Sunday, May 19, 2013
Last Updated: 5:31:18 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಆರೋಗ್ಯವಾಣಿ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಬೆನ್ನು ಮೂಳೆಯ (ಕು)ರೂಪ
    • ಬೆನ್ನು ಮೂಳೆಯ (ಕು)ರೂಪ..

      • ಡಾ| ಬಿ. ಸೀತಾರಾಮ ರಾವ್‌, ಮೂಳೆ ವಿಭಾಗ | Jan 13, 2013

        ಬಾಲ್ಯದಲ್ಲಿ, ಪ್ರೌಢ ಶಾಲೆಯಲ್ಲಿ  ವ್ಯಾಸಂಗ ನಡೆಸುತ್ತಿದ್ದಾಗ, ಸಹೋದರರ ಜೊತೆಯಲ್ಲಿ “The hunchback of Notre dame”  ಎಂಬ  ಆಂಗ್ಲಭಾಷೆಯ ಚಲನಚಿತ್ರ ವೀಕ್ಷಿಸಿ ಆನಂದ ಪಟ್ಟಿದ್ದೆ . ಗೂನು ಬೆನ್ನಿನ ದಢೂತಿ ಗಾತ್ರದ ಕುರೂಪಿ ನಾಯಕನನ್ನು  ನೋಡಿ ಬೆಚ್ಚಿಬಿದ್ದಿದ್ದೆ . ಆ ದಿನಗಳಲ್ಲಿ ಗೂನುಬೆನ್ನಿಗೆ ಕಾರಣ ಏನಿದ್ದಿರಬಹುದೆಂಬ ಶಂಕೆ ಹಾಗೂ ಕುತೂಹಲ ಮನದಲ್ಲಿ  ಮೂಡಿಬಂದಿತ್ತು. ಬಳಿಕ, ವೈದ್ಯಕೀಯ ಕ್ಷೇತ್ರದಲ್ಲಿ ತರಬೇತಿ ಪಡೆದಾಗ, ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿ ಲಭಿಸಿತು.

        ಮಂಗನಿಂದ ಮಾನವನ ಸಿದ್ಧಾಂತವನ್ನು  ಪಾಲಿಸಿಕೊಂಡು, ನೇರ ಬೆನ್ನು ಮೂಳೆಯ ಸಹಾಯದಿಂದ ಸಮಾಜದಲ್ಲಿ ತಲೆ ಎತ್ತಿ ಓಡಾಡುವ ಸೌಲಭ್ಯ ಮಾನವನಿಗೆ ಮಾತ್ರ ಸಾಧ್ಯ ಎಂಬ ವಿಚಾರ ತಿಳಿದು ಬರುತ್ತದೆ. ಈ ಸೌಲಭ್ಯಕ್ಕೆ ತೆರಬೇಕಾದ ಬೆಲೆ ಎಂದರೆ, ಬೆನ್ನು ನೋವು ಹಾಗೂ ವಿವಿಧ ಬಗೆಯ ನ್ಯೂನತೆಗಳು. ಬಾಲ್ಯದಿಂದ ವೃದ್ಧಾಪ್ಯದವರೆಗೆ ಬೆನ್ನು ಮೂಳೆ ಹಲವು ರೋಗಗಳಿಗೆ ತುತ್ತಾಗಬಹುದು.

        ಏನಿದು ಬೆನ್ನಿನ ವಿಕಾರ ರೂಪ ?

        ವ್ಯಕ್ತಿಯ ಬೆನ್ನು  ಮುಂದಕ್ಕೆ ಬಾಗಿರಬಹುದು. ಇದಕ್ಕೆ ಗೂನುಬೆನ್ನು  ಎಂದು ಹೆಸರು. ಮೊದಲು  ತಿಳಿಸಿದ ಆಂಗ್ಲ ಭಾಷೆಯ ಚಲನಚಿತ್ರದ  ನಾಯಕ, ಇದೇ ರೀತಿಯ ಬೆನ್ನಿನ ಸ್ವರೂಪ (ಕುರೂಪ ) ಹೊಂದಿದ್ದನು. ಅಪರೂಪವಾಗಿ ಜನ್ಮ ತಳೆದ ಮಗು ಗೂನು ಬೆನ್ನನ್ನು  ಹೊತ್ತುಕೊಂಡೇ  ಈ ಪ್ರಪಂಚಕ್ಕೆ ಕಾಲಿಡಬಹುದು . ಇದಕ್ಕೆ ವೈದ್ಯಕೀಯ ಜಗತ್ತಿನಲ್ಲಿ  Congenital Kyphosis”  ಎಂಬ  ಹೆಸರಿದೆ. ಸಮಾಜದಲ್ಲಿ  ಹಿರಿಯ ನಾಗರಿಕರು ಸಾಮಾನ್ಯವಾಗಿ  ಈ ಬಗೆಯ ಬೆನ್ನನ್ನು  ಹೊತ್ತು ನಡೆದಾಡುವುದನ್ನು ನಾವು ಈಗ ಕಾಣುತ್ತೇವೆ.  ವ್ಯಕ್ತಿ 60 ವರ್ಷ ವಯಸ್ಸು  ದಾಟುತ್ತಿದ್ದಂತೆಯೇ,  ದೇಹದ ಮಂಡಿಗಳು ಸವೆಯುವ ಹಾಗೆಯೇ, ಮೂಳೆಗಳ ಬಲ-ಸಾಮರ್ಥ್ಯಗಳು  ಕುಂಠಿತಗೊಳ್ಳುತ್ತವೆ. ಇದಕ್ಕೆ  ಆಸ್ಟಿಯೊಪೊರೊಸಿಸ್‌ (Osteoporosis)  ಎಂದು ಹೆಸರು. ಈ ತೊಂದರೆ ಇರುವರಲ್ಲಿ, ಮುಖ್ಯವಾಗಿ,  ಬೆನ್ನುಮೂಳೆ ಮೆದುಗೊಂಡು  ಜಗ್ಗುತ್ತದೆ. ಹಾಗಾಗಿ, ವಯಸ್ಸಾದ ವ್ಯಕ್ತಿಯ ಬೆನ್ನು  ಗೂನುಗೊಂಡು, ಆತನ ದೇಹದ ಎತ್ತರ ಹಾಗೂ ತೂಕ ಕಮ್ಮಿಯಾಗುವುದು ಸಹಜ. ಬಲಹೀನಗೊಂಡ ಬೆನ್ನಿನ ಮೂಳೆಗಳು ಮುರಿಯುವ ಸಂಭವ ಜಾಸ್ತಿಯಾಗುತ್ತದೆ.

        ಹಾಗೆಯೇ, ಬೆನ್ನಿನ ಮೂಳೆ ಮುಂದಕ್ಕೆ ಬಾಗುವ ಬದಲಿಗೆ ಒಂದು ಬದಿಗೆ ಬಾಗಿರಬಹುದು. ಇದುವೇ ಸ್ಕೋಲಿಯೊಸಿಸ್‌  (scoliosis)  ಎಂಬ ಹೆಸರಿನ ಬೆನ್ನುಮೂಳೆಯ ವಿಕಾರ ರೂಪ.ಇದಕ್ಕೂ ಹಲವಾರು ಕಾರಣಗಳು ಇವೆ.

        ಆಂತೆಯೇ, ಹಲವು ರೋಗಗಳಲ್ಲಿ  ಬೆನ್ನು ಮುಂದಕ್ಕೆಯೂ ಹಾಗೂ ಬದಿಗೂ ವಾಲಿರಬಹುದು.  ಇದನ್ನು  ನಾವು ಕೈಫೂಸ್ಕೋಲಿಯೊಸಿಸ್‌(Kyphoscoliosis )  ಎಂದು ಕರೆಯುತ್ತೇವೆ.

        ಕಾರಣಗಳನ್ನು  ತಿಳಿದುಕೊಳ್ಳೋಣ

        ನವಜಾತ ಶಿಶುವಿನಲ್ಲಿ  ಗೂನುಬೆನ್ನು ಅಥವಾ  ವಕ್ರರೂಪದ ಬೆನ್ನನ್ನು  ವಿರಳವಾಗಿ ಕಾಣಬಹುದು. ಸಣ್ಣ ಮಕ್ಕಳಲ್ಲಿ, ಬೆಳೆಯುತ್ತಿರುವ ಮೂಳೆಗಳ ರಕ್ತ ಸಂಚಲನೆಯಲ್ಲಿ  ಏರುಪೇರಾಗಿ,  ಗೂನು ಬೆನ್ನಿನ ಲಕ್ಷಣಗಳು ಕಾಣಸಿಗಬಹುದು. ಹಾಗೆಯೇ,  ವಿಟಮಿನ್‌  ಡಿ ಹಾಗೂ  ಇತರ ಪೌಷ್ಟಿಕಾಂಶಗಳ ಕೊರತೆಯ ತೊಂದರೆ ಇರುವವರಲ್ಲಿ  ಬೆನ್ನಿನ ಸ್ವರೂಪ ಬದಲಾಗಬಹುದು. ಯುವಕರಲ್ಲಿ ಕಾಣಲು ಸಿಗುವ ಅಪರೂಪದ  ಆಂಕೈಲೋಸಿಂಗ್‌ ಸ್ಪಾಂಡಿಲೈಟಿಸ್‌ (Ankylosing Spondylitis ) ಎಂಬ ರೋಗದಲ್ಲಿ ಬೆನ್ನು  ತೀವ್ರವಾಗಿ ಬಗ್ಗಬಹುದು.

        ಅಪಘಾತಕ್ಕೆ ಬಲಿಯಾದ ಬೆನ್ನಿನ ಹಲವು ಮೂಳೆಗಳು, ಟಿ.ಬಿ. ಹಾಗೂ ಇತರ ಸೋಂಕು ರೋಗಗಳು ಬೆನ್ನಿನ ಮೂಲರೂಪವನ್ನು  ಕೆಡಿಸಬಹುದು.

        ವೃದ್ಧರಲ್ಲಿ ಸಹಜವಾಗಿ ಕಂಡು ಬರುವ ಗೂನುಬೆನ್ನಿಗೆ ಹಲವೊಮ್ಮೆ ಮಾರಕ ರೋಗಗಳಾದ ಮಲ್ಟಿಪಲ್‌ ಮಯೆಲೋಮಾ (multiple myeloma)ಹಾಗೂ ಮೂಳೆಗೆ ಪಸರಿಸಿದ ಅಬುìದ ರೋಗ (metastatic bone disease) ಇವು ಮೂಲಕಾರಣಗಳಾಗಿರಬಹುದು.

        ರೋಗಗಳ ಲಕ್ಷಣಗಳು

        ವಿಕಾರಗೊಂಡ ಬೆನ್ನು ಮೂಳೆ ಹೊತ್ತ ವ್ಯಕ್ತಿ, ಬೆನ್ನು ನೋವಿನಿಂದ ಬಳಲಬಹುದು. ಸೋಂಕು ರೋಗ ಹಾಗೂ ಅಬುìದ ಕಾಯಿಲೆಗಳಲ್ಲಿ , ಬಲಹೀನತೆ, ಕುಂಠಿತಗೊಂಡ ಹಸಿವು, ಆಗಾಗ ಕಾಣಿಸಿಕೊಳ್ಳುವ  ಜ್ವರ, ಕೆಮ್ಮು, ದೇಹದ ತೂಕದಲ್ಲಿ  ಕುಸಿತ -ಹೀಗೆ ಹಲವಾರು ಲಕ್ಷಣಗಳು ಕಾಣಸಿಗುತ್ತವೆ. ಆಂಕೈಲೋಸಿಂಗ್‌ ಸ್ಪಾಂಡಿಲೈಟಿಸ್‌(Ankylosing Spondylitis)   ಕಾಯಿಲೆಯ ತರುಣ ರೋಗಿ, ತೀವ್ರ ರೀತಿಯ ಬೆನ್ನಿನ ವಿಕಾರಗಳೊಂದಿಗೆ, ಬೆನ್ನಿನ ಚಲನವಲನಗಳನ್ನು ಕೂಡ ಕಳೆದುಕೊಳ್ಳುತ್ತಾನೆ. ಜೊತೆಗೆ, ದೇಹದ ಕೆಲವು ಮಂಡಿಗಳಲ್ಲಿಯೂ ನೋವು  ಆನುಭವಿಸಬಹುದು.

        ಪತ್ತೆಹಚ್ಚುವ ವಿಧಾನ

        ಬೆನ್ನು ಮೂಳೆಗಳ ವಿಕಾರ ರೂಪಕ್ಕೆ ಕಾರಣಗಳನ್ನು ಕಂಡುಹಿಡಿಯಲು, ನುರಿತ ಮೂಳೆತಜ್ಞ  ವೈದ್ಯರು ಪತ್ತೆದಾರ ಶರ್ಲಾಕ್‌ ಹೋಮ್ಸ್‌ ನಂತೆ  ಜಾಣ್ಮೆಯ ಜ್ಞಾನ ಬುದ್ಧಿಯನ್ನು  ಅಳವಡಿಸಿಕೊಳ್ಳಬೇಕಾಗುತ್ತದೆ. ರೋಗದ  ಲಕ್ಷಣಗಳು, ವೈದ್ಯಕೀಯ  ತಪಾಸಣೆಯ ವೇಳೆಯಲ್ಲಿ ಕಂಡುಬರುವ ಚಿಹ್ನೆಗಳು, ರೋಗ ತಪಾಸಣೆಯ ವಿಧಾನಗಳು ... ಇವೆಲ್ಲವನ್ನು  ವಿಮರ್ಶಿಸಿ, ರೋಗದ ಮೂಲ ಕಾರಣ ಪತ್ತೆಹಚ್ಚಬಹುದು. ರಕ್ತ ಪರೀಕ್ಷೆ , ಕ್ಷ-ಕಿರಣ ಹಾಗೂ ವಿವಿಧ ರೀತಿಯ ಸ್ಕ್ಯಾನ್‌ಗಳು ( CT scan, MRI scan,  Isotope Bone Scan), , ಮೂಳೆಯ ಸಣ್ಣ ತುಂಡಿನ ಪರೀಕ್ಷೆ (bone biopsy)... ಇತ್ಯಾದಿ ಪರೀಕ್ಷಾ ವಿಧಾನಗಳ ಅಗತ್ಯ ಕಂಡು ಬರಬಹುದು.

        ಪರಿಹಾರ ಹಾಗೂ ಚಿಕಿತ್ಸಾ
        ವಿಧಾನಗಳು


        ವಿಕೃತಗೊಂಡ ಬೆನ್ನಿಗೆ ಮೂಲಕಾರಣ, ವ್ಯಕ್ತಿಯ ವಯಸ್ಸು , ರೋಗ ಪತ್ತೆಯಾದ ಹಂತ, ಈ ಹಿಂದೆ  ಪಡೆದ ಚಿಕಿತ್ಸೆಗಳು. ಇವುಗಳನ್ನು  ಅವಲಂಬಿಸಿ, ತಜ್ಞ  ವೈದ್ಯರು ಪರಿಹಾರ ಸೂಚಿಸುತ್ತಾರೆ . ನುರಿತ ಮೂಳೆ ತಜ್ಞ , ಪರಿಣಿತ ಬೆನ್ನ ಮೂಳೆಯ ಶಸ್ತ್ರಚಿಕಿತ್ಸಾ ತಜ್ಞ, ಅಬುìದ ರೋಗ ನಿಯಂತ್ರಣ ತಜ್ಞ  , ದೈಹಿಕ ವ್ಯಾಯಾಮ ತರಬೇತಿ ತಜ್ಞ  ಹಾಗೂ ಹಲವು ವೈದ್ಯರುಗಳು ಸಮಾಲೋಚನೆ  ನಡೆಸಿ, ರೋಗಿಗೆ ಚಿಕಿತ್ಸೆಯ ವಿಧಾನವನ್ನು  ಗೊತ್ತುಪಡಿಸುತ್ತಾರೆ.

        ಬಾಲ್ಯದಲ್ಲಿ  ಕಂಡುಬರುವ ಹಾಗೂ ಶೀಘ್ರಗತಿಯಲ್ಲಿ  ವಿಕಾರಗೊಳ್ಳುತ್ತಿರುವ  ಬೆನ್ನನ್ನು  ಶಸ್ತ್ರಚಿಕಿತ್ಸೆಯ ಮೂಲಕ ಸರಿಪಡಿಸಬೇಕಾಗುತ್ತದೆ. ಪೌಷ್ಟಿಕಾಂಶಗಳ ಜೊತೆಗೆ  ವಿಟಮಿನ್‌   ಡಿ  ಔಷಧ  ರಿಕೆಟ್‌   (Rickete)  ಹಾಗೂ ಆಸ್ಟಿಯೊಮಲಾಸಿಯಾ (osteomalacia)  ಎಂಬ ಕಾಯಿಲೆಗಳಿಗೆ ಸಹಕಾರಿ. ಆಂಕೈಲೋಸಿಂಗ್‌ ಸ್ಪಾಂಡಿಲೈಟಿಸ್‌ಕಾಯಿಲೆಯನ್ನು  ಆರಂಭಿಕ ಹಂತದಲ್ಲಿ  ಪತ್ತೆಹಚ್ಚಿದಲ್ಲಿ, ನೋವು  ನಿವಾರಕ  ಔಷಧಿಗಳು, ವ್ಯಾಯಾಮ ಹಾಗೂ ಬೆನ್ನು ಆಧಾರ ಪಟ್ಟಿ  ಅಳವಡಿಸುವ ಮೂಲಕ  ಅದನ್ನು ನಿಯಂತ್ರಣದಲ್ಲಿಡಬಹುದು. ತೀವ್ರವಾಗಿ ಮುಂದಕ್ಕೆ  ಅಥವಾ ಬದಿಗೆ ವಾಲಿಹೋದ ಬೆನ್ನನ್ನು ಶಸ್ತ್ರಚಿಕಿತ್ಸೆಯ  ಮೂಲಕ  ನೇರಗೊಳಿಸಬಹುದು.

        ಸೋಂಕು ರೋಗಗಳನ್ನು  ಹತೋಟಿಯಲ್ಲಿಡುವ ಔಷಧಿಗಳು,  ಕ್ಷಯರೋಗಕ್ಕೆ ಸಂಬಂಧಪಟ್ಟ
        ಔಷಧಗಳ ಬಳಕೆಯ ಸಂದ‌ರ್ಭ ಇರಬಹುದು.

        ಹಿರಿಯ ವ್ಯಕ್ತಿಗಳಲ್ಲಿ  ಮೂಳೆಗಳ  ಬಲವನ್ನು ವೃದ್ಧಿಪಡಿಸಲು, ಹಾಲು, ಹಾಲಿನ ಉತ್ಪನ್ನಗಳು, ಹಸಿರು  ತರಕಾರಿಗಳು, ಮೀನು ... ಇವುಗಳನ್ನು ನಿಯಮಿತ ರೂಪದಲ್ಲಿ ಸೇವಿಸುವುದು ಸಹಕಾರಿ. ಕ್ಯಾಲ್ಸಿಯಂ ಮಾತ್ರೆಗಳು, ವಿಟಮಿನ್‌ ಡಿ  ಔಷಧಿ, ಮೂಳೆಯ ನೋವು ಉಪಶಮನಕಾರಿ ಹಾಗೂ ಬಲ ಹೆಚ್ಚಿಸುವ ಔಷಧಿಗಳು ಈಗ ಬಳಕೆಯಲ್ಲಿವೆ.

        ದೇಹದ ಇತರ ಭಾಗಗಳಿಂದ ಬೆನ್ನಮೂಳೆಗೆ ಪಸರಿಸಿದ ಅಬುìದ ರೋಗ ಹೊಂದಿರುವ ದುದೈರ್ವಿ ರೋಗಿಗಳಿಗೆ  ಚಿಕಿತ್ಸೆಯಲ್ಲಿ ವಿಶ್ರಾಂತಿ, ನೋವು ನಿಯಂತ್ರಣ, ಪರಿಣತ ವೈದ್ಯರ ಸಲಹೆಗಳು ಪ್ರಮುಖ ಪಾತ್ರ ವಹಿಸುತ್ತವೆ.

        ಕಿವಿನುಡಿ

        ಇಂಗ್ಲಂಡ್‌ ದೇಶದ ಇತಿಹಾಸದಲ್ಲಿ  Mr. Alderman ಎಂಬ ವ್ಯಕ್ತಿ ಕರ ಆದಾಯ ಸುಲಿಗೆ ಮಾಡುವ ವೃತ್ತಿಯಲ್ಲಿದ್ದು , ಅತೀ ಜಂಭದಿಂದ ನೇರ ನೆಟ್ಟಗೆ ಬೆನ್ನನ್ನು  ಹೊತ್ತು  ತಿರುಗಾಡುತ್ತಿದ್ದರು. ವಿಕಾರಗೊಂಡ ಬೆನ್ನಿನ ಮೂಲಕಾರಣವನ್ನು  ಅತೀ ಶೀಘ್ರವಾಗಿ, ಆರಂಭಿಕ ಹಂತದಲ್ಲಿಯೇ  ಪತ್ತೆ ಹಚ್ಚಿ , ಸೂಕ್ತ ಚಿಕಿತ್ಸೆಯನ್ನು  ತಜ್ಞ  ವೈದ್ಯರಿಂದ ಪಡೆದುಕೊಳ್ಳುವ ಮೂಲಕ, ರೋಗಿ  ಮತ್ತೂಮ್ಮೆ ನೇರಗೊಂಡು ಅlಛಛಿrಞಚnನ ರೀತಿ ನಡೆದಾಡಲಿ ಎಂಬುದೇ  ಲೇಖಕನ ಆಶಯ ! ಪುಸ್ತಕದ ಮೂಟೆಯ ಭಾರವನ್ನು  ಕಮ್ಮಿಗೊಳಿಸಿ ಅಥವಾ ಆರೋಗ್ಯವಂತ ಬೆನ್ನನ್ನು  ಕಾಪಾಡುವ ಸರಳ ವಿಧಾನವನ್ನು  ಸಣ್ಣ ವಯಸ್ಸಿನಲ್ಲಿಯೇ ಪಾಲಿಸುವುದು ಸಾಧ್ಯವಾದರೆ, ಮುಂದಿನ ಜೀವನ ಸುಖಮಯವಾಗುವುದರಲ್ಲಿ ಸಂಶಯವಿಲ್ಲ .

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಮೆದುಳಿನ ರಕ್ತನಾಳವು ಒಡೆಯುವುದು ಮತ್ತು ಸುತ್ತಮುತ್ತಲಿನ ಅಂಗಾಂಶಗಳಿಗೆ ರಕ್ತಸ್ರಾವವಾಗುವುದರಿಂದ ಇದು ಸಂಭವಿಸುತ್ತದೆ...
      • ಈ ವಿಭಾಗದಲ್ಲಿಯೂ ಇದೆ
      image
      • Copyright @ 2009 Udayavani.All rights reserved.
      • Designed & Hosted By 4cplus