ವ್ಯಾಟಿಕನ್ ಸಿಟಿ: ಪೋಪ್ 16ನೇ ಬೆನೆಡಿಕ್ಟ್ ಅವರು ತನ್ನ ಖಾಸಗಿ ಕಾಗದಪತ್ರಗಳನ್ನು ಕದ್ದು ಸೋರಿಕೆ ಮಾಡಿದ ಮಾಜಿ ಬಾಣಸಿಗನನ್ನು ಶನಿವಾರ ಜೈಲಿನಲ್ಲಿ ಭೇಟಿ ಮಾಡಿದರು ಮತ್ತು ಆತನಿಗೆ ಕ್ಷಮೆ ನೀಡಿದರು. ಪೋಪ್ ಅವರ ಕಾಗದಪತ್ರಗಳ ಕಳವು ಈಚಿನ ವರ್ಷಗಳಲ್ಲಿ ವ್ಯಾಟಿಕನ್‌ನ ಅತಿಗಂಭೀರ ಭದ್ರತಾ ಲೋಪವೆಂದು ಸುದ್ದಿ ಮಾಡಿತ್ತು.ಪೋಪ್ ಅವರೊಂದಿಗಿನ 15 ನಿಮಿಷಗಳ ಭೇಟಿ ಬಳಿಕ ಪೌಲೊ ಗೇಬ್ರಿಯಲ್ ಬಿಡುಗಡೆಗೊಂಡ ಮತ್ತು ವ್ಯಾಟಿಕನ್ ಸಿಟಿಯ ತನ್ನ ಅಪಾರ್ಟ್‌ಮೆಂಟ್‌ಗೆ ಮರಳಿದ. ಆತ ವ್ಯಾಟಿಕನ್‌ನಲ್ಲಿ ವಾಸಿಸುವುದು ಅಥವಾ ಕೆಲಸ ಮಾಡುವುದನ್ನು ಮುಂದುವರಿಸಲು ಸಾಧ್ಯವಿಲ್ಲ. ಆದರೆ ಆತನಿಗೆ ಶೀಘ್ರ ಬೇರೆ ಕಡೆ ವಾಸ ಹಾಗೂ ಉದ್ಯೋಗಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ವ್ಯಾಟಿಕನ್ ತಿಳಿಸಿದೆ. ಆತನಿಗೆ ಪತ್ನಿ ಮತ್ತು ಮೂವರು ಮಕ್ಕಳು ಇದ್ದಾರೆ.'ಇದು ಅನೇಕ ವರ್ಷಗಳ ಕಾಲ ಬದುಕನ್ನು ಹಂಚಿಕೊಂಡ ಒಬ್ಟಾತನ ಕುರಿತು ಪೋಪ್ ತೋರಿದ ಪಿತೃಸಮಾನ ನಡತೆಯಾಗಿದೆ' ಎಂಬುದಾಗಿ ವ್ಯಾಟಿಕನ್ ಕಾರ್ಯಾಲಯದ ಪ್ರಕಟನೆ ತಿಳಿಸಿದೆ.ಕ್ಷಮಾದಾನ ವ್ಯಾಟಿಕನ್ ಪಾಲಿಗೆ ಒಂದು ನೋವಿನ ಮತ್ತು ಮುಜುಗರದ ಅಧ್ಯಾಯದ ಅಂತ್ಯವಾಗಿದೆ. ಪ್ರಕರಣ ಕ್ಯಾಥೋಲಿಕ್ ಚರ್ಚಿನ ಅತ್ಯುನ್ನತ ಹಂತದಲ್ಲಿ ಅಧಿಕಾರಕ್ಕಾಗಿ ನಡೆಯುತ್ತಿದ್ದ ಜಗಳ, ಭ್ರಷ್ಟಾಚಾರ ಮತ್ತು ಸಲಿಂಗಕಾಮ ಕುರಿತ ಆಪಾದನೆಗಳನ್ನು ಬಯಲಾಗಿಸಿದ ಕುತೂಹಲಕರ, ಹಾಲಿವುಡ್ ಸಿನಿಮಾದಂತಿತ್ತು.ಗೇಬ್ರಿಯಲ್ (46)ನ ವ್ಯಾಟಿಕನ್ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಪೋಪ್ ಅವರಿಗೆ ಸಂಬಂಧಿಸಿದ ಅಗಾಧ ಕಾಗದಪತ್ರಗಳು ಪತ್ತೆಯಾದ ಬಳಿಕ ಪೊಲೀಸರು ಮೇ 23ರಂದು ಆತನನ್ನು ಬಂಧಿಸಿದ್ದರು. ವ್ಯಾಟಿಕನ್‌ನ ಕೋರ್ಟೊಂದು ಆತನಿಗೆ ಕಳವಿಗಾಗಿ ಅ.6ರಂದು ಶಿಕ್ಷೆ ವಿಧಿಸಿತ್ತು ಮತ್ತು ಆತ ವ್ಯಾಟಿಕನ್ ಪೊಲೀಸ್ ಬರಾಕ್‌ನಲ್ಲಿ 18 ತಿಂಗಳುಗಳ ಜೈಲುವಾಸವನ್ನು ಅನುಭವಿಸುತ್ತಿದ್ದ.ವ್ಯಾಟಿಕನ್‌ನಲ್ಲಿ ನಡೆಯುತ್ತಿದ್ದ ಕೆಡುಕು ಹಾಗೂ ಭ್ರಷ್ಟಾಚಾರ ಕುರಿತು 85ರ ಹರೆಯದ ಪೋಪ್ ಅವರಿಗೆ ಮಾಹಿತಿ ಇಲ್ಲವೆಂದು ಭಾವಿಸಿ ತಾನು ಕಾಗದಪತ್ರಗಳನ್ನು ಇಟಲಿಯ ಪತ್ರಕರ್ತ ಜಿಯಾನ್‌ಲುಜಿ ನುಝಿ ಅವರಿಗೆ ನೀಡಿದೆ ಮತ್ತು ಚರ್ಚ್‌ನಲ್ಲಿನ ಅಕ್ರಮಗಳನ್ನು ಬಯಲಾಗಿಸಿದಲ್ಲಿ ಚರ್ಚ್ ಸರಿದಾರಿಗೆ ಮರಳುವುದೆಂದು ಭಾವಿಸಿದೆ ಎಂದು ಗೇಬ್ರಿಯಲ್ ವ್ಯಾಟಿಕನ್ ತನಿಖಾಧಿಕಾರಿಗಳೊಂದಿಗೆ ಹೇಳಿದ್ದ.