Wednesday, June 19, 2013
Last Updated: 12:47:20 AM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕಟ್ಟೆಯೊಡೆದ ಜನಾಕ್ರೋಶ
    • ಹಿಂಸೆಗೆ ತಿರುಗಿದ ಅತ್ಯಾಚಾರ ವಿರೋಧಿ ಪ್ರತಿಭಟನೆ
    • ನಿಷೇಧಾಜ್ಞೆಗೂ ಮಣಿಯದ ಯುವಜನತೆ , ಮಹಿಳೆಯರು
    • ವಿದ್ಯಾರ್ಥಿಗಳು ರಾಜಧಾನಿಯಲ್ಲಿ ನಡೆಸುತ್ತಿರುವ ಭಾರೀ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ.

      • Udayavani | Dec 23, 2012

        ಹೊಸದಿಲ್ಲಿ : ಕಳೆದ ರವಿವಾರ ಅರೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ, ಆರೋಪಿಗಳಿಗೆ ಉಗ್ರ ಶಿಕ್ಷೆಯಾಗಬೇಕು ಹಾಗೂ ಅತ್ಯಾಚಾರ ಸಂಬಂಧಿ ಕಾನೂನಿಗೆ ಸೂಕ್ತ ತಿದ್ದುಪಡಿ ತರುವ ಮೂಲಕ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯನ್ನು ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿ, ವಿದ್ಯಾರ್ಥಿಗಳು ರಾಜಧಾನಿಯಲ್ಲಿ ನಡೆಸುತ್ತಿರುವ ಭಾರೀ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಶನಿವಾರದ ಘಟನಾವಳಿಗಳ ಹಿನ್ನೆಲೆಯಲ್ಲಿ ಪೊಲೀಸರು ದಿಲ್ಲಿಯ ಹಲವೆಡೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿ, ರಾಷ್ಟ್ರಪತಿ ಭವನ ಸೇರಿದಂತೆ ಪ್ರಮುಖ ಕಚೇರಿಯನ್ನು ಹೊಂದಿರುವ ರಾಜಪಥ್‌ನ ಎಲ್ಲಾ ರಸ್ತೆಗಳನ್ನು ಬಂದ್‌ ಮಾಡಿದ ಹೊರತಾಗಿಯೂ ರವಿವಾರ ನಗರಾದ್ಯಂತ ಭಾರೀ ಪ್ರತಿಭಟನೆಗಳು ನಡೆದುವು.

        ಕೆಲವೆಡೆ ಪ್ರತಿಭಟನೆಯ ವೇಳೆ ಪೊಲೀಸರು ಹಾಗೂ ಪ್ರತಿಭಟನಕಾರರ ನಡುವೆ ಘರ್ಷಣೆ ಸಂಭವಿಸಿದ ಪರಿಣಾಮ ಪೊಲೀಸರು, ಜಲಫಿರಂಗಿ, ಅಶ್ರುವಾಯುಗಳನ್ನು ಪ್ರಯೋಗಿಸಿದರಲ್ಲದೆ ಲಾಠೀ ಚಾರ್ಜ್‌ ನಡೆಸಿ, ಜನರನ್ನು ಚದುರಿಸುವ ಪ್ರಯತ್ನ ನಡೆಸಿದರು. ಈ ಘರ್ಷಣೆಯಲ್ಲಿ ಕೆಲ ಪತ್ರಕರ್ತರೂ ಸೇರಿದಂತೆ ಪ್ರತಿಭಟನನಿರತ ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಪೊಲೀಸರು ಗಾಯಗೊಂಡಿದ್ದಾರೆ. ಶನಿವಾರ ಪ್ರತಿಭಟನಕಾರರ ಮೇಲೆ ಬಲಪ್ರಯೋಗ ಮಾಡಿದ್ದರಿಂದ ವಿದ್ಯಾರ್ಥಿ ಸಮುದಾಯದ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿತಲ್ಲದೆ ಪೊಲೀಸರ ಮೇಲೆಯೇ ದಾಳಿ ನಡೆಸಿದ ಘಟನೆಗಳೂ ನಡೆದುವು.

        ಸತತ ಎರಡನೇ ದಿನವಾದ ರವಿವಾರವೂ ದಿಲ್ಲಿ ಅತ್ಯಾಚಾರ ವಿರೋಧಿ ಉಗ್ರ ಪ್ರತಿಭಟನೆ ಮುಂದುವರಿಯಿತಲ್ಲದೆ ಯುವ ಸಮುದಾಯ ಹಾಗೂ ಮಹಿಳೆಯರ ಆಕ್ರೋಶ ಭುಗಿಲೆದ್ದಿತು. ಶನಿವಾರ ಪ್ರತಿಭಟನೆಯ ವೇಳೆ ಹಿಂಸಾಚಾರಗಳು ಸಂಭವಿಸಿ, ಅಶ್ರುವಾಯು, ಜಲಫಿರಂಗಿ ಹಾಗೂ ಲಾಠೀಚಾರ್ಜ್‌ಗಳನ್ನು ನಡೆಸಬೇಕಾದ ಪರಿಸ್ಥಿತಿ ಬಂದೊದಗಿದ ಹಿನ್ನೆಲೆಯಲ್ಲಿ ಪೊಲೀಸರು ಬೆಳಗ್ಗೆಯೇ ನಗರದ ಆಯಕಟ್ಟಿನ ಸ್ಥಳಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು.

        ಅಲ್ಲದೆ ರಾಷ್ಟ್ರಪತಿ ಭವನ, ಪ್ರಧಾನಿ ಕಚೇರಿ ಮತ್ತಿತರ ಪ್ರಮುಖ ಕಚೇರಿಗಳನ್ನು ಹೊಂದಿರುವ ರಾಜ್‌ಪಥ್‌ನ ಎಲ್ಲಾ ರಸ್ತೆಗಳಿಗೆ ಅಡ್ಡಲಾಗಿ ಬ್ಯಾರಿಕೇಡ್‌ಗಳನ್ನು ಇಟ್ಟು ಸಂಚಾರವನ್ನು ನಿರ್ಬಂಧಿಸಿದ್ದರು. ಅಲ್ಲದೆ ಮುಂಜಾಗ್ರತಾ ಕ್ರಮವಾಗಿ ದಿಲ್ಲಿಯ ಎಂಟು ಮೆಟ್ರೋ ನಿಲ್ದಾಣಗಳನ್ನು ಮುಚ್ಚಲಾಗಿತ್ತು. ಆದರೆ ಇದ್ಯಾವುದನ್ನೂ ಲೆಕ್ಕಿಸದ ಪ್ರತಿಭಟನಕಾರರು, ಇಂಡಿಯಾ ಗೇಟ್‌ನಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು. ಮುಂದಿನ ತಿಂಗಳು ಗಣರಾಜ್ಯೋತ್ಸವ ಸಮಾರಂಭ ನಡೆಯಲಿರುವ ಸ್ಥಳದಲ್ಲಿ ಇರಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ಮುರಿದರಲ್ಲದೆ ವಾಹನಗಳಿಗೆ ಹಾನಿ ಉಂಟು ಮಾಡಿದರು. ಅಲ್ಲದೆ ತಾಸುಗಳ ಕಾಲ ರಾಜ್‌ಪಥ್‌ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತಡೆ ಒಡ್ಡಿದರು.

        ಕೊನೆಗೆ ವಿದ್ಯಾರ್ಥಿಗಳ ಬೇಡಿಕೆಗೆ ಮಣಿದ ಪೊಲೀಸರು ರಾಜ್‌ಪಥ್‌ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ಸಾಗಲು ಅನುವು ಮಾಡಿಕೊಟ್ಟರು. ಈ ಹಂತದಲ್ಲಿ ಪ್ರತಿಭಟನನಿರತರು ಪೊಲೀಸ್‌ ಬ್ಯಾರಿಕೇಡ್‌ಗಳನ್ನು ಮುರಿದು, ಮುನ್ನುಗ್ಗಲು ಯತ್ನಿಸಿದಾಗ ಪೊಲೀಸರು ತಡೆದರು. ವಿದ್ಯಾರ್ಥಿಗಳನ್ನು ಚದುರಿಸಲು ಜಲಫಿರಂಗಿಗಳನ್ನು ಪ್ರಯೋಗಿಸಿದರು. ಆದರೆ ಯುವ ಸಮುದಾಯ, ಇದಕ್ಕೆ ಜಗ್ಗದೇ ಹೋದಾಗ ಪೊಲೀಸರು ಅಶ್ರುವಾಯುಗಳನ್ನು ಸಿಡಿಸಿದರಲ್ಲದೆ ಲಾಠಿಗಳನ್ನು ಬೀಸಿ, ಅವರುಗಳನ್ನು ಚದುರಿಸಿದರು. ಪೂರ್ವ ದಿಲ್ಲಿ ಸಂಸದ ಸಂದೀಪ್‌ ದೀಕ್ಷಿತ್‌ ಅವರ ವಾಹನವನ್ನು ಇಂಡಿಯಾ ಗೇಟ್‌ ಬಳಿ ತಡೆಗಟ್ಟಿ, ಅವರಲ್ಲಿ ವಾಗ್ವಾದ ನಡೆಸಿದ ವಿದ್ಯಾರ್ಥಿಗಳು, ವಾಹನಕ್ಕೆ ಹಾನಿ ಉಂಟುಮಾಡಿದರು.

        ಅಪರಾಹ್ನ ಗಂಟೆ 2.30ರ ವೇಳೆಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆಲವರು ರಾಜ್‌ಪಥ್‌ನಲ್ಲಿ ಪೊಲೀಸರ ಮೇಲೆ ಕಲ್ಲುಗಳನ್ನು ತೂರಿದ್ದರಿಂದಾಗಿ ಮತ್ತೂಮ್ಮೆ ಘರ್ಷಣೆ ಸಂಭವಿಸಿತು. ಈ ಬಾರಿಯೂ ಪೊಲೀಸರು ಲಾಠೀಚಾರ್ಜ್‌ ನಡೆಸಿ, ಪ್ರತಿಭಟನನಿರತರನ್ನು ನಿಯಂತ್ರಿಸಿದರು. ಮತ್ತೆ 3.15ರ ಸುಮಾರಿಗೆ ಪೊಲೀಸರು ಕಲ್ಲೆಸೆತದಲ್ಲಿ ತೊಡಗಿದ್ದ ಗುಂಪಿನ ಮೇಲೆ ಜಲ ಫಿರಂಗಿ ಹಾಗೂ ಅಶ್ರುವಾಯುಗಳನ್ನು ಪ್ರಯೋಗಿಸಿದರು. ಇದೇ ವೇಳೆ ಕೆಲ ಪ್ರತಿಭಟನಕಾರರು ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾದರಲ್ಲದೆ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ನಡೆಸಿದರು.

        ರಾಜ್‌ಪಥ್‌ನ ಯುದ್ಧಸ್ಮಾರಕದ ಬಳಿಯಲ್ಲಿ ಪೊಲೀಸರು ಅಶ್ರುವಾಯುವನ್ನು ಸಿಡಿಸಿದರಲ್ಲದೆ ಬೆತ್ತ ಪ್ರಹಾರವನ್ನು ನಡೆಸಿದರು. ಈ ವೇಳೆ ಕೆಲ ಮಾಧ್ಯಮ ಮಂದಿಯೂ ಸೇರಿದಂತೆ ಹಲವರು ಗಾಯಗೊಂಡರು. ಸಂಜೆಯ ವೇಳೆಗೆ ಪೊಲೀಸರತ್ತ ಮತ್ತೆ ಕಲ್ಲು ತೂರಿದ ಹಿನ್ನೆಲೆಯಲ್ಲಿ ಅಶ್ರುವಾಯುವನ್ನು ಪ್ರಯೋಗಿಸಿದರು. ಪೊಲೀಸರ ಈ ಬಲಪ್ರಯೋಗದಿಂದ ಓರ್ವ ಮಗುವೂ ಸೇರಿದಂತೆ ಹಲವರು ಗಾಯಗೊಂಡರು.

        ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಹೆಚ್ಚಿನವರು ಬಹಳ ಶಾಂತಿಯುತವಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಕೆಲವರು ದುರುದ್ದೇಶದಿಂದ ಹಿಂಸಾಚಾರದಲ್ಲಿ ತೊಡಗಿದ್ದಾರೆ ಎಂದು ಪ್ರತಿಭಟನಕಾರರು ದೂರಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಕೆಲ ಪುರುಷರು ಮದ್ಯ ಸೇವಿಸಿದ್ದರು. ಮಾತ್ರವಲ್ಲದೆ ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಮಹಿಳಾ ಪ್ರತಿಭಟನಕಾರರು ದೂರಿದರು. ರವಿವಾರದ ಪ್ರತಿಭಟನೆಯಲ್ಲಿ ಯೋಗಗುರು ಬಾಬಾ ರಾಮ್‌ದೇವ್‌ ಪಾಲ್ಗೊಂಡಿದ್ದರಲ್ಲದೆ ವಿವಿಧ ಮಹಿಳಾ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.

        ವಿದ್ಯಾರ್ಥಿನಿಗೆ ಮತ್ತೆ ವೆಂಟಿಲೇಟರ್‌

        ಈ ನಡುವೆ ಅತ್ಯಾಚಾರಕ್ಕೀಡಾಗಿ ಸಫ‌ªರ್‌ಗಂಜ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೈದ್ಯಕೀಯ ವಿದ್ಯಾರ್ಥಿನಿಯ ದೇಹಸ್ಥಿತಿ ಚಿಂತಾಜನಕವಾಗಿಯೇ ಮುಂದುವರಿದಿದೆ. ದೈನಂದಿನ ವೈದ್ಯಕೀಯ ತಪಾಸಣೆಗಳಲ್ಲಿ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ರವಿವಾರ ಮತ್ತೆ ಆಕೆಗೆ ವೆಂಟಿಲೇಟರ್‌ನ್ನು ಅಳವಡಿಸಲಾಗಿದೆ ಎಂದು ವೈದ್ಯರು ತಿಳಿಸಿದರು.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus