Thursday, May 23, 2013
Last Updated: 8:01:10 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸಚಿನ್‌ ಏಕದಿನ ಯಾನ ಸಂಪನ್ನ
    • ಮಾಸ್ಟರ್‌ಬ್ಲಾಸ್ಟರ್‌, ದಾಖಲೆಗಳ ಸರದಾರ ಸಚಿನ್‌ ತೆಂಡುಲ್ಕರ್‌ ದಿಢೀರನೇ ಏಕದಿನ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ

      • Udayavani | Dec 23, 2012

        ಪತ್ರ ಬರೆದು ವಿದಾಯ ಹೇಳಿದ ತೆಂಡುಲ್ಕರ್‌

         ಪತ್ರ, ನಿವೃತ್ತಿ ಬಗ್ಗೆ ದಟ್ಟ ಅನುಮಾನಗಳು

         ಟೆಸ್ಟ್‌ನಲ್ಲಿ ಮುಂದುವರಿಯುವ ನಿರ್ಧಾರ

        ಮುಂಬಯಿ:
        ಜಾಗತಿಕ ಕ್ರಿಕೆಟಿನ ಒಂದೂವರೆ ಶತಮಾನದ ಭವ್ಯ ಚರಿತ್ರೆಯಲ್ಲಿ ಅವತರಿಸಿ ಬಂದ ಮಹಾನ್‌ ಆಟಗಾರ, ಚಾಂಪಿಯನ್‌ ಬ್ಯಾಟ್ಸ್‌ಮನ್‌, ಮಾಸ್ಟರ್‌ಬ್ಲಾಸ್ಟರ್‌, ದಾಖಲೆಗಳ ಸರದಾರ ಸಚಿನ್‌ ತೆಂಡುಲ್ಕರ್‌ ರವಿವಾರ ದಿಢೀರನೇ ಏಕದಿನ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ. ಇದರೊಂದಿಗೆ 'ಸಚಿನ್‌ ಶಕೆ'ಯ ಅಂತ್ಯದ ದಿನಗಳು ಸಮೀಪಿಸಿವೆ. ಕ್ರಿಕೆಟ್‌ ದೇವರ ಸಂಪೂರ್ಣ ಆಟ ಇನ್ನು ಕೆಲವೇ ದಿನಗಳಲ್ಲಿ ಕೊನೆಗೊಳ್ಳುವ ಸ್ಪಷ್ಟ ಸೂಚನೆ ಲಭಿಸಿದೆ.

        ಇತ್ತೀಚಿನ ದಿನಗಳಲ್ಲಿ ಕುಂಟಿತ ಸಾಮರ್ಥ್ಯದೊಂದಿಗೆ ತೀವ್ರ ರನ್‌ ಬರಗಾಲ ಅನುಭವಿಸುತ್ತಿದ್ದ ಸಚಿನ್‌ ತೆಂಡುಲ್ಕರ್‌ ಅವರ ನಿವೃತ್ತಿ ನಿರೀಕ್ಷಿತ. ಅವರ ಸಮಕಾಲೀನರಾದ ದ್ರಾವಿಡ್‌, ಲಕ್ಷ್ಮಣ್‌, ಪಾಂಟಿಂಗ್‌ ಅವರೆಲ್ಲ ಇದೇ ಕಾರಣಕ್ಕಾಗಿ ಕ್ರಿಕೆಟ್‌ ಸನ್ಯಾಸ ಸ್ವೀಕರಿಸಿರುವಾಗ ಸಚಿನ್‌ ಆಡುವುದರಲ್ಲಿ ಅರ್ಥವೇನಿದೆ ಎಂದು ಸಿನಿಕರು, ಮಾಜಿಗಳು, ಮಾಧ್ಯಮಗಳು ತಲೆಗೊಂದರಂತೆ ಹೇಳಿಕೆ ನೀಡುತ್ತಲೇ ಇದ್ದವು. ಈ ಹಂತದಲ್ಲೇ ಸಚಿನ್‌ ಏಕದಿನದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಆದರೆ ಅವರ ನಿವೃತ್ತಿಯ ರೀತಿ ಮಾತ್ರ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

        ಬಿಸಿಸಿಐಗೆ ಪತ್ರ ಬರೆದಿದ್ದರಂತೆ...

        ಭಾರತ-ಪಾಕಿಸ್ಥಾನ ಸರಣಿಗೆ ರವಿವಾರ ತಂಡದ ಆಯ್ಕೆ ನಡೆಯುವುದಕ್ಕಿಂತ ಮುನ್ನವೇ ತೆಂಡುಲ್ಕರ್‌ ಅವರು ನಿವೃತ್ತಿ ಘೋಷಿಸಿ ಬರೆದ ಪತ್ರವನ್ನು ಬಿಸಿಸಿಐ ಬಿಡುಗಡೆಗೊಳಿಸಿದೆ. ಆದರೆ ಈ ಪತ್ರವನ್ನು ಸಚಿನ್‌ ಯಾವಾಗ ಬರೆದಿದ್ದರು ಎಂಬುದು ಮಾತ್ರ ಚಿದಂಬರ ರಹಸ್ಯ. ತಂಡದ ಆಯ್ಕೆಗಿಂತ ಮುನ್ನವೇ ತೆಂಡುಲ್ಕರ್‌ ನಿವೃತ್ತಿ ವಿಚಾರವನ್ನು ತಮಗೆ ದೂರವಾಣಿ ಮೂಲಕ ಮನದಟ್ಟು ಮಾಡಿಸಿದ್ದರು ಎಂಬುದು ಬಿಸಿಸಿಐ ಕಾರ್ಯದರ್ಶಿ ಸಂಜಯ್‌ ಜಗದಾಳೆ ಸ್ಪಷ್ಟನೆ.

        ಭಾರತ ಕ್ರಿಕೆಟ್‌ ತಂಡದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ತಾನು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ತೆಂಡುಲ್ಕರ್‌ ತಮ್ಮ ಪತ್ರದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

        ಬಿಸಿಸಿಐನಲ್ಲೇ ಭಿನ್ನಮತ?

        ಭಾರತ-ಪಾಕಿಸ್ಥಾನ ಕ್ರಿಕೆಟ್‌ ಸರಣಿಗೆ ತೆಂಡುಲ್ಕರ್‌ ಅವರನ್ನು ಆಯ್ಕೆ ಮಾಡಬೇಕೇ, ಬೇಡವೇ ಎನ್ನುವ ಕುರಿತು ಬಿಸಿಸಿಐನಲ್ಲೇ ಭಿನ್ನಮತವಿತ್ತು ಎಂಬ ಅನುಮಾನಗಳೂ ದಟ್ಟವಾಗಿದೆ. ರವಿವಾರ ಬೆಳಗ್ಗೆ ತಂಡದ ಆಯ್ಕೆ ಮಾಡುವಾಗ ತೆಂಡುಲ್ಕರ್‌ ಹೆಸರು ಅದರಲ್ಲಿರುವುದಿಲ್ಲ ಎಂಬ ಅಭಿಪ್ರಾಯಗಳೂ ಇದ್ದವು.

        ಇವೆಲ್ಲದರ ನಡುವೆ ತೆಂಡುಲ್ಕರ್‌ ಅನಿರೀಕ್ಷಿತವಾಗಿ ಪತ್ರದ ಮೂಲಕ ನಿವೃತ್ತಿ ಘೋಷಿಸಿದ್ದಾರೆ. ಈ ಪತ್ರವನ್ನು ಬಿಡುಗಡೆಗೊಳಿಸುವಾಗ ಬಿಸಿಸಿಐ ಕಾರ್ಯದರ್ಶಿ ಸಂಜಯ್‌ ಜಗದಾಳೆ ಸ್ವತಃ ಭಾವುಕರಾಗಿದ್ದರು.

        'ತೆಂಡುಲ್ಕರ್‌ ನಿವೃತ್ತಿ ಅಚ್ಚರಿಯ ನಿರ್ಧಾರವಲ್ಲ. ಇದನ್ನು ಈ ಮುಂಚೆಯೇ ಅವರು ನನಗೆ ಮತ್ತು ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್‌ಗೆ ಮನದಟ್ಟು ಮಾಡಿಸಿದ್ದರು. ಬಿಸಿಸಿಐ ಮತ್ತು ಕ್ರಿಕೆಟ್‌ ಪ್ರೇಮಿಗಳು ಯಾವ ರೀತಿ ಅವರನ್ನು ಗೌರವಿಸುತ್ತಾರೋ, ಅದೇ ರೀತಿ ಅವರ ನಿವೃತ್ತಿ ನಿರ್ಧಾರವನ್ನೂ ಗೌರವಿಸಬೇಕು. ಈ ಚರ್ಚೆಗಳು ದೂರವಾಣಿ ಮೂಲಕ ನಡೆಯಿತು. ಈ ಬಗ್ಗೆ ಇನ್ನೇನನ್ನೂ ಹೇಳುವ ಸ್ಥಿತಿಯಲ್ಲಿ ನಾನಿಲ್ಲ...' ಎಂದು ಜಗದಾಳೆ ಹೇಳಿದರು.

        ವಿಶ್ವ ಕ್ರಿಕೆಟ್‌ನ ಶ್ರೇಷ್ಠ

        ತೆಂಡುಲ್ಕರ್‌ಗೆ ಕ್ರಿಕೆಟ್‌ ವಿಷಯದಲ್ಲಿ ಯಾವುದೇ ವಿಶೇಷಣ ಬಳಸಿದರೂ ಅದು ಕಡಿಮೆಯೇ. ಪಂದ್ಯದಿಂದ ಪಂದ್ಯಕ್ಕೆ ನಿರ್ಮಿಸುತ್ತ ಹೋದ ದಾಖಲೆಗಳೇ ತೆಂಡುಲ್ಕರ್‌ ಏನೆಂಬುದನ್ನು ಘಂಟಾಘೋಷವಾಗಿ ಸಾರುತ್ತವೆ. ಇಷ್ಟಾದರೂ ತೆಂಡುಲ್ಕರ್‌ ನಿವೃತ್ತಿ ನಿರ್ಧಾರವನ್ನು ಸ್ವಲ್ಪ ಆತುರವಾಗಿ ತೆಗೆದುಕೊಂಡಿರುವಂತೆ ಕಾಣುತ್ತದೆ. ಕಾರಣ, ಏಕದಿನ ಕ್ರಿಕೆಟ್‌ನಲ್ಲಿ 50ನೇ ಶತಕಕ್ಕೆ ಕೇವಲ ಒಂದು ಶತಕ ಬಾಕಿಯಿರುವಾಗ, 100 ಅರ್ಧ ಶತಕಗಳಿಗೆ ಬರೀ 4 ಬಾಕಿ ಇರುವಾಗ ಅವರ ನಿವೃತ್ತಿ ಘೋಷಣೆಯಾಗಿದೆ.

        ಏಕದಿನಕ್ಕೆ ತೆಂಡುಲ್ಕರ್‌ ದಿಢೀರ್‌ ನಿವೃತ್ತಿ ಘೋಷಿಸುವ ಅನಿವಾರ್ಯತೆ ಏನಿತ್ತು ಅನ್ನುವುದು ಸದ್ಯದ ಪ್ರಶ್ನೆ. ಅವರ ಈ ನಿರ್ಧಾರ ನೈಜ ಕ್ರಿಕೆಟಿನ ಗಂಧಗಾಳಿ ಅರಿಯದವರಿಗೆ, ಸದಾ ಸಚಿನ್‌ ಅವರನ್ನು ಟೀಕಿಸುತ್ತಲೇ ಇದ್ದವರಿಗೆ ಖುಷಿ ಕೊಡಬಹುದು. ಆದರೆ ನೈಜ ಕ್ರಿಕೆಟ್‌ ಅಭಿಮಾನಿಗಳಿಗೆ, ಮೊದಲ ಪಂದ್ಯದಿಂದಲೇ ಅವರನ್ನು ಆರಾಧಿಸುತ್ತ ಬಂದವರಿಗೆ, ಅವರ ಆಟದ ಪ್ರತಿಯೊಂದು ಕ್ಷಣವನ್ನು ಕಣ್ಣಲ್ಲಿ ತುಂಬಿಕೊಳ್ಳುತ್ತ ಬಂದವರಿಗೆ ಇದು ನಿಜಕ್ಕೂ ಆಘಾತಕರ ಹಾಗೂ ದುಃಖದ ಸಂಗತಿ. ಏಕೆಂದರೆ, ಈ ಕ್ರಿಕೆಟ್‌ ಜಗತ್ತು ಮತ್ತೂಬ್ಬ ಸಚಿನ್‌ ತೆಂಡುಲ್ಕರ್‌ನನ್ನು ಎಂದಿಗೂ ಕಾಣುವುದಿಲ್ಲ!

        ಏಕದಿನ ಬಾಳ್ವೆಯ ಅವಿಸ್ಮರಣೀಯ ಕ್ಷಣಗಳು

        1989 ಡಿಸೆಂಬರ್‌: ಗುಜ್ರಾನ್‌ವಾಲಾದಲ್ಲಿ ಪಾಕಿಸ್ಥಾನ ವಿರುದ್ಧ ತೆಂಡುಲ್ಕರ್‌ ಏಕದಿನ ಕ್ರಿಕೆಟಿಗೆ ಪದಾರ್ಪಣೆಗೈದರು.

        1993 ನವೆಂಬರ್‌: ಹೀರೊ ಕಪ್‌ ಸೆಮಿಫೈನಲ್‌ನ ಅಂತಿಮ ಓವರ್‌ನಲ್ಲಿ ದಕ್ಷಿಣ ಆಫ್ರಿಕಾ ಗೆಲುವಿಗೆ ಆರು ರನ್‌ ಬೇಕಿದ್ದ ವೇಳೆ ಅಂತಿಮ ಓವರ್‌ ಎಸೆದ ತೆಂಡುಲ್ಕರ್‌ ಕೇವಲ ಮೂರು ರನ್‌ ನೀಡಿ ಭಾರತಕ್ಕೆ ಸ್ಮರಣೀಯ ಜಯ ತಂದುಕೊಟ್ಟಿದ್ದರು.

        1994 ಮಾರ್ಚ್‌: ಆಕ್ಲಂಡ್‌ನ‌ಲ್ಲಿ ನ್ಯೂಜಿಲಂಡ್‌ ವಿರುದ್ಧ ಮೊದಲ ಬಾರಿ ಏಕದಿನ ಪಂದ್ಯದಲ್ಲಿ ಇನ್ನಿಂಗ್ಸ್‌ ಆರಂಭಿಸಿದ ತೆಂಡುಲ್ಕರ್‌ 49 ಎಸೆತಗಳಿಂದ 82 ರನ್‌ ಗಳಿಸಿದರು.

        1994 ಸಪ್ಟೆಂಬರ್‌: ಕೊಲಂಬೋದಲ್ಲಿ ಆಸ್ಟ್ರೇಲಿಯ ವಿರುದ್ಧ ಮೊದಲ ಏಕದಿನ ಶತಕ (110) ದಾಖಲಿಸಿದರು.

        1996 ಫೆ.-ಮಾರ್ಚ್‌: ವಿಶ್ವಕಪ್‌ ಕ್ರಿಕೆಟ್‌ ಇತಿಹಾಸದಲ್ಲಿ ಕೂಟವೊಂದರಲ್ಲಿ 500ಕ್ಕಿಂತ ಹೆಚ್ಚಿನ ರನ್‌ ಗಳಿಸಿದ ಪ್ರಥಮ ಆಟಗಾರರೆಂಬ ಗೌರವ ಪಡೆದರು. ಎರಡು ಶತಕ ಮತ್ತು ಮೂರು ಅರ್ಧಶತಕ ಸೇರಿದಂತೆ ಸರಾಸರಿ 87.16ರಂತೆ ತೆಂಡುಲ್ಕರ್‌ 523 ರನ್‌ ಗಳಿಸಿದ್ದರು.

        1996 ಎಪ್ರಿಲ್‌: ಶಾರ್ಜಾದಲ್ಲಿ ಪಾಕಿಸ್ಥಾನ ವಿರುದ್ಧ 118 ರನ್‌ ಗಳಿಸಿದ ತೆಂಡುಲ್ಕರ್‌ ನವಜ್ಯೋತ್‌ ಸಿಂಗ್‌ ಸಿದ್ಧು ಜತೆ ದ್ವಿತೀಯ ವಿಕೆಟಿಗೆ 231 ರನ್ನುಗಳ ಜತೆಯಾಟದಲ್ಲಿ ಭಾಗಿಯಾದರು. ಈ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬಾರಿ ಭಾರತ 300ಕ್ಕಿಂತ ಹೆಚ್ಚಿನ ರನ್‌ ಪೇರಿಸಿತು.

        1996 ಆಗಸ್ಟ್‌: ಭಾರತ ತಂಡದ ನಾಯಕರಾಗಿ ಆಡಿದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಕೊಲಂಬೋದಲ್ಲಿ 110 ರನ್‌ ಗಳಿಸಿದರು.

        1997 ಫೆಬ್ರವರಿ: ಬೆನೋಯಿಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಪಂದ್ಯದಲ್ಲಿ 97 ಎಸೆತಗಳಿಂದ 104 ರನ್‌ ಸಿಡಿಸಿದ್ದರಿಂದ ಭಾರತ 40 ಓವರ್‌ಗಳಲ್ಲಿ 241 ರನ್‌ ಗುರಿ ತಲುಪಿ ತ್ರಿಕೋನ ಸರಣಿಯ ಫೈನಲಿಗೇರಿತ್ತು.

        1998 ಜನವರಿ: ಅಜರುದ್ದೀನ್‌ಗಾಗಿ ನಾಯಕತ್ವ ಕಳೆದುಕೊಂಡ ಬಳಿಕ ಇನ್ನಿಂಗ್ಸ್‌ ಆರಂಭಿಸಿದ ತೆಂಡುಲ್ಕರ್‌ 26 ಎಸೆತಗಳಿಂದ 41 ರನ್‌ ಹೊಡೆದರು.

        1998 ಎಪ್ರಿಲ್‌: ಶಾರ್ಜಾದಲ್ಲಿ ಆಸ್ಟ್ರೇಲಿಯ ವಿರುದ್ಧ ತೆಂಡುಲ್ಕರ್‌ ಸತತ ಎರಡು ಶತಕ ಸಿಡಿಸಿದ್ದರಿಂದ ಭಾರತ ಫೈನಲಿಗೇರಿತ್ತು ಮತ್ತು ಕೋಕಾ ಕೋಲಾ ಕಪ್‌ ಜಯಿಸಿತು.

        1998 ಎಪ್ರಿಲ್‌: ಕೊಚ್ಚಿಯಲ್ಲಿ ಆಸ್ಟ್ರೇಲಿಯ ವಿರುದ್ಧ 32 ರನ್ನಿಗೆ ಐದು ವಿಕೆಟ್‌ ಪಡೆದರು. ಈ ಮೂಲಕ ಭಾರತ 41 ರನ್ನುಗಳ ಜಯ ಸಾಧಿಸಿತು. ಇದು ತೆಂಡುಲ್ಕರ್‌ ಅವರ ಜೀವನಶ್ರೇಷ್ಠ ಬೌಲಿಂಗ್‌ ನಿರ್ವಹಣೆಯಾಗಿದೆ.

        1999 ಮೇ: ತಂದೆಯ ನಿಧನದ ಬಳಿಕ ವಿಶ್ವಕಪ್‌ನ ಒಂದು ಪಂದ್ಯ ಕಳೆದುಕೊಂಡಿದ್ದ ತೆಂಡುಲ್ಕರ್‌ ಮರಳಿ ತಂಡಕ್ಕೆ ಸೇರಿಕೊಂಡು ಕೀನ್ಯ ವಿರುದ್ಧ ಅಜೇಯ 140 ರನ್‌ ಹೊಡೆದರು.

        1999 ನವೆಂಬರ್‌: ಹೈದರಾಬಾದ್‌ನಲ್ಲಿ ನ್ಯೂಜಿಲಂಡ್‌ ವಿರುದ್ಧ ಅಜೇಯ 186 ರನ್‌ ಹೊಡೆದರು. ದ್ರಾವಿಡ್‌ ಜತೆ ದ್ವಿತೀಯ ವಿಕೆಟಿಗೆ 331 ರನ್‌ ಪೇರಿಸಿದ್ದು ಏಕದಿನ ಕ್ರಿಕೆಟಿನ ಯಾವುದೇ ವಿಕೆಟಿಗೆ ಗರಿಷ್ಠ ಜತೆಯಾಟದ ಮೊತ್ತವಾಗಿ ಉಳಿದಿದೆ.

        2001 ಮಾರ್ಚ್‌: ಇಂಧೋರ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ 139 ರನ್‌ ಸಿಡಿಸುವ ಮೂಲಕ ತೆಂಡುಲ್ಕರ್‌ ಏಕದಿನ ಕ್ರಿಕೆಟ್‌ನಲ್ಲಿ 10,000 ರನ್‌ ಪೂರ್ತಿಗೊಳಿಸಿದ ಮೊದಲ ಆಟಗಾರ ಎಂದೆನಿಸಿಕೊಂಡರು.

        2003 ಫೆ.-ಮಾರ್ಚ್‌: ವಿಶ್ವಕಪ್‌ನಲ್ಲಿ ಸರಾಸರಿ 61.18ರಂತೆ 673 ರನ್‌ ಗಳಿಸಿದ ತೆಂಡುಲ್ಕರ್‌ ಭಾರತವನ್ನು ಫೈನಲ್‌ಗೆ ತಲುಪುವಂತೆ ಮಾಡಿದರು. ಸೆಂಚುರಿಯನ್‌ನಲ್ಲಿ ಪಾಕಿಸ್ಥಾನ ವಿರುದ್ಧ 98 ರನ್‌ ಗಳಿಸಿದ್ದು ವಿಶ್ವಕಪ್‌ ಇತಿಹಾಸದ ಶ್ರೇಷ್ಠ ಹೊಡೆತಗಳಲ್ಲಿ ಒಂದಾಗಿದೆ. ಆಸ್ಟ್ರೇಲಿಯ ವಿಶ್ವಕಪ್‌ ಜಯಿಸಿದ್ದರೂ ತೆಂಡುಲ್ಕರ್‌ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.

        2005 ಮಾರ್ಚ್‌: ಟೆನಿಸ್‌ ಎಲ್ಬೊಗೆ ಶಸ್ತ್ರಚಿಕಿತ್ಸೆಗೆ ಒಳಗಾದ ಅವರು ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಸರಣಿ, ಜಿಂಬಾವ್ವೆ ಪ್ರವಾಸದಿಂದ ಹಿಂದೆ ಸರಿದರು.

        2005 ಅಕ್ಟೋಬರ್‌: ಅಂತಾರಾಷ್ಟ್ರೀಯ ಕ್ರಿಕೆಟಿಗೆ ಮರಳಿದ ಬಳಿಕ ಶ್ರೀಲಂಕಾ ವಿರುದ್ಧ 93 ರನ್‌ ಹೊಡೆದರು.

        2006 ಮಾರ್ಚ್‌: ಇಂಗ್ಲಂಡಿನಲ್ಲಿ ಇನ್ನೊಂದು ಶಸ್ತ್ರಚಿಕಿತ್ಸೆಗೆ ಒಳಗಾದ ಅವರು ಇಂಗ್ಲಂಡ್‌ ಮತ್ತು ವೆಸ್ಟ್‌ಇಂಡೀಸ್‌ ವಿರುದ್ಧದ ಸರಣಿ ಕಳೆದುಕೊಂಡರು.

        2006 ಸಪ್ಟೆಂಬರ್‌: ಕೌಲಾಲಂಪುರದಲ್ಲಿ ನಡೆದ ಡಿಎಲ್‌ಎಫ್ ಕಪ್‌ನಲ್ಲಿ ವೆಸ್ಟ್‌ಇಂಡೀಸ್‌ ವಿರುದ್ಧ 141 ರನ್‌ ಹೊಡೆದರು.

        2007 ಮೇ: ಏಕದಿನ ಕ್ರಿಕೆಟ್‌ ಬಾಳ್ವೆ ವೇಳೆ ಮೊದಲ ಬಾರಿ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ 'ವಿಶ್ರಾಂತಿ' ಪಡೆದರು.

        2008 ಮಾರ್ಜ್‌: ಸಿಬಿ ಸೀರೀಸ್‌ ಫೈನಲ್‌ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯ ನೆಲದಲ್ಲಿ ಮೊದಲ ಶತಕ ಸಿಡಿಸಿದರು ಮತ್ತು 1985ರ ಬಳಿಕ ಭಾರತ ಪ್ರಶಸ್ತಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದರು.

        2009 ನವೆಂಬರ್‌: ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ 141 ಎಸೆತಗಳಿಂದ 175 ರನ್‌ ಸಿಡಿಸಿದ ಅವರು ಏಕದಿನ ಕ್ರಿಕೆಟ್‌ನಲ್ಲಿ 17,000 ರನ್‌ ದಾಟಿದರು.

        2010 ಫೆಬ್ರವರಿ: ಗ್ವಾಲಿಯರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 147 ಎಸೆತಗಳಿಂದ ಅಜೇಯ 200 ರನ್‌ ಹೊಡೆದರು. ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ದ್ವಿಶತಕ ಸಿಡಿಸಿದ ಮೊದಲ ಆಟಗಾರರೆಂಬ ಗೌರವಕ್ಕೆ ಪಾತ್ರರಾದರು.

        2011 ಫೆಬ್ರವರಿ: ಬಾಂಗ್ಲಾದೇಶ ವಿರುದ್ಧದ ಪಂದ್ಯದ ಮೂಲಕ ಆರು ವಿಶ್ವಕಪ್‌ನಲ್ಲಿ ಆಡಿದ ಎರಡನೇ ಆಟಗಾರರೆಂಬ ಗೌರವ ಪಡೆದರು. ಜಾವೆದ್‌ ಮಿಯಾಂದಾದ್‌ ಮೊದಲ ಆಟಗಾರರಾಗಿದ್ದಾರೆ.

        2011 ಫೆ.-ಎಪ್ರಿಲ್‌: ಸರಾಸರಿ 53.55ರಂತೆ 482 ರನ್‌ ಗಳಿಸಿದ ಅವರು 28 ವರ್ಷ ಬಳಿಕ ಭಾರತ ವಿಶ್ವಕಪ್‌ ಗೆಲ್ಲಲು ಪ್ರಮುಖ ಪಾತ್ರ ವಹಿಸಿದರು. ವಿಶ್ವಕಪ್‌ ಕ್ರಿಕೆಟ್‌ನಲ್ಲಿ 2 ಸಾವಿರ ರನ್‌ ಪೂರ್ತಿಗೊಳಿಸಿದ ಮೊದಲ ಆಟಗಾರರಾಗಿದ್ದಾರೆ.

        2012 ಮಾರ್ಚ್‌: ಮಿರ್ಪುರ್‌ನಲ್ಲಿ ನಡೆದ ಏಶ್ಯಕಪ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 114 ರನ್‌ ಗಳಿಸುವ ಮೂಲಕ ತೆಂಡುಲ್ಕರ್‌ ತನ್ನ 100ನೇ ಶತಕ ಪೂರ್ತಿಗೊಳಿಸಿದರು.

        2012 ಡಿಸೆಂಬರ್‌: ಏಕದಿನ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದರು. ಏಕದಿನ ಕ್ರಿಕೆಟ್‌ ಬಾಳ್ವೆ ವೇಳೆ ದಾಖಲೆ ಸಂಖ್ಯೆ ಪಂದ್ಯಶ್ರೇಷ್ಠ (62) ಮತ್ತು ಸರಣಿಶ್ರೇಷ್ಠ (15) ಪಡೆದ ಸಾಧನೆ ಮಾಡಿದ್ದಾರೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus