Saturday, May 25, 2013
Last Updated: 7:59:17 AM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕೃಷಿ-ವಾಣಿಜ್ಯ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಮಿಶ್ರಫ‌ಲ
    • ಯಾರೂ ಬೇಡಾ ಅನ್ನದ ಪೇಡಾ
    • ಧಾರವಾಡದ ಮಿಶ್ರಪೇಡ ಅಂದರೆ ಬಾಯಲ್ಲಿ ನೀರು ಬರುತ್ತದೆ.

      • ಬಸವರಾಜ್‌ ಹೊಂಗಲ್‌ | Jan 22, 2013

        ಧಾರವಾಡದ ಮಿಶ್ರಪೇಡ ಅಂದರೆ ಬಾಯಲ್ಲಿ ನೀರು ಬರುತ್ತದೆ.  ಹೆಚ್ಚಾ ಕಡಿಮೆ ದಿನಕ್ಕೆ 600ಕೆ.ಜಿ ಮಾರಾಟ ಮಾಡುತ್ತಿದೆ. ಇದು ದೇಶವನ್ನೂ ದಾಟಿ ವಿದೇಶದಲ್ಲೂ ಹೆಸರು ಮಾಡಿದೆ.

        ವಿದ್ಯಾರ್ಥಿಭವನ ಮಸಾಲೆದೋಸೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಪ್ರವಾಸ ಮಾಡಿದ್ದು ಎಲ್ಲಕಡೆ ಸುದ್ದಿಯಾಗಿತ್ತು. ಆದರೆ ಅದಕ್ಕೂ ಮುನ್ನ ಧಾರವಾಡದ ಪೇಡ ವಿದೇಶಗಳಲ್ಲಿ ಸುದ್ದಿ ಮಾಡಿತ್ತು.

        ಆದರೆ ಅಧಿಕೃತವಾಗಿ ಇದನ್ನು ಯಾರೂ ರಫ್ತು ಮಾಡುತ್ತಿರಲಿಲ್ಲ. ಬದಲಿಗೆ ಪೇಡ ಪ್ರಿಯರೇ ಇದನ್ನು ಕೊಂಡು ತಮ್ಮ ನೆಂಟಿಸ್ಟರ ಹುಟ್ಟು ಹಬ್ಬಕ್ಕೋ ಅಥವಾ ಸಿಹಿ ಸಮಾಚಾರದ ಸಂಕೇತ ಎಂಬಂತೆ ಕಳುಹಿಸಿಕೊಡುತ್ತಿದ್ದರು. ಆದರೆ ಇದೀಗ ಧಾರವಾಡದ ಪೇಡ ಅಧಿಕೃತವಾಗಿ ಮುಂಬೈ, ದೆಹಲಿ,ಚೆನ್ನೈ, ಬೆಂಗಳೂರು ಅಷ್ಟೇಯಲ್ಲ, ಕಾಶ್ಮೀರದ ಕಣಿವೆಗಳನ್ನು ದಾಟಿ ಹೊರ ದೇಶಗಳಿಗೂ ತಲುಪುತ್ತಿದೆ.
         ಧಾರವಾಡ ಪೇಡ ರುಚಿಯ ಗುಟ್ಟು ಅಡಗಿರುವುದಕ್ಕೇ ಇಲ್ಲಿನ ಸಮೃದ್ಧ ಗೋವು ಸಂಪತ್ತು ಮತ್ತು ಸಹ್ಯಾದ್ರಿ ಸಾಲಿನ ರುಚಿಯಾದ ಹುಲ್ಲು ಥಳಕು ಹಾಕಿಕೊಂಡಿದೆ.  ಮಲೆನಾಡಿನ ದೇಶಿ ಹಸುಗಳು ತಿನ್ನುವ ದೇಶಿ ಹುಲ್ಲುಹಾವಲಿನ ಹುಲ್ಲು, ಸ್ವಾಧಭರಿತ ಹಾಲು ಮತ್ತು ಖೋವಾ ರೂಪದಲ್ಲಿ ಪೇಡ ಮಾಡುವ ಕುಟುಂಬಗಳ ಕೈ ಸೇರುತ್ತದೆ. ಹೀಗಾಗಿ ಧಾರವಾಡದ ಪೇಡ ಬೇರೆ ಕಡೆ ತಯಾರಿಸುವ ಫೇಡಾಗಿಂತಲೂ ರುಚಿಯಾಗಿರುತ್ತದೆ.

        ರುಚಿಯಾದ ತಿಂಡಿ ತಿನಿಸುಗಳು ಸುಂದರವಾದ ಪಾಕೇಟಿನಲ್ಲಿ ಸ್ಥಾನಪಡೆದುಕೊಂಡಂತೆ ಪೇಡ ಕೂಡ ಇದೀಗ ಜಾಗತೀಕರಣದ ಪೈಪೋಟಿಗೆ ತಕ್ಕಂತೆ ಸುಂದರವಾದ ಧಿರಿಸು ಹೊಲಿಸಿಕೊಂಡು ವಿದೇಶ ಪ್ರವಾಸದಲ್ಲಿದೆ. ಅಮೆರಿಕಾ, ಇಂಗ್ಲೆಂಡ್‌, ಫ್ರಾನ್ಸ್‌ ಹಾಗೂ ಅಸ್ಟ್ರೇಲಿಯಾ ದೇಶಗಳಲ್ಲಿ ಧಾರವಾಡದ ಪೇಡಾಕ್ಕೆ ಅತ್ಯಂತ್ಯ ಉತ್ತಮ ಮಾರುಕಟ್ಟೆ ತೆರೆದುಕೊಂಡಿದೆ. ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ವೈದ್ಯರು, ಎಂಜಿನಿಯರ್‌ಗಳು ಹಾಗೂ ವಿಜ್ಞಾನಿಗಳು ವಿದೇಶದಲ್ಲಿ ನಡೆಯುವ ತಮ್ಮ ಎಲ್ಲ ಕಾರ್ಯಕ್ರಮಗಳಿಗೂ ಪೇಡ ತರಿಸಿಕೊಳ್ಳುತ್ತಿದ್ದಾರೆ.ಅಷ್ಟೇಯಲ್ಲ ಉತ್ತರ ಕರ್ನಾಟಕ ಭಾಗದಲ್ಲಿ ಪೇಡ ಪುರುಷ ಸಂಕೇತವಾಗಿ ಮಾರ್ಪಟ್ಟಿದ್ದು, ಇದೇ ಕಾರಣಕ್ಕೆ. ಇಲ್ಲಿ ಗಂಡು ಮಗು ಜನಿಸಿದರೆ ಖುಷಿಗೆ ಪೇಡ ಹಂಚಿ ಸಂಭ್ರಮಿಸುತ್ತಾರೆ.

        ಠಾಕೂರ್‌, ಮಿಶ್ರಾ ಫೇಡ

        20 ನೇ ಶತಮಾನ ಆರಂಭದಲ್ಲಿ ಧಾರವಾಡ ಪೇಡ ಎಂದು ಕರೆಯಿಸಿಕೊಂಡಿದ್ದು ಲೈನ್‌ ಬಝಾರ್‌ ಠಾಕೂರ್‌ ಸಿಂಗ್‌ ಫೇಡಾ. ಅದರ ಜೊತೆಗೆ ಮಿಶ್ರಾ ಪೇಡ ಕೂಡ ಮಾರುಕಟ್ಟೆಯನ್ನು ವಿಸ್ತರಿಸಿಕೊಂಡಿತು. ಹೀಗಾಗಿ ಧಾರವಾಡದ ಪೇಡದ ಬಗ್ಗೆ ಗೊತ್ತಿರುವವರಿಗೆಲ್ಲ ಈ ಎರಡು ಹೆಸರುಗಳು ಗೊತ್ತಿರಲಿಕ್ಕೆಬೇಕು.
        18 ನೇ ಶತಮಾನದಲ್ಲಿ ಬಂಗಾಲದಿಂದ ಧಾರವಾಡಕ್ಕೆ ಬಂದು ನೆಲೆನಿಂತ ಈ ಕುಟುಂಬಗಳು ಆರಂಭದಲ್ಲಿ ಬರೀ ಸಿಹಿ ತಿಂಡಿ ತಿನಿಸು ತಯಾರಿಸಿ ಮಾರಾಟ ಮಾಡುತ್ತಿದ್ದವು. ಆದರೆ ಇಲ್ಲಿ ಸಿಕ್ಕುವ ಪರಿಶುದ್ಧ ಹಾಲು ಮತ್ತು ಖುವಾ ನೋಡಿ ಪೇಡ ತಯಾರಿಸಲು ಆರಂಭಿಸಿತು. ಇದೀಗ ಠಾಕೂರ್‌ಸಿಂಗ್‌ ಕುಟುಂಬ, ಮಿಶ್ರಾ ಕುಟುಂಬಗಳು, ವಿಜಯಾ ಸ್ವೀಟ್ಸ್‌ ತಿಂಡಿ-ತಿನಿಸುವ ವ್ಯಾಪಾರಿ ಕುಟುಂಬಗಳು ಪೇಡ ಸಿದ್ಧಗೊಳಿಸುತ್ತಿದ್ದು, ಅದನ್ನು ಆಕರ್ಷಕ ಪ್ಯಾಕ್‌ಗಳನ್ನು ಬಳಸಿ ಭರ್ಜರಿ ಮಾರಾಟದಲ್ಲಿ ತೊಡಗಿವೆ.
        ಇದೀಗ ಧಾರವಾಡ ನಗರದಿಂದ ಪ್ರತಿ ವರ್ಷ ಅಂದಾಜು ಐದು ಸಾವಿರ ಕೆ.ಜಿ.ಗೂ ಅಧಿಕ ಪೇಡ ವಿದೇಶಗಳಿಗೆ ತಲುಪುತ್ತಿದೆ.

        ಠಾಕೂರ್‌ಸಿಂಗ್‌ ಪೇಡ ಮಾನ್ಯತೆ

        ಇಲ್ಲಿನ ಅತ್ಯಂತ ಹಳೆಯ ಮಳಿಗೆ ಹಾಗೂ ಠಾಕೂರ್‌ ಮನೆತನದ ಠಾಕೂರ್‌ ಸಿಂಗ್‌ ಪೇಡ ರುಚಿ ದೇಶದ ಗದ್ದುಗೆ ಮೇಲೆ ಕುಳಿತವರಿಗೂ ಇಷ್ಟವಾಗುತ್ತಿತ್ತು.


        ಮಾಜಿ ಪ್ರಧಾನಿ ಇಂದಿರಾಗಾಂಧಿ, ರಾಜೀವಗಾಂಧಿ ಯಾದಿಯಾಗಿ ಎಲ್ಲರೂ ಈ ಫೇಡಾದ ರುಚಿ ಸವಿದಿದ್ದಾರೆ. ಅಷ್ಟೇಯಲ್ಲ, ಈ ಸ್ವಾಧಿಷ್ಟ ರುಚಿಗೆ ರಾಷ್ಟ್ರೀಯ ಸಮ್ಮಾನಗಳು ಲಭಿಸಿವೆ.
        ಪೇಡ ಖರ್ಚಾಗುತ್ತಿದೆ ಎಂದರೆ ಇದು ಬರೀ ಪೇಡ ತಯಾರಿಸುವ ಮನೆತನಗಳಿಗೆ ಮಾತ್ರ ಲಾಭವಾಗುವುದಿಲ್ಲ. ಸುತ್ತಲಿನ ಹಳ್ಳಿಗಳಲ್ಲಿ ಹಾಲು ಉತ್ಪಾದಿಸುವವರಿಗೂ ಅನುಕೂಲ ವಾಗುತ್ತದೆ. ಈ ಭಾಗದಲ್ಲಿ ಅನೇಕ ಗೌಳಿ ಕುಟುಂಬಗಳು ಹಾಲಿನಿಂದ ಖೋವಾ ಸಿದ್ದಗೊಳಿಸಿ ಅದನ್ನು ಪೇಡ ಮತ್ತು ಕುಂದಾ ತಯಾರಿಸುವವರಿಗೆ ಪೂರೈಸುತ್ತವೆ. ಆ ಕುಟುಂಬಗಳಿಗೂ ಪೇಡ ಪರೋಕ್ಷವಾಗಿ ಉದ್ಯೋಗ ಒದಗಿಸಿದೆ.
        ಧಾರವಾಡದಲ್ಲಿ ಗಲ್ಲಿ, ಗಲ್ಲಿಗೂ ಅಂಗಡಿಗಳಿವೆ. ಆದರೆ ಗುಣಮಟ್ಟದ ಸಿಹಿ ನೀಡುವುದು 5 ಅಂಗಡಿ ಮಾತ್ರ. ಇವು ದಿನಕ್ಕೆ 600ಕೆ.ಜಿ ಮಾರಟ ಮಾಡುತ್ತಿದೆ. ಇಂದು ಕೆ.ಜಿಗೆ 240ರೂ. ಬೆಲೆ ಇದೆ.

        ಪೇಡ ಜೋಡಿ ಚೂಡಾದಂಗ

        ಧಾರವಾಡದ ಪೇಡ ಪ್ರಸಿದ್ದಿ ಪಡೆದಷ್ಟೇ ಇಲ್ಲಿನ ಚೂಡಾ, ಖಾರದಾನಿ, ಮಂಡಕ್ಕಿ ಕೂಡ ಪ್ರಸಿದ್ಧವಾಗಿವೆ. ಪೇಡ ಕೊಂಡುಕೊಳ್ಳುವ ಎಲ್ಲ ಗ್ರಾಹಕರೂ ಅಷ್ಟೇ ಪ್ರಮಾಣದಲ್ಲಿ ಕಾರದಾನಿ ಮತ್ತು ಇತರ ತಿಂಡಿ ತಿನಿಸುಗಳನ್ನು ಕೂಡ ಕೊಳ್ಳುತ್ತಾರೆ. ಹೀಗಾಗಿ ತಿಂಡಿತಿನಿಸುಗಳ ಮಾರಾಟ ಉದ್ಯಮ ಕೂಡ ಜೋರಾಗಿ ಸಾಗಿದೆ. ಆದರೆ ಪೇಡ ಅಗ್ರಸ್ಥಾನದಲ್ಲಿದೆ.

        ಧಾರವಾಡದ ಫೇಡಾದ ರುಚಿನೋಡಿದ ಅಮೆರಿಕಾ ಮೂಲದ ಕಂಪನಿಯೊಂದು ಇಲ್ಲಿನ ಪ್ರಸಿದ್ಧ ಪೇಡ ತಯಾರಿಸುವ ಮನೆತನಗಳನ್ನು ಬಿಜಿನೆಸ್‌ ಪಾರ್ಟ್‌ನರ್‌ ಮಾಡಿಕೊಂಡು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೇಡಾದ ಬ್ರಾಂಡ್‌ನ್ನು ಪ್ರಚುರ ಪಡೆಸಲು ಮುಂದಾಗಿತ್ತು. ಆದರೆ ಈ ಕುಟುಂಬಗಳು ಕೇಳಿದಷ್ಟು ಜಾಗೆಯನ್ನು ಸರ್ಕಾರ ಕೊಡಲು ಆಗಲಿಲ್ಲ. ಹೀಗಾಗಿ ಆ ಯೋಜನೆ ಅಲ್ಲಿಗೆ ನಿಂತು ಹೋಯಿತು.
        ಇನ್ನು ಕೆಲವು ಕುಟುಂಬಗಳಿಗೆ ಈ ಪೇಡ ಮಾರ್ಕೆಟಿಂಗ್‌ಮಯವಾಗುವುದು ಇಷ್ಟವಿಲ್ಲ. ಈಗಿರುವಂತೆ ಧಾರವಾಡದ ಪೇಡ ಕೇವಲ ಸಾಂಸ್ಕೃತಿಕ ಮತ್ತು ಸ್ವಾಧಿಷ್ಟತನದಿಂದ ಇದ್ದರೇ ಚೆನ್ನ. ವಿದೇಶಿ ಬಂಡವಾಳಗಾರರು ಧನ ಪಿಶಾಚಿಗಳು, ಅವರು ಹಣಕ್ಕಾಗಿ ಜನರಿಗೆ ಮೋಸ ಮಾಡುತ್ತಾರೆ. ಹೀಗಾಗಿ ಇದು ಸಿಕ್ಕಾಪಟ್ಟೆ ಪ್ರಚಾರ ಮತ್ತು ದೊಡ್ಡ ಮಾರುಕಟ್ಟೆ ಪ್ರವೇಶಿಸುವುದು ಬೇಡ ಎಂಬುದು ಕೆಲವು ಪೇಡ‚ ಮನೆತನಗಳ ಅನಿಸಿಕೆ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      • Copyright @ 2009 Udayavani.All rights reserved.
      • Designed & Hosted By 4cplus