Tuesday, May 21, 2013
Last Updated: 11:43:21 PM IST
  • ನಾನೆಲ್ಲಿರುವೆ:
  • ಮುಖಪುಟ ಜಗತ್ತು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ದಿಲ್ಲಿ ಅತ್ಯಾಚಾರ ಪ್ರಕರಣ : ಅಮೆರಿಕದಲ್ಲೂ ಆತಂಕ
      • Udayavani | Dec 23, 2012

        ವಾಷಿಂಗ್ಟನ್‌ : ಭಾರತದ ರಾಜಧಾನಿ ದಿಲ್ಲಿಯಲ್ಲಿ ಕಳೆದ ವಾರ ರಾತ್ರಿ ಚಲಿಸುತ್ತಿರುವ ಬಸ್‌ನಲ್ಲಿ ಅರೆ ವೈದ್ಯಕೀಯ ವಿದ್ಯಾರ್ಥಿನಿಯೋರ್ವಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕದ ಮಾಧ್ಯಮಗಳೂ ಆತಂಕ ವ್ಯಕ್ತಪಡಿಸಿವೆ. ಭಾರತದ ದುರ್ಬಲ ಕಾನೂನು ಮತ್ತು ಸುವ್ಯವಸ್ಥೆ ಹಾಗೂ ನಿರ್ಜೀವ ಅಪರಾಧ ಕಾನೂನು ವ್ಯವಸ್ಥೆಯಿಂದಾಗಿಯೇ ಇಂತಹ ಘಟನೆಗಳು ಪದೇಪದೇ ಮರುಕಳಿಸುತ್ತಿವೆ ಎಂದು ದೂಷಿಸಿವೆ.

        ಅಮೆರಿಕ ಎದುರಿಸುತ್ತಿರುವ ಆರ್ಥಿಕ ಸಂಕಷ್ಟ , ಕನೆಕ್ಟಿಕಟ್‌ ಶಾಲೆಯಲ್ಲಿ ನಡೆದ ಗುಂಡಿನ ದಾಳಿ ಮತ್ತಿತರ ವಿಚಾರಗಳ ಬಗೆಗೆ ದೇಶದ ಮಾಧ್ಯಮಗಳು ಹೆಚ್ಚಿನ ಒತ್ತು ನೀಡಿದ್ದವು. ಈ ಮಧ್ಯೆ ದಿಲ್ಲಿಯಲ್ಲಿ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಇದನ್ನು ವಿರೋಧಿಸಿ ದಿಲ್ಲಿಯಲ್ಲಿ ನಡೆಯುತ್ತಿರುವ ಭಾರೀ ಪ್ರತಿಭಟನೆಗಳತ್ತ ಅಮೆರಿಕದ ಮಾಧ್ಯಮಗಳು ದೃಷ್ಟಿ ಹರಿಸಿದ್ದು, ಪೂರ್ಣ ಘಟನೆಯ ಬಗೆಗೆ ಆತಂಕ ವ್ಯಕ್ತಪಡಿಸಿವೆ.

        ಭಾರತದಲ್ಲಿ ಅತ್ಯಾಚಾರವನ್ನು ವಿರೋಧಿಸಿ ಅಭೂತಪೂರ್ವ ಪ್ರತಿಭಟನೆಗಳು ನಡೆಯುತ್ತಿವೆ. ಯುವತಿಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿ, ಯುವ ಸಮುದಾಯ ಭಾರೀ ಪ್ರತಿಭಟನೆಯಲ್ಲಿ ತೊಡಗಿಕೊಂಡಿದೆ. ದೇಶದ ರಸ್ತೆ, ಕೆಲಸದ ತಾಣ, ಸಾರ್ವಜನಿಕ ಸಾರಿಗೆಗಳಲ್ಲಿ ಮಹಿಳೆಯರು ಹೆಚ್ಚಿನ ಸುರಕ್ಷತೆಯನ್ನು ಬಯಸುತ್ತಿದ್ದಾರೆ ಎಂದು ನ್ಯಾಷನಲ್‌ ಪಬ್ಲಿಕ್‌ ರೇಡಿಯೋ ವರದಿ ಮಾಡಿದೆ.

        ಭಾರತದಲ್ಲಿ ಜನತೆಯ ಆಕ್ರೋಶ ಕಟ್ಟೆಯೊಡೆದಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಜನರು ಬೀದಿಗಿಳಿದು ಅಮಾನುಷವಾಗಿ ಅತ್ಯಾಚಾರಕ್ಕೊಳಗಾದ ಯುವತಿಗೆ ನ್ಯಾಯ ಒದಗಿಸಿಕೊಡಬೇಕು ಹಾಗೂ ಪೊಲೀಸ್‌ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಸರಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ನ್ಯೂಯಾರ್ಕ್‌ ಟೈಮ್ಸ್‌ ತನ್ನ ವರದಿಯಲ್ಲಿ ಹೇಳಿದೆ.

        ಭಾರತದಲ್ಲಿ ಮಹಿಳೆಯರು ಹಿಂದಿನಿಂದಲೂ ಮನೆಯ ಒಳಗಿನ ಕರ್ತವ್ಯಗಳಲ್ಲಿಯೇ ಬಂಧಿಗಳಾಗಿದ್ದರು. ಆದರೆ ಇದೀಗ ಮಹಿಳೆಯರು ಶಿಕ್ಷಿತರಾಗಿ ಆರ್ಥಿಕವಾಗಿ ಮುನ್ನಡೆಯುತ್ತಿದ್ದಾರೆ. ಇದರಿಂದಾಗಿ ಪುರುಷ ಪ್ರಧಾನ ಸಮಾಜ, ಈ ಬದಲಾವಣೆಗೆ ಹೊಂದಾಣಿಕೆಯಾಗುವಲ್ಲಿ ಎಡವುತ್ತಿದ್ದು, ಇದು ಸಮಸ್ಯೆಗೆ ಮೂಲ ಕಾರಣ ಎಂದು ಪತ್ರಿಕೆ ಅಭಿಪ್ರಾಯಿಸಿದೆ.

        ದೇಶದ ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯು ಸಂಪೂರ್ಣ ನಿರ್ಜೀವಾವಸ್ಥೆಯಲ್ಲಿದ್ದು, ಭ್ರಷ್ಟಾಚಾರ ಹಾಗೂ ರಾಜಕೀಯ ಹಸ್ತಕ್ಷೇಪಗಳಿಂದಾಗಿ ಈ ಕಾನೂನುಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ವರದಿಯಲ್ಲಿ ಹೇಳಿದೆ.

        ಸಿಎನ್‌ಎನ್‌ ತನ್ನ ವರದಿಯಲ್ಲಿ ಭಾರತದಲ್ಲಿ ಕಳೆದ 40 ವರ್ಷಗಳಲ್ಲಿ ಅತ್ಯಾಚಾರ ಪ್ರಕರಣಗಳು 875 ಶೇಕಡಾದಷ್ಟು ಏರಿಕೆಯಾಗಿದ್ದು, 1971ರಲ್ಲಿ 2,487 ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ 2011ರಲ್ಲಿ 24,206 ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದೆ.

        ಲಾಸ್‌ ಏಂಜಲೀಸ್‌ ಟೈಮ್ಸ್‌ ದಿಲ್ಲಿಯ ಘಟನಾವಳಿಗಳ ಬಗೆಗೆ ಸಮಗ್ರ ವರದಿಯನ್ನು ಪ್ರಕಟಿಸಿದ್ದು, ಕಳೆದ ರವಿವಾರ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಆ ನಂತರ ರಾಜಧಾನಿ ದಿಲ್ಲಿ ಸೇರಿದಂತೆ ಭಾರತದ ಇತರೆಡೆಗಳಲ್ಲಿ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಗಳ ಮೇಲೆ ಪತ್ರಿಕೆ ತನ್ನ ವರದಿಯಲ್ಲಿ ಬೆಳಕು ಚೆಲ್ಲಿದೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      image
      • Copyright @ 2009 Udayavani.All rights reserved.
      • Designed & Hosted By 4cplus