Udayavani | Jan 22, 2013
ಹೇರ್ ಟ್ರಾನ್ಸ್‌ಪ್ಲಾಂಟೇಷನ್ ಮಾಡುವವನು ಹೇಳಿದ ಸತ್ಯಗಳು
ಕೂದಲಿಗೆ ವಿವಿಧ ಬಣ್ಣಗಳ ಸ್ನಾನ, ಕೂದಲು ಉದ್ದವಾಗಲಿ ಅಂತ ಅದಕ್ಕೊಂದಷ್ಟು ಧ್ಯಾನ, ನಿಮ್ಮ ಕೂದಲಲ್ಲಿ ಹೊಟ್ಟೇ ಅಂತ ಕೇಳುತ್ತಾ ಬರುವ ಜಾಹೀರಾತು ಮಾವ. ಈ ಎಲ್ಲದರ ಮಧ್ಯೆ ಈ ಉದುರುವ ಕೂದಲನ್ನು ಉಳಿಸುವ ಆಮಿಷಗಳು ಜಗತ್ತಿನ ತುಂಬ. ಅದರ ಜ್ವಾಲೆಗೆ ಹೋಗಿ ತಾಗುವ ಸೌಂದರ್ಯದ ಚಿಟ್ಟೆಗಳು ಸುಟ್ಟುಕೊಂಡಿದ್ದೇನು, ಪಡೆದುಕೊಂಡಿದ್ದೇನು?
ಹೇರ್ ಟ್ರಾನ್ಸ್‌ಪ್ಲಾಂಟ್ ಮಾಡುವ ತಜ್ಞನೊಬ್ಬ ಹೇಳಿದ ಸತ್ಯಗಳು ಇಲ್ಲಿವೆ.
-ವಿಶಾಲ್
ನಾನು ಈ ಕೆಲಸಕ್ಕೆ ಮೊತ್ತಮೊದಲು ಸೇರಿಕೊಂಡಾಗ ಹೀಗೆಲ್ಲಾ ಇರಲಿಲ್ಲ. ಕೂದಲು ಮತ್ತೆ ಬರಿಸಿಕೊಳ್ಳುವುದು ಸೇರಿದಂತೆ ಕೂದಲು ಸಂಬಂಧಪಟ್ಟ ಆಪರೇಷನ್‌ಗಳೆಲ್ಲಾ ತುಂಬ ಕಡಿಮೆ, ಇದ್ದರೂ ಅದು ಕೆಲವು ಕ್ಲಿನಿಕ್‌ಗಳಲ್ಲಿ, ಆಸ್ಪತ್ರೆಗಳಲ್ಲಿ ಜಾರಿಯಲ್ಲಿತ್ತು. ಆಗ ಬರುತ್ತಿಧ್ದೋರೆಲ್ಲಾ ಒಂದೋ ಹಾರ್ಮೋನ್ ಸಂಬಂಧಪಟ್ಟ ಟ್ರೀಟ್‌ಮೆಂಟ್ ತೆಗೆದುಕೊಂಡು ಅದರಿಂದ ಕೂದಲುದುರಿ ಗಾಬರಿಯಿಂದ ಓಡೋಡಿ ಬರುತ್ತಿದ್ದರು. ಆಗೆಲ್ಲಾ ಕೂದಲ ಚಿಕಿತ್ಸೆಗೆ ಬರುವುದೆಂದರೆ ಜನ ಏನನ್ನುತ್ತಾರೋ ಅಂತ ಸಂಕೋಚ, ಮಾನ ಮರ್ಯಾದೆ ಎನ್ನುವ ಅಂಜಿಕೆಯ ಕಾಲ. ಸ್ವಲ್ಪ ಜಾಸ್ತಿ ದುಡ್ಡಿದ್ದವರು ಅಮೆರಿಕಾಕ್ಕೋ, ಕೆನಡಾಕ್ಕೋ ಹೋಗುತ್ತಿದ್ದರು.
ಈಗ ಕೂದಲ ಚಿಕಿತ್ಸೆಯಷ್ಟೇ ಅಲ್ಲ, ಕೂದಲಿಗೆ ಬಣ್ಣ ಹಾಕಲು, ನೇರ ಮಾಡಿಕೊಳ್ಳಲು ಬರುವವರೂ ಹೆಚ್ಚು. ಅದೊಂಥರ ಟ್ರೀಟ್‌ಮೆಂಟ್ ಕೊಡಿಸುವ ರೀತಿಯೇ ಆಗಿಬಿಟ್ಟಿದೆ. ವಿಚಿತ್ರ ಎನ್ನುತ್ತೀರೋ ಏನೋ, ಈಗಂತೂ ಹೇರ್ ಟ್ರಾನ್ಸ್‌ಪ್ಲಾಂಟ್ ಅಂತೆಲ್ಲಾ ಕೇಳಿಕೊಂಡು ಬರುವವರ ಸಂಖ್ಯೆ ಹೆಂಗಸರದ್ದೇ. ಅದರಲ್ಲೂ ಸ್ವಲ್ಪ ವಯಸ್ಸಾದವರು. ವಯೋಸಹಜವಾಗಿ ಅವರ ಕೂದಲು ಉದುರೋದಕ್ಕೆ ಪ್ರಾರಂಭವಾಗಿರುತ್ತದೆ. ಆದರೆ ಕೂದಲು ದಪ್ಪವಾಗಿ, ಹುಲುಸಾಗಿ ಬೆಳೆಯಬೇಕು ಅಂತ ಆಸೆ. ಅದಕ್ಕೇನು ಮಾಡ್ತಾರೆ ಅದರೆ, ಲೇಸರ್ ಚಿಕಿತ್ಸೆ ತೆಗೆದುಕೊಳ್ಳುವುದಕ್ಕೆ ಹೋಗುತ್ತಾರೆ. ಅದಕ್ಕೂ ಕೂದಲು ಬರಲಾರದಂಥ ಸ್ಥಿತಿ ಏನಾದರೂ ಇದ್ದರೆ ಶಾಶ್ವತವಾಗಿ ಕೂದಲು ಉಳಿಸಿಕೊಳ್ಳಬಲ್ಲ ಟ್ರೀಟ್‌ಮೆಂಟ್ ಏನಿದೆ ಅಂತ ಹುಡುಕಿಕೊಂಡು ಹೋಗುವುದಕ್ಕೆ ಶುರು ಮಾಡುತ್ತಾರೆ. ಅದಕ್ಕಾಗಿ ಅವರು ಎಷ್ಟು ಹಣವನ್ನೂ ಖರ್ಚು ಮಾಡೋದಕ್ಕೆ ಸಿದ್ಧರಿರುತ್ತಾರೆ.
ಲೇಸರ್ ಥೆರಪಿಗೆ ಒಂದರಿಂದ ಮೂರು ಲಕ್ಷವಾದರೂ ಖರ್ಚಾಗುತ್ತದೆ. ಇರುವ ಕೂದಲನ್ನೇ ಬೆಳೆಸುವುದಕ್ಕೆ ಟ್ರೀಟ್‌ಮೆಂಟ್ ಕೊಡಿಸಲು ಹೋದರೆ ಏನಿಲ್ಲವೆಂದರೂ ಐವತ್ತು ಸಾವಿರ ಖರ್ಚು. ಹೆಣ್ಮಕ್ಕಳಲ್ಲಿ ಇಂಥ ಒಂದು ಸಮಸ್ಯೆ ಎದುರಾಗುವುದಕ್ಕೂ ಗಂಡಸರಲ್ಲಿ ಎದುರಾಗುವುದಕ್ಕೂ ತುಂಬ ವ್ಯತ್ಯಾಸವಿದೆ. ಹೆಣ್ಮಕ್ಕಳಲ್ಲಿ ಈ ಸಮಸ್ಯೆಗಳು ಎದುರಾಗುವುದಕ್ಕೆ ಮುಖ್ಯ ಕಾರಣ, ಹಾರ್ಮೋನು. ಪ್ರಗ್ನೆನ್ಸಿಯಿಂದಾಗಿ ಹಾರ್ಮೋನ್‌ಗಳ ಅಸಮತೋಲನ ದೇಹದಲ್ಲಿ ಆಗಬಹುದು, ಆ ಕಾರಣಕ್ಕೆ ಕೂದಲುದುರುವ ಸಮಸ್ಯೆ ಎದುರಾಗಬಹುದು. ಇನ್ನೂ ಕೆಲವರಲ್ಲಿ ಮುಟ್ಟು ನಿಲ್ಲುವ ಕಾಲದಲ್ಲಿ ಹೀಗೆ ಕೂದಲುದುರುವ ಸಮಸ್ಯೆ ತಲೆದೋರಬಹುದು. ಆದರೆ ಇದೆಲ್ಲಾ ಕಾರಣಗಳು ಗೊತ್ತಿಲ್ಲದೇ ತುಂಬ ಹೆಣ್ಮಕ್ಕಳು ಇಲ್ಲಿಗೆ ಬರುತ್ತಾರೆ, 'ದುಡ್ಡು ಎಷ್ಟಾದರೂ ಖರ್ಚಾಗಲಿ, ಕೂದಲು ಮೊದಲಿನಂತಾಗಬೇಕು' ಅಂತ ಪಟ್ಟು ಹಿಡಿಯುತ್ತಾರೆ.
ಕೂದಲುದುರುವುದಕ್ಕೆ ಅಥವಾ ಕೂದಲಿನ ಶಕ್ತಿ ಬಹಳ ಬೇಗ ನಾಶವಾಗುವುದಕ್ಕೆ ಇನ್ನೂ ಒಂದಿಷ್ಟು ಹೆಣ್ಮಕ್ಕಳದೇ ಆದ ಕಾರಣಗಳಿವೆ. ಅವು ಯಾವುದೆಂದರೆ ತುಂಬ ಕಲರಿಂಗ್ ಮಾಡುವ ಹುಚ್ಚು ಕೆಲವರಲ್ಲಿ ಇರುತ್ತದೆ. ವಯಸ್ಸು ಇರುವಾಗ ಕ್ರೇಜ್‌ಗೆ ಅಂತ, ಸ್ವಲ್ಪ ವಯಸ್ಸಾದಮೇಲೆ ಕೂದಲು ಬೆಳ್ಳಗಾಗುತ್ತಿದೆ ಅಂತ ಕೆಲವರು ಬೇರೆ ಬೇರೆ ಬಣ್ಣಗಳಿಗೆ ತಮ್ಮ ಕೂದಲನ್ನು ಕೊಟ್ಟುಕೊಂಡು ಹಲವು ರಾಸಾಯನಿಕಗಳಿಗೆ ಒಡ್ಡಿಕೊಂಡುಬಿಟ್ಟಿರುತ್ತಾರೆ. ಇದರಿಂದಾಗಿ ಏನಾಗುತ್ತದೆಯೆಂದರೆ ಕೂದಲು ಸತ್ವವನ್ನಷ್ಟೇ ಅಲ್ಲ, ಅದರ ಜೀವವನ್ನೇ ಕಳೆದುಕೊಳ್ಳತೊಡಗುತ್ತದೆ. ಈ ಹಂತದಲ್ಲಿ ಗಾಬರಿಯಿಂದ ಇದ್ದಬದ್ದ ಜಾಹೀರಾತುಗಳನ್ನೆಲ್ಲಾ ಹುಡುಕಿ, ದಾರಿ ತಪ್ಪಿಸುವ ಕೆಲವರ 'ಆಫರ್'ಗಳಿಗೂ ಮರುಳಾಗಿ ಇಂಥ ಕ್ಲಿನಿಕ್‌ಗಳಿಗೆ ಓಡಿ ಬರುತ್ತಾರೆ.
ಡಾಕ್ಟರ್‌ಗಳು ದೇವರು ಅಂತ ಆಗಿಬಿಟ್ಟಿರುತ್ತಾರೆ, ದಕ್ಷಿಣೆ ತೆಗೆದುಕೊಂಡು ತಮ್ಮ ಕೆಲಸ ಮಾಡಿಕೊಡಲೇಬೇಕು ಅನ್ನುವಂತಿರುತ್ತದೆ, ಬರುವವರ ಧೋರಣೆ.
*
ಸಾಮಾನ್ಯವಾಗಿ ಈ ಥರದ ಥೆರಪಿಗಳು ಗಂಡಸರಿಗಿಂತ ಹೆಂಗಸರ ವಿಷಯದಲ್ಲೇ ಹೆಚ್ಚು ಪರಿಣಾಮಕಾರಿ. ಯಾಕೆ ಗೊತ್ತಾ, ಹೆಣ್ಮಕ್ಕಳು ಬಾಲ್ಡ್ ಆಗುವುದನ್ನು ನೀವು ಎಲ್ಲಾದರೂ ಕಂಡಿದ್ದೀರಾ? ಇಲ್ಲ, ಯಾಕೆಂದರೆ ಗಂಡಸರಲ್ಲಿ ನೆತ್ತಿ ಅಥವಾ ಹಣೆಯ ಬಾಗದಿಂದ ಕೂದಲು ಉದುರುವುದಕ್ಕೆ ಪ್ರಾರಂಭವಾಗಿ ನಿಧಾನವಾಗಿ ಉಳಿದೆಲ್ಲಾ ಕಡೆ ಕೂದಲು ಹೋಗತೊಡಗುತ್ತದೆ. ಹೆಣ್ಮಕ್ಕಳಲ್ಲಿ ಹಾಗಲ್ಲ, ಕೂದಲು ವಿರಳವಾಗುತ್ತಾ ಹೋಗುತ್ತದಷ್ಟೇ. ಆಗ ಸಾಮಾನ್ಯವಾಗಿ ಯಾವ ಜಾಗದಲ್ಲಿ ಕೂದಲು ದಟ್ಟವಾಗಿದೆಯೋ, ಅಲ್ಲಿನ ಕೂದಲನ್ನು ತೆಗೆದು ಕೂದಲುದುರುವ ಜಾಗಕ್ಕೆ ಟ್ರಾನ್ಸ್‌ಪ್ಲಾಂಟ್ ಮಾಡಲಾಗುತ್ತದೆ.