'ಮನಸು ಹೇಳಬಯಸಿದೆ ನೂರೊಂದು/ ತುಟಿಯ ಮೇಲೆ ಬಾರದಿದೆ ಮಾತೊಂದು/ ವಿದಾಯ ಗೆಳೆಯರೆ/ ವಿದಾಯ ಗೆಳತಿಯರೆ/ ವಿದಾಯ ಹೇಳಬಂದಿರುವೆ ನಾ ನಿಂದು.. -ಚಲನಚಿತ್ರದ ಈ ಗೀತೆಯನ್ನು ಕೇಳಿದಾಗೆಲ್ಲ ಮನಸ್ಸು ಭಾರವಾಗಿ ಕಣ್ಣಲ್ಲಿ ನೀರು ಬರುತ್ತೆ. ಕಾರಣ ಇಷ್ಟೆ, ನಾನಾಗ ದ್ವಿತೀಯ ಪಿ.ಯು.ಸಿ.ಯಲ್ಲಿದ್ದೆ. ಶೈಕ್ಷಣಿಕ ವರ್ಷದ ಕೊನೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾನು ಚಿಕ್ಕ ಬಹುಮಾನ ಪಡೆದಿದ್ದೆ. ಬಹುಮಾನ ಪಡೆದ ಖುಷಿಗಿಂತ ಈ ಹಾಡಿನ ಸಾಲುಗಳು ಧ್ವನಿಸುತ್ತಿದ್ದ ಅರ್ಥ ಬಹಳ ದುಃಖ ನೀಡುವುದಾಗಿತ್ತು. ಸ್ನೇಹಿತರ ಜತೆಯಲ್ಲಿ ಕಳೆದದ್ದು ಕೇವಲ ವರ್ಷಗಳದ್ದೆನೋ ಎನಿಸುವಷ್ಟು ಗಾಢವಾಗಿತ್ತು. ಸ್ನೇಹಿತರ ಅಗಲುವಿಕೆಯ ನೋವನ್ನು ಹೇಳುವ ಈ ಹಾಡು, ಇಂದಿಗೂ ಇಷ್ಟ. ನಾವು ಐವರು ಪಂಚಕನ್ಯೆಯರ ಹಾಗೆ ಇದ್ವಿ. ಒಂದೇ ಬೆಂಚಲ್ಲಿ ಕೂರ್ತಾ ಇದ್ವಿ, ವಾಚಾಳಿಗಳು ಅಂತ ಪ್ರಖ್ಯಾತಿ ಗಳಿಸಿದ್ವಿ. ರೋಡಲ್ಲಿ ನಡೆಯುವಾಗಲೂ ಒಟ್ಟೊಟ್ಟಿಗೆ ನಡೆಯಬೇಕೂಂತ ನಡೆಯುವಾಗೆಲ್ಲಾ ನಮ್ಮ ಹಿಂದೆ ಬರುವ ವಾಹನ ಸವಾರರಿಂದ ಪೂಜೆ ಮಾಡಿಸ್ಕೊತಿದ್ವಿ, ಆ ವಯಸ್ಸೇ ಅಂತಹದ್ದೇನೊ ಎನ್ನುವ ಅಹಂ, ಕಾಲ ನಿಲ್ಲಲಿಲ್ಲ ಪಿ.ಯು.ಸಿಯ ನಂತರ ಐವರೂ ನಮ್ಮ ಆಯ್ಕೆಯ ಓದಿನ ಕಾರಣ ದೂರಾಗುವ ಅನಿವಾರ್ಯ ಒದಗಿತ್ತು. ಹಾಡು ನಿಜವಾಗಿತ್ತು. ಹಾಡಿನ ಸಾಲುಗಳು ಗೆಳತಿಯರ ಮುಖಗಳು ಮನಸ್ಸಲ್ಲಿ ಉಳಿದು ಹೋಯಿತು. ವರುಷಗಳು ಉರುಳಿತು. ಹಾಡು ಕೇಳಿದಾಗಲೆಲ್ಲಾ ಮನಸು ಕಾಲೇಜಿನ ದಿನಗಳತ್ತ ಓಡುತಿತ್ತು. ಆಕಸ್ಮಿಕವಾಗಿ ಕಳೆದ ವರುಷ ಮೂವರು ಗೆಳತಿಯರು ಭೇಟಿಯಾಗುವ ಅವಕಾಶ ದೊರೆಯಿತು. ಸಂತೋಷಕ್ಕೆ ಪಾರವೇ ಇರಲಿಲ್ಲ. ಅದೇ ನಗು, ಅದೇ ಹರಟೆ ಕಾಲೇಜಿನ ದಿನಗಳ ನೆನಪು ಗೆಳೆಯರ ನೆನಪು ಓಹ್ ಎಷ್ಟು ಆನಂದ ಆಯ್ತು. ನನ್ನ ಮಗಳು ಕೇಳಿದಳು ಏನಮ್ಮ ನೀವೆಲ್ಲ ಸಣ್ಣ ಮಕ್ಕಳ ಹಾಗೇ ಆಡ್ತಾ ಇದ್ದೀರಲ್ಲ ಎಂದು ಒಬ್ಬರನೊಬ್ಬರು ನೋಡಿದ ಖುಷಿಯಲ್ಲಿ ನಮ್ಮ ಮಕ್ಕಳನ್ನೆ ಮರೆತಿದ್ವಿ. ಸ್ನೇಹ ಅನ್ನೋದೇ ಹಾಗೆ ಬತ್ತದ ಒರತೆ. ಆ ಹಾಡು ಮತ್ತೆ ಹಳೆಯದೆಲ್ಲಾ ನೆನಪಾಗುವಂತೆ ಮಾಡಿತು. -ವರಲಕ್ಷಿ$¾à ಮಧುವನಹಳ್ಳಿ