Udayavani | Jan 20, 2013
ಅವನು ನಿವೃತ್ತ ಇಂಜಿನಿಯರ್. ಮನೆಕೆಲಸಕ್ಕೆ ಬರುವ ಮಗಳಿಗೆ ಸ್ಕೂಲಿನ ಪ್ರಾಜೆಕ್ಟ್ ವರ್ಕು ಮಾಡಿಸುತ್ತ, ಗಿಡ ನೆಡುತ್ತ¤, ಅಂಗಡಿಗೆ ಹೋಗಿ ತರಕಾರಿ ತರುತ್ತ, ಪೇಪರ್ ಓದುತ್ತ¤, ಹಾಡು ಕೇಳುತ್ತ ಸಂಭ್ರಮಿಸುತ್ತಿರುತ್ತಾನೆ. ಶರಟಿನ ಮೇಲಿನ ಗುಂಡಿ ಹಾಕದೇ ಇರುವ ಅವನಿಗೆ ಆ ಪುಟ್ಟ ಹುಡುಗಿ ಆಗಾಗ ಗುಂಡಿ ಹಾಕಿಕೊಳ್ಳುವಂತೆ ನೆನಪು ಮಾಡುತ್ತಿರುತ್ತಾಳೆ.
ಆ ಹುಡುಗಿ ಒಂದು ದಿನ ಇದ್ದಕ್ಕಿದ್ದಂತೆ ನಾಪತ್ತೆ ಆಗುತ್ತಾಳೆ. ಅವಳ ಹುಡುಕಾಟಕ್ಕೆಂದು ಆತ ಪೊಲೀಸ್ ಸ್ಟೇಷನ್ನಿಗೆ ಹೋಗುತ್ತಾನೆ. ಪೊಲೀಸರು ಅವನನ್ನೇ ಅಪರಾಧಿ ಸ್ಥಾನಕ್ಕೆ ತಳ್ಳುವ ಪಿತೂರಿ ಮಾಡುತ್ತಾರೆ. ಪೊಲೀಸ್ ಅಧಿಕಾರಿ ಅವನ ಕಾಲರ್ ಪಟ್ಟಿ ಹಿಡಿದು, "ಕೂತ್ಕೊಳಿÅà' ಅಂತ ಅಬ್ಬರಿಸುತ್ತಾನೆ. ಅವನ ಶರಟಿನ ಮೇಲಿನ ಗುಂಡಿ ಕಿತ್ತು ಹೋಗುತ್ತದೆ. ಗುಂಡಿ ಹಾಕಿಕೋ ಅಂತ ಹೇಳಲು ಆ ಪುಟ್ಟ ಹುಡುಗಿ ಇಲ್ಲ.
ಹೀಗೊಂದು ಸಂದಿಗ್ಧದಲ್ಲಿ ನಾವು ತಲ್ಲಣಿಸುವಂತೆ ಮಾಡುವ ಸಿನೆಮಾವೊಂದನ್ನು ಇತ್ತೀಚೆಗೆ ನೋಡಿದೆವು.
ಚಿತ್ರದ ಹೆಸರು? ತಲ್ಲಣ?. ಮಹಾನಗರದ ಕ್ರೌರ್ಯ, ಜೀವಂತಿಕೆ, ನಂಬಿಕೆ, ಗೊಂದಲ, ಅಸಹಜತೆ, ಆತುರ ಮತ್ತು ನಿಷ್ಕ್ರಿಯತೆಯನ್ನು ಇಷ್ಟು ಅಚ್ಚುಕಟ್ಟಾಗಿ ಹಿಡಿದಿಟ್ಟ ಚಿತ್ರವೊಂದು ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲಿ ಬಂದಿದ್ದು ನೆನಪಿಲ್ಲ. ಇಲ್ಲಿ ಏನೇನೆಲ್ಲ ನಡೆಯುತ್ತದೆ. ಕುಡುಕ ಅಪ್ಪನಿದ್ದಾನೆ, ದುಡಿಯೋ ಅಮ್ಮ ಇದ್ದಾಳೆ.
ಅವಳು ಪ್ರಾಮಾಣಿಕತೆ ಉಳಿಸಿಕೊಂಡಿದ್ದಾಳೆ. ಅಮ್ಮನನ್ನು ತುಂಬ ಪ್ರೀತಿಸುವ ಮಗಳಿದ್ದಾಳೆ. ಅವಳು ಲಿಪ್‌ಸ್ಟಿಕ್ಕಿಗಾಗಿ ಆಸೆಪಡುತ್ತಿದ್ದಾಳೆ. ಅದೇ ಲಿಪ್‌ಸ್ಟಿಕ್ಕು ಕಂಡೊಡನೆ ಬೆಚ್ಚಿಬೀಳುವ ಮತ್ತೂಬ್ಬಳು ಹುಡುಗಿ ಇದ್ದಕ್ಕಿದ್ದ ಹಾಗೆ ಎದುರಾಗುತ್ತಾಳೆ. ಈ ಮಧ್ಯೆ ನೀವು ಕಾಲೇಜು ಓದಿದೋರಲ್ವಾ, ಆದ್ರೂ ನಿಮ್ಮ ಮಾತಿಗೆ ಬೆಲೆಯಿಲ್ವಾ ಅಂತ ಕೇಳಿಸಿಕೊಂಡು ಕಣ್ಣೀರಾಗುವ ನಿವೃತ್ತ ಇಂಜಿನಿಯರ್ ಮಗಳಿದ್ದಾಳೆ.ಅವಳ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಹೆಣ್ಣು ಭ್ರೂಣವನ್ನು ಹತ್ಯೆ ಮಾಡಲು ಪಿತೂರಿ ನಡೆದಿದೆ.
ಇವಿಷ್ಟನ್ನೂ ನಿರ್ದೇಶಕ ಸುದರ್ಶನ್ ಒಂದೇ ಕತೆಯೊಳಗೆ ತಂದುಬಿಡುತ್ತಾರೆ. ಎಲ್ಲರೂ ಎಷ್ಟು ಸುಖವಾಗಿದ್ದಾರೆ ಎಂಬ ಭ್ರಮೆಯೊಂದಿಗೆ ಶುರುವಾಗುವ ಸಿನೆಮಾ, ಬಿಚ್ಚಿಕೊಳ್ಳುತ್ತ ಹೋದ ಹಾಗೆ ಅವರವರ ಕಷ್ಟಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಬಿಸಿಲಲ್ಲಿ ತಲೆ ಬಾಚುತ್ತ ಕೂತ ಇಂಜಿನಿಯರ್ ಮಗಳು ಗಾರ್ಗಿ, ಗಂಡನನ್ನು ಹಿತವಾಗಿ ಬೆ„ಯುತ್ತಲೇ ಸುಖವಾಗಿರುವ ಇಂಜಿನಿಯರನ ಹೆಂಡತಿ, ಕುಡಿದು ಬಿದ್ದ ಗಂಡನ ಮೇಲೆ ಅನುಕಂಪ ಮತ್ತು ಸಿಟ್ಟು ತೋರಿಸುವ ಜಯಮ್ಮ, ಅಮ್ಮ ಕೊಟ್ಟ ಬದುಕನ್ನು ಬದುಕುತ್ತ ಹೋಗಬೇಕು ಅನ್ನುವ ಅವಳ ಜೀವನಮೌಲ್ಯ, ತನ್ನ ಗೆಳತಿಯರಿಗೆ ಇರುವ ಸೌಭಾಗ್ಯ ತನಗಿಲ್ಲ ಎಂದು ಕೊರಗದ ಜಯಮ್ಮನ ಮಗಳು ಸುಷ್ಮಾ, ಗಾರ್ಗಿಯ ಮನೆಯ ಮಹಡಿಯಲ್ಲಿ ನಿಂತು ಬೆಂಗಳೂರು ನೋಡಬೇಕು ಅನ್ನುವ ಅವಳ ಆಸೆ.
ಬೆಂಗಳೂರು ಹೀಗೂ ಇರುತ್ತದಾ ಅನ್ನುವಂತೆ ತೋರಿಸಿದ ಛಾಯಾಗ್ರಾಹಕ ಹೊನ್ನಾಳಿ, ಕ್ರಮೇಣ ನಮ್ಮನ್ನು ಬೆಚ್ಚಿಬೀಳಿಸುತ್ತ, ಆದ್ರìರಾಗಿಸುತ್ತ ಹೋಗುವ ಕತೆ, ಎಲ್ಲ ಕಷ್ಟಗಳೂ ಹೆಣ್ಣಿಗೇ ಮೀಸಲೇನೋ ಎಂಬಂತೆ ದೇವರು, ಜ್ಯೋತಿಷಿ, ಪಕ್ಕದಮನೆಯಾಕೆ, ತಾನು ಕೆಲಸ ಮಾಡುವ ಮನೆಯ ಮಾಲಿಕರು, ಪೊಲೀಸರು, ವ್ಯವಸ್ಥೆ, ನಡುರಾತ್ರಿ ಬೀದಿಯಲ್ಲಿ ಅವಳನ್ನು ಕರೆವೆಣ್ಣಿನಂತೆ ನೋಡುವ ಲಾರಿಡ್ರೆ„ವರುಗಳು- ಹೀಗೆ ದುರ್ಬರವಾಗುತ್ತ ಹೋಗುವ ಬದುಕು ನಮ್ಮನ್ನು ಜೀವಿಸುವಂತೆ ಪ್ರೇರೇಪಿಸುತ್ತ ಹೋಗುತ್ತದೆ.
ಚಿತ್ರದಲ್ಲಿ ತಾಯಿ ಮಗಳು ಒಬ್ಬರನ್ನೊಬ್ಬರು ಹಿಡಕೊಂಡು ಹುಸಿ ಜಗಳ ಆಡುವ ಕ್ಷಣವೊಂದಿದೆ. ಬಹುಶಃ ಮಹಾನಗರದ ಬದುಕಿನ ಮಧುರ ಕ್ಷಣ ಅದೊಂದೇ ಇರಬೇಕೇನೋ ಅಂತ ಅನ್ನಿಸುವಷ್ಟು ಅದು ಆಪ್ತವಾಗಿದೆ. ಮಗಳನ್ನು ಕಳಕೊಂಡ ತಂದೆ ತಾನು ಹೊಕ್ಕಿ ಬಂದ ವೇಶ್ಯಾಗƒಹಗಳಲ್ಲಿ ಅವಳಿಗಾಗಿ ಹುಡುಕಾಡುವುದು, ಮತ್ತೆ ಮರಗೆಲಸಕ್ಕೆ ಮರಳುವುದು ಮತ್ತು ಈ ಎಲ್ಲ ಪಾತ್ರಗಳನ್ನೂ ಮೈತುಂಬಿಕೊಂಡಿರುವ ನಟರು. ಸಿದ್ಲಿಂಗು ಶ್ರೀಧರ್ ಮೌನದಲ್ಲಿ, ನೋಟದಲ್ಲಿ ಮಾತನ್ನೂ ಮೀರಿದ ಭಾವಗಳನ್ನು ಹೊರಸೂಸುತ್ತಾರೆ. ನಿರ್ಮಲಾ ಚೆನ್ನಪ್ಪ ಜಯಮ್ಮನನ್ನು ಆವಾಹಿಸಿಕೊಂಡಿದ್ದಾರೆ. ಅವರ ಭಂಗಿ, ನಿಲುವು, ಮಾತು, ನಡಿಗೆ, ಸಣ್ಣ ಸಣ್ಣ ಸನ್ನೆಗಳಲ್ಲಿ ಆಕೆ ನಟನೆಯ ಅಪೂರ್ವ ಚೆ„ತನ್ಯವನ್ನು ಹೊರಹೊಮ್ಮಿಸುತ್ತಾರೆ. ಒಂದು ರೀತಿಯಲ್ಲಿ ಇದು ಕಲಾವಿದರ ಸಿನೆಮಾ. ನಿರ್ದೇಶಕ ಗ್ರಹಿಸಿದ್ದನ್ನು ಮೈದುಂಬಿಸಿಕೊಂಡು ಮರುಳಾಗಿ, ತನ್ಮಯರಾಗಿ ನಟಿಸಿದಾಗ ಇಂಥದ್ದೊಂದು ಚಿತ್ರ ಮೂಡುತ್ತದೆ.
ಬೆಂಗಳೂರಿನ ಆತ್ಮ ಎಲ್ಲಿದೆ ಎಂದು ಹುಡುಕುತ್ತ ಹೋದರೆ, ಅದು ಒಮ್ಮೊಮ್ಮೆ ಓಣಿಗಳಲ್ಲಿ, ಸಂದಿಗೊಂದಿಗಳಲ್ಲಿ, ಕತ್ತಲ ರಾತ್ರಿಗಳಲ್ಲಿ, ಮುಚ್ಚಿದ ಬಾಗಿಲುಗಳ ಹಿಂದೆ, ಜಯಮ್ಮನ ಮಗಳ ನಗುವಿನಲ್ಲಿ, ಜಯಮ್ಮನ ಯಾತನೆಯಲ್ಲಿ, ಅಧಿಕಾರಿಯ ನಿರಾಸಕ್ತಿಯಲ್ಲಿ, ನಿವೃತ್ತ ಇಂಜಿನಿಯರನ ನಿಷ್ಕ್ರಿಯ ಹತಾಶೆಯಲ್ಲಿ ಮಿಂಚಿ ಬಿಡುತ್ತದೆ.