Friday, May 24, 2013
Last Updated: 8:23:12 PM IST
  • ನಾನೆಲ್ಲಿರುವೆ:
  • ಮುಖಪುಟ ಜಗತ್ತು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಜೆಸಿಂತಾ ಸಾವು: ಸ್ಕಾಟ್ಲಂಡ್‌ ಯಾರ್ಡ್‌ ತನಿಖೆ
      • Udayavani | Dec 23, 2012

        ಲಂಡನ್‌ : ಬ್ರಿಟನ್‌ನ ಯುವರಾಣಿ ಕೇಟ್‌ ಅವರ ಆರೋಗ್ಯ ವಿಚಾರಿಸುವ ನೆಪದಲ್ಲಿ ಆಸ್ಟ್ರೇಲಿಯಾದ ರೇಡಿಯೋ ಜಾಕಿಗಳೀರ್ವರು ಮಾಡಿದ ನಕಲಿ ಕರೆಯ ವಿವಾದದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ ಏಳನೇ ಕಿಂಗ್‌ ಎಡ್ವರ್ಡ್‌ ಆಸ್ಪತ್ರೆಯಲ್ಲಿ ನರ್ಸ್‌ ಆಗಿದ್ದ ಭಾರತೀಯ ಮೂಲದ ಜೆಸಿಂತಾ ಸಲ್ದಾನ್ಹ ಅವರ ದುರಂತ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಟೀಷ್‌ ಪೊಲೀಸರು ಇದೀಗ ತನಿಖೆ ಕೈಗೆತ್ತಿಕೊಂಡಿದ್ದಾರೆ. ಪ್ರಕರಣದಲ್ಲಿ ಆಸ್ಟ್ರೇಲಿಯನ್‌ ರೇಡಿಯೋ ಜಾಕಿಗಳು ಯಾವುದಾದರೂ ಕ್ರಿಮಿನಲ್‌ ಅಪರಾಧ ಎಸಗಿದ್ದಾರೆಯೇ ಎಂದು ಪರಿಶೀಲಿಸುವಂತೆ ಪೊಲೀಸರು, ಪ್ರಕರಣದ ದಾಖಲಾತಿಯನ್ನು ಕೌನ್‌ ಪ್ರಾಸಿಕ್ಯೂಷನ್‌ ಸರ್ವಿಸ್‌(ಸಿಪಿಎಸ್‌)ಗೆ ಹಸ್ತಾಂತರಿಸಿದ್ದಾರೆ.

        ಜೆಸಿಂತಾ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಸ್ಕಾಟ್‌ಲ್ಯಾಂಡ್‌ ಯಾರ್ಡ್‌ ಪೊಲೀಸರು, ಜೆಸಿಂತಾಳ ಆತ್ಮಹತ್ಯೆಗೆ ಕಾರಣವಾದ ಪರಿಸ್ಥಿತಿಯ ಬಗೆಗೆ ಇದೀಗ ಪರಿಶೀಲನೆಯಲ್ಲಿ ತೊಡಗಿದೆ. ಆಸ್ಟ್ರೇಲಿಯಾದ ರೇಡಿಯೋ ಜಾಕಿಗಳು ನಕಲಿ ಕರೆ ಮಾಡುವ ಮೂಲಕ ಯಾವುದಾದರೂ ಕ್ರಿಮಿನಲ್‌ ಅಪರಾಧವನ್ನು ಎಸಗಿದ್ದಾರೆಯೇ ಎಂದು ಪರಿಶೀಲಿಸುವಂತೆ ಡಿಸೆಂಬರ್‌ 19ರಂದು ಪೊಲೀಸರು ಸಿಪಿಎಸ್‌ನ್ನು ಕೋರಿದ್ದಾರೆ. ಆಸ್ಟ್ರೇಲಿಯಾದ 2 ಡೇ ಎಫ್. ಎಂ. ವಾಹಿನಿಯ ರೇಡಿಯೋ ಜಾಕಿಗಳಾದ ಮೆಲ್‌ ಗ್ರೆಗ್‌ ಮತ್ತು ಮೈಕೆಲ್‌ ಕ್ರಿಶ್ಚಿಯನ್‌ ಅವರು ಹುಸಿ ಕರೆ ಮಾಡುವ ಮೂಲಕ ದಾಖಲಾತಿ ಸಂರಕ್ಷಣಾ ಕಾಯಿದೆಯನ್ನು ಉಲ್ಲಂ ಸಿದ್ದಾರೆಯೇ ಎಂದು ಸಿಪಿಎಸ್‌ನ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ. ಕಾನೂನಿನ ಪ್ರಕಾರ ತಿಳಿದೋ ಅಥವಾ ತಿಳಿಯದೆಯೋ ವೈಯಕ್ತಿಕ ವಿವರಗಳನ್ನು ಅಥವಾ ಮಾಹಿತಿಗಳನ್ನು ಸಂಗ್ರಹಿಸುವುದು ಅಪರಾಧವಾಗಿದೆ. ಅಪರಾಧ ಸಾಬೀತಾದ್ದೇ ಆದಲ್ಲಿ ಜೈಲುವಾಸದ ಜತೆಯಲ್ಲಿ 5 ಸಾವಿರ ಪೌಂಡ್‌ಗಳನ್ನು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ವಿಧಿಸಬಹುದಾದರೆ ಕೌನ್‌ ಕೋರ್ಟ್‌, ಅನಿಯಮಿತ ದಂಡವನ್ನು ವಿಧಿಸುವ ಅಧಿಕಾರವನ್ನು ಹೊಂದಿದೆ.

        ಸಿಪಿಎಸ್‌ನ ವಿಚಾರಣೆಯ ಬಳಿಕ ರೇಡಿಯೋ ಜಾಕಿಗಳನ್ನು ಸಿಡ್ನಿಯಿಂದ ಲಂಡನ್‌ಗೆ ಗಡೀಪಾರು ಮಾಡುವ ಬಗೆಗೆ ನಿರ್ಧರಿಸಲಾಗುವುದು ಎಂದು ಸ್ಕಾಟ್‌ಲ್ಯಾಂಡ್‌ ಯಾರ್ಡ್‌ ಪೊಲೀಸ್‌ನ ವಕ್ತಾರರು ತಿಳಿಸಿದರು.

        2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಜೆಸಿಂತಾ

        ಲಂಡನ್‌
        : ಆಸ್ಟ್ರೇಲಿಯಾ ರೇಡಿಯೋ ಜಾಕಿಗಳ ಕೀಟಲೆ ಕರೆಗೆ ನೊಂದು ಆತ್ಮಹತ್ಯೆ ಮಾಡಿಕೊಂಡ ಜೆಸಿಂತಾ ಸಲ್ಡಾನಾ (46) ಅವರು ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ.

        ಜೆಸಿಂತಾ ಅವರು ಈ ಹಿಂದೆ ಮಾನಸಿಕ ಖನ್ನತೆಗೆ ಒಳಗಾದ ನಿದರ್ಶನಗಳಿಲ್ಲ ಎಂದು ಕುಟುಂಬ ಪ್ರತಿಪಾದಿಸಿದರೂ, ಕಳೆದ ಚಳಿಗಾಲದಲ್ಲಿ ಮಾನಸಿಕ ಖನ್ನತೆಗೆ ಒಳಗಾಗಿ ಜೆಸಿಂತಾ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

        ಕಳೆದ ವರ್ಷ ಡಿಸೆಂಬರ್‌ನಲ್ಲಿ ಹುಟ್ಟೂರು ಶಿರ್ವಾದಲ್ಲಿ ನಡೆದಿದ್ದ ಸಂಬಂಧಿಕರ ಮದುವೆಯಲ್ಲಿ ಜೆಸಿಂತಾ ಕುಟುಂಬ ಸಮೇತರಾಗಿ ಪಾಲ್ಗೊಂಡಿದ್ದರು. ನಂತರ ಕ್ರಿಸ್‌ಮಸ್‌ ಆಚರಣೆಯ ಸಂಭ್ರಮದಲ್ಲೂ ಭಾಗವಹಿಸಿದ್ದರು. ಇದಾದ ಬಳಿಕ ಡಿ. 30ರಂದು ಅಧಿಕ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆಯಿಂದ ವಾಪಸ್ಸಾದ ಬಳಿಕ ಜ. 8ರಂದು ಕಟ್ಟಡದಿಂದ ಜಿಗಿದು ಅವರು ಮತ್ತೂಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದರು. ಆಗ ತಲೆಗೆ ತೀವ್ರ ಪೆಟ್ಟು ಬಿದ್ದಿತ್ತು. ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜ್‌ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲದೆ, ಮಾನಸಿಕ ಚಿಕಿತ್ಸಾ ತಜ್ಞರಿಂದಲೂ ಚಿಕಿತ್ಸೆ ಕೊಡಿಸಲಾಗಿತ್ತು. ಮೂರು ದಿನಗಳ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಸುಮಾರು 9 ತಿಂಗಳ ಕಾಲ ಮಾನಸಿಕ ಖನ್ನತೆಗೆ ಚಿಕಿತ್ಸೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆ ಮತ್ತೂಮ್ಮೆ ಆತ್ಮಹತ್ಯೆ ಮಾಡಿಕೊಳ್ಳುವ ಅಪಾಯವಿದ್ದು, ಈ ಬಗ್ಗೆ ಎಚ್ಚರದಿಂದ ಇರುವಂತೆ ಪಾಲಕರು ಪತಿಯ ಮನೆಯವರಿಗೆ ಸಲಹೆ ನೀಡಿದ್ದರು ಎಂದು ಲಂಡನ್‌ ಮೂಲದ ಪತ್ರಿಕೆಯೊಂದು ವರದಿ ಮಾಡಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus