Sunday, May 19, 2013
Last Updated: 5:31:18 AM IST
  • ನಾನೆಲ್ಲಿರುವೆ:
  • ಮುಖಪುಟ ಪ್ರಾದೇಶಿಕ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಜಾತ್ರೆಯ ಅನಂತರ ತ್ಯಾಜ್ಯಗಳ ಯಾತ್ರೆ
    • ಷಷ್ಠಿ ಜಾತ್ರೆಯ ಅನಂತರ ಕಾಣಿಸಿಕೊಂಡ ತ್ಯಾಜ್ಯಗಳ ರಾಶಿ

      • ಆರಭಿ | Dec 23, 2012

        ಸುಬ್ರಹ್ಮಣ್ಯ: ಸಂಭ್ರಮದ ಜಾತ್ರೆ ಮುಗಿದ ಬಳಿಕವಷ್ಟೇ ತಿಳಿಯುವುದು ಜಾತ್ರೆಯ ಮಜಲು ತ್ಯಾಜ್ಯಗಳ ಸಾಮ್ರಾಜ್ಯವೆಂದು. ಜಾತ್ರೆ ಸುಗಮ ಹಾಗೂ ವ್ಯವಸ್ಥಿತವಾಗಿ ಜರಗಲು ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆಗಳು ಆಯಾ ಊರಿನ ದೇವಳದ ಆಡಳಿತ ಮಂಡಳಿಗೆ ಸಹಕಾರ ನೀಡುತ್ತವೆ. ಜಾತ್ರೆ ಮುಗಿದ ಅನಂತರ ಜಾತ್ರೆಯ ಅವಶೇಷಗಳು ತ್ಯಾಜ್ಯಗಳ ರೂಪದಲ್ಲಿ ಸಂಗ್ರಹವಾಗುವುದರಿಂದ ಅವುಗಳ ವಿಲೇವಾರಿಯೂ ಪ್ರಮುಖವಾಗಿದೆ.

        ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೆಯಾದ ಷಷ್ಠಿ ರಥೋತ್ಸವ ವಿಜೃಂಭಣೆಯಿಂದ ನಡೆದಿದೆ. ಸಾವಿರಾರು ಮಂದಿ ಊರ ಹಾಗೂ ಪರವೂರ ಭಕ್ತಾದಿಗಳು ಆಗಮಿಸಿ ಜಾತ್ರೆಗೆ ಜನಸಾಗರವೇ ಹರಿದುಬಂದಿತ್ತು.

        ಜಾತ್ರೆಯ ವೇಳೆ ದೇವಳದ ರಥಬೀದಿಯ ಇಕ್ಕೆಲೆಗಳಲ್ಲಿ ಮಾತ್ರವಲ್ಲದೆ ಸ್ಥಳೀಯ ಪ್ರಾಥಮಿಕ ಶಾಲಾ ಮೈದಾನದಲ್ಲೂ ತಾತ್ಕಾಲಿಕ ವಾಣಿಜ್ಯ ಮಳಿಗೆಗಳು ತೆರೆದು ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯಿತು. ಇವುಗಳಲ್ಲಿ ಜನಸಾಮಾನ್ಯರ ಹಸಿವು, ನೀರಡಿಕೆ ನೀಗಿಸುವ ಖಾದ್ಯ, ಪಾನೀಯ ಮಾರಾಟ ಮಾಡುವ ಮಳಿಗೆಗಳ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಿರುತ್ತದೆ. ಇವುಗಳಿಂದಾಗಿ ಜಾತ್ರೆ ನಡೆಯುವ ದೇವಳದ ಪರಿಸರದಲ್ಲಿ ತ್ಯಾಜ್ಯಗಳ ಉತ್ಪಾದನೆಯೂ ಅತಿಯಾಗಿರುತ್ತದೆ.

        ತಂಪಾದ ಪಾನೀಯಗಳು ಮತ್ತು ಐಸ್‌ಕ್ರೀಂಗಳು ಜಾತ್ರೆಯ ಜನಪ್ರಿಯ ವಸ್ತುಗಳು. ಇದರೊಂದಿಗೆ ಕಬ್ಬಿನ ಹಾಲು, ಚುರುಮುರಿ, ಕಲ್ಲಂಗಡಿ, ಗೋಬಿ ಮಂಚೂರಿ, ಬೋಂಡಾ, ವಡೆ ಮೊದಲಾದ ಕರಿದ ತಿಂಡಿಗಳ ಮಾರಾಟದ ಭರಾಟೆಯೂ ಭರ್ಜರಿಯಾಗಿರುತ್ತವೆ. ಐಸ್‌ಕ್ರೀಂ ಖರೀದಿಸಿ ತಿನ್ನುವ ಮೊದಲು ತೆಗೆದು ಎಸೆಯುವ ಕಾಗದದ ಮುಚ್ಚಳ, ತಿಂದ ಬಳಿಕ ಎಸೆಯುವ ಕಪ್‌, ಪ್ಲಾಸ್ಟಿಕ್‌ ಚಮಚಗಳು, ಚುರುಮುರಿಯ ಖಾಲಿ ತೊಟ್ಟೆಗಳು, ಹಣ್ಣಿನ ಬೀಜ, ಸಿಪ್ಪೆ, ನೀರು, ಐಸ್‌ಕ್ಯಾಂಡಿ ಕಡ್ಡಿ, ಖಾಲಿಯಾದ ನೀರಿನ ಬಾಟಲಿ, ಕಬ್ಬಿನ ಜಲ್ಲೆ, ಕರಿದ ತಿಂಡಿ ಸುತ್ತಿದ ಕಾಗದ, ಬೀಡಿ, ಸಿಗರೇಟುಗಳ ಖಾಲಿ ಪ್ಯಾಕೆಟ್‌, ಖಾಲಿಯಾದ ಜರ್ದಾ ಪ್ಯಾಕೇಟು... ಹೀಗೆ ಜಾತ್ರೆ ಮುಗಿದ ಬಳಿಕೆ ಒಮ್ಮೆ ಜಾತ್ರಾ ಮಜಲಿಗೆ ಭೇಟಿ ನೀಡಿದಾಗ ವಾಸನೆ ಬರುವ, ಕೊಳೆತು ನಾರುವ ತ್ಯಾಜ್ಯ ಸಾಮ್ರಾಜ್ಯದ ಅರಿವಾಗುತ್ತದೆ.

        ಪೌರಕಾರ್ಮಿಕರು, ದೇವಳದ ಸಿಬಂದಿಗಳು ಜಾತ್ರೆಯ ವೇಳೆ ಪ್ರತಿದಿನ ತ್ಯಾಜ್ಯ ಸಂಗ್ರಹಿಸಿಲು ಹರಸಾಹಸ ಪಡಬೇಕಾಯಿತು. ಜಾತ್ರೆ ಮುಗಿದ ಬಳಿಕ ಜಾತ್ರಾ ಮಜಲಿನಲ್ಲಿ ತುಂಬುವ ಅಗಾಧ ಪ್ರಮಣದ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡುವುದೇ ದೇವಳ ಹಾಗೂ ಗ್ರಾ.ಪಂ.ಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.

        ತಾಲೂಕು ಕೇಂದ್ರವಾದ ಸುಳ್ಯ ಪುರಸಭೆಯಿಂದ 15 ಮಂದಿ ಪೌರಕಾರ್ಮಿಕರು ಸುಬ್ರಹ್ಮಣ್ಯ ಜಾತ್ರೆಗಾಗಿ ನಿಯುಕ್ತಿ ಹೊಂದಿದ್ದರು. ಸುಬ್ರಹ್ಮಣ್ಯ ಗ್ರಾ.ಪಂ.ನಲ್ಲಿ ತ್ಯಾಜ್ಯ ವಿಲೇವಾರಿಗಾಗಿ ಮಿನಿಟೆಂಪೋ ಹಾಗೂ ಇಬ್ಬರು ಕಾರ್ಮಿಕರಿದ್ದಾರೆ. ಈ ವರ್ಷ ಜಾತ್ರೆಯ ಮಜಲಿನಿಂದ ಸಂಗ್ರಹಿಸಿದ ತ್ಯಾಜ್ಯಗಳ ಪ್ರಮಾಣ 15ರಿಂದ 20 ಲೋಡ್‌ಗಳಷ್ಟಾಗಿದ್ದು, ಇದು ದಾಖಲೆಯಾಗಿದೆ.

        ಸುಬ್ರಹ್ಮಣ್ಯ ಜಾತ್ರೆ ಆರಂಭವಾದಂದಿನಿಂದ ಜಾತ್ರೆ ಮುಕ್ತಾಯಗೊಂಡ 5 ದಿನಗಳ ಅನಂತರವೂ ಪೌರಕಾರ್ಮಿಕರು ಕರ್ತವ್ಯದಲ್ಲಿರುತ್ತಾರೆ. ಇಲ್ಲಿನ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಲು ಸಾಕಷ್ಟು ಜನರು ಶ್ರಮಿಸಿದ್ದಾರೆ.

        ಜಾತ್ರೆಗೆ ಬಂದ ಜನರು ಅಲ್ಲಲ್ಲಿ ತ್ಯಾಜ್ಯ ಎಸೆಯುವುದನ್ನು ತಪ್ಪಿಸಲು ದೇವಳದ ಆಡಳಿತ ಮಂಡಳಿ, ಗ್ರಾ.ಪಂ. ನವರು ಜಾತ್ರೆಯ ಮಜಲಿನಾದ್ಯಂತ ಮತ್ತು ಖಾದ್ಯ, ಪಾನೀಯ ಅಂಗಡಿ, ಮಳಿಗೆಗಳ ಬಳಿ ತ್ಯಾಜ್ಯ ಹಾಕಲು ದೊಡ್ಡದೊಡ್ಡ ಬುಟ್ಟಿ ಅಥವಾ ಡ್ರಮ್‌ಗಳನ್ನು ಇರಿಸಿದಲ್ಲಿ ಹೆಚ್ಚಿನ ತ್ಯಾಜ್ಯ ಸಂಗ್ರಹವಾಗುತ್ತದೆ. ಇಲ್ಲವಾದಲ್ಲಿ ರಾಜಬೀದಿಯಲ್ಲಿ ಬಿದ್ದ ತ್ಯಾಜ್ಯವನ್ನು ನಡೆಯುವವರೆಲ್ಲಾ ತುಳಿದುಕೊಂಡೇ ಮುಂದೆ ಸಾಗಿ ಪರಿಸರ ಇನ್ನಷ್ಟು ಗಲೀಜಾಗುತ್ತದೆ. ಊರಿನ ಸೇವಾಸಂಸ್ಥೆಗಳು, ಯುವಕ - ಯುವತಿ - ಮಹಿಳಾಂಡಳಗಳ ಸಹಕಾರದೊಂದಿಗೆ ಜಾತ್ರಾ ಮಜಲಿನಲ್ಲಿ ನೂರಾರು ಕಸದ ತೊಟ್ಟಿಗಳನ್ನು ಇರಿಸಿ, ಎಲ್ಲ ತ್ಯಾಜ್ಯಗಳನ್ನು ಅದರಲ್ಲಿಯೇ ಎಸೆಯುವಂತೆ ಭಕ್ತರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಈ ವ್ಯವಸ್ಥೆ ಜಾರಿಗೆ ಬಂದಲ್ಲಿ ಪೌರಕಾರ್ಮಿಕರ ಕೆಲಸದ ಹೊರೆಯೂ ಕಡಿಮೆಯಾಗುವುದು. ತ್ಯಾಜ್ಯ ಕಡಿಮೆಯಾಗಿ ಸುಂದರ ದೇವಾಲಯ ನಗರವಾಗಿ ಆರೋಗ್ಯಪೂರ್ಣವಾಗಿರಲು ಎಲ್ಲರ ಸಹಕಾರ ಅತ್ಯಗತ್ಯ.

        ಸುಬ್ರಹ್ಮಣ್ಯ ಮಾತ್ರವಲ್ಲದೆ ಜಾತ್ರೆಗಳು ನಡೆಯುವ ಎಲ್ಲ ಊರಿನ ದೇಗುಲದ ಪರಿಸರದಲ್ಲಿ ಜಾತ್ರೆ ಮುಗಿದ ಅನಂತರ ತ್ಯಾಜ್ಯ ವಿಲೇವಾರಿಯದ್ದೇ ಸಮಸ್ಯೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus