ನನ್ನ ವಯಸ್ಸು 24. ನಾನು ನನ್ನ ಸಂಬಂಧಿಕರಾದ ಹಿರಿಯ ಮಹಿಳೆಯೊಬ್ಬರೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ಅವರಿಗೆ 36 ವರ್ಷ. ಅವರಿಗೆ ಇನ್ನೂ ಲೈಂಗಿಕತೆಯಲ್ಲಿ ಚಟವಿದೆಯೆ ಅಥವಾ ನನ್ನ ಆಸೆಗಾಗಿ ಕೂಡುತ್ತಾರೆಯೇ ಗೊತ್ತಿಲ್ಲ. ಇತ್ತೀಚೆಗೆ ನಾವು ಸೇರಿದಾಗ ಉರಿಯಾಗುತ್ತಿದೆ ಎಂದು ಹೇಳಿದರು. ಇದು ಅಂದು ವೂತ್ರ ಕಾಣಿಸಿಕೊಂಡಿದ್ದಾಗಿತ್ತು. ಇದಕ್ಕೆ ಪರಿಹಾರವೇನು? ಅವರೊಡನೆ ಕೂಡುವುದನ್ನು ಬಿಡಲು ಪರಿಹಾರ ತಿಳಿಸಿ. ನನ್ನ ಜನನಾಂಗ ಕೂಡ ಸಣ್ಣಗೆ ಬಲವಿಲ್ಲದಂತಾಗಿದೆ. ಅದು ದಪ್ಪಗಾಗುವಂಥ ಸಲಹೆ ನೀಡಿ. -ಪ್ರಕಾಶ್, ಮೈಸೂರು ನಿಮ್ಮ ಸಂಬಂಧದಿಂದ ಖಂಡಿತವಾಗಿಯೂ ಇಬ್ಬರಿಗೂ ತೊಂದರೆ ಆಗಬಹುದು. ಆದಷ್ಟು ಬೇಗ ಈ ಸಂಬಂಧದಿಂದ ದೂರವಾಗಿ. ನಿಮಗೆ ಸೋಂಕೇನಾದರೂ ಇದ್ದರೆ ಚಿಕಿತ್ಸೆ ತೆಗೆದುಕೊಳ್ಳಿ. ಆ ಹಿರಿಯ ಮಹಿಳೆ ಕೂಡ ಚಿಕ್ಕ ವಯಸ್ಸಿನವನನ್ನು ಅದರಲ್ಲಿಯೂ ಹತ್ತಿರದ ಸಂಬಂಧಿಯನ್ನು ಈ ರೀತಿ ಬಳಸಿಕೊಳ್ಳುವುದು ತಪ್ಪಾಗುತ್ತದೆ. ನಿಮಗೆ ಅದರಿಂದ ತೊಂದರೆಯಾಗುತ್ತಿದ್ದರೆ ನಿಮ್ಮ ತಂದೆ, ತಾಯಿಗೆ ತಿಳಿಸಿ. ಕೆಲವು ಕಾಲ ಅವರಿಂದ ದೂರವಿದ್ದು, ನಿಮ್ಮ ವಿದ್ಯಾಭ್ಯಾಸ ಮುಂದುವರಿಸಿ. ನಿಮ್ಮ ಲೈಂಗಿಕ ಸಮಸ್ಯೆಗಳಿಗೆ ನುರಿತ ಲೈಂಗಿಕ ತಜ್ಞರನ್ನು ಭೇಟಿಯಾಗಿ. ನನ್ನ ವಯಸ್ಸು 19. ನನ್ನ ಗಂಡನದು 27. ಇತ್ತೀಚೆಗೆ ಮದುವೆಯಾಯಿತು. ನಾವಿಬ್ಬರೂ ಅನ್ಯೋನ್ಯವಾಗಿ ಇದ್ದೇವೆ. ಆದರೂ ಇದುವರೆಗೆ ನಮ್ಮಲ್ಲಿ ಮಿಲನಕ್ರಿಯೆ ನಡೆದಿಲ್ಲ. ನನ್ನವರಿಗೆ ಲೈಂಗಿಕ ಕ್ರಿಯೆ ನಡೆಸುವ ಮೊದಲು ತುಂಬಾ ಆಸಕ್ತಿಯಿಂದ ಇರುತ್ತಾರೆ. ಆದರೆ ಲೈಂಗಿಕ ಕ್ರಿಯೆ ನಡೆಸುವಾಗ ಮಾತ್ರ ಜನನಾಂಗವು ಬೇಗ ಸತ್ವ ಕಳೆದುಕೊಳ್ಳುವುದರಿಂದ ಆಸಕ್ತಿ ಕಳೆದುಕೊಳ್ಳುತ್ತಾರೆ. ನಮಗೆ ಬೇಗನೇ ಮಗು ಬೇಕಾಗಿರುವುದರಿಂದ ಮನಸ್ಸಿಗೆ ತುಂಬಾ ಬೇಸರ ಉಂಟಾಗಿದೆ. -ಚೇತನಾ, ಕಾರವಾರ ನಿಮ್ಮ ಪತಿಗೆ ಬಹುಶಃ ನಿಮಿರು ದೌರ್ಬಲ್ಯ ತೊಂದರೆ ಇದೆ. ಇದಕ್ಕೆ ಚಿಕಿತ್ಸೆ ಇದೆ. ಮದುವೆಯಾದ ಹೊಸತರಲ್ಲಿ ಇಂತಹ ಸಮಸ್ಯೆ ಉದ್ಭವಿಸುವುದು ಬಹಳ ಸಾಮಾನ್ಯ. ಕ್ರಮೇಣ ಅದು ಸರಿ ಹೋಗುತ್ತದೆ. ಸಮಸ್ಯೆ ಹಾಗೆಯೇ ಬಹಳ ಕಾಲ ಉಳಿದರೆ ಅದಕ್ಕೆ ಬೇರೇನಾದರೂ ಕಾರಣವಿದೆಯೇ ಎಂದು ತಿಳಿದುಕೊಳ್ಳಬೇಕಾಗುತ್ತದೆ. ಹಾಗೆಯೇ ನಿಮ್ಮನ್ನೂ ಪರೀಕ್ಷೆ ಮಾಡಿ ಗಟ್ಟಿ ಪೊರೆ, ಯೋನಿ ಸೆಡೆತಗಳಂತಹ ಯಾವುದಾದರೂ ತೊಂದರೆ ಇದೆಯೇ ಎಂದು ಪರೀಕ್ಷಿಸಬೇಕಾಗುತ್ತದೆ. ಸ್ತ್ರೀರೋಗ ತಜ್ಞರು/ಲೈಂಗಿಕ ತಜ್ಞರನ್ನು ಭೇಟಿಯಾಗಿ.