Saturday, May 25, 2013
Last Updated: 1:06:49 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ರಣಜಿಯಲ್ಲಿ ಹೊಸ ದಾಖಲೆ ನಿರ್ಮಿಸಿ ಹರಿಯಾಣ ಜೋಡಿ
      • ವಿಶ್ವನಾಥ ಕೋಟಿ | Dec 23, 2012

        ಕರ್ನಾಟಕಕ್ಕೆ ಸಂಕಟ ತಂದಿಟ್ಟ ಮಿಶ್ರಾ-ಯಾದವ್‌ ಜೊತೆಯಾಟ

        ಭಲೇ ಜೋಡಿ ಬೇರ್ಪಡಿಸಲು 10 ಬೌಲರ್‌ಗಳ ಬಳಕೆ

        ಹುಬ್ಬಳ್ಳಿ:
        ರಾಜನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಕರ್ನಾಟಕ-ಹರಿಯಾಣ ನಡುವೆ ನಡೆಯುತ್ತಿರುವ ರಣಜಿ ಪಂದ್ಯದ ದ್ವಿತೀಯ ದಿನದಾಟ ದಾಖಲೆಗೆ, ಅಮೋಘ ಸಾಧನೆಗೆ ಸಾಕ್ಷಿಯಾಯಿತು. ರಣಜಿ ಸೆಣಸಿನಲ್ಲಿ ಅಮಿತ್‌ ಮಿಶ್ರಾ ಹಾಗೂ ಜಯಂತ್‌ ಯಾದವ್‌ ಗಳಿಸಿದ ಚೊಚ್ಚಲ ದ್ವಿಶತಕ ಸಾಧನೆ ಬೋನಸ್‌ ಅಂಕದೊಂದಿಗೆ ಪಂದ್ಯ ಗೆದ್ದುಕೊಂಡು 8ರ ಘಟ್ಟಕ್ಕೇರಬೇಕೆಂಬ ಕರ್ನಾಟಕದ ಅಳಿದುಳಿದ ಆಸೆಗೆ ನೀರು ಹೊಯ್ದಿತು.

        ವಿಕೆಟ್‌ ಕೀಪರ್‌ ಹೊರತುಪಡಿಸಿ ಕರ್ನಾಟಕದ ಎಲ್ಲ ಆಟಗಾರರು ಬೌಲಿಂಗ್‌ ಮಾಡಿದರೂ ಹರಿಯಾಣದ ಜಯಂತ್‌-ಅಮಿತ್‌ ಜೋಡಿ ದಾಖಲೆ ಜೊತೆಯಾಟದ ಬ್ಯಾಟಿಂಗ್‌ ಮಾಡಿದರು ಎಂಬುದು ದ್ವಿತೀಯ ದಿನದಾಟದ ಒಂದು ವಾಕ್ಯದ ಸಾರಾಂಶ. ಹರಿಯಾಣದ ನಾಯಕ ಅಮಿತ್‌ ಹಾಗೂ ಜಯಂತ್‌ ಅವರು 8ನೇ ವಿಕೆಟ್‌ ಜೊತೆಯಾಟದಲ್ಲಿ 392 ರನ್‌ ಸೇರಿಸಿ ಹೊಸ ರಣಜಿ ದಾಖಲೆ ಬರೆದರು. ಈ ಜೊತೆಯಾಟದ ನೆರವಿನಿಂದ ಹರಿಯಾಣಾ ದ್ವಿತೀಯ ದಿನದಾಟದಂತ್ಯಕ್ಕೆ 9 ವಿಕೆಟ್‌ ನಷ್ಟಕ್ಕೆ 587 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿ ಡಿಕ್ಲೇರ್‌ ಘೋಷಿಸಿದ ನಾಯಕ ಮಿಶ್ರಾ, ಪಂದ್ಯ ಡ್ರಾದಲ್ಲಿ ಅಂತ್ಯವಾಗುವ ಮುನ್ಸೂಚನೆ ನೀಡಿದರು.

        ಮೊದಲ ದಿನದ ಚಹಾ ವಿರಾಮದಿಂದ ದ್ವಿತೀಯ ದಿನದ ಚಹಾ ವಿರಾಮದ ವರೆಗೂ ಕ್ರೀಸ್‌ಗೆ ಅಂಟಿಕೊಂಡ ಬ್ಯಾಟ್ಸ್‌ಮನ್‌ ಜೋಡಿ 8ನೇ ವಿಕೆಟ್‌ಗೆ ದಾಖಲೆ ಮೊತ್ತ ಪೇರಿಸಿತು. ಉಭಯ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್‌ ಮಾಡಿಯೇ ಕರ್ನಾಟಕದ ಬೌಲರ್‌ಗಳು ಸುಸ್ತಾದರೆ, ಫೀಲ್ಡರ್‌ಗಳು ಮೈದಾನದ ತುಂಬ ಓಡಾಡಿ ದಣಿದರು.

        ಭಲೇ ಜೋಡಿಯನ್ನು ಬೇರ್ಪಡಿಸುವ ಸುವರ್ಣಾವಕಾಶವನ್ನು ಕರ್ನಾಟಕ ಹಾಳು ಮಾಡಿಕೊಂಡಿತು. 147ನೇ ಓವರ್‌ನಲ್ಲಿ, ಅಮಿತ್‌ ವರ್ಮಾ ಬೌಲಿಂಗ್‌ನಲ್ಲಿ ಯಾದವ್‌ ವೈಯಕ್ತಿಕ 169 ರನ್‌ ಸಂಪಾದಿಸಿದ ಸಂದರ್ಭದಲ್ಲಿ ಎಚ್‌.ಎಸ್‌. ಶರತ್‌ ಸುಲಭದ ಕ್ಯಾಚನ್ನು ಕೈಚೆಲ್ಲಿದರು. ಜೀವದಾನದ ಲಾಭ ಪಡೆದ ಜಯಂತ್‌ ಯಾದವ್‌ 367 ಎಸೆತಗಳಲ್ಲಿ 26 ಬೌಂಡರಿಗಳನ್ನೊಳಗೊಂಡ 211 ರನ್‌ ಗಳಿಸಿ ರೋನಿತ್‌ ಮೋರೆಗೆ ವಿಕೆಟ್‌ ಒಪ್ಪಿಸಿ ನಡೆದರು.

        ಹುಬ್ಬಳ್ಳಿಯಲ್ಲಿ ಮಿಶ್ರಾಗೆ ಪೇಡಾ: ಮಧ್ಯಮ ಕ್ರಮಾಂಕ ಕುಸಿದು ಹೋದ ಸಂದರ್ಭದಲ್ಲಿ ಕ್ರೀಸ್‌ಗೆ ಬಂದು ಜವಾಬ್ದಾರಿ ಹೊತ್ತುಕೊಂಡು ಅತ್ಯಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ‌ ಪ್ರವಾಸಿ ತಂಡದ ನಾಯಕ ಅಮಿತ್‌ ಮಿಶ್ರಾಗೆ ಪಾಕಿಸ್ತಾನ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಲಭಿಸಿದೆ ಎಂದು ಘೋಷಿಸಿದ್ದು ಮಿಶ್ರಾ ಹಾಗೂ ತಂಡದ ಸದಸ್ಯರ ಖುಷಿ ಇಮ್ಮಡಿಸಿತು. ಮಿಶ್ರಾ 560 ನಿಮಿಷಗಳ ಕಾಲ ಕ್ರೀಸ್‌ನಲ್ಲಿದ್ದು 374 ಎಸೆತಗಳಲ್ಲಿ 21 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಹಿತ ಅಜೇಯ 202 ರನ್‌ ಪೇರಿಸಿದರು.

        ಮಿಶ್ರಾ ಹಾಗೂ ಯಾದವ್‌ ಬೆಳಗ್ಗೆಯಿಂದ ಚಹಾ ವಿರಾಮದವರೆಗೂ ಒಂದೇ ಗತಿಯಲ್ಲಿ ಆಡಿದರು. ಪೆವಿಲಿಯನ್‌ ಅಥವಾ ಸಿಟಿ ಬದಿಯಿಂದ ಯಾರೇ ಬೌಲಿಂಗ್‌ ಮಾಡಲಿ ರನ್‌ ಹೊಡೆಯುವುದಷ್ಟೇ ಕಾಯಕ ಎಂಬ ರೀತಿಯಲ್ಲಿ ಎಲ್ಲ ಬೌಲರ್‌ಗಳನ್ನು ದಂಡಿಸಿದರು. ಅನುಭವಿ ಬ್ಯಾಟ್ಸ್‌ಮನ್‌ಗಳಂತೆ ಬ್ಯಾಟ್‌ ಬೀಸಿದರು. 'ಲಗೇ ರಹೋ ಮಿಶ್ರಾಜಿ, ಟಿಕೇ ರಹೋ ಜಯಂತ್‌' ಎಂಬ ತಂಡದ ಸದಸ್ಯರು ಹಾಗೂ ಮ್ಯಾನೇಜರ್‌ ಕೂಗಿಗೆ ಸ್ಪಂದಿಸಿದ ಹರಿಯಾಣ ಬ್ಯಾಟ್ಸ್‌ಮನ್‌ಗಳು ಪಂದ್ಯ ಮುಕ್ತಾಯದ ಒಂದು ಗಂಟೆವರೆಗೂ ಕ್ರೀಸ್‌ಗೆ ಕಚ್ಚಿ ನಿಂತು ಹೋರಾಡಿದರು.

        94ನೇ ಓವರ್‌ನಲ್ಲಿ 300 ರನ್‌ ದಾಖಲಿಸಿದ ಪ್ರವಾಸಿ ಹರಿಯಾಣ, ಭೋಜನ ವಿರಾಮ ಸಂದರ್ಭದಲ್ಲಿ 7 ವಿಕೆಟ್‌ ನಷ್ಟಕ್ಕೆ 412 ರನ್‌ ಗಳಿಸಿತು. 121ನೇ ಓವರ್‌ಗೆ 400 ರನ್‌, 134ನೇ ಓವರ್‌ನಲ್ಲಿ 450 ರನ್‌ ಪೇರಿಸಿತು. 150ನೇ ಓವರ್‌ಗೆ 500ರ ಗಡಿ ತಲುಪಿ ಚಹಾ ವಿರಾಮದ ವೇಳೆಗೆ 157 ಓವರ್‌ಗಳಲ್ಲಿ 529 ರನ್‌ ದಾಖಲಿಸಿತು.

        ಎಲ್ಲರೂ ಬೌಲರ್‌ಗಳೇ!: ಮಿಶ್ರಾ-ಯಾದವ್‌ ಜೋಡಿಯನ್ನು ಮುರಿಯಲು ಕರ್ನಾಟಕ ಮಾಡಿದ ಸಾಹಸ ಅಷ್ಟಿಷ್ಟಲ್ಲ. ಆಗಾಗ ಸ್ಪೆಲ್‌ ಬದಲಿಸಲಾಯಿತು. ವಿಕೆಟ್‌ ಕೀಪರ್‌ ಗೌತಮ್‌ ಹೊರತುಪಡಿಸಿ ಎಲ್ಲರಿಗೂ ಬೌಲಿಂಗ್‌ ನೀಡಿದರೂ ಚಹಾ ವಿರಾಮದವರೆಗೆ ಪ್ರಯೋಜನವಾಗಲಿಲ್ಲ. ನಾಯಕ ಬಿನ್ನಿಯ ಯಾವ ಪ್ರಯತ್ನಗಳೂ ಫ‌ಲಿಸಲಿಲ್ಲ. ದಿನದಾಟದ ಅಂತ್ಯ ಸಂದರ್ಭದಲ್ಲಿ ರೋನಿತ್‌ ಮೋರೆ ಯಾದವ್‌ರ ವಿಕೆಟ್‌ ಪಡೆದು ಜೋಡಿ ಮುರಿದರು. ದಿನದಾಟದಂತ್ಯಕ್ಕೆ ಕರ್ನಾಟಕ 1 ಓವರ್‌ಗೆ ವಿಕೆಟ್‌ ನಷ್ಟವಿಲ್ಲದೇ 11 ರನ್‌ ದಾಖಲಿಸಿತ್ತು. 3ನೇ ದಿನ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ನೆಲೆ ನಿಂತು ಅಬ್ಬರಿಸಿ ಬೊಬ್ಬಿರಿದು ದೊಡ್ಡ ಮೊತ್ತ ಪೇರಿಸುವುದು ಅವಶ್ಯಕ.

        ಜೊತೆಯಾಟ ದಾಖಲೆ: ಅಮಿತ್‌ ಮಿಶ್ರಾ ಹಾಗೂ ಜಯಂತ್‌ ಯಾದವ್‌ 8ನೇ ವಿಕೆಟ್‌ ಜೊತೆಯಾಟದಲ್ಲಿ 392 ರನ್‌ ದಾಖಲಿಸಿದ್ದು ದಾಖಲೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 8ನೇ ವಿಕೆಟ್‌ ಜೋಡಿ ಗಳಿಸಿದ ದೊಡ್ಡ ಮೊತ್ತ ಇದಾಗಿದೆ. 2003-04ರಲ್ಲಿ ಮೊಹಾಲಿಯಲ್ಲಿ ನಡೆದ ತಮಿಳುನಾಡು-ಪಂಜಾಬ್‌ ರಣಜಿ ಪಂದ್ಯದಲ್ಲಿ ಎಸ್‌. ಶ್ರೀರಾಮ್‌ ಹಾಗೂ ಎಂ.ಆರ್‌. ಶ್ರೀನಿವಾಸನ್‌ ಜೋಡಿ 8ನೇ ವಿಕೆಟ್‌ಗೆ 268 ರನ್‌ ದಾಖಲಿಸಿದ್ದು ಈ ವರೆಗಿನ ದಾಖಲೆಯಾಗಿತ್ತು.

        ಸ್ಕೋರ್‌ ವಿವರ

        ಹರಿಯಾಣ ಮೊದಲ ಇನಿಂಗ್ಸ್‌: 176.4 ಓವರ್‌ಗಳಲ್ಲಿ 9ಕ್ಕೆ 587 ಡಿಕ್ಲೇರ್‌ (ಶನಿವಾರ 7ಕ್ಕೆ 293) ಅಮಿತ್‌ ಮಿಶ್ರಾ ಅಜೇಯ 202, ಜಯಂತ್‌ ಯಾದವ್‌ ಎಲ್‌ಬಿಡಬ್ಯುÉ ರೋನಿತ್‌ ಮೋರೆ 211, ಹರ್ಷಲ್‌ ಪಟೇಲ್‌ ಅಜೇಯ 0.

        ವಿಕೆಟ್‌ ಪತನ: 8-560, 9-583

        ಬೌಲಿಂಗ್‌: ಎಚ್‌.ಎಸ್‌. ಶರತ್‌ 30-6-78-2, ಎಸ್‌.ಎಲ್‌. ಅಕ್ಷಯ್‌ 28-2-100-3, ರೋನಿತ್‌ ಮೋರೆ 27.4-1-106-2, ಸ್ಟುವರ್ಟ್‌ ಬಿನ್ನಿ 24-6-78-0, ಕೆ.ಪಿ. ಅಪ್ಪಣ್ಣ 41-3-130-1, ಅಮಿತ್‌ ವರ್ಮಾ 16-3-55-1, ಮನೀಶ್‌ ಪಾಂಡೆ 2-1-2-0, ಕೆ.ಎಲ್‌. ರಾಹುಲ್‌ 5-0-11-0, ಕುನಾಲ್‌ ಕಪೂರ್‌ 1-0-2-0, ರಾಬಿನ್‌ ಉತ್ತಪ್ಪ 2-0-9-0.

        ಕರ್ನಾಟಕ ಮೊದಲ ಇನಿಂಗ್ಸ್‌: 1 ಓವರ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೇ 11, ಕೆ.ಎಲ್‌. ರಾಹುಲ್‌ ಅಜೇಯ 7, ರಾಬಿನ್‌ ಉತ್ತಪ್ಪ ಅಜೇಯ 4.

        ಬೌಲಿಂಗ್‌: ಮೋಹಿತ್‌ ಶರ್ಮಾ 1-0-11-0.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus