Udayavani | Dec 24, 2012
ಹೊಸದಿಲ್ಲಿ: ಸಚಿನ್ ತೆಂಡುಲ್ಕರ್ ಅವರ ಏಕದಿನ ವಿದಾಯದ ಬಗ್ಗೆ ನಾನಾ ರೀತಿಯ ಸಂಶಯಗಳು, ಅಂತೆಕಂತೆಗಳು ಮನೆ ಮಾಡಿಕೊಂಡಿವೆ. ಪಾಕಿಸ್ಥಾನ ವಿರುದ್ಧದ ಏಕದಿನ ಸರಣಿಗೆ ತಾನು ಲಭ್ಯನಿದ್ದೇನೆ ಎಂದು ಸಚಿನ್ ಹೇಳಿದ್ದು ರವಿವಾರವಷ್ಟೇ ವರದಿಯಾಗಿತ್ತು. ಹೀಗಾಗಿ ಸಚಿನ್ ಅವರನ್ನು ಆಯ್ಕೆ ಮಂಡಳಿ ಪರಿಗಣಿಸಬಹುದು, ಅವರು ಇನ್ನೂ ಸ್ವಲ್ಪ ಕಾಲ ಮುಂದುವರಿಯಬಹುದು ಎಂಬ ನಿರೀಕ್ಷೆ ಸಹಜವಾಗಿಯೇ ಇತ್ತು. ಆದರೆ ರವಿವಾರ ಮಧ್ಯಾಹ್ನದ ವೇಳೆ ದಿಢೀರನೇ ಚಿತ್ರಣವೇ ಬದಲಾಯಿತು!

ಅವರ ಆಪ್ತ ಸ್ನೇಹಿತರ ಮೂಲದ ಪ್ರಕಾರ ಸಚಿನ್ 72 ಗಂಟೆಗಳಲ್ಲಿ, ಅಂದರೆ ಕಳೆದ 3 ದಿನಗಳಲ್ಲಿ ತೆಗೆದುಕೊಂಡ ನಿರ್ಧಾರ ಇದಾಗಿದೆ. ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರಿಗೆ ಶನಿವಾರ ರಾತ್ರಿಯಷ್ಟೇ ವಿಷಯ ತಿಳಿಸಲಾಗಿತ್ತು.
3 ದಿನಗಳಿಂದ ಮೊಬೈಲ್ ಆಫ್!
'ನಾಗ್ಪುರ ಟೆಸ್ಟ್ ಮುಗಿಸಿ ಮುಂಬಯಿಗೆ ಬಂದವರೇ ಸಚಿನ್ ತಮ್ಮ ಮೊಬೈಲ್ ಆಫ್ ಮಾಡಿಟ್ಟಿದ್ದರು. ಕಳೆದ 3 ದಿನಗಳಲ್ಲಿ ಯಾರ ಸಂಪರ್ಕಕ್ಕೂ ಸಿಗಲಿಲ್ಲ. ಪತ್ನಿ ಅಂಜಲಿ ಅವರ ಮೊಬೈಲ್ ಮೂಲಕವಷ್ಟೇ ಸಂಪರ್ಕ ಸಾಧ್ಯವಿತ್ತು...' ಎಂದು ಹೆಸರು ಹೇಳಲಿಚ್ಛಿಸದ ಸಚಿನ್ ಅವರ ಆತ್ಮೀಯ ಮಿತ್ರರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

'ಶುಕ್ರವಾರ ರಾತ್ರಿ ಸಚಿನ್ ತಮ್ಮ ಕುಟುಂಬದವರೊಂದಿಗೆ ಹಾಗೂ ಆತ್ಮೀಯ ಸ್ನೇಹಿತರಲ್ಲಿ ಏಕದಿನ ಕ್ರಿಕೆಟ್ ವಿದಾಯದ ಕುರಿತು ಹೇಳಿದರು. ಒಂದು ದಿನದ ಬಳಿಕ ಬಿಸಿಸಿಐ ಅಧ್ಯಕ್ಷರಿಗೆ ವಿಷಯ ತಿಳಿಸಿದರು. ಪಾಕಿಸ್ಥಾನ ವಿರುದ್ಧದ ಏಕದಿನ ಸರಣಿಯಲ್ಲಿ ತಾನು ಆಡಬಯಸುವುದಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದರು...' ಎಂಬುದು ಸಚಿನ್ ಸ್ನೇಹಿತರಿಂದ ತಿಳಿದು ಬಂದ ಸಂಗತಿ.
ರಣಜಿ, ಟೆಸ್ಟ್ ಆಡುತ್ತಾರೆ
ಟೆಸ್ಟ್ ಪಂದ್ಯಗಳಲ್ಲಿ ಸಚಿನ್ ತೆಂಡುಲ್ಕರ್ ಮುಂದುವರಿಯುವ ಕುರಿತೂ ಆ ದೋಸ್ತ್ ಪ್ರತಿಕ್ರಿಯಿಸಿದ್ದಾರೆ. 'ಅವರ ಟೆಸ್ಟ್ ನಿವೃತ್ತಿ ವಿಚಾರವೇನಿದ್ದರೂ ಆಸ್ಟ್ರೇಲಿಯ ವಿರುದ್ಧದ ಸರಣಿಯ ಸಾಧನೆಯನ್ನು ಅವಲಂಬಿಸಿರುತ್ತದೆ. ಇದಕ್ಕಾಗಿ ಅವರು ಗುಜರಾತ್ ವಿರುದ್ಧದ ಕೊನೆಯ ರಣಜಿ ಲೀಗ್ ಪಂದ್ಯವನ್ನಾಡಲಿದ್ದಾರೆ. ಆಸೀಸ್ ಎದುರಿನ ವರ್ಷಾರಂಭದ ಈ 4 ಪಂದ್ಯಗಳಲ್ಲಿ ಆಡಿದರೆ ಅವರ ಟೆಸ್ಟ್ ಸಂಖ್ಯೆ 198ಕ್ಕೆ ಏರುತ್ತದೆ. ಇಲ್ಲಿ ಉತ್ತಮ ನಿರ್ವಹಣೆ ನೀಡಿದರೆ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ವೇಳೆ 200 ಟೆಸ್ಟ್‌ಗಳನ್ನು ಪೂರೈಸಲಿದ್ದಾರೆ...' ಎಂದಿದ್ದಾರೆ.

ಪಾಕ್ ವಿರುದ್ಧವೇ ಆರಂಭ, ಅಲ್ಲೇ ಅಂತ್ಯ
ಸಚಿನ್ ತೆಂಡುಲ್ಕರ್ ಮತ್ತು ಪಾಕಿಸ್ತಾನದೊಂದಿಗಿನ ಏಕದಿನ ಕ್ರಿಕೆಟ್ ನಂಟು ವಿಶೇಷವಾದದ್ದು. ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಪ್ರವೇಶವಾಗಿದ್ದೇ ಪಾಕಿಸ್ತಾನದ ವಿರುದ್ಧ. 1989ರ ಡಿ. 19ರಂದು ಪಾಕಿಸ್ತಾನದ ಗುಜ್ರನ್‌ವಾಲಾದಲ್ಲಿ ಏಕದಿನ ಕ್ರಿಕೆಟ್ ಆರಂಭಿಸಿದರು. ಆಗವರಿಗೆ ಕೇವಲ 16 ವರ್ಷ. ತಮ್ಮ ಮೊದಲನೇ ಓವರ್‌ನಲ್ಲಿ ದೈತ್ಯ ವೇಗಿ ವಕಾರ್ ಯೂನಿಸ್‌ರನ್ನು ಎದುರಿಸಿದ ಸಚಿನ್ 2 ಎಸೆತಗಳನ್ನು ಎದುರಿಸಿ ಶೂನ್ಯ ಸಂಪಾದನೆಯೊಂದಿಗೆ ವಾಸಿಮ್ ಅಕ್ರಮ್‌ಗೆ ಕ್ಯಾಚ್ ನೀಡಿದ್ದರು!

ತೆಂಡುಲ್ಕರ್ ಕಡೆಯ ಏಕದಿನ ಪಂದ್ಯವಾಡಿದ್ದು ಕೂಡ ಪಾಕಿಸ್ತಾನ ವಿರುದ್ಧ. ಅದು 2012, ಮಾ. 18ರಂದು ಬಾಂಗ್ಲಾದ ಮೀರ್ಪುರ್‌ನಲ್ಲಿ ನಡೆದ ಏಷ್ಯಾ ಕಪ್ ಕ್ರಿಕೆಟ್ ಪಂದ್ಯ. ಆಗವರ ಗಳಿಕೆ 48 ಎಸೆತಗಳಿಂದ 52.
ತೆಂಡುಲ್ಕರ್ ಮೊದಲ ಏಕದಿನ ಟಿ20 ರೀತಿಯಲ್ಲಿತ್ತು!
ತೆಂಡುಲ್ಕರ್ 50 ಓವರ್‌ಗಳ ಪಂದ್ಯದ ಮೂಲಕವೇ ಏಕದಿನಕ್ಕೆ ಪಾದಾರ್ಪಣೆ ಮಾಡಿದ್ದಿರಬಹುದು. ಗುಜ್ರನ್‌ವಾಲಾದಲ್ಲಿ ನಡೆದ ಸರಣಿಯ ಈ ದ್ವಿತೀಯ ಪಂದ್ಯ ಪ್ರತಿಕೂಲ ಹವಾಮಾನದಿಂದಾಗಿ 16 ಓವರ್‌ಗಳಿಗೆ ಇಳಿಸಲ್ಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಎರಡೂ ತಂಡಗಳು ತಲಾ 16 ಓವರ್‌ಗಳ ಪಂದ್ಯವಾಡಿದವು. ಒಂದು ರೀತಿಯಲ್ಲಿ ಟಿ20 ರೀತಿಯಲ್ಲೇ ಇತ್ತು! ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಪಾಕ್ 9 ವಿಕೆಟಿಗೆ 87 ರನ್ ಮಾಡಿತು. ಆದರೆ ಭಾರತ 9 ವಿಕೆಟಿಗೆ 80 ರನ್ ಮಾಡಿ 7 ರನ್ ಸೋಲನ್ನು ಕಾಣಬೇಕಾಯಿತು.

ಯಾರ ವಿರುದ್ಧ ಎಷ್ಟು ರನ್
ತಂಡ ಪಂದ್ಯ ರನ್
ಆಸ್ಟ್ರೇಲಿಯ 71 3077
ಶ್ರೀಲಂಕಾ 84 3113
ಪಾಕಿಸ್ಥಾನ 69 2526
ದಕ್ಷಿಣ ಆಫ್ರಿಕಾ 57 2001
ನ್ಯೂಜಿಲಂಡ್ 42 1750
ವೆಸ್ಟ್ ಇಂಡೀಸ್ 39 1573
ಇಂಗ್ಲಂಡ್ 37 1455
ಜಿಂಬಾಬ್ವೆ 34 1377
ಕೀನ್ಯಾ 10 647
ಬಾಂಗ್ಲಾದೇಶ 12 496
ನಮೀಬಿಯಾ 1 152
ಯುಎಇ 2 81
ಹಾಲಂಡ್ 2 79
ಬರ್ಮುಡಾ 1 57
ಅಯರ್ಲಂಡ್ 2 42

ಸಚಿನ್ ನಿವೃತ್ತಿಗೆ ಪ್ರತಿಕ್ರಿಯೆಗಳು
ಸಚಿನ್ ನಿರ್ಧಾರ ನನಗೆ ತೀವ್ರ ಆಘಾತ ತಂದಿದೆ. ಆದರೆ ಇದರಲ್ಲಿ ಅಚ್ಚರಿಯಿಲ್ಲ. ಅವರಂದುಕೊಂಡತೆಯೇ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ.
- ಸೌರವ್ ಗಂಗೂಲಿ, ಮಾಜಿ ನಾಯಕ
ಉತ್ತಮವಾಗಿ ಆಡುತ್ತಿದ್ದಾಗಲೇ ನಿವೃತ್ತಿ ಘೋಷಿಸಿದ ಸಚಿನ್ ನಿರ್ಧಾರ ಅಚ್ಚರಿ ತಂದಿದೆ. ಟೆಸ್ಟ್‌ನಲ್ಲೂ ಒಳ್ಳೆ ಪ್ರದರ್ಶನ ನೀಡುತ್ತಿರುವಾಗಲೇ ನಿವೃತ್ತಿ ಪ್ರಕಟಿಸಲಿದ್ದಾರೆ ಅಂತ ನನ್ನ ಸಲಹೆ.
- ಕೆ. ಶ್ರೀಕಾಂತ್, ಮಾಜಿ ನಾಯಕ
ಸಚಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮುಂದುವರಿಯುತ್ತಾರೆ ಎಂದಾದರೆ, ಅವರು ಏಕದಿನ ಪಂದ್ಯಗಳಲ್ಲೂ ಮುಂದುವರಿಯುವುದು ಸೂಕ್ತ.
- ದಿಲೀಪ್ ವೆಂಗ್‌ಸರ್ಕಾರ್, ಮಾಜಿ ಕ್ರಿಕೆಟಿಗ
ಸಚಿನ್ ಮಹಾನ್ ವ್ಯಕ್ತಿ, ಅತ್ಯುತ್ತಮ ಗೆಳೆಯ, ನೋಡಲೂ ವಿಶೇಷ ವ್ಯಕ್ತಿ. ಅವರೊಬ್ಬ ಭಾರತೀಯ ಎಂಬ ಹೆಮ್ಮೆ. ಅವರು ಭಾರತದ ಪುತ್ರ. ನಾನು ಅವರಿಗೆ ನಮಸ್ಕರಿಸುತ್ತೇನೆ ಮತ್ತು ಪ್ರೀತಿಸುತ್ತೇನೆ.

- ಹರ್ಭಜನ್ ಸಿಂಗ್, ಭಾರತ ತಂಡದ ಸ್ಪಿನ್ ಬೌಲರ್
ದೇವರು ನಿರ್ಧರಿಸಿಯಾಗಿದೆ. ಒಂದು ವೇಳೆ ನಾನು ಕ್ರಿಕೆಟ್‌ನಲ್ಲಿ ಸಕ್ರಿಯನಾಗಿದ್ದು, ಚೆನ್ನಾಗಿ ಆಡುತ್ತ ಅಥವಾ ಆಡದೆ ಇರುತ್ತಿದ್ದರೂ, ಆಯ್ಕೆದಾರರ ಕರೆ ಮೇರೆಗೆ ನಿರ್ಧಾರ ಕೈಗೊಳ್ಳುತ್ತಿದ್ದೆ.
- ಕೀರ್ತಿ ಆಜಾದ್, ಮಾಜಿ ಕ್ರಿಕೆಟಿಗ
23 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಿ, ನೀವು ಎಲ್ಲವನ್ನೂ ಸಾಧಿಸಿದಾಗ ಏಕದಿನದಿಂದ ನಿವೃತ್ತಿ ಹೊಂದುವುದು ಹೆಚ್ಚು ಭಾವುಕವಾಗಲಾರದು.
- ರಮೀಜ್ ರಾಜಾ, ಪಾಕಿಸ್ತಾನ ಮಾಜಿ ನಾಯಕ
ಅದ್ಭುತ ಬ್ಯಾಟ್ಸ್‌ಮನ್ ಓರ್ವನ ಅತ್ಯುತ್ತಮ ಏಕದಿನ ವೃತ್ತಿ ಜೀವನ ಕೊನೆಯಾಗಿದೆ. ಸಚಿನ್ ಅವರಿಗೆ ಶುಭಾಶಯಗಳು.
- ಹಶೀಮ್ ಆಮ್ಲಾ, ದಕ್ಷಿಣ ಆಫ್ರಿಕಾ ತಂಡದ ಕ್ರಿಕೆಟಿಗ
ಸಚಿನ್ ಅದ್ಭುತ ಆಟಗಾರ. ಪ್ರತಿ ಬಾರಿ ಭಾರತದ ವಿರುದ್ಧ ಆಡಿದಾಗ ನಾವು ಸಚಿನ್ ನಿಯಂತ್ರಿಸುವ ಬಗ್ಗೆ ಯೋಚಿಸಿದ್ದೇ ಹೆಚ್ಚು. ಉತ್ತಮ ಏಕದಿನ ಎದುರಾಳಿಯನ್ನು ಕಳಕೊಂಡಿದ್ದೇವೆ.
- ಮೊಹಮದ್ ಹಫೀಜ್, ಪಾಕ್ ಟಿ20 ನಾಯಕ