Monday, May 20, 2013
Last Updated: 12:49:33 PM IST
  • ನಾನೆಲ್ಲಿರುವೆ:
  • ಮುಖಪುಟ Supplements ಅವಳು
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಸೊಸೆತನ ಎಂಬ ಥ್ಯಾಂಕ್‌ಲೆಸ್‌ ಜಾಬ್‌
    • ಅತ್ತೇ ಮಾವರಿಗಂಜಿ ಸುತ್ತೇಳು ನೆರೆಗಂಜಿ !

      • Udayavani | Jan 22, 2013

        ಅತ್ತೇ ಮಾವರಿಗಂಜಿ ಸುತ್ತೇಳು ನೆರೆಗಂಜಿ !

        1960-70
        ಮೀಸೆ ಹೊತ್ತ ಮಾವ, ತಲೆತಗ್ಗಿಸಿದ ಅತ್ತೆ ಹುಡುಗಿ ನೋಡೋದಕ್ಕೆ ಬರುತ್ತಿದ್ದರು. ಹುಡುಗ ಬಂದರೆ ಬಂದ ಇಲ್ಲದಿದ್ದರೆ ಇಲ್ಲ. ಹುಡುಗಿಗೆ ಅಡುಗೆ ಮಾಡೋಕೆ ಬರುತ್ತಾ? ಮಾತು ಮೃದುವಾಗಿದೆಯಾ? ಜಗಳಗಂಟಿಯಾ? ಸಂಸಾರದಲ್ಲಿ ಹೊಂದಿಕೊಂಡು ಹೋಗ್ತಾಳಾ? ಅವಳು ತುಂಬು ಕುಟುಂಬದ ಜೊತೆ ಇದ್ದು ಅಭ್ಯಾಸ ಇರುವವಳಾ ಎಂಬುದನ್ನೆಲ್ಲ ನೋಡುತ್ತಿದ್ದರು. ಕೊನೆಗೆ ಆಕೆ ಸರ್ವವಿಧದಲ್ಲೂ ತಮ್ಮ ಮನೆಯನ್ನು ನೋಡಿಕೊಂಡು ಹೋಗಲು ಅರ್ಹ ಅನ್ನಿಸಿದ ನಂತರ ಒಪ್ಪಿಗೆ ನೀಡುತ್ತಿದ್ದರು.
        ಕುಟುಂಬಕ್ಕೆ ಅರ್ಹಳಾದ ಸೊಸೆ ಬೇಕಾಗಿತ್ತು. ಅವಳ ಕರ್ತವ್ಯ ಎಂದರೆ ಅತ್ತೆ ಮಾವಂದಿರ ಸೇವೆ, ಅವರ ಆರೈಕೆ, ಪಾಲನೆ, ಅಡುಗೆ, ಮನೆ ಒರೆಸುವುದು, ಪೂಜೆಗೆ ಸಿದ್ಧಪಡಿಸುವುದು, ಮನೆಗೆ ಬಂದು ಹೋಗುವ ಅತಿಥಿಗಳ ಸೇವೆ ಮಾಡುವುದು, ವಿಶೇಷ ದಿನಗಳಲ್ಲಿ ಚೆಂದದ ಸೀರೆ ಉಟ್ಟುಕೊಂಡು ಅಕ್ಕಪಕ್ಕದ ಮನೆಗಳಿಗೆ ಹೋಗಿ ಸಂತೋಷ ನಟಿಸುತ್ತಾ, ಸಂತೃಪ್ತ ಕುಟುಂಬದ ಸಾಧ್ವಿ ಸೊಸೆಯೆಂದು ತೋರಿಸಿಕೊಂಡು, ನಿನ್ನ ಅತ್ತೇಯಂಥ ಅತ್ತೇನ ಪಡೆಯೋಕೆ ಪುಣ್ಯ ಮಾಡಿರಬೇಕು ಅಂತಲೋ ನಿನ್ನಂಥ ಸೊಸೇನ ಪಡೆದ ನಿನ್ನ ಅತ್ತೆ ಮಾವಂದಿರೇ ಧನ್ಯರು ಅಂತಲೋ ಹೇಳಿಸಿಕೊಳ್ಳುವುದು. ಗಂಡ ಅಲ್ಲಿ ಗೌಣ. ಕತ್ತಲಲ್ಲಿ ಮಾತ್ರ ಪ್ರತ್ಯಕ್ಷವಾಗುವ, ಸಂಪಾದಕ! ದುಡಿಯುವವನು. ಹೀಗಾಗಿ ಅವನು ಮನೆಯಲ್ಲೇನೂ ಮಾಡುವಂತಿಲ್ಲ. ಆತ ದಯಪಾಲಿಸಿದ ಮಕ್ಕಳನ್ನು ಬೆಳೆಸಿ, ಅತ್ತೆ ಮಾವಂದಿರನ್ನು ನೋಡಿಕೊಂಡಿದ್ದರೆ ಆಕೆ ಮನೆ ಬೆಳಗಿದ ಸೊಸೆ, ಸಂಸಾರದ ಕಣ್ಣು.

        1971-90
        ಹುಡುಗನೂ ಅವಳನ್ನು ನೋಡಲು ಬರುತ್ತಿದ್ದ. ಅವಳ ಸೌಂದರ್ಯ ಅವನಿಗೆ ಮುಖ್ಯವಾಗುತ್ತಿತ್ತು. ವಿದ್ಯೆ ಮುಖ್ಯವಾಗುತ್ತಿತ್ತು. ಕೆಲಸಕ್ಕೆ ಹೋಗಬಲ್ಲಳೇ ಅಂತ ಕೇಳುತ್ತಿದ್ದ. ಅಡುಗೆ, ಮನೆಕೆಲಸ ಚೆನ್ನಾಗಿ ಮಾಡಬಲ್ಲೆ, ಮಕ್ಕಳನ್ನು ಹೆತ್ತು ಸಾಕಬಲ್ಲೆ ಅನ್ನುವ ಗ್ಯಾರಂಟಿಯ ಜೊತೆಗೇ ಅವಳು ಮತ್ತೂಂದು ವಾರಂಟಿ ಕೊಡಬೇಕಾಗುತ್ತಿತ್ತು. ಅವನು ಕೇಳುತ್ತಿದ್ದ: ನಮ್ಮಪ್ಪ ಅಮ್ಮನನ್ನು ಚೆನ್ನಾಗಿ ನೋಡ್ಕೊàತೀಯಾ? ನನ್ನ ಅಪ್ಪ ಅಮ್ಮನ ಹಾಗೇ ನೋಡ್ಕೊàತೀನಿ ಅಂತ ಅವಳು ಹೇಳಬೇಕಾಗಿತ್ತು.
        ಆಗ ಮದುವೆ ಗೊತ್ತಾಗುತ್ತಿತ್ತು. ಅವಳು ತನ್ನ ಅಪ್ಪ ಅಮ್ಮನನ್ನು ಕಷ್ಟಕ್ಕೆ ತಳ್ಳಿ, ಅವನ ಅಪ್ಪ ಅಮ್ಮನನ್ನು ಸುಖವಾಗಿಡಲು ಹೆಣಗಾಡುಬೇಕಾಗುತ್ತಿತ್ತು.

        1991-2010
        ಈ ಅವಧಿಯಲ್ಲಿ ಬದಲಾವಣೆಗಳಾದವು. ನನ್ನ ಮಗ ಯಾರನ್ನೋ ನೋಡ್ಕೊಂಡಿದ್ದಾನಂತೆ. ಯಾರೋ ಏನೋ, ಒಟ್ಟಿನಲ್ಲಿ ಅವನು ಸಂತೋಷವಾಗಿದ್ರೆ ಸಾಕು ಅಂತ ಹೆತ್ತವರು ನಿಟ್ಟುಸಿರಿಡಲು ಆರಂಭಿಸಿದರು. ಅವನು ಬೆಂಗಳೂರಲ್ಲಿದ್ದಾನೆ ಅಂತಲೋ ಮುಂಬಯಿಯಲ್ಲಿದ್ದಾನೆ ಅಂತಲೋ ಹೇಳಿಕೊಂಡು, ನಮ್ಮನ್ನೇನೂ ಅವಳು ನೋಡ್ಕೊಳ್ಳೋದು ಬೇಕಾಗಿಲ್ಲ. ನಾವು ಅಲ್ಲಿಗೆ ಹೋಗೋದೂ ಇಲ್ಲ. ಅವರಿಬ್ಬರೂ ಸುಖವಾಗಿದ್ರೆ ಸಾಕು. ಆಗಾಗ ಬಂದು ಹೋಗ್ತಿದ್ರೆ ಸಾಕು ಅನ್ನುವ ತೀರ್ಮಾನಕ್ಕೂ ತಲುಪಿದರು. ಅಲ್ಲಿಗೆ ಗಂಡ-ಹೆಂಡತಿ-ಮಗು ಸಂಸಾರ ಹುಟ್ಟಿಕೊಂಡಿತು. ಅತ್ತೆ ಮಾವಂದಿರನ್ನು ಆಕೆ ವರ್ಷಕ್ಕೊಮ್ಮೆ ಕಂಡು ಅವರಿಗೊಂದು ಕಾಣಿಕೆ ಕೊಟ್ಟು ಒಳ್ಳೆಯ ಹುಡುಗಿ ಅನ್ನಿಸಿಕೊಳ್ಳುವುದು ಸುಲಭವಾಗಿಬಿಟ್ಟಿತು. ಅಂತೂ ನನ್ನ ಮಗ ಮಹಾಲಕ್ಷ್ಮಿಯಂಥ ಹುಡುಗೀನೇ ಹುಡುಕ್ಕೊಂಡಿದ್ದಾನೆ ಅಂತ ತಮ್ಮ ಮನೆಗೆ ಬರುವಾಗ ಮಾತ್ರ ಸೀರೆಯುಟ್ಟುಕೊಂಡು ಬೀಗುವ ಸೊಸೆಯನ್ನು ಅವರು ಕೊಂಡಾಡಿದ್ದೂ ಆಯ್ತು.

        ಮಗ ಮಾಡಿದ್ದೇನು?
        ಈ ಮೂರನೇ ಮಾದರಿಯಲ್ಲಿ ಅಂಥ ಸಮಸ್ಯೆಗಳೇನೂ ಇಲ್ಲ. ಮೊದಲನೇ ಮಾದರಿ ಹಳೆಯದಾಗಿದೆ. ಅದೂ ಅದರ ಪಾಡಿಗೇ ನಡಕೊಂಡು ಹೋಗುತ್ತಿತ್ತು. ನಿಜಕ್ಕೂ ತಕರಾರು ಇರುವುದು ಅತ್ತೆ ಮಾವ ಮನೆಯಲ್ಲೇ ಇರುವ, ಕುಟುಂಬಗಳಲ್ಲಿ. ಅಲ್ಲಿ ಗಂಡನಿಗೆ ಕೈ ತುಂಬ ದುಡಿಮೆಯಿದೆ. ಯಾವುದೋ ಜಮೀನು ಮಾರಿದ ದುಡ್ಡು ಅಪ್ಪನ ಕೈಲಿದೆ. ಅತ್ತೆಗೆ ಮಣಗಟ್ಟಲೆ ಬಂಗಾರವಿದೆ. ಶ್ರೀಮಂತ ಕುಟುಂಬ. ಅಂಥ ಕುಟುಂಬಕ್ಕೆ ಅವಳನ್ನು ತಂದುಕೊಂಡಿದ್ದೇವೆ ಅನ್ನುವುದೇ ಅವಳಿಗೆ ತೋರಿದ ಮೊದಲ ಅನುಕಂಪ ಮತ್ತು ಪ್ರೀತಿ.

        ಅವಳು ಎಷ್ಟೇ ಓದಿದ್ದರೂ ಎಷ್ಟೇ ಬುದ್ಧಿವಂತೆ ಆಗಿದ್ದರೂ ಆಕೆಯ ಕರ್ತವ್ಯದಲ್ಲಿ ಅಂಥ ವ್ಯತ್ಯಾಸವೇನೂ ಆಗಿರುವುದಿಲ್ಲ. ನಮಗೆ ದುಡಿಯೋ ಹೆಣ್ಣು ಬೇಡ ಅಂತ ಮೊದಲೇ ಅಂದುಬಿಟ್ಟಿರುತ್ತಾರೆ. ಹೀಗಾಗಿ ಅವಳು ಅದ್ಭುತ ಪ್ರತಿಭಾವಂತೆಯಾದರೂ ಕೆಲಸಕ್ಕೆ ಹೋಗೋ ಹಾಗಿಲ್ಲ. ನಮ್ಮ ಸೊಸೆ ಮನೇ ನೋಡ್ಕಂಡಿದ್ರೆ ಸಾಕು, ಅವಳಿಗೇನು ಕಮ್ಮಿಯಾಗೋಲ್ಲ ಅಂದಿರುತ್ತಾದ್ದರಿಂದ, ಅವಳು ಸಂಗೀತ ವಿದ್ವಾನ್‌ ಆಗಿದ್ದರೂ ನೃತ್ಯ ವಿದುಷಿ ಆಗಿದ್ದರೂ ಸಮಾಜಸೇವಕಿ ಆಗಿದ್ದರೂ ಕವಿಯಾಗಿದ್ದರೂ ಅದನ್ನೆಲ್ಲ ಮಾಡುವಂತಿಲ್ಲ. ಯಾವುದೋ ಸಂಗೀತ ಕಾರ್ಯಕ್ರಮಕ್ಕೆ ಹೋಗಿ ತಡವಾಗಿ ಬಂದರೆ ಅತ್ತೆ ಮಾವ ಬೇಜಾರು ಮಾಡ್ಕೊàತಾರೆ. ಅಲ್ಲಿಗೆ ಅವಳ ಇಡೀ ಜೀವನ ಮತ್ತು ಪ್ರತಿಭೆ ಅತ್ತೆ ಮಾವ ಎಂಬ ವಯೋವೃದ್ಧರಲ್ಲದ ವಯೋವೃದ್ಧರ ಸೇವೆ ಮಾಡುವುದರಲ್ಲಿ ಮುಕ್ತಾಯ ಆಗುತ್ತದೆ.

        ಅದು ಹೆಣ್ಣಿನ ಕರ್ತವ್ಯ ಅಂತ ಪುರುಷರೆಲ್ಲ ಭಾವಿಸಿದಂತಿದೆ. ನಮ್ಮಮ್ಮನನ್ನು ನೋಡಿಕೊಳ್ಳೋದಕ್ಕೆ ಏನು ರೋಗ ನಿಂಗೆ ಅಂತ ಅವನು ಬೈಯುತ್ತಾನೆ. ಮಾತೃದೇವೋ ಭವ ಅನ್ನುತ್ತಾನೆ. ತಾಯಿ ದೇವರು ಅಂತ ಕೊಂಡಾಡುತ್ತಾನೆ. ಆ ದೇವರಿಗೆ ಅವನಾದರೂ ಏನು ಮಾಡುತ್ತಾನೆ? ನೋಡಿಕೊಳ್ಳುವುದಕ್ಕೆ ಹೆಂಡತಿ ಎಂಬ ನರ್ಸನ್ನು ತಂದು ಬಿಟ್ಟಿದ್ದಾನೆ. ಅವನ ದೇವರಿಗೆ ಅವಳು ಪೂಜಾರಿ!
        ಅವನು ಮಾತ್ರ ಬೆಳಗಾಗೆದ್ದು ಊರು ಸುತ್ತಿ, ಗೆಳೆಯರ ಜೊತೆ ಹರಟಿ, ರಾತ್ರಿ ಕ್ಲಬ್ಬಿಗೆ ಹೋಗಿ ಕಂಠ ಪೂರ್ತಿ ಕುಡಿದು, ಸಿಗರೇಟು ಸೇದಿ, ಸಕಲ ಮಜಾಗಳನ್ನೂ ಉಡಾಯಿಸಿ ನಡುರಾತ್ರಿ ಎಷ್ಟೋ ಹೊತ್ತಿಗೆ ಮನೆಗೆ ಬರಬಹುದು. ಮಾತೃದೇವೋ ಭವ. ಅವಳು ಮನೆಯಲ್ಲಿದ್ದು ಅವನ ಅಮ್ಮನಿಗೆ ಹೊತ್ತು ಹೊತ್ತಿಗೆ ಊಟ ಹಾಕಿ, ಅವಳ ಕಾಲೊತ್ತಿ, ತಲೆಬಾಚಿ, ಸ್ನಾನ ಮಾಡಿಸಿ, ಉದ್ದಿನ ವಡೆ ತಿನ್ನೋ ಆಸೆಯಾದಾಗೆಲ್ಲ ವಡೆ ಮಾಡಿಕೊಟ್ಟು, ಆ ಮಹಾತಾಯಿ ಸುಸ್ಥಿತಿಯಲ್ಲಿದ್ದಾಗ ಹೇಗೆ ರುಚಿಯಾಗಿ ಮಾಡುತ್ತಿದ್ದಳು ಅಂತ ಪಾಠ ಹೇಳಿಸಿಕೊಂಡು, ಅವಳ ಮಗಳು ಎಂಥಾ ಜಾಣೆ ಎಂಬುದನ್ನು ದಿನಾ ಕೇಳಿಸಿಕೊಂಡು ಮನೇಲಿರಬೇಕು. ಇಲ್ಲದೇ ಹೋದರೆ ಮಾತೃಪೂಜೆಗೆ ಭಂಗವಾಗುತ್ತದೆಂದು ಅವನಿಗೆ ಸಿಟ್ಟು ಬರುತ್ತದೆ.

        ಸೊಸೆ ನಂಗೆ ಊಟಾನೇ ಹಾಕಲ್ಲ ಅಂತ ದೂರುವ ಮಾವಂದಿರಿದ್ದಾರೆ. ಅದನ್ನು ಕೇಳಿದವರು ಆಕೆ ಉಪವಾಸ ಕೆಡವುತ್ತಾಳೆ ಅಂದುಕೊಂಡಿರುತ್ತಾರೆ. ಅದು ನಿಜಕ್ಕೂ ಹಾಗಲ್ಲ. ತನ್ನ ಜಮೀನು ಮಾರಿ ಕೋಟ್ಯಂತರ ಸಂಪಾದಿಸಿರುವ ಆ ಪುಣ್ಯಾತ್ಮ ಮಾವನಿಗೆ ಅವನದೇ ಮನಸ್ಥಿತಿಯ ಗೆಳೆಯರೂ ಇರುತ್ತಾರೆ. ಅವರೆಲ್ಲ ರಾತ್ರಿ ಯಾವುದೋ ಬಾರಲ್ಲಿ ಸೇರಿ ಕುಡಿಯುತ್ತಾರೆ. ನಂತರ ಊರ ಸುದ್ದಿ, ಮಕ್ಕಳ ಏಳ್ಗೆ, ಕನ್ನಡದ ಗೆಲ್ಗೆಗಳನ್ನೂ ತಮ್ಮ ತಾರುಣ್ಯದ ಸಾಹಸಗಳ ಪುನರಾವಲೋಕವನ್ನೂ ಮುಗಿಸಿಕೊಂಡು, ನಾನು ರಾತ್ರಿ ಊಟ ಏನಿದ್ರೂ ಮನೇಲೇ ಮಾಡೋದು ಅಂತ ತಾತ್ವಿಕತೆಯನ್ನು ಪ್ರದರ್ಶಿಸಿಕೊಂಡು ಹನ್ನೊಂದೂವರೆಗೆ ಮನೆ ಸೇರುತ್ತಾರೆ.
        ಆಗ, ಆ ಮೂರು ಮಕ್ಕಳ ತಾಯಿಯಾದ, ಬೆಳಗ್ಗೆ ಆರು ಗಂಟೆಗೇ ಎದ್ದು ದೈನಿಕ ಕರ್ಮಗಳಲ್ಲಿ ನಿರತಳಾಗಬೇಕಾದ ಸೊಸೆಯು, ನಿದ್ದೆಗಣ್ಣಲ್ಲಿ ಎದ್ದು ಮುದ್ದೆ ಮಾಡಿಕೊಟ್ಟು ಸಾರು ಬಿಸಿ ಮಾಡಿ ಮಾವನಿಗೆ ಬಡಿಸಬೇಕು. ಊಟ ಹಾಕುವುದು ಅಂದರೆ ಅದು. ಅವಳೊಂದು ವೇಳೆ ಸುಸ್ತಾಗಿ ಮಲಗಿದ್ದರೆ, ಆರೋಗ್ಯ ಕೆಟ್ಟಿದ್ದರೆ, ಮಕ್ಕಳು ಗಲಾಟೆ ಮಾಡಿದ್ದರಿಂದ ಮನಸ್ಸು ನೋಯಿಸಿಕೊಂಡಿದ್ದರೆ ...
        ಅದೆಲ್ಲ ಮುಖ್ಯ ಅಲ್ಲವೇ ಅಲ್ಲ. ಸೊಸೆ ಊಟ ಹಾಕಬೇಕು!

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      picಕಿರುತೆರೆ ಮತ್ತು ಸಿನಿಮಾದಲ್ಲಿ ಬಾಲನಟಿಯಾಗಿ ಮಿಂಚಿದವರು ಸುಶ್ಮಿತಾ. ''ಕವಲುದಾರಿ' ಧಾರಾವಾಹಿಯಲ್ಲಿ ಅಭಿನಯಿಸುವ ಮೂಲಕ ಕಿರುತರೆಗೂ, ''ಎಕ್ಸ್‌ಕ್ಯೂಸ್‌ ಮಿ' ಮೂಲಕ ಹಿರಿತ
      • ಈ ವಿಭಾಗದಲ್ಲಿಯೂ ಇದೆ
      • picವಸಂತ ಬರೆದನು ಒಲವಿನ ಓಲೆ...
        ಹೇಳಿ ಕೇಳಿ ಇದು ಮೇ ತಿಂಗಳು. ಇಂಗ್ಲೆಂಡ್‌ನ‌ಂಥ ದೇಶಕ್ಕೆ ಲವಲವಿಕೆಯ ಕಾಲವಿದು. ಅಂತೂ ಎಲ್ಲರೂ ಕಾಯುತ್ತಿರುವ ಸ್ಪ್ರಿಂಗ್‌ ಕಾಲ ಬಂದುಬಿಟ್ಟಿತು ಎಂಬುದು ಸಂತಸದ ವಿಷಯ.
      image
      • Copyright @ 2009 Udayavani.All rights reserved.
      • Designed & Hosted By 4cplus