಷ್ಠಿಗಳು, ಜಾನಪದ ಗೀತೆ, ಕವಿಗೋಷ್ಠಿ, ಚಿತ್ರಕಲೆ, ಹಳ್ಳಿ ಹಾಡು, ಏಕಪಾತ್ರಾಭಿನಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೇ, ಚಲನಚಿತ್ರ ನಟರು, ಸಾಹಿತಿಗಳು, ಕ್ರೀಡಾಪಟುಗಳೊಂದಿಗೆ ಸಂವಾದ ಕೂಡ ನಡೆಯಲಿದೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus