ಕುಂಬಳೆಯ ಅನಂತಪುರ ದೇವಸ್ಥಾನ
ಕಾಸರಗೋಡು ಪ್ರವಾಸ ಕೈಗೊಳ್ಳುವವರು ಕುಂಬಳೆಯ ಅನಂತಪುರ ದೇವಸ್ಥಾನಕ್ಕೆ ಭೇಟಿಕೊಟ್ಟು ಅಲ್ಲಿನ ಏಕಾಂಗಿ ಮೊಸಳೆಯನ್ನು ಕಾಣದೆ ಹಿಂದಿರುವುದಿಲ್ಲ.
ಸರೋವರ ಕ್ಷೇತ್ರ, ಏಕಾಂಗಿ ಮೊಸಳೆ ಹೊಂದಿರುವ ಕ್ಷೇತ್ರ, ಕಡುಶರ್ಕರ ಪಾಕದ ವಿಗ್ರಹ ಹೊಂದಿರುವ ದೇವಾಲಯ ಎಂಬೆಲ್ಲಾ ವಿಶೇಷತೆಗಳನ್ನು ಹೊಂದಿರುವ ಅನಂತಪರ ಶ್ರೀ ಅನಂತಪದ್ಮನಾಭ ಸ್ವಾಮೀ ದೇವಸ್ಥಾನವು ಕುಂಬಳೆಯಿಂದ 5 ಕಿ.ಮೀ.ದೂರದಲ್ಲಿದೆ.

ಸುಮಾರು 2000 ವರ್ಷಗಳ ಹಿಂದೆ ದಿವಾಕರ ಮುನಿ (ಬಿಲ್ವಮಂಗಲ ಋಷಿ) ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತಿರುವ ಈ ದೇವಸ್ಥಾನವು ಸುಮಾರು 500 ಚದರ ಅಡಿ ವಿಸ್ತೀರ್ಣದ ಕೆರೆಯ ಮಧ್ಯೆಯಿದೆ. ಆಕರ್ಷಕವಾದ ಎರಡಂತಸ್ತಿನ ದೇವಸ್ಥಾನವಿದು. ಕೆರೆ ಹಾಗೂ ದೇವಸ್ಥಾನದ ಸುತ್ತಲೂ 12 ಅಡಿ ಎತ್ತರದ ಕಲ್ಲಿನ ಕೋಟೆಯಿದೆ. ಈ ಕೋಟೆಗೆ ಸುಮಾರು 1000 ವರ್ಷಗಳ ಇತಿಹಾಸ ಇದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ಶ್ರೀ ಅನಂತಪದ್ಮನಾಭ ಸ್ವಾಮಿಯು ಇಲ್ಲಿನ ಆರಾಧ್ಯದೇವರು. ಕಡುಗಡ್ಡೆಯ ಪಾರೆಯ ಮಧ್ಯದಲ್ಲಿರುವ ಈ ಸರೋವರದಲ್ಲಿ ಯಾವತ್ತೂ ನೀರಿಗೆ ಬರಗಾಲವಿಲ್ಲ.
ಆಯತಾಕಾರದಲ್ಲಿರುವ ಈ ಕೆರೆಯಲ್ಲಿ ವಿಶೇಷವಾದ ಕಿರುಹೊಂಡಗಳಿವೆ. ಕೆರೆಯ ಆಗ್ನೇಯ ಮೂಲೆಯಲ್ಲಿ ಕಿರು ತೂತೊಂದಿದ್ದು, ಇದರ ಮೂಲಕ ಈ ಹಿಂದೆ ದೇವಸ್ಥಾನದಲ್ಲಿ ಅರ್ಚಕನಾಗಿದ್ದ ಸನ್ಯಾಸಿಯೋರ್ವನ ಆತ್ಮ ದಿನನಿತ್ಯ ದೇವರ ದರ್ಶನಕ್ಕೆ ಬರುತ್ತಿದೆ ಎಂಬ ನಂಬಿಕೆಯಿದೆ. ಅನತಿದೂರದಲ್ಲಿ ಸನ್ಯಾಸಿಕಟ್ಟೆ ಎಂಬ ಕಟ್ಟೆಯೊಂದಿದೆ. ಆಕರ್ಷಕವಾಗಿ ಕೆತ್ತಿರುವ ಮೆಟ್ಟಿಲುಗಳ ಮೂಲಕ ಕೆಳಗಿಳಿದು ಸಂಕದ ಮೂಲಕ ಸಾಗಿ ದೇವರ ದರ್ಶನ ಪಡೆಯುವುದು ಇಲ್ಲಿ ಮಾತ್ರ ಸಿಗಬಹುದಾದ ಒಂದು ವಿಶೇಷ ಅನುಭವ.

ಏಕಾಂಗಿ ಮೊಸಳೆ
ಅನಂತಪದ್ಮನಾಭನಿಗೆ ಮತ್ತು ಮೊಸಳೆಗೆ ಏನು ಸಂಬಂಧವೋ ಗೊತ್ತಿಲ್ಲ. ಅಂತೂ ಈ ಸರೋವರದಲ್ಲಿ ಏಕಾಂಗಿ ಮೊಸಳೆ ಕೆಲವು ವರ್ಷಗಳಿಂದ ಭಕ್ತರಿಗೆ, ಪ್ರವಾಸಿಗರಿಗೆ ದರ್ಶನ ನೀಡುತ್ತಿದೆ. ಕೆಲವು ವರ್ಷಗಳ ಹಿಂದಿನ ವರೆಗೂ ಮೊಸಳೆಗೆ ಕೋಳಿಗಳನ್ನು ನೀಡಲಾಗುತ್ತಿತ್ತು. ಇದೀಗ ಅದನ್ನು ನಿಲ್ಲಿಸಲಾಗಿದೆ.
ಈಗ ಇರುವ ಮೊಸಳೆಗಿಂತ ಮೊದಲಿದ್ದ ಮೊಸಳೆಯನ್ನು "ಬಬಿಯಾ' ಎಂದು ಹೆಸರೆತ್ತಿ ಕರೆದರೆ ಅದು ಓಡೋಡಿ ಬರುತ್ತಿತ್ತು ಎಂದು ಹೇಳಲಾಗುತ್ತಿದೆ. ಇದನ್ನೇ ದುರುಪಯೋಗ ಮಾಡಿಕೊಂಡ ಬ್ರಿಟಿಷ್ ಸೈನಿಕನೋರ್ವ 1945ರಲ್ಲಿ ಆ ಮೊಸಳೆಯನ್ನು ಗುಂಡಿಟ್ಟು ಕೊಂದಿದ್ದಾನೆ ಎನ್ನಲಾಗುತ್ತಿದೆ. ಆದರೆ ಆತ ದೇವಸ್ಥಾನದ ಆವರಣ ದಾಟುವ ಮೊದಲೇ ಸತ್ತುಹೋದನಂತೆ. ವಿಶೇಷವೆಂದರೆ, ಮರುದಿನ ಕೆರೆಯಲ್ಲಿ ಮತ್ತೂಂದು ಮೊಸಳೆ ಪ್ರತ್ಯಕ್ಷವಾಯಿತು. ಅದು ಎಲ್ಲಿಂದ ಬಂತು ಎಂಬುದು ಗೊತ್ತಿಲ್ಲ ಎಂದು ಹೇಳುತ್ತಾರೆ ಹಿರಿಯರು.ಅದುವೇ ಈಗ ಇರುವ ಮೊಸಳೆ.

ಗುಹೆ ಮತ್ತು ತುಳುಲಿಪಿ
ದೇವಸ್ಥಾನದ ಈಶಾನ್ಯ ಭಾಗದಲ್ಲಿ, ಸರೋವರದ ಒಂದು ಮೂಲೆಯಲ್ಲಿ ಸಣ್ಣ ಗುಹೆ ಮತ್ತು ಸಮೀಪವೇ ತುಳುಲಿಪಿಯ ಶಿಲೆಕಲ್ಲೊಂದಿದೆ. ಈ ಗುಹೆಯೊಳಗೆ 2 ಅಡಿ ಆಳದ ಹೊಂಡವೊಂದಿದೆಯಲ್ಲದೆ ಮುಂದಕ್ಕೆ ವಿಶಾಲ ಪ್ರದೇಶವಿದೆ. ಸಾವಿರಾರು ವರ್ಷಗಳ ಹಿಂದೆ ಬಿಲ್ವಮಂಗಲ ಮುನಿಗಳ ಮೇಲೆ ಕೋಪಿಸಿಕೊಂಡ ದೇವರ ಬಾಲಕನ ರೂಪದಲ್ಲಿ ಬಂದು, ಮುನಿಗಳಿಂದ ಎಡಗೈಯಿಂದ ತಳ್ಳಲ್ಪಟ್ಟು ಬಿದ್ದ ಜಾಗದಲ್ಲಿ ಈ ಗುಹೆ ನಿರ್ಮಾಣವಾಗಿದೆ. ಅನಂತರ ಅದೇ ಗುಹೆಯ ಮೂಲಕ ಹೋದ ದೇವರು ತಿರುವನಂತಪುರದಲ್ಲಿ ನೆಲೆಯಾದರು ಎಂಬ ನಂಬಿಕೆ ಇದೆ.

ತುಳುಲಿಪಿಯನ್ನು ಸವಿವರವಾಗಿ ಓದಿದವರಿಲ್ಲದ ಕಾರಣ ಅದರಲ್ಲಿ ಬರೆದಿರುವ ವಿಷಯಗಳ ಬಗೆಗೆ ಇನ್ನೂ ಸ್ಪಷ್ಟತೆ ಇಲ್ಲ. ಒಂದು ಮೂಲದ ಪ್ರಕಾರ, ಈ ಸ್ಥಳವನ್ನು ದೇವರಿಗೆ ನೀಡಲಾಗಿದೆ ಎಂದು ಅದರಲ್ಲಿ ಬರೆಯಲಾಗಿದೆ ಎಂದು ತಿಳಿದು ಬರುತ್ತದೆ. ಅದಕ್ಕೆ ಪುಷ್ಟಿ ನೀಡಲೋ ಎಂಬಂತೆ, ಸಮೀಪದಲ್ಲಿ ದೇವಸ್ಯ ಎಂಬ ಪ್ರದೇಶವೂ ಇದೆ.