Friday, May 24, 2013
Last Updated: 5:45:33 AM IST
  • ನಾನೆಲ್ಲಿರುವೆ:
  • ಮುಖಪುಟ ಕ್ರೀಡೆ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ವೇಗಿಯಾಗಲು ಹೊರಟು ಬ್ಯಾಟಿಂಗ್‌ ದಂತಕಥೆ ಆದರು!
    • ವೇಗದ ಬೌಲರ್‌ ಆಗುವ ಕನಸಿಗೆ ವಿದಾಯ ಹೇಳಿದ ಸಚಿನ್‌ ಮುಂದೆ ಏನಾದರು ಎಂಬುದು ಎಲ್ಲರಿಗೂ ಗೊತ್ತೇ ಇದೆ.

      • Udayavani | Dec 23, 2012

        ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರನಾದ ಸಚಿನ್‌ ತೆಂಡುಲ್ಕರ್‌ ವಾಸ್ತವವಾಗಿ ವೇಗದ ಬೌಲರ್‌ ಆಗಿ ಬೆಳೆಯುವ ಆಸೆ ಹೊಂದಿದ್ದವರು. ಶಾಲಾ ದಿನಗಳಲ್ಲಿ ವೇಗದ ಬೌಲಿಂಗ್‌ನಲ್ಲಿ ಪರಿಣತಿ ಪಡೆಯುವ ನಿಟ್ಟಿನಲ್ಲಿ 'ಎಂಆರ್‌ಎಫ್ ಪೇಸ್‌ ಫೌಂಡೇಷನ್‌'ನಲ್ಲಿ ತರಬೇತಿಗೆ ಸೇರಿಕೊಂಡಿದ್ದರು. ಅಲ್ಲಿನ ತೆಂಡುಲ್ಕರ್‌ ವೇಗದ ಬೌಲಿಂಗ್‌ 'ಸಾಮರ್ಥ್ಯ' ಕಂಡು ಪೆಚ್ಚಾದ ಡೆನಿಸ್‌ ಲಿಲ್ಲಿ, ನೀನು ಬೌಲಿಂಗ್‌ ಬಿಟ್ಟು ಬ್ಯಾಟಿಂಗ್‌ ಬಗ್ಗೆ ಗಮನ ಹರಿಸು. ನಿನಗೆ ಅಲ್ಲೇ ಭವಿಷ್ಯವಿದೆ ಎಂದು ಸಲಹೆ ನೀಡಿದ್ದರು. ಹೀಗೆ ವೇಗದ ಬೌಲರ್‌ ಆಗುವ ಕನಸಿಗೆ ವಿದಾಯ ಹೇಳಿದ ಸಚಿನ್‌ ಮುಂದೆ ಏನಾದರು ಎಂಬುದು ಎಲ್ಲರಿಗೂ ಗೊತ್ತೇ ಇದೆ.

        ಮೆಕೆನ್ರೊ ನೋಡಿ ಟೆನಿಸ್‌ ಮರುಳು

        ಬಾಲ್ಯದಲ್ಲಿ ಟೆನಿಸ್‌ ಬಗ್ಗೆ ಸಾಕಷ್ಟು ಪ್ರೀತಿ ಹೊಂದಿದ್ದ ಸಚಿನ್‌, ವಿಶ್ವಕಂಡ ಶ್ರೇಷ್ಠ ಟೆನಿಸ್‌ ಆಟಗಾರ ಅಮೆರಿಕದ ಜಾನ್‌ ಮೆಕೆನ್ರೊ ಅವರ ಕಟ್ಟಾ ಅಭಿಮಾನಿ. ಅವರಂತೆಯೇ ತಾನೂ ಟೆನಿಸ್‌ ಆಟಗಾರನಾಗಬೇಕೆಂದು ಕೆಲ ಕಾಲ ಟೆನಿಸ್‌ ಕೂಡಾ ಅಭ್ಯಾಸ ಮಾಡಿದ್ದರು. ಆದರೆ ಅದ್ಯಾಕೋ ಟೆನಿಸ್‌ ಕೈಹಿಡಿಯಲಿಲ್ಲ. ಟೆನಿಸ್‌ ಕೈತಪ್ಪಿದ ಭಾಗ್ಯ ಕ್ರಿಕೆಟ್‌ ಪಾಲಾಯಿತು.

        ಪ್ರಖ್ಯಾತ ಕವಿಯ ಹೆಸರಲ್ಲೇ ಪ್ರಖ್ಯಾತಿ

        ಮುಂಬಯಿಯಲ್ಲಿ ಪ್ರೊಫೆಸರ್‌ ಆಗಿದ್ದ ಮರಾಠಿ ಕವಿ ರಮೇಶ್‌ ತೆಂಡುಲ್ಕರ್‌ ಮತ್ತು ವಿಮಾ ಕಂಪನಿಯೊಂದರ ಉದ್ಯೋಗಿ ರಜನಿ ದಂಪತಿಗೆ ನಾಲ್ವರು ಮಕ್ಕಳು. ನಿತಿನ್‌, ಅಜಿತ್‌ ಮತ್ತು ಸವಿತಾ ಮೊದಲ ಮೂರು ಮಕ್ಕಳು. ಕಡೆಯ ಮಗನಿಗೆ ತಮ್ಮ ಪ್ರೀತಿಯ ಸಂಗೀತ ನಿರ್ದೇಶಕ ಸಚಿನ್‌ ದೇವ್‌ಬರ್ಮ್ನ್‌ಅವರ ಹೆಸರು ಇಡಬೇಕೆಂಬುದು ದಂಪತಿ ಕನಸಾಗಿತ್ತು. ಅಂತೆಯೇ ರಮೇಶ್‌ ಮತ್ತು ರಜನಿ ತಮ್ಮ ಪುತ್ರನಿಗೆ ಸಚಿನ್‌ ಎಂದೇ ಹೆಸರಿಟ್ಟರು. ಹೀಗೆ ಖ್ಯಾತ ಕವಿಯ ಹೆಸರಿನಿಟ್ಟುಕೊಂಡು ಸಚಿನ್‌ ರಮೇಶ್‌ ತೆಂಡುಲ್ಕರ್‌ ಮುಂದೆ ಸಂಗೀತಗಾರ ಸಚಿನ್‌ದೇವ್‌ ಅವರನ್ನೇ ಮೀರಿಸುವಂತಹ ಖ್ಯಾತಿ ಗಳಿಸಿದ್ದು ಇತಿಹಾಸ.

        ಶಾಂತವದನದ ಹಿಂದೆ ತುಂಟ ಇತಿಹಾಸ

        ತಮ್ಮ ಆಟದ ಮೂಲಕ ಸಚಿನ್‌ ಎಷ್ಟು ಖ್ಯಾತರೋ, ತಮ್ಮ ಸಭ್ಯತೆ, ಸಂಸ್ಕೃತಿ, ನಡೆ ನುಡಿಗಳ ಮೂಲಕವೂ ಕ್ರೀಡಾಲೋಕದಲ್ಲಿ ಅಷ್ಟೇ ಪರಿಚಿತ. ಕ್ರೀಡಾಂಗಣದಲ್ಲಿ ಒಮ್ಮೆಯೂ ಯಾರೊಂದಿಗೂ ಅಹಿತಕರವಾಗಿ ನಡೆದುಕೊಂಡ ಇತಿಹಾಸವಿಲ್ಲ. ಆದರೆ ಇಂತಹ ಸನ್ನಡತೆಗೆ ಹೆಸರಾದ ಸಚಿನ್‌ ಬಾಲ್ಯದಲ್ಲಿ ತುಂಟತನಕ್ಕೆ ಕುಖ್ಯಾತಿ ಪಡೆದಿದ್ದರು!

        ಹೌದು, ಬಾಲ್ಯದ ದಿನಗಳಲ್ಲಿ ಸಚಿನ್‌ಗೆ ಜಗಳಗಂಟ ಎಂಬ ಬಿರುದಿತ್ತು. ಶಾಲೆಗೆ ಬರುವ ಹೊಸ ಹುಡುಗರ ಜೊತೆ ಸಚಿನ್‌ ಜಗಳ ಕಟ್ಟಿಟ್ಟ ಬುತ್ತಿ ಎನ್ನುವಷ್ಟರ ಮಟ್ಟಿಗೆ ಜಗಳಗಂಟ. ಹೀಗೆ ಜಗಳಗಂಟ ಪ್ರವೃತ್ತಿಯಿಂದ ತಮ್ಮನನ್ನು ಸರಿದಾರಿಗೆ ತರಲೆಂದೇ ಅವರ ಹಿರಿಯ ಸೋದರ ಅಜಿತ್‌, ಸಚಿನ್‌ರನ್ನು ಕ್ರಿಕೆಟ್‌ ಆಟಕ್ಕೆ ಗಂಟು ಬೀಳಿಸಿದ್ದರು. ಹೀಗೆ ಕ್ರಿಕೆಟ್‌ಗೆ ಗಂಟು ಬಿದ್ದ ಸಚಿನ್‌ರನ್ನು ಮುಂದೆ 23 ವರ್ಷಗಳ ಕಾಲ ಕ್ರಿಕೆಟ್‌ ರಂಗ ಹೊತ್ತು ಮೆರೆದಾಡಿತು.

        ಅಚೆÅàಕರ್‌ ಇಲ್ಲದಿದ್ದರೆ ತೆಂಡುಲ್ಕರ್‌ ಸಿಗುತ್ತಿರಲಿಲ್ಲ

        ಕಳೆದ 24 ವರ್ಷಗಳಲ್ಲಿ ಕ್ರಿಕೆಟ್‌ ರಂಗಕ್ಕೆ ಸಚಿನ್‌ ನೀಡಿದ ಕಾಣಿಕೆಯನ್ನು ಸ್ಮರಿಸುವುದಾದರೆ, ಅದಕ್ಕೆ ಮೊದಲು ನಾವು ಅವರ ಮಾರ್ಗದರ್ಶಕ, ಕೋಚ್‌ ರಮಾಕಾಂತ್‌ ಅಚೆÅàಕರ್‌ ಅವರನ್ನು ಸ್ಮರಿಸಬೇಕು. ಏಕೆಂದರೆ ಅಚೆÅàಕರ್‌ ಇಲ್ಲದ ಸಚಿನ್‌ರನ್ನು ಊಹಿಸುವುದು ಅಸಾಧ್ಯ.

        ಬಾಲ್ಯದಲ್ಲಿ ತುಂಟತನದಿಂದ ಮೆರೆದಾಡುತ್ತಿದ್ದ ತಮ್ಮನನ್ನು ಸರಿದಾರಿಗೆ ತರಲೆಂದು ಅಜಿತ್‌, ತನ್ನ ತಮ್ಮ ಸಚಿನ್‌ನನ್ನು 1984ರಲ್ಲಿ ರಮಾಕಾಂತ್‌ ಅಚೆÅàಕರ್‌ ಅವರಿಗೆ ಪರಿಚಯಿಸಿದರು. ಮೊದಲ ಭೇಟಿಯಲ್ಲೇ ಸಚಿನ್‌ ಆಟದಿಂದ ಪ್ರಭಾವಿತರಾದ ಅಚೆÅàಕರ್‌, ಸಾಕಷ್ಟು ಪ್ರಖ್ಯಾತ ಆಟಗಾರರನ್ನು ಹೊಂದಿರುವ ಶಾರದಾಶ್ರಮ ವಿದ್ಯಾಮಂದಿರ ಹೈಸ್ಕೂಲ್‌ಗೆ ಸೇರಿಸುವಂತೆ ಸೂಚಿಸಿದರು. ಈ ಹಂತದಲ್ಲಿಯೇ ಪ್ರತಿದಿನ ಮುಂಜಾನೆ ಮತ್ತು ಸಂಜೆ ಶಿವಾಜಿ ಪಾರ್ಕ್‌ನಲ್ಲಿ ಸಚಿನ್‌ಗೆ ಅಚೆÅàಕರ್‌ ಕಠಿನ ತರಬೇತಿ ನೀಡಿ ಅವರನ್ನು ದೊಡ್ಡ ಸಾಧಕರನ್ನಾಗಿ ಮಾಡಿದರು.

        * ಸಚಿನ್‌ ಮತ್ತು 1 ರೂಪಾಯಿ ಕಥೆ

        ನೂರಾರು ಕೋಟಿ ರೂ.ಗಳ ಒಡೆಯ ಸಚಿನ್‌ ತೆಂಡುಲ್ಕರ್‌ಗೆ ಈಗಲೂ 1 ರೂಪಾಯಿ ನಾಣ್ಯವೆಂದರೆ ಅದೇನೋ ಪ್ರೀತಿ, ಆತ್ಮೀಯತೆ. ಏಕೆಂದರೆ 1 ರೂಪಾಯಿ ನಾಣ್ಯದೆಡೆಗಿನ ಅವರ ಪ್ರೀತಿಯ ಹಿಂದೆ ಒಂದು ರೋಚಕ ಕತೆಯಿದೆ.

        ಬಾಲ್ಯದಲ್ಲಿ ರಮಾಕಾಂತ್‌ ಅಚೆÅàಕರ್‌ ಬಳಿ ಮುಂಜಾನೆ ಮತ್ತು ಸಂಜೆ ಕ್ರಿಕೆಟ್‌ ತರಬೇತಿ ಪಡೆಯುತ್ತಿದ್ದ ಸಚಿನ್‌ ಬಹುಬೇಗ ದಣಿದು ಬಿಡುತ್ತಿದ್ದರು. ಈ ವೇಳೆ ಸಚಿನ್‌ರನ್ನು ಮತ್ತಷ್ಟು ಕಠಿನ ಪರಿಶ್ರಮಕ್ಕೆ ಒಡ್ಡಲು ಅಚೆÅàಕರ್‌ ಒಂದು ಉಪಾಯ ರೂಪಿಸಿದ್ದರು. ಸಚಿನ್‌ ಬ್ಯಾಟಿಂಗ್‌ ಮಾಡುವ ಸ್ಟಂಪ್‌ ಮೇಲೆ 1 ರೂಪಾಯಿ ನಾಣ್ಯ ಇಡುತ್ತಿದ್ದರು. ಯಾವುದೇ ಬೌಲರ್‌ ಸಚಿನ್‌ರನ್ನು ಔಟ್‌ ಮಾಡಿದರೆ ಆ 1 ರೂಪಾಯಿ ಬೌಲರ್‌ ಪಾಲಾಗುತಿತ್ತು. ಒಂದು ವೇಳೆ ಔಟಾಗದೇ ಹೋದಲ್ಲಿ 1 ರೂಪಾಯಿ ಸಚಿನ್‌ ಪಾಲಾಗುತಿತ್ತು.

        24 ವರ್ಷಗಳ ಹಿಂದೆ 1 ರೂಪಾಯಿ ಸಾಕಷ್ಟು ಮೌಲ್ಯ ಹೊಂದಿದ್ದ ದಿನಗಳು. ಹೀಗೆ ಅಂದಿನ ದಿನಗಳಲ್ಲಿ ಸಂಗ್ರಹವಾದ 13 ಒಂದು ರೂಪಾಯಿ ನಾಣ್ಯಗಳು ಈಗಲೂ ಸಚಿನ್‌ ಬಳಿ ಇವೆ. ತಮಗೆ ಸಿಕ್ಕ ಅತ್ಯಂತ ದೊಡ್ಡ ಪ್ರಶಸ್ತಿ ಫ‌ಲಕಗಳ ಪೈಕಿ ಈ 13 ನಾಣ್ಯಗಳೂ ಸೇರಿವೆ ಎಂಬ ನಂಬಿಕೆ ಸಚಿನ್‌ರದ್ದು.

        * 6 ವರ್ಷ ದೊಡ್ಡ ವೈದ್ಯೆಯನ್ನು ವರಿಸಿದ ಸಚಿನ್‌

        16ನೇ ವರ್ಷಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಸಚಿನ್‌ ವಿವಾಹ ಬಂಧನಕ್ಕೆ ಒಳಗಾಗಿದ್ದು ಕೂಡ ಬಹುಬೇಗ ಅನ್ನಬಹುದು. ತಮ್ಮ 22ನೇ ವಯಸ್ಸಿನಲ್ಲಿಯೇ ಸಚಿನ್‌, ವೃತ್ತಿಯಲ್ಲಿ ವೈದ್ಯೆಯಾಗಿದ್ದ ಅಂಜಲಿಯನ್ನು ವರಿಸಿದರು. ಗುಜರಾತ್‌ ಮೂಲದ ಉದ್ಯಮಿ ಆನಂದ್‌ ಮೆಹ್ತಾ ಮತ್ತು ಬ್ರಿಟನ್‌ನ ಸಾಮಾಜಿಕ ಕಾರ್ಯಕರ್ತೆ ಅನ್ನಾಬೆಲ್‌ ಮೆಹ್ತಾ ಅವರ ಪುತ್ರಿಯೇ ಅಂಜಲಿ. ವಿವಾಹವಾಗುವ ವೇಳೆ ಸಚಿನ್‌ಗೆ 22ರ ಹರೆಯವಾಗಿದ್ದರೆ, ಅಂಜಲಿಗೆ 28 ವರ್ಷ. ಅಂದರೆ ತಮಗಿಂತ 6 ವರ್ಷ ದೊಡ್ಡವರನ್ನು ಸಚಿನ್‌ ವರಿಸಿದ್ದರು. ಈ ದಂಪತಿಗೆ ಸಾರಾ ಮತ್ತು ಅರ್ಜುನ್‌ ಎಂಬಿಬ್ಬರು ಮಕ್ಕಳು. ಅರ್ಜುನ್‌ ಕ್ರಿಕೆಟ್‌ ತರಬೇತಿಯಲ್ಲಿ ತೊಡಗಿಸಿಕೊಂಡಿದ್ದಾನೆ.

        * ಮೂವರು ಹಿರಿಯರ ಪ್ರೀತಿಯ ಕಿರಿಯ

        ಸಚಿನ್‌ಗೆ ಇಬ್ಬರು ಹಿರಿಯ ಸೋದರರು ಮತ್ತು ಒಬ್ಬಳು ಹಿರಿಯ ಸೋದರಿ ಇದ್ದಾರೆ. ಅಜಿತ್‌, ನಿತಿನ್‌ ಸೋದರರಾದರೆ ಸವಿತಾ ಸೋದರಿ. ಇವರೆಲ್ಲ, ಸಚಿನ್‌ ಅವರ ತಂದೆ ರಮೇಶ್‌ ತೆಂಡುಲ್ಕರ್‌ ಅವರ ಮೊದಲ ಪತ್ನಿಯ ಮಕ್ಕಳು. ಆದರೂ ಮೂವರು ಹಿರಿಯರಿಗೆ ಸಚಿನ್‌ ಅಚ್ಚುಮೆಚ್ಚು. ಕ್ರಿಕೆಟಗೆ ಸಚಿನ್‌ ಸಿಕ್ಕಿದ್ದೇ ಹಿರಿಯ ಸೋದರ ಅಜಿತ್‌ ಅವರಿಂದಾಗಿ.

        * ಪುಟ್ಟಪರ್ತಿ ಸಾಯಿಬಾಬಾರ ಪರಮಭಕ್ತ

        ಸಚಿನ್‌ ಅತೀವ ಧಾರ್ಮಿಕ ನಂಬಿಕೆಯುಳ್ಳ ವ್ಯಕ್ತಿ. ಪುಟ್ಟಪರ್ತಿಯ ಸಾಯಿಬಾಬಾ ಅವರನ್ನು ಸಚಿನ್‌ ಬಹುವಾಗಿ ನಂಬಿದ್ದರು. ಹಲವು ಬಾರಿ ಪುಟ್ಟಪರ್ತಿಗೆ ಭೇಟಿ ನೀಡಿದ್ದರು. ಕಳೆದ ವರ್ಷ ಸಾಯಿಬಾಬಾ ನಿಧನರಾದಾಗಲೂ ಸಹ ಸಚಿನ್‌ ಪುಟ್ಟಪರ್ತಿಗೆ ಭೇಟಿ ನೀಡಿ ಕಣ್ಣೀರಿಟ್ಟಿದ್ದರು. ಇದೇ ಕಾರಣಕ್ಕಾಗಿ ತಮ್ಮ ಹುಟ್ಟುಹಬ್ಬದ ಆಚರಣೆಯನ್ನೂ ರದ್ದು ಮಾಡಿದ್ದರು. ಜೊತೆಗೆ ಸಚಿನ್‌ ಗಣೇಶನ ಭಕ್ತ ಕೂಡಾ ಹೌದು. ಸದ್ದುಗದ್ದಲವಿಲ್ಲದೆಯೇ ಆಗಾಗ್ಗೆ ದೇಗುಲಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುತ್ತಲೇ ಇರುತ್ತಾರೆ.

        * ರಾಜಕೀಯದಲ್ಲೂ ಒಂದು ಹೆಜ್ಜೆ

        ಕ್ರಿಕೆಟ್‌ಗೆ ಕಾಲಿಟ್ಟ ದಿನದಿಂದಲೂ ಕ್ರಿಕೆಟ್‌ ಹೊರತುಪಡಿಸಿ ಇನ್ಯಾವುದೇ ವಿಷಯದ ಬಗ್ಗೆ ಬಹಿರಂಗವಾಗಿ ಮಾತನಾಡದೆ ಸಭ್ಯತೆ ಕಾಪಾಡಿಕೊಂಡ ವ್ಯಕ್ತಿ ಸಚಿನ್‌. ಕ್ರೀಡಾ ಕ್ಷೇತ್ರದಲ್ಲಿ ಸಚಿನ್‌ರ ಸಾಧನೆ ಪರಿಗಣಿಸಿ ಕೇಂದ್ರ ಸರ್ಕಾರ 2012ರಲ್ಲಿ ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಿತು. ಸರ್ಕಾರದ ಈ ಆಹ್ವಾನವನ್ನು ಸಚಿನ್‌ ಒಪ್ಪಿಕೊಂಡರೂ, ತಮ್ಮ ಮೊದಲ ಪ್ರಾಶಸ್ತ್ಯ ಏನಿದ್ದರೂ ಕ್ರಿಕೆಟ್‌ ಕಡೆಗೆ, ಆಮೇಲೆ ರಾಜಕೀಯ ಎನ್ನುವ ಮೂಲಕ ಆಟದೆಡೆಗಿನ ತಮ್ಮ ಶ್ರದ್ಧೆ, ಪ್ರೀತಿ ಪ್ರದರ್ಶಿಸಿದ್ದರು.

        * ತಂದೆ ಸಾವಿನ ಶೋಕದಲ್ಲೂ ಆಟ

        1999ರ ವಿಶ್ವಕಪ್‌ ಕ್ರಿಕೆಟ್‌ ಇಂಗ್ಲಂಡ್‌ನ‌ಲ್ಲಿ ನಡೆದಿತ್ತು. ತಂಡದ ಸದಸ್ಯನಾಗಿ ಸಚಿನ್‌ ಅಲ್ಲಿಗೆ ತೆರಳಿದ್ದರು. ಈ ವೇಳೆಯೇ ಅವರ ತಂದೆ ರಮೇಶ್‌ ತೆಂಡುಲ್ಕರ್‌ ನಿಧನರಾದರು. ಸುದ್ದಿ ಕೇಳಿ ಮುಂಬೈಗೆ ಧಾವಿಸಿದ ಸಚಿನ್‌ ತಂದೆಯ ಅಂತ್ಯಕ್ರಿಯೆ ಪೂರ್ಣಗೊಳಿಸಿ ಬಳಿಕ ಪುನಃ ಇಂಗ್ಲೆಂಡ್‌ಗೆ ತೆರಳಿದರು. ಮುಂದಿನ ಪಂದ್ಯದಲ್ಲಿಯೇ ಕೀನ್ಯಾ ವಿರುದ್ಧ ಶತಕ ಸಿಡಿಸಿ, ಅದನ್ನು ತಮ್ಮ ತಂದೆಗೆ ಅರ್ಪಿಸಿದರು.

        * ನಾಯಕನಾಗಿ ದಯನೀಯ ವೈಫ‌ಲ್ಯ

        ಏಕದಿನ ಪಂದ್ಯಗಳಲ್ಲಿ ವೈಯಕ್ತಿಕವಾಗಿ ಯಾರೂ ಮುರಿಯಲಾರರು ಎನ್ನುವ ಮಟ್ಟಿಗೆ ದಾಖಲೆಗಳ ಮೇಲೆ ದಾಖಲೆ ಸೃಷ್ಟಿಸಿದ ಸಚಿನ್‌, ತಂಡದ ನಾಯಕನಾಗಿ ಮಾತ್ರ ದಯನೀಯ ವೈಫ‌ಲ್ಯ ಕಂಡಿದ್ದರು. ಸಚಿನ್‌ ನಾಯಕರಾಗಿ ಮುನ್ನಡೆಸಿದ 73 ಪಂದ್ಯಗಳ ಪೈಕಿ ಭಾರತ ಕೇವಲ 23ರಲ್ಲಿ ಮಾತ್ರ ಗೆದ್ದು, 43 ಪಂದ್ಯಗಳಲ್ಲಿ ಸೋಲುಂಡಿತ್ತು. 2 ಪಂದ್ಯಗಳು ಟೈ ಆಗಿದ್ದರೆ, 6 ಪಂದ್ಯಗಳಲ್ಲಿ ಯಾವುದೇ ಫ‌ಲಿತಾಂಶ ಬಂದಿರಲಿಲ್ಲ.

        1997ರಲ್ಲಿ ಸಚಿನ್‌ಗೆ ತಂಡದ ನಾಯಕತ್ವ ವಹಿಸಿದಾಗ, ನಾಯಕತ್ವ ಕಳೆದುಕೊಂಡಿದ್ದ ಅಜರುದ್ದೀನ್‌ ಹೀಗೆ ಹೇಳಿದ್ದರಂತೆ 'ನಹೀ ಜೀತೇಗಾ: ಛೋಟೇ ಕೆ ನಸೀಬ್‌ ಮೇ ಜೀತ್‌ ನಹೀ ಹೈ' (ಗೆಲ್ಲುವುದಿಲ್ಲ: ಕುಳ್ಳನ ಹಣೆಬರಹದಲ್ಲಿ ಗೆಲುವು ಬರೆದಿಟ್ಟಿಲ್ಲ...).

        * ನೋವಿನ ಸಮಸ್ಯೆ

        ತೆಂಡುಲ್ಕರ್‌ ಹಲವು ಬಾರಿ ಮೊಣಕೈ ನೋವಿನಿಂದ ಬಳಲಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದರು. ಹೀಗಾಗಿಯೇ ವೈದ್ಯರು ಅವರಿಗೆ ಭಾರೀ ತೂಕದ ಬ್ಯಾಟ್‌ ಬಳಸದಂತೆ ಸಲಹೆ ನೀಡಿದ್ದರು. ಆ ಬಳಿಕ ತೆಂಡುಲ್ಕರ್‌ ಕಡಿಮೆ ತೂಕದ ಬ್ಯಾಟ್‌ಗಳಿಗೆ ಶರಣಾಗಿದ್ದರು.

        * ಬಾಲ್‌ ವಿರೂಪಗೊಳಿಸಿದ ಆರೋಪ

        ಸಭ್ಯತೆ ಹೆಸರಾದ ಸಚಿನ್‌ ತೆಂಡುಲ್ಕರ್‌ ಮೇಲೂ ಚೆಂಡು ವಿರೂಪಗೊಳಿಸಿದ ಆರೋಪ ಕೇಳಿಬಂದಿತ್ತು. ಇಂಥದೊಂದು ಆರೋಪ ಕೇಳಿಬಂದಾಗ, ಆರೋಪ ಮಾಡಿದ ಇಂಗ್ಲಂಡ್‌ ಮೂಲದ ಮ್ಯಾಚ್‌ ರೆಫ್ರಿ ಮೈಕ್‌ ಡೆನ್ನಿಸ್‌ ಹೊರತುಪಡಿಸಿ ಬೇರ್ಯಾರೂ ಸಚಿನ್‌ ಬಗ್ಗೆ ಸಂದೇಶ ವ್ಯಕ್ತಪಡಿಸಲಿಲ್ಲ ಎಂಬುದೇ ವಿಶೇಷ. ಆದರೂ ಐಸಿಸಿ ನಿಯಮಗಳ ಅನ್ವಯ ತೆಂಡುಲ್ಕರ್‌ಗೆ 2001ರಲ್ಲಿ ಒಂದು ಪಂದ್ಯದ ನಿಷೇಧ ಹೇರಲಾಗಿತ್ತು.

        * ಫೆರಾರಿ ಕಾರಿಗೆ ಸುಂಕ ಪಾವತಿ ವಿವಾದ

        ವೇಗದ ಕಾರುಗಳ ಚಾಲನೆಯ ಹುಚ್ಚು ಹೊಂದಿರುವ ಸಚಿನ್‌, ಡಾನ್‌ ಬ್ರಾಡ್‌ಮನ್‌ ಅವರ 29 ಶತಕಗಳ ದಾಖಲೆ ಮುರಿದಾಗ, ಬಹುಮಾನದ ರೂಪದಲ್ಲಿ ದುಬಾರಿ ಮೌಲ್ಯದ ಫೆರಾರಿ ಕಾರನ್ನು ಪಡೆದಿದ್ದರು. ಆದರೆ ವಿದೇಶದಿಂದ ಕಾರನ್ನು ತರಬೇಕಾದರೆ ಕಾರಿನ ಮೌಲ್ಯದಷ್ಟೇ ಹಣವನ್ನು ಸುಂಕವಾಗಿ ಕಟ್ಟಬೇಕು. ಆದರೆ ಕೇಂದ್ರ ಸರ್ಕಾರ, ಇದು ಬಹುಮಾನವಾಗಿದ್ದರಿಂದ ಸುಂಕ ಮನ್ನಾ ಮಾಡುವುದಾಗಿ ಹೇಳಿತು. ಆದರೆ ಕಾನೂನಿನ ಅನ್ವಯ ಇದು ಸಾಧ್ಯವಿರಲಿಲ್ಲ. ಈ ಕುರಿತು 2003ರಲ್ಲಿ ಸಾಕಷ್ಟು ಟೀಕೆಗಳು ಕೇಳಿಬಂದವು. ಸಚಿನ್‌ 1.13 ಕೋಟಿ ರೂ. ಸುಂಕ ಕಟ್ಟಬೇಕಿತ್ತು ಎಂಬ ವಾದ ಕೇಳಿಬಂದವು. ಇದಕ್ಕೆ ಸಚಿನ್‌ ಒಪ್ಪದೇ ಇದ್ದಾಗ, ಕಾರನ್ನು ಬಹುಮಾನವಾಗಿ ಕೊಟ್ಟಿದ್ದ ಫಿಯಟ್‌ ಕಂಪನಿಯೇ ಸುಂಕ ಪಾವತಿ ಮಾಡುವ ಮೂಲಕ ವಿವಾದಕ್ಕೆ ತೆರೆ ಎಳೆಯಿತು.

        * ಹೊಟೇಲ್‌ಗ‌ಳ ಮಾಲಕ...

        ಕ್ರಿಕೆಟ್‌ ಮತ್ತು ಜಾಹೀರಾತುಗಳ ಮೂಲಕ ಸಾಕಷ್ಟು ಸಂಪಾದನೆ ಮಾಡಿರುವ ಸಚಿನ್‌, ಮುಂಬಯಿಲ್ಲಿ 'ತೆಂಡುಲ್ಕರ್' ಮತ್ತು 'ಸಚಿನ್ಸ್‌' ಹೆಸರಲ್ಲಿ ಎರಡು ರೆಸ್ಟೋರೆಂಟ್‌ಗಳನ್ನು ಆರಂಭಿಸಿದ್ದಾರೆ.

        * ಏಕದಿನದಲ್ಲಿ ಅತ್ಯುತ್ತಮ ಸಾಧನೆ

        ತಾವು ಆಡಿದ 463 ಏಕದಿನ ಪಂದ್ಯಗಳ ಪೈಕಿ 60 ಬಾರಿ ಸಚಿನ್‌ ಪಂದ್ಯಶ್ರೇಷ್ಠ ಮತ್ತು 14 ಬಾರಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದಾರೆ.

        ಪ್ರಶಸ್ತಿಗಳು

        1994- ಅರ್ಜುನ ಪ್ರಶಸ್ತಿ

        1997- ವಿಸ್ಡನ್‌ ವರ್ಷದ ಕ್ರಿಕೆಟಿಗ

        1997-98- ರಾಜೀವ್‌ ಗಾಂಧಿ ಖೇಲ್‌ ರತ್ನ

        1999- ಪದ್ಮಶ್ರೀ

        2001- ಮಹಾರಾಷ್ಟ್ರ ಭೂಷಣ

        2003- ವಿಶ್ವಕಪ್‌ನ ಶ್ರೇಷ್ಠ ಆಟಗಾರ

        2005- ರಾಜೀವ್‌ ಗಾಂಧಿ ಪ್ರಶಸ್ತಿ

        2008- ಪದ್ಮವಿಭೂಷಣ

        2010- ವಿಸ್ಟನ್‌ ವರ್ಷದ ಕ್ರಿಕೆಟಿಗ

        2010- ಐಸಿಸಿ ವರ್ಷದ ಕ್ರಿಕೆಟಿಗ

        2010- ಎಲ್‌ಜಿ ಪೀಪಲ್ಸ್‌ ಚಾಯ್ಸ ಪ್ರಶಸ್ತಿ

        2010- ದ ಏಷ್ಯನ್‌ ಅವಾರ್ಡ್‌

        2010- ಅಮೆರಿಕದ ಟೈಮ್‌ ಮ್ಯಾಗಝಿನ್‌ನಿಂದ ವಿಶ್ವದ 100 ಪ್ರಭಾವಿಗಳಲ್ಲಿ ಒಬ್ಬರೆಂಬ ಗೌರವ

        2010- ಭಾರತೀಯ ವಾಯುಪಡೆದ ಗ್ರೂಪ್‌ ಕ್ಯಾಪ್ಟನ್‌ ಗೌರವ ಹುದ್ದೆ

        2011- ಕ್ಯಾಸ್ಟ್ರಾಲ್‌ ವರ್ಷದ ಭಾರತೀಯ ಕ್ರಿಕೆಟಿಗ

        2011- ಬಿಸಿಸಿಐ ವರ್ಷದ ಕ್ರಿಕೆಟಿಗ

        2012- ವಿಸ್ಡನ್‌ ಪ್ರಶಸ್ತಿ

        2012- ಆಸ್ಟ್ರೇಲಿಯ ಸರ್ಕಾರದ 'ಆರ್ಡರ್‌ ಆಫ್ ಆಸ್ಟ್ರೇಲಿಯ' ಗೌರವ

        * ದಾನಧರ್ಮದಲ್ಲೂ ಎತ್ತಿದ ಕೈ

        ಸಚಿನ್‌ ಕೇವಲ ಬಾಲ್‌ ಹೊಡೆಯಲು ಮಾತ್ರ ಬ್ಯಾಟ್‌ ಎತ್ತುತ್ತಿಲ್ಲ. ಸಾಮಾಜಿಕ ಕಾರ್ಯಗಳಿಗೂ ಕೈ ಎತ್ತಿದ್ದಾರೆ. ತಮ್ಮ ಅತ್ತೆ ಅನ್ನಾಬೆಲ್‌ ಮೆಹ್ತಾ ನಡೆಸುತ್ತಿರುವ ಎನ್‌ಜಿಒ ಮೂಲಕ ಪ್ರತಿ ವರ್ಷ 200 ಮಕ್ಕಳಿಗೆ ನೆರವು ನೀಡುತ್ತಿದ್ದಾರೆ. ಕ್ಯಾನ್ಸರ್‌ ಧನಸಹಾಯ ಕಾರ್ಯಕ್ರಮಗಳಿಗೂ ಹಣ ಹೊಂದಿಸಿಕೊಟ್ಟಿದ್ದಾರೆ.

        ಸಚಿನ್‌ಗಾಗಿ ಕಾಲವೇ ಹೆಪ್ಪುಗಟ್ಟುತ್ತದೆ

        ಖ್ಯಾತ ಪತ್ರಿಕೆ 'ಟೈಮ್‌' ಮ್ಯಾಗಝಿನ್‌ ಸಚಿನ್‌ ನಿವೃತ್ತಿಯನ್ನು ವಿಶಿಷ್ಟವಾಗಿ ಸ್ಮರಿಸಿಕೊಂಡಿದೆ. ಯಾರ ಎದುರು ಸಮಯವೇ ಹೆಪ್ಪುಗಟ್ಟಿ ನಿಲ್ಲುತ್ತದೆಯೋ ಅಂಥ ವ್ಯಕ್ತಿತ್ವದ ತೆಂಡುಲ್ಕರ್‌ ಅವರದ್ದು ಎಂದು ಬಣ್ಣಿಸಿದೆ.

        ಸಚಿನ್‌ ನಿವೃತ್ತಿಯ ಹಿನ್ನೆಲೆಯಲ್ಲಿ ಲೇಖನವೊಂದನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಟೈಮ್‌, 'ಈ ಭೂಮಿಯ ಮೇಲಿನ ಪ್ರತಿಯೊಂದು ಜೀವಸೃಷ್ಟಿಯ ಮೇಲೂ ಕಾಲ ತನ್ನದೇ ಆದ ನಿರ್ಣಯ ಹೊಂದಿದೆ. ಆದರೆ ಸಚಿನ್‌ ವಿಷಯದಲ್ಲಿ ಮಾತ್ರ ವಿನಾಯಿತಿ ನೀಡಿದೆ. ಸಮಯ ಕೂಡ ಸಚಿನ್‌ ಎದುರಿಗೆ ಮಂಜುಗಟ್ಟಿದಂತೆ ನಿಂತುಬಿಟ್ಟಿದೆ. ನಾವು ಚಾಂಪಿಯನ್‌ಗಳನ್ನು ನೋಡಿದ್ದೇವೆ. ಅಪ್ರತಿಮ ಕ್ರೀಡಾ ಸಾಧಕರನ್ನು ನೋಡಿದ್ದೇವೆ. ಆದರೆ ಎಂದೂ ಸಚಿನ್‌ ತೆಂಡುಲ್ಕರ್‌ ಅವರಂತಹ ಸಾಧಕನನ್ನು ನೋಡಿಲ್ಲ ಮುಂದೆಯೂ ನೋಡುವುದಿಲ್ಲ...' ಎಂದು ಭಾರತದ ಈ ಮಹಾನ್‌ ತಾರೆಯನ್ನು ಹೊಗಳಿದೆ.

        'ಸಚಿನ್‌ ತೆಂಡುಲ್ಕರ್‌ 1989ರಲ್ಲಿ ಮೊದಲ ಬಾರಿ ಅಂತಾರಾಷ್ಟ್ರೀಯ ಪಂದ್ಯವಾಡಲು ಪಾಕಿಸ್ಥಾನಕ್ಕೆ ಕಾಲಿಟ್ಟ ಗಳಿಗೆಯಲ್ಲಿ, ಮೆಕೈಲ್‌ ಶೂಮಾಕರ್‌ ಒಂದೂ ಫಾರ್ಮುಲಾ-1ರೇಸಿಂಗ್‌ ಆಡಿರಲಿಲ್ಲ. ಸೈಕ್ಲಿಂಗ್‌ ದಂತಕತೆ ಲ್ಯಾನ್ಸ್‌ ಆರ್ಮ್ಸ್ಟಾಂಗ್‌ ಇನ್ನೂ ಒಂದೇ ಒಂದು ಟೂರ್‌ ಡಿ ಫ್ರಾನ್ಸ್‌ ಗೌರವವನ್ನು ಪಡೆದುಕೊಂಡಿರಲಿಲ್ಲ, ಡೀಗೊ ಮರಡೋನಾ ಆರ್ಜೆಂಟೀನಾ ತಂಡದ ಕ್ಯಾಪ್ಟನ್‌ ಆಗಿಯೇ ಇದ್ದರು, ಪೀಟ್‌ ಸಾಂಪ್ರಾಸ್‌ ಟೆನಿಸ್‌ನಲ್ಲಿ ಒಂದೇ ಒಂದು ಗ್ರಾನ್‌ಸ್ಲಾಮ್‌ ಗೆದ್ದಿರಲಿಲ್ಲ'

        'ಇಮ್ರಾನ್‌ಖಾನ್‌ ನೇತೃತ್ವದ ವೇಗಿಗಳ ನಾಡಲ್ಲಿ ಸಚಿನ್‌ ಮೊದಲ ಪಂದ್ಯವಾಡಿದಾಗ ಟೆನಿಸ್‌ ಸಾಮ್ರಾಟ ರೋಜರ್‌ ಫೆಡರರ್‌ ಯಾರು ಎಂದೇ ಯಾರಿಗೂ ಗೊತ್ತಿರಲಿಲ್ಲ, ಆಧುನಿಕ ಫ‌ುಟ್‌ಬಾಲ್‌ ದಂತಕತೆ ಲಿಯೋನೆಲ್‌ ಮೆಸ್ಸಿಗೆ ಇನ್ನೂ ಲಂಗೋಟಿಯ ವಯಸ್ಸು, ವಿಶ್ವದ ಕಂಡ ಶ್ರೇಷ್ಠ ಓಟಗಾರ ಉಸೇನ್‌ ಬೋಲ್ಟ್ ಯಾರೆಂದು ಜಮೈಕಾದಲ್ಲೇ ಯಾರಿಗೂ ಗೊತ್ತಿರಲಿಲ್ಲ. ಆಗಿನ್ನೂ ಎರಡು ಜರ್ಮನಿಗಳನ್ನು ಬೇರ್ಪಡಿಸುವ ಜರ್ಮನ್‌ ಗೋಡೆ ಹಾಗೆಯೇ ಇತ್ತು, ಸೋವಿಯತ್‌ ಒಕ್ಕೂಟ ಇನ್ನೂ ಅಸ್ವಿತ್ವದಲ್ಲಿತ್ತು, ಡಾ. ಮನಮೋಹನ್‌ ಸಿಂಗ್‌ ಭಾರತದಲ್ಲಿ ಹೊಸ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದಿರಲಿಲ್ಲ.'

        ಹೀಗೆ ಕಾಲವನ್ನೇ ಮೀರಿಸುವ ತೆಂಡುಲ್ಕರ್‌ ಜಗತ್ತು ಕಂಡ ಶ್ರೇಷ್ಠ ಕ್ರೀಡಾ ಪ್ರತಿನಿಧಿ ಎಂದು ಟೈಮ್‌ ಮ್ಯಾಗಝಿನ್‌ ಸಚಿನ್‌ ನಿವೃತ್ತಿಯನ್ನು ಸ್ಮರಿಸಿದೆ.

        * ಅಪ್ಪಟ ಅಭಿಮಾನಿಗೆ ಬೆನ್ನೆಲುಬು

        ಭಾರತ ತಂಡ ಎಲ್ಲೆಲ್ಲಿ ಪ್ರವಾಸ ಮಾಡುತ್ತದೋ, ಸಚಿನ್‌ ತೆಂಡುಲ್ಕರ್‌ ಎಲ್ಲೆಲ್ಲಿ ಭಾರತದ ಪರ ಆಡುತ್ತಾರೋ ಅಲ್ಲೆಲ್ಲ ಒಬ್ಬ ವಿಶಿಷ್ಟ ವ್ಯಕ್ತಿಯನ್ನು ಕಾಣಬಹುದು. ಮೈ ತುಂಬಾ ತ್ರಿವರ್ಣ ಧ್ವಜದ ಬಣ್ಣ ಹಚ್ಚಿಕೊಂಡು, ಭಾರತದ ಭಾವುಟ ಹಾರಿಸುತ್ತಾ ಕ್ರೀಡಾಂಗಣದಲ್ಲಿ ಕಾಣಸಿಗುವ ಈ ವ್ಯಕ್ತಿಯ ಹೆಸರು ಸುಧೀರ್‌ ಕುಮಾರ್‌. ಬಿಹಾರ ಮೂಲದ ಈತ ಸಚಿನ್‌ರ ಪಕ್ಕಾ ಅಭಿಮಾನಿ. ಹೀಗಾಗಿಯೇ ಪಂದ್ಯ ನಡೆಯುವ ವೇಳೆ ಮೈ ಮೇಲೆ ತೆಂಡುಲ್ಕರ್‌ 10 ಎಂದು ಬರೆದುಕೊಂಡಿರುತ್ತಾನೆ. ತಮ್ಮ ಅಭಿಮಾನಿಯ ಈ ಹುಚ್ಚು ಅವತಾರಕ್ಕೆ ಮನಸೋತ ಸಚಿನ್‌, ಆತ ಎಲ್ಲೆಲ್ಲಿಗೆ ಬರುತ್ತಾನೋ ಅಲ್ಲಿನ ಪ್ರಯಾಣದ ವೆಚ್ಚ ಮತ್ತು ಕ್ರೀಡಾಂಗಣದಲ್ಲಿ ಟಿಕೆಟ್‌ ಕೊಡಿಸುವ ವ್ಯವಸ್ಥೆಯನ್ನೂ ತಾವೇ ಮಾಡಿಕೊಡುತ್ತಾರೆ. ಒಂದು ವೇಳೆ ಪಂದ್ಯದಲ್ಲಿ ಅಥವಾ ಆ ಸೀರಿಸ್‌ನಲ್ಲಿ ಸಚಿನ್‌ ಇಲ್ಲದೇ ಹೋದಲ್ಲಿ ಈತನ ವೆಚ್ಚವನ್ನು ಹರ್ಭಜನ್‌ ಸಿಂಗ್‌ ಭರಿಸುತ್ತಾರೆ.

        ಹಾಲು ಕುಡಿ ಎಂದಿದ್ದ ಆಸೀಸ್‌

        1989ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟ ಸಚಿನ್‌, 1991-92ರಲ್ಲಿ ಮೊದಲ ಬಾರಿ ಆಸ್ಟ್ರೇಲಿಯ ಪ್ರವಾಸ ಕೈಗೊಂಡಿದ್ದರು. ಸಚಿನ್‌ಗೆ ಆಗಿನ್ನೂ 18ರ ಹರೆಯ. ಇನ್ನೂ ಹಾಲುಗಲ್ಲದ ಹುಡುಗ ಆಸ್ಟ್ರೇಲಿಯದ ವೇಗದ ಪಿಚ್‌ಗಳಲ್ಲಿ ಏನು ಮಾಡಿಯಾನು ಎಂದು ಕುಹಕವಾಡಿದ್ದ ಕೆಲ ಆಸೀಸ್‌ ಆಟಗಾರರು, ನೀನಿನ್ನು ಹಾಲು ಕುಡಿಯುವ ಹುಡುಗ. ಹೋಗಿ ಹಾಲು ಕುಡಿ. ಇಲ್ಲಿಯ ಪಿಚ್‌ ನಿನಗೆ ಒಗ್ಗುವುದಿಲ್ಲ ಎಂದು ಹೀಯಾಳಿಸಿದ್ದರು. ಆದರೆ ಎದೆಗುಂದದ ಸಚಿನ್‌ ಆಸೀಸ್‌ ವೇಗಿಗಳಿಗೆ ತಮ್ಮ ಬ್ಯಾಟಿಂಗ್‌ ರುಚಿ ತೋರಿಸಿದ್ದರು. ಆಗಲೇ ಸಚಿನ್‌ ಸಾಮರ್ಥ್ಯವನ್ನು ಅರ್ಥ ಮಾಡಿಕೊಂಡಿದ್ದ ವೇಗಿ ಮರ್ವ್‌ ಹ್ಯೂಸ್‌, ತಂಡದ ನಾಯಕ ಆಲನ್‌ ಬೋರ್ಡರ್‌ ಬಳಿ ತೆರಳಿ, ಮುಂದೊಂದು ದಿನ ನಿನ್ನ ದಾಖಲೆಯನ್ನು ಈ ಹುಡುಗ ಮುರಿಯುತ್ತಾನೆ, ನೋಡ್ತಾ ಇರು ಎಂದು ಹೇಳಿದ್ದರು!

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus