Saturday, May 18, 2013
Last Updated: 7:00:31 PM IST
  • ನಾನೆಲ್ಲಿರುವೆ:
  • ಮುಖಪುಟ ರಾಷ್ಟ್ರೀಯ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸ್ಥಾಪಿತ ಹಿತಾಸಕ್ತಿಗಳು ಹಿಂಸೆಯಲ್ಲಿ ಭಾಗಿ
    • ಪೊಲೀಸ್‌
      • Udayavani | Dec 24, 2012

        ಹೊಸದಿಲ್ಲಿ : ಕೆಲವು ಸ್ಥಾಪಿತ ಹಿತಾಸಕ್ತಿಗಳು ಪ್ರತಿಭಟನಕಾರರ ಜತೆ ಸೇರಿಕೊಂಡಿವೆ ಮತ್ತು ಹಿಂಸೆಯನ್ನು ಪ್ರಚೋದಿಸುತ್ತಿವೆ ಎಂದು ದಿಲ್ಲಿ ಪೊಲೀಸ್‌ ಪ್ರತಿಪಾದಿಸಿದೆ. ಅರೆ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರವನ್ನು ಪ್ರತಿಭಟಿಸಿ ಇಂಡಿಯಾ ಗೇಟ್‌ನಲ್ಲಿ ಸೇರಿರುವ ಪ್ರತಿಭಟನಕಾರರ ವಿರುದ್ಧ ಅದು ಪುನರಪಿ ಅಶ್ರುವಾಯು ಕೋಶಗಳನ್ನು ಸಿಡಿಸಿದೆ ಮತ್ತು ಬಲಪ್ರಯೋಗವನ್ನು ಮಾಡಿದೆ.

        ಹಿಂಸೆಯನ್ನು ತಡೆಯಲು ತಾನು ಬೆತ್ತ ಪ್ರಹಾರ ಮತ್ತು ಅಶ್ರುವಾಯು ಕೋಶಗಳನ್ನು ಸಿಡಿಸಿದ್ದಾಗಿ ಗೃಹ ಸಚಿವರಿಗೆ ಕಳಿಸಿದ ತನ್ನ ವರದಿಯಲ್ಲಿ ಪೊಲೀಸ್‌ ಪ್ರತಿಪಾದಿಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

        ಪ್ರತಿಭಟನಕಾರರ ಜತೆ ಕೆಲವು ಸ್ಥಾಪಿತ ಹಿತಾಸಕ್ತಿಗಳು ಸೇರಿಕೊಂಡಿವೆ ಮತ್ತು ಹಿಂಸೆಯನ್ನು ಪ್ರಚೋದಿಸುತ್ತಿವೆ. ಹಿಂಸೆಯ ಕಾರಣ ಪೊಲೀಸ್‌ ಬೆತ್ತ ಪ್ರಹಾರ ಮತ್ತು ಅಶ್ರುವಾಯು ಸಿಡಿಸುವಂಥ ಕ್ರಮಗಳನ್ನು ಕೈಗೊಳ್ಳಬೇಕಾಯಿತು. ಅದು ಶಾಂತಿ ಕಾಯ್ದುಕೊಳ್ಳಲು ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಗೃಹ ಖಾತೆಗೆ ದಿಲ್ಲಿ ಪೊಲೀಸ್‌ ಮಾಹಿತಿ ನೀಡಿದೆ.

        ಜಂತರ್‌ ಮಂತರ್‌ ಅಥವಾ ರಾಮಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸುವಂತೆ ಪೊಲೀಸರು ಯುವ ಜನತೆಗೆ ಬೆಳಗ್ಗೆ ಮನವಿ ಮಾಡಿದ್ದರು. ಜಂತರ್‌ ಮಂತರ್‌ ವಿನಾ ಹೊಸದಿಲ್ಲಿ ಪ್ರದೇಶದಲ್ಲಿ ಸಿಆರ್‌ಪಿಸಿ ವಿಧಿ 144ರನ್ವಯ ಪ್ರತಿಬಂಧಕಾಜ್ಞೆಗಳನ್ನು ವಿಧಿಸಲಾಗಿದೆ ಎಂದು ಅವರು ತಿಳಿಸಿದ್ದರು. ಆದರೆ ಇಂದಿರಾ ಗೇಟ್‌ನಲ್ಲಿ ಪ್ರತಿಭಟನೆ ಹಿಂಸೆಗೆ ತಿರುಗಿದ್ದರಿಂದ ಪೊಲೀಸರು ಪದೇ ಪದೇ ಬೆತ್ತ ಪ್ರಹಾರ ಮಾಡಬೇಕಾಯಿತು ಮತ್ತು ಅಶ್ರು ವಾಯು ಕೋಶಗಳನ್ನು ಸಿಡಿಸಬೇಕಾಯಿತು.

        ಅತ್ಯಾಚಾರ ಕೇಸು: ಮಾಜಿ ಸಿಜೆಐರಿಂದ ತನಿಖಾ ಆಯೋಗ ರಚನೆ

        ಹೊಸದಿಲ್ಲಿ : ಭಾರತದ ಮಾಜಿ ವರಿಷ್ಠ ನ್ಯಾಯಾಧೀಶ (ಸಿಜೆಐ)ರೋರ್ವರು ದಿಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆಗಾಗಿ ಆಯೋಗವನ್ನು ರಚಿಸಲಿರುವರು. ಪೊಲೀಸರಿಂದ ಆಗಿರುವ ಲೋಪಗಳು ಮತ್ತು ದಿಲ್ಲಿಯಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಾತರಿಗೊಳಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಈ ಆಯೋಗ ಸಲಹೆ ನೀಡಲಿದೆ.

        ಪೊಲೀಸ್‌ ವಿಶೇಷ ಆಯುಕ್ತ (ಕಾನೂನು ಮತ್ತು ವ್ಯವಸ್ಥೆ) ಧರ್ಮೇಂದ್ರ ಕುಮಾರ್‌ ಈ ವಿಷಯವನ್ನು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

        ಸರಕಾರ ತ್ರಿಸದಸ್ಯ ಸಮಿತಿಯೊಂದನ್ನು ಕೂಡ ರಚಿಸಿದೆ. ಮಾಜಿ ಸಿಜೆಐ ನ್ಯಾ| ಜೆ.ಎಸ್‌. ವರ್ಮಾ ಇದರ ಓರ್ವ ಸದಸ್ಯರಾಗಿರುವರು. ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆ ಹೆಚ್ಚಿಸುವ ಕಾನೂನುಗಳ ಕುರಿತು ಸಮಿತಿ ಪರಿಶೀಲಿಸಲಿದೆ ಎಂದವರು ಹೇಳಿದರು.

        ಈ ಘಟನೆಯಲ್ಲಿ ತ್ವರಿತ ಕ್ರಮಕ್ಕಾಗಿ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಧ್ಯಾನ್‌ ಕೃಷ್ಣನ್‌ ಅವರು ವಿಶೇಷ ಪ್ರಾಸಿಕ್ಯೂಟರ್‌ ಆಗಿರುತ್ತಾರೆ ಮತ್ತು ವಿಚಾರಣೆ ಕಿರು ಅವಧಿಯಲ್ಲಿ ಮುಗಿಯುವುದನ್ನು ಖಾತರಿಗೊಳಿಸುತ್ತಾರೆ ಎಂದು ಕುಮಾರ್‌ ತಿಳಿಸಿದರು.

        ಯುವತಿಯನ್ನು ರಕ್ಷಿಸಲು ಏಕೆ ಸಾಧ್ಯವಾಗಲಿಲ್ಲ ಮತ್ತು ಇದಕ್ಕೆ ಹೊಣೆಯಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಬೇಡಿಕೆ ಕುರಿತಂತೆ ಅವರನ್ನು ಪ್ರಶ್ನಿಸಲಾಯಿತು. ಅತ್ಯಂತ ಹಿರಿಯ ನಿವೃತ್ತ ಸರ್ವೋಚ್ಚ ನ್ಯಾಯಾಲಯದ ವರಿಷ್ಠ ನ್ಯಾಯಾಧೀಶರ ಅಧೀನದಲ್ಲಿ ತನಿಖಾ ಆಯೋಗವನ್ನು ರಚಿಸಲಾಗುವುದು. ಈ ಘಟನೆ ಏಕೆ ನಡೆಯಿತು. ಅದನ್ನು ತಡೆಯಲು ಏಕೆ ಸಾಧ್ಯವಾಗಲಿಲ್ಲ. ದಿಲ್ಲಿ ಮತ್ತು ದೇಶದ ಇತರ ಭಾಗಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಉತ್ತಮಪಡಿಸಲು ಯಾವ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಲೋಪಗಳು ನಡೆದಿವೆಯೇ ಅಥವಾ ಇಲ್ಲವೇ ಮುಂತಾದ ವಿಷಯಗಳನ್ನು ಒಳಗೊಂಡಂತೆ ಇಡೀ ಪ್ರಕರಣವನ್ನು ಮಾಜಿ ಸಿಜೆಐ ಪರಿಶೀಲಿಸಲಿರುವರು ಎಂದು ಆಯುಕ್ತ ತಿಳಿಸಿದರು.

        ವಿಷಯವನ್ನು ಪರಿಶೀಲಿಸಲು ನೇಮಿಸಿದ ಸಮಿತಿಯಲ್ಲಿ ನ್ಯಾ| ವರ್ಮಾ, ನ್ಯಾ| ಲಲಿತಾ ಸೇಥ್‌ ಮತ್ತು ಮಾಜಿ ಸಾಲಿಸಿಟರ್‌ ಜನರಲ್‌ ಗೋಪಾಲ್‌ ಸುಬ್ರಹ್ಮಣ್ಯಂ ಸದಸ್ಯರಾಗಿರುವರು ಎಂದು ಕುಮಾರ್‌ ಹೇಳಿದರು.

        ತ್ವರಿತ ಕ್ರಮ ಕೈಗೊಳ್ಳಬೇಕೆಂಬ ಯುವ ಜನತೆಯ ಮೂರನೇ ಬೇಡಿಕೆ ಕುರಿತಂತೆ, ನ್ಯಾಯವಾದಿ ಕೃಷ್ಣನ್‌ ಅವರು ವಿಶೇಷ ಪ್ರಾಸಿಕ್ಯೂಟರ್‌ ಆಗಿ ಸೇವೆ ಸಲ್ಲಿಸಲು ಮುಂದೆ ಬಂದಿದ್ದಾರೆ. ಅವರು ಈ ವಿಷಯದಲ್ಲಿ ದೈನಂದಿನ ನೆಲೆಯಲ್ಲಿ ಪಾಲ್ಗೊಳ್ಳಲಿರುವರು ಮತ್ತು ವಿಚಾರಣೆ ಕ್ಷಿಪ್ರ ಅವಧಿಯಲ್ಲಿ ಪೂರ್ಣಗೊಳ್ಳುವುದನ್ನು ಖಾತರಿಗೊಲಿಸುವರು ಎಂದು ಕುಮಾರ್‌ ತಿಳಿಸಿದರು.

        ಗುರುತು ಪತ್ತೆ ಪರೇಡ್‌ನ‌ಲ್ಲಿ ಪಾಲ್ಗೊಳ್ಳಲು ಮತ್ತೆ ಆರೋಪಿಗಳ ನಿರಾಕರಣೆ

        ಹೊಸದಿಲ್ಲಿ : ದಿಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳ ಪೈಕಿ ಮೂವರು ಗುರುತು ಪತ್ತೆ ಪರೇಡ್‌ (ಟಿಐಪಿ)ನಲ್ಲಿ ಪಾಲ್ಗೊಳ್ಳಲು ಮತ್ತೆ ನಿರಾಕರಿಸಿದ್ದಾರೆ. ತಾವು ಹೇಯ ಅಪರಾಧವನ್ನು ಮಾಡಿದ್ದೇವೆ. ತಮ್ಮನ್ನು ನೇಣಿಗೆ ಹಾಕುವುದೇ ತಕ್ಕ ಶಾಸ್ತಿಯಾಗಿದೆ ಎಂದು ಈ ಪೈಕಿ ಇಬ್ಬರು ಇಲ್ಲಿನ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅವರೆಲ್ಲರಿಗೆ 14 ದಿನಗಳ ಅವಧಿಗೆ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿದೆ.

        ಘಟನೆ ವಿರುದ್ಧ ಪ್ರತಿಭಟನೆಯ ಅಲೆ ದಟ್ಟಗೊಳ್ಳುತ್ತಿರುವಂತೆಯೇ, ಪ್ರಕರಣದ ಯಾವುದೇ ಆರೋಪಿಗಳನ್ನು ಪ್ರತಿನಿಧಿಸಬಾರದೆಂದು ಆಗ್ರಹಿಸುವ ನಿರ್ಣಯವನ್ನು ಇಲ್ಲಿನ ಸಾಕೇತ್‌ ಜಿಲ್ಲೆಯ ನ್ಯಾಯಾಲಯಗಳ ವಕೀಲರ ಸಂಘಟನೆ ಕೈಗೊಂಡಿದೆ. ಆರೋಪಿಗಳು ನಡೆಸಿದ ಕೃತ್ಯ ಬರ್ಬರ ಮತ್ತು ಅಮಾನವೀಯವಾಗಿದೆ ಎಂದು ಸಂಘಟನೆ ಹೇಳಿದೆ.

        ಸುಮಾರು 300 ಪ್ರತಿಭಟನಕಾರರು ದಕ್ಷಿಣ ದಿಲ್ಲಿಯ ನ್ಯಾಯಾಲಯ ಆವರಣವನ್ನು ಪ್ರವೇಶಿಸಿದರು. ಆದರೆ ಭದ್ರತಾ ಸಿಬಂದಿ ಅವರನ್ನು ಒಳಗೆ ಬಿಡಲಿಲ್ಲ.

        ಆರೋಪಿಗಳಾದ ಪವನ್‌ ಗುಪ್ತಾ ಮತ್ತು ವಿನಯ್‌ ಅವರನ್ನು ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಪವನ್‌ ಕುಮಾರ್‌ ಅವರು ಬಸ್ಸಿನ ಚಾಲಕ ರಾಮ್‌ ಸಿಂಗ್‌ನೊಂದಿಗೆ ಜ. 6ರ ವರೆಗೆ ತಿಹಾರ್‌ ಸೆರೆಮನೆಗೆ ಕಳಿಸಿದರು. ಅವರ ಕಸ್ಟಡಿ ವಿಚಾರಣೆ ಈಗ ಅಗತ್ಯ ಇಲ್ಲವೆಂದು ಪೊಲೀಸರು ನ್ಯಾಯಾಲಯಕ್ಕೆ ನಿವೇದಿಸಿದ್ದರು.

        ಕೆಲವು ಆರೋಪಿಗಳ ತಪ್ಪೊಪ್ಪಿಗೆ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಹೊಸ ಅರ್ಜಿಗಳನ್ನು ಸಲ್ಲಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿತು ಮತ್ತು ಆರೋಪಿಗಳು ನ್ಯಾಯಾಲಯದಲ್ಲಿ ಹೇಳಿರುವುದು ಪ್ರಮಾಣವಚನವಲ್ಲವೆಂದು ತಿಳಿಸಿತು.

        ಈ ನಡುವೆ, ಬಿಹಾರದ ಔರಂಗಾಬಾದ್‌ ಜಿಲ್ಲೆಯಲ್ಲಿ ಬಂಧಿಸಲ್ಪಟ್ಟ ಸಹಆರೋಪಿ ಅಕ್ಷಯ್‌ ಠಾಕೂರ್‌ನನ್ನು ಶನಿವಾರ ರಾತ್ರಿ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ. ತಿಹಾರ್‌ ಸೆರೆಮನೆಯೊಳಗೆ ಡಿ. 26ರಂದು ಟಿಐಪಿಗೊಳಪಡಲು ಆತ ಒಪ್ಪಿಕೊಂಡಿದ್ದಾನೆ.

        ಎಲ್ಲ ಆರೋಪಿಗಳು ಐಪಿಸಿ ವಿಧಿ 365 (ಅಪಹರಣ), 376 (2)(ಜಿ) (ಸಾಮೂಹಿಕ ಅತ್ಯಾಚಾರ), 377 (ಅಸಹಜ ಅಪರಾಧಗಳು), 394 (ದರೋಡೆ ವೇಳೆ ದೈಹಿಕ ಹಾನಿ) ಮತ್ತು 34 (ಸಮಾನ ಉದ್ದೇಶ)ರನ್ವಯ ಆರೋಪಗಳನ್ನು ಎದುರಿಸುತ್ತಿದ್ದಾರೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      • Copyright @ 2009 Udayavani.All rights reserved.
      • Designed & Hosted By 4cplus