ಜೈಕುಮಾರ್ | Jan 15, 2013
ನಾವು ನೀವು ಬಳಸುವ ಇಂಟರ್‌ನೆಟ್ ಅದರಲ್ಲಿರುವ ಜಾಗ ಎಲ್ಲವೂ ನಮ್ಮದಲ್ಲ. ನಾವು ಕೇವಲ ಬಾಡಿಗೆದಾರರು. ಇದರ ಒಡೆಯ ಅಮೆರಿಕ. ವರ್ಷಕ್ಕೆ ಕೋಟ್ಯಂತರ ಡಾಲರ್ ವ್ಯವಹಾರ. ಜಾಗ ಕೊಡುವುದು, ಬಾಡಿಗೆ ಪಡೆಯುವುದು ಎಲ್ಲವೂ ರಿಯಲ್ ಎಸ್ಟೇಟ್ ವ್ಯವಹಾರದಂತೆ ನಡೆಯುತ್ತಿದೆ.
ಇಂಟರ್‌ನೆಟ್ ಇವತ್ತು ಜಗತ್ತನ್ನು ಒಂದು ಮಾಡಿದೆ. ಜಗತ್ತು ಇಂಟರ್‌ನೆಟ್‌ನಲ್ಲೇ ಇರುವುದರಿಂದ ಯಾರೂ ದೂರ ಅಲ್ಲ. ಆದರೆ ನಾವು ನೀವು ಬಳಸುವ ಇಂಟರ್‌ನೆಟ್ ಮಾಲೀಕರು ಯಾರು?
ನೀವು ನಂಬಲ್ಲ. ಇದಕ್ಕೆ ತಂದೆ-ತಾಯಿ ಎಲ್ಲಾ ಅಮೆರಿಕ. ನಮ್ಮ ಎಲ್ಲ ಅಂತರ್ಜಾಲದ ವ್ಯವಹಾರಗಳು ಅಮೆರಿಕದ ಕೃಪಾಕಟಾಕ್ಷದಿಂದಲೇ ಆಗುತ್ತಿರುವುದು. ಈಮೇಲ್ ಚಾಟಿಂಗ್, ಬ್ರೌಸಿಂಗ್, ಫೇಸ್‌ಬುಕ್, ಟ್ವಿಟರ್ ಎಲ್ಲದರ ಬೇರುಗಳು ಇರುವುದು ಅಮೆರಿಕ ಎಂಬ ದೊಡ್ಡಣ್ಣನ ಹತ್ತಿರ. ಇಡೀ ಪ್ರಪಂಚದಲ್ಲಿ ಇದರ ಮೇಲೆ ಅಮೆರಿಕ ಹೊರತಾಗಿ ಬೇರೆ ಯಾರ ಒಡೆತನ, ನಿಯಂತ್ರಣವೂ ಇಲ್ಲ. ಒಂದು ರೀತಿ ನಡುಬೀದಿಯಲ್ಲಿ ನಿಂತು ವ್ಯವಹಾರ ಮಾಡಿದಾಗೆ. ಇಂಟರ್‌ನೆಟ್ ಮೂಲಕ ಬ್ಯೂಸಿನೆಸ್ ಮಾಡುವುದು.
ಮಾಲೀಕನ್ಯಾರೋ ಬಳಸುವನು ಇನ್ಯಾರೋ...!
ವಿಶ್ವದ ಟಾಪ್ 20ದೇಶಗಳಲಲ್ಲಿ ಇಂಟರ್‌ನೆಟ್ ಬಳಕೆ ಶೇ.73.8ರಷ್ಟಿದೆ. ಇನ್ನುಳಿದ ದೇಶಗಳಲ್ಲಿ ಶೇ.26.2ರಷ್ಟಿದೆ. ಟಾಪ್ 20ರಲ್ಲಿ ಮೊದಲು ಚೀನಾ, ಆಮೇಲೆ ಅಮೆರಿಕ, ಮೂರನೇ ಸ್ಥಾನದಲ್ಲಿ ಭಾರತ. ಚೀನಾ 53.80 ಕೋಟಿ (ಶೇ. 22.4), ಅಮೆರಿಕಾ 24.5 ಕೋಟಿ (ಶೇ. 10.2), ಭಾರತ 13.7 ಕೋಟಿ (ಶೇ. 5.7), ಜಪಾನ್ 10.1 ಕೋಟಿ (ಶೇ. 4.2), ಮತ್ತು ಬ್ರೆಜಿಲ್ 8.8 ಕೋಟಿ (ಶೇ. 3.7) ಇದ್ದಾರೆ. 2000ರಲ್ಲಿ ಅಂದಾಜು 36 ಕೋಟಿ ಇದ್ದದ್ದು, 2012ರಲ್ಲಿ 240 ಕೋಟಿ ಬಳಕೆದಾರರಾಗಿದ್ದಾರೆ. ಒಡೆತನ ಇಟ್ಟು ಕೊಂಡು ಅಮೆರಿಕ ಹಣ ಮಾಡುತ್ತಿದ್ದರೆ, ಬಳಕೆದಾರರನ್ನು ಸಂಪೂರ್ಣ ಮೂಲಕ ಹಣ ಮಾಡುತ್ತಿರುವುದು ಚೀನಾ. ಇದರ ಆನ್‌ಲೈನ್ ವಹಿವಾಟು 2009 ರಲ್ಲಿ1,83,000 ಕೋಟಿ ಇತ್ತು. ಈಗ ದುಪ್ಪಟ್ಟು ಆಗಿದೆ. ಇದರ ಸೇವಾ ಶುಲ್ಕ ಇಂಟರ್‌ನೆಟ್ ಸೇವಾ ಪೂರೈಕೆ ಕಂಪನಿಗಳಿಗೆ ಲಭಿಸುತ್ತದೆ.
ಸರ್ವದಕ್ಕೂ ಸರ್ವರ್ ಇಲ್ಲಿ
ಇಂಟರ್‌ನೆಟ್ ಅಮೆರಿಕಕ್ಕೆ ಪ್ರಮುಖ ಸಂಪನ್ಮೂಲ. ಇಂಟರ್‌ನೆಟ್ ಆವಿಷ್ಕಾರಗೊಂಡು ಅಸ್ತಿತ್ವಕ್ಕೆ ಬಂದಾಗಿನಿಂದಲೂ ಅಮೆರಿಕಾದಲ್ಲೇ ಅತಿ ಹೆಚ್ಚು ರೂಟ್ ಸರ್ವರ್‌ಗಳಿವೆ. ಜಾಗತಿಕವಾಗಿ ಅಂದರೆ ಇವತ್ತು ನಾವು , ನೀವು ಏನು ಇಂಟರ್‌ನೆಟ್ ಬಳಸುತ್ತಿದ್ದೀವಿ. ಇದರ ಟ್ರಾಫಿಕ್ ಹರಿದು ಹೋಗುತ್ತಿರುವುದು 13 ರೂಟ್ ಸರ್ವರ್‌ಗಳ ಮೂಲಕವೇ. ಅಮೆರಿಕಾದಲ್ಲಿ 9, ಜಪಾನ್ ಮತ್ತು ಯೂರೋಪ್‌ನಲ್ಲಿ ತಲಾ 2 ರೂಟ್ ಸರ್ವರ್‌ಗಳನ್ನು ಇಟ್ಟು ಕೊಂಡಿವೆ.
ಈ ರೂಟ್ ಸರ್ವರ್‌ಗಳನ್ನು ನಿರ್ವಹಿಸುವ ಅಧಿಕಾರ ದೇಶ, ದೇಶಗಳ ನಡುವೆ ಇನ್ನು ಹಂಚಿಕೆಯಾಗಿಲ್ಲ. ಈ ಕಾರಣಕ್ಕೆ ಭಾರತ ಒಳಗೊಂಡಂತೆ ಅನೇಕ ದೇಶಗಳು ಈ ವಿಚಾರದಲ್ಲಿ ಬೊಗಸೆ ಒಡ್ಡುತ್ತಿರುವುದು.
ಇಂಟರ್‌ನೆಟ್ ಬಳಕೆ ಸರ್ವವ್ಯಾಪಿಯಾಗಿ ಇಡೀ ಜಗತ್ತಿನಾದ್ಯಂತ ಬಳಸುವ ಮಟ್ಟಕ್ಕೆ ಬಂದಿರುವುದರಿಂದ ಇಂಟರ್‌ನೆಟ್‌ಅನ್ನು ಜಾಗತಿಕ ಸಂಪನ್ಮೂಲವಾಗಿ ಪರಿಗಣಿಸಿ ಅದರ ನಿರ್ವಹಣೆಯನ್ನು ವಿಶ್ವಸಂಸ್ಥೆಯ ಅಧೀನದಲ್ಲಿರಬೇಕೆಂದು ಬಹುತೇಕ ರಾಷ್ಟ್ರಗಳು ಧ್ವನಿ ಎತ್ತಿವೆ. ಇದನ್ನು ಅಮೆರಿಕಾ ವಿರೋಧಿಸುತ್ತಿದೆ.
ಒಂದು ಸಮೀಕ್ಷೆ ಪ್ರಕಾರ 2030ರ ಹೊತ್ತಿಗೆ 500 ಕೋಟಿ ಜನ ಇದನ್ನು ಬಳಸುವ ಅಂದಾಜಿದೆ. ಅಮೆರಿಕಾವೊಂದೇ ಇಡೀ ವಿಶ್ವದ ಎಲ್ಲ ಸೈಬರ್ ವಲಯವನ್ನು ನಿಯಂತ್ರಿಸುವ ಅಧಿಕಾರ ಮತ್ತು ಅವುಗಳ ಮಾಲೀಕತ್ವ ಹೊಂದಿದೆ. ಇತರೆ ದೇಶಗಳು ಕೇವಲ ಇಂಟರ್‌ನೆಟ್ ವಿಳಾಸಗಳನ್ನು ಮತ್ತು ಡೊಮೇನ್ ಹೆಸರುಗಳನ್ನು ಅಮೆರಿಕಾದಿಂದ ಪಡೆದು ಲೀಸ್‌ಗೆ ನೀಡುವ ಕೆಲಸ ಮಾಡುತ್ತಿವೆಯಷ್ಟೆ.
2003ರಲ್ಲಿ ಇರಾಕ್ ಮೇಲೆ ತಾನು ಯುದ್ಧ ನಡೆಸುತ್ತಿದ್ದಾಗ, ಅಮೆರಿಕ ಇರಾಕ್‌ನ ಉನ್ನತ-ಸ್ತರದ ಡೊಮೇನ್ ಹೆಸರಿನ ಐಕ್ಯೂ ಅನ್ನು ರದ್ದುಗೊಳಿಸಿದ್ದರಿಂದ ತಕ್ಷಣವೇ ರಾತ್ರೋರಾತ್ರಿ ಐಕ್ಯೂ ಹೆಸರಿನ ಎಲ್ಲ ಡೊಮೇನ್ ಹೆಸರುಗಳು ಕಾಣೆಯಾದವು. ಹೀಗೆ ತನ್ನ ಮಾತು ಕೇಳದ ರಾಷ್ಟ್ರಗಳ ವಿರುದ್ಧ ಅಮೆರಿಕಾ ಇಂಟರ್‌ನೆಟ್ ಬಳಸಿಕೊಂಡು ಅಗೋಚರ ಯುದ್ಧ ನಡೆಸುತ್ತಿದೆ ಮತ್ತು ಬೆದರಿಕೆ ಒಡ್ಡುತ್ತಿದೆ.
ಆರ್ಥಿಕ ವಹಿವಾಟು ಮತ್ತು ವ್ಯಾಪಾರಕ್ಕೆ ಇಂಟರ್‌ನೆಟ್ ಬೇಕು. ಇದರ ವಹಿವಾಟ ಕೋಟ್ಯಂತರ ಬಿಲಿಯನ್ ಡಾಲರ್. ಇದರ ಆದಾಯ ರೂಟ್ ಸರ್ವರ್‌ಗಳು ಮತ್ತು ಮೇನ್ ಸರ್ವರ್‌ಗಳ ಮಾಲೀಕರಿಗೆ ತಲುಪುತ್ತದೆ.
ಇವುಗಳ ಮಾಲೀಕರು ಮತ್ಯಾರು ಅಲ್ಲ ಅಮೆರಿಕಾದ ಕಂಪನಿಗಳೇ. ಲಕ್ಷಾಂತರ ವೆಬ್‌ಸೈಟ್‌ಗಳು ಅಸ್ತಿತ್ವದಲ್ಲಿವೆ. ಇವುಗಳಲ್ಲಿ ಬಳಕೆದಾರರು ಹೆಚ್ಚಾಗಿ ನೋಡುವ ವೆಬ್‌ಸೈಟ್‌ಗಳಿಗೆ ಖಾಸಗಿ ಮಾರಾಟ ಕಂಪನಿಗಳು ಜಾಹೀರಾತುಗಳನ್ನು ನೀಡುತ್ತವೆ. ಅಮೆರಿಕಾದ ನಿಯಂತ್ರಣದಿಂದಾಗಿ ಈ ಆದಾಯ ಅಲ್ಲಿನ ಕಂಪನಿಗಳಿಗೆ ವರವಾಗುತ್ತಿದೆ. ಅಂದರೆ ನಾವು ಇಲ್ಲಿ ಫೇಸ್ ಬುಕ್ ನೋಡಿದರೆ ಅಲ್ಲಿ ಅಮೆರಿಕ ಜೋಳಿಗೆ ಪರೋಕ್ಷವಾಗಿ ತುಂಬುತ್ತದೆ.
ಫೇಸ್‌ಬುಕ್ ಹೇಗೆ ಹಣ ಗಳಿಸುತ್ತದೆ ಗೊತ್ತಾ?
ಇವತ್ತು ಫೇಸ್‌ಬುಕ್‌ನಲ್ಲಿ 90 ಕೋಟಿ ಬಳಕೆದಾರರಿದ್ದಾರೆ. ಕೋಟ್ಯಂತರ ಫೋಟೋಗಳು ಇಲ್ಲಿ ರಾರಾಜಿಸುತ್ತಿವೆ. ಫೇಸ್‌ಬುಕ್ ಸಾಮಾನ್ಯ ನೋಡುಗ ಹೆಚ್ಚೆಂದರೆ ಇಂಟರ್‌ನೆಟ್ ಚಾರ್ಜ್ ಮಾತ್ರ ಕೊಡುತ್ತಾನೆ. ಆದರೆ ನೋಡುಗರು ಹೆಚ್ಚಾದಷ್ಟು ಜಾಹೀರಾತುದಾರರು ಅದಕ್ಕೆ ಆತುಕೊಳ್ಳುತ್ತಾರೆ. ಜಾಹೀರಾತು ಬಿಕರಿಯಿಂದಲೇ ಫೇಸ್‌ಬುಕ್ ಆದಾಯ ಬರುತ್ತಿರುವುದು. 2012ರ ಮೊದಲ ಮೂರು ತಿಂಗಳಲ್ಲಿ 4, 360 ಕೋಟಿ ಜಾಹೀರಾತುಗಳನ್ನು ಮಾರಾಟ ಮಾಡಿದೆ ಫೇಸ್ ಬುಕ್. ಅಂದರೆ ಪ್ರತಿ ಬಳಕೆದಾರರಿಂದ 50ರೂ. ದೊರೆತಂತಾಯಿತು. ಜಾಹೀರಾತು ಹಣವೇ ಅದರ ಒಟ್ಟು ಆದಾಯದ ಶೇ. 82ರಷ್ಟಿದೆ. 2011-12ರಲ್ಲಿ ಅದರ ಒಟ್ಟು ಆದಾಯ ರೂ. 16,000 ಕೋಟಿ, ಇದರಲ್ಲಿ ಜಾಹೀರಾತು ಮೂಲಕ ಬಂದಿರುವುದು ಶೇ. 85.ರಷ್ಟು.
ಅದೇ ರೀತಿ ಗೂಗಲ್ ಹೇಗೆ ಹಣ ಗಳಿಸುತ್ತದೆ ಗೊತ್ತಿದೆಯಾ?ಕಣ್ಣ ಮುಂದಿನ ವಿಶ್ವಕೋಶ ಎಂದರೆ ಗೂಗಲ್. ಸತ್ಯ ಗೊತ್ತಾ? ಫೇಸ್‌ಬುಕ್‌ನ ಜಾಹೀರಾತು ಆದಾಯದ 10ಪಟ್ಟು ಗೂಗಲ್ ಗಳಿಸುತ್ತಿದೆ ಎಂದರೆ ನೀವು ನಂಬಲೇ ಬೇಕು. 2011ರಲ್ಲಿ ಅದರ ಒಟ್ಟು ಜಾಹೀರಾತು ಆದಾಯ ರೂ. 1,82,500 ಕೋಟಿ.
ಅರೆ, ಈ ಕೋಟಿ, ಕೋಟಿ ಆದಾಯ ಹೇಗೆ ಬರುತ್ತದೆ? ಅನ್ನೋ ಅನುಮಾನ ನಿಮಗೂ ಇರಬಹುದು. ಇದಕ್ಕೆ ನೋಡಿ ಉದಾಹರಣೆ. ಕೋಟ್ಯಂತರಜನ ಜಿಮೇಲ್ ಅಕೌಂಟ್ ಬಳಸುತ್ತಾರೆ. ಜಿಮೇಲ್ ಬಳಕೆದಾರರು ಯಾವ ವಿಷಯವನ್ನು ಕಳುಹಿಸುತ್ತಾರೆ, ಯಾವ ವಿಷಯ ಕುರಿತು ವೆಬ್‌ನಲ್ಲಿ ಸರ್ಚ್ ಮಾಡುತ್ತಾರೆ ಎಂಬಂಥ ಮಾಹಿತಿಗಳನ್ನು ಸಂಗ್ರಹಿಸುವ ಈ ಕೆಲಸವನ್ನು ಗೂಗಲ್ ಇತರೆ ಕಂಪನಿಗಳಿಗೆ ಕೊಡುತ್ತದೆ. ಆ ಕಂಪನಿಗಳು ಅಂಥ ಮಾಹಿತಿಗೆ ಪೂರಕವಾದ ಜಾಹೀರಾತುಗಳನ್ನು ಗೂಗಲ್‌ಗೆ ನೀಡುತ್ತವೆ. ಉದಾಹರಣೆಗೆ- ನಿಮ್ಮ ಆತ್ಮೀಯರೊಬ್ಬರಿಗೆ ನೀವು ಯಾವುದೋ ವಿಷಯ ಕುರಿತು ಚಿಂತೆಗೀಡಾಗಿ ಇಮೇಲ್ ಕಳುಹಿಸಿದ್ದಲ್ಲಿ ಅಥವಾ ಜಿಮೇಲ್‌ನಲ್ಲಿ ಕೆಲಸದೊತ್ತಡ ಎಂದು ಸರ್ಚ್ ಮಾಡಿದ್ದಲ್ಲಿ, ಇವುಗಳನ್ನು ಮಾನಿಟರ್ ಅಥವಾ ಟ್ರ್ಯಾಕ್ ಮಾಡಿ ಜಿಮೇಲ್‌ನಲ್ಲಿ ನಮಗೆ ಚಿಂತೆ ದೂರ ಮಾಡಲು ಅಥವಾ ಕೆಲಸದೊತ್ತಡ ಕುರಿತಂತೆ ಚಿಕಿತ್ಸೆಯನ್ನು ಎಲ್ಲಿ ಪಡೆಯಬಹುದು? ವೈದ್ಯರು ಯಾರು? ಖರ್ಚು ಎಷ್ಟು, ಅವರ ದೂರವಾಣಿ ಸಂಖ್ಯೆ ಹೀಗೆ ಎಲ್ಲದನ್ನು ಒಳಗೊಂಡ ಜಾಹೀರಾತುಗಳು ಮೂಡಿ ಬರುತ್ತವೆ.
ಯೂಟ್ಯೂಬ್ ಕೂಡ ಹೀಗೇನೆ. ಜಾಹೀರಾತುಗಳನ್ನು ನೀಡುವ ಮೂಲಕ ಜಾಹೀರಾತು ನೀಡುವ ಕಂಪನಿಗಳಿಂದ ಯೂಟೂಬ್ ಹಣ ಗಳಿಸುತ್ತದೆ.ಇಲ್ಲಿ ಅಕೌಂಟ್‌ಗಳು ಉಚಿತ. ಬಳಕೆದಾರರು ಬಳಸಿದಷ್ಟು ಕಂಪನಿಗಳು ಹಣ ಮಾಡುತ್ತವೆ.
ಇಂಟರ್‌ನೆಟ್ ಭದ್ರತೆ ಇದೆಯಾ?
ಈ ಪ್ರಶ್ನೆ ಜಗತ್ತಿ ಅಷ್ಟೂ ರಾಷ್ಟ್ರಗಳಲ್ಲಿ ಎದ್ದಿದೆ. ಇದಕ್ಕಾಗಿ ಇತ್ತೀಚೆಗೆ ದುಬೈನಲ್ಲಿ ಜರುಗಿದ ಅಂತರಾಷ್ಟ್ರೀಯ ಟೆಲಿಸಂಪರ್ಕ ಕುರಿತ ವಿಶ್ವ ಸಮ್ಮೇಳನ(ಡಬ್ಲೂ$Âಸಿಐಟಿ) ಹಲವು ಚರ್ಚೆ ಮತ್ತು ಸಂವಾದಗಳಿಗೆ ಎಡೆಮಾಡಿಕೊಟ್ಟಿದೆ. 190 ರಾಷ್ಟ್ರಗಳು ಒಟ್ಟುಗೂಡಿದ್ದ ಈ ಸಮ್ಮೇಳನದಲ್ಲಿ ವಿಶ್ವಸಂಸ್ಥೆ ನಿಯಂತ್ರಿತ ಸೂತ್ರಗಳನ್ನು ಅಂತಜಾìಲಕ್ಕೆ ಅಳವಡಿಸುವಲ್ಲಿ ವಿಫಲವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಬೊಬ್ಬೆ ಹೊಡೆಯುವ ಅಮೆರಿಕಾ ಬಹುಪಕ್ಷೀಯ ಸೂತ್ರಗಳಿಗೆ ಒಪ್ಪದೆ ಸಮ್ಮೇಳನದಿಂದ ಹೊರ ನಡೆದದ್ದು ನಾಚಿಕೆಗೇಡು.
ಪ್ರಸ್ತುತ ಎಲ್ಲಾ ರಾಷ್ಟ್ರಗಳನ್ನು ಒಳಗೊಂಡಿರುವ, ಅಂತಜಾìಲವನ್ನು ನಿರ್ವಸುವ ಯಾವುದೇ ಕೇಂದ್ರೀಯ ನಿಯಂತ್ರಣ ಪ್ರಾಧಿಕಾರ ಇಲ್ಲ. ಹೀಗಾಗಿ ಇಂಟರ್‌ನೆಟ್ ನಿಯಂತ್ರಣ ಕುರಿತಾಗಿ ಅಂತಾರಾಷ್ಟ್ರೀಯ ಟೆಲಿಸಂಪರ್ಕ ಒಕ್ಕೂಟ (ಐಟಿಯು) ವು ಈ ಪಾತ್ರವಸುವಂತೆ ಮಾಡಲು ಎಲ್ಲ ಸದಸ್ಯರಾಷ್ಟ್ರಗಳು ಒಡಂಬಡಿಕೆಯೊಂದಕ್ಕೆ ಸಹಿ ಹಾಕಲು ಈ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಅಂತಜಾìಲ ಶೈಶಾವಸ್ಥೆಯಲ್ಲಿದ್ದ 1988ರಲ್ಲಿ ರೂಪಿಸಿದ್ದ ಅಂತಾರಾಷ್ಟ್ರೀಯ ಟೆಲಿಸಂಪರ್ಕ ನಿಯಮಾವಳಿ (ಐಟಿಆರ್) ಯನ್ನು ಇದೀಗ ಮಾರ್ಪಾಟು ಮಾಡುವ ಮೂಲಕ ಇಂಟರ್‌ನೆಟ್ ಕಾರ್ಯನಿರ್ವಸುತ್ತಿರುವ ಮತ್ತು ಅದನ್ನು ನಿಯಂತ್ರಿಸುತ್ತಿರುವ ವಿಧಾನವನ್ನು ಬದಲಾಯಿಸುವ ಎಲ್ಲ ರಾಷ್ಟ್ರಗಳದ್ದು. ಎಲ್ಲ ದೇಶಗಳ ಸರ್ಕಾರಗಳು ಅಂತಜಾìಲ ನಿಯಂತ್ರಣದಲ್ಲಿ ಪಾಲುದಾರಿಕೆ ಹೊಂದಲು ಅನುವಾಗುವಂತೆ ವಿಶ್ವಸಂಸ್ಥೆಯ ಅಧೀನದ ಐಟಿಯು ಅಡಿಗೆ ಅಂತಜಾìಲನ್ನು ತರಬೇಕೆಂಬ ಪ್ರಸ್ತಾವಕ್ಕೆ ಅಮೆರಿಕಾ ಮತ್ತು ಯೂರೋಪ್ ರಾಷ್ಟ್ರಗಳು ಒಪ್ಪುತ್ತಿಲ್ಲ. ಈಗ ಆಚರಣೆಯಲ್ಲಿರುವ ಇಂಟರ್‌ನೆಟ್ ನಿಯಂತ್ರಣ ಸ್ವರೂಪವನ್ನು ಬದಲುಗೊಳಿಸಿ ಐಟಿಯು ಅಡಿಗೆ ಅದನ್ನು ತಂದಲ್ಲಿ ಅದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟಾಗುತ್ತದೆಂದು ಅಮೇರಿಕಾ ಬೆಂಬಲಿತ ಗುಂಪುಗಳು ವಾದಿಸುತ್ತವೆ. ಇದರ ವಿರುದ್ದ ಗುಂಪಿನ ಅಭಿಪ್ರಾಯವೆಂದರೆ ಇಂಟರ್‌ನೆಟ್‌ನ್ನು ಸರ್ಕಾರಗಳು ನಿಯಂತ್ರಿಸುವುದಕ್ಕೆ ನಾವು ಒತ್ತಾಯಿಸುತ್ತಿಲ್ಲ, ಆದರೆ ಕೆಲವೇ ಕಂಪನಿಗಳ ಹಿಡಿತದಲ್ಲಿರುವ ಇಂಟರ್‌ನೆಟ್‌ನ್ನು ಐಟಿಯು ಅಡಿಗೆ ತರಬೇಕೆಂದು, ಇದರಿಂದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೇನೂ ತೊಂದರೆ ಇಲ್ಲ ಅನ್ನೋ ಅಭಿಮತಕ್ಕೆ ಅಮೆರಿಕ ಸೊಪ್ಪೇ ಹಾಕಲಿಲ್ಲ. ಅಂದರೆ ಅಂತರ್ಜಾಲದ ವ್ಯವಹಾರ ನೀರ ಮೇಲಿನ ಗುಳ್ಳೆಯಂತೆ ಅನ್ನೋದು ಮತ್ತೂಮ್ಮೆ ಸಾಬೀತಾಯಿತು.
ಡೊಮೇನ್ ಅಂದರೆ...
ಇಂಟರ್‌ನೆಟ್‌ನಲ್ಲಿ ಜಾಗ ಪಡೆಯೋದು ಬೆಂಗಳೂರಲ್ಲಿ ಸೈಟು ಕೊಳ್ಳೋದು ಎರಡೂ ಒಂದೇ ವ್ಯವಹಾರ. ಇದರಲ್ಲಿ ಡೊಮೇನ್ ಅಂದರೆ ನಿಮ್ಮ ವೈಬ್ ಸೈಟ್‌ಗೆ ಏನು ಹೆಸರು ಬೇಕು ಅನ್ನದೋ, ಹಾಗೆಯೇ ವೆಬ್‌ಸೈಟ್‌ನಲ್ಲಿ ಎಷ್ಟು ಜಾಗ (ಜಿಬಿಗಳಲ್ಲಿ) ಬೇಕು ಅನ್ನೋದರ ಮೇಲೆ ದರ ನಿಗದಿಯಾಗುತ್ತದೆ.
ಡೊಮೇನ್ ಅರ್ಥಾತ್ ಹೆಸರುಗಳು ಕೊಡುವುದು ಐಸಿಎಎನ್‌ಎನ್ ಸಂಸ್ಥೆ. ಇದು ಅಮೆರಿಕ ನಿಯಂತ್ರಿತವಾಗಿದೆ. ಇಂಡಿಯಾಗೆ .ಇನ್, ಇರಾಕ್‌ಗೆ .ಐಕ್ಯೂ ಹೀಗೆ ಕೋಡ್‌ಗಳಿವೆ. ಕಂಪನಿ ಕೊಟ್ಟ ಹೆಸರು ತಗೊಳ್ಳುವುದಾದರೆ ವರ್ಷಕ್ಕೆ ಸುಮಾರು 800ರೂ. ಇದೆ. ನಮಗೆ ಇಂಥದ್ದೇ ಹೆಸರು ಬೇಕು ಎನ್ನುವುದಾದರೆ ಹೆಚ್ಚವರಿ ಹಣ ತೆತ್ತ ಬೇಕು. ಹಾಗೆಯೇ ವೆಬ್‌ಸೈಟುಗಳು ಎಷ್ಟು ಜಿಬಿ ಬಳಸುತ್ತೇವೆ ಅನ್ನುವುದರ ಮೇಲೆ ಸ್ಪೇಸ್ ಮನಿ ತೀರ್ಮಾನವಾಗುತ್ತದೆ. ಪ್ರಸ್ತುತ ಅಂದಾಜು 20ಜಿ.ಬಿಗೆ 2.500ರೂ ಇದೆ. ಇದು 12 ತಿಂಗಳ ಒಪ್ಪಂದ. ಪ್ರತಿ ವರ್ಷ ನವೀಕರಣವಾಗುತ್ತಿರಬೇಕು. ಅಮೆರಿಕ ಹಿಡಿತ ಇಟ್ಟು ಕೊಂಡಿರುವುದು ಹೆಸರು ಕೊಡುವ ಡೊಮೀನ್ ಮೇಲೆ.