Udayavani | Jan 23, 2013
ಮತ್ತೆ ಮುಖ್ಯವಾಹಿನಿಗೆ ಮರಳುವ ಲ್ಯಾನ್ಸ್ ಆರ್ಮ್ಸ್ಟ್ರಾಂಗ್ ಜೀವನೋತ್ಸಾಹ
ಒಂದು ಪುಸ್ತಕವಿದೆ...ಇಟ್ ಈಸ್ ನಾಟ್ ಎಬೌಟ್ ದಿ ಬೈಕ್: ಮೈ ಜರ್ನಿ ಬ್ಯಾಕ್ ಟು ಲೈಫ್....ಅದೊಂದು ಜೀವ ಕಥಾನಕ (ಸಾಮಾನ್ಯವಾಗಿ ಆತ್ಮಕಥಾನಕ ಅನ್ನುತ್ತಾರೆ). ಬರೆದಿದ್ದು ಲ್ಯಾನ್ಸ್ ಆರ್ಮ್ಸ್ಟ್ರಾಂಗ್ ಎನ್ನುವ, ಸದ್ಯಕ್ಕೆ ವ್ಯಕ್ತಿ ಎಂದು ಮಾತ್ರ ಕರೆಯಬಹುದಾದ ಮಾಜಿ ದಂತಕಥೆ! ಅದರ ಸಾಲುಗಳನ್ನು, ಸಾರವನ್ನು ಮೊದಲು ಓದಿ...
'ನಾನು ಸೈಕಲ್ ತುಳಿಯುತ್ತಿದ್ದೆ, ವಿಪರೀತ ತುಳಿಯುತ್ತಿದ್ದೆ, ನಿರಂತರವಾಗಿ ತುಳಿಯುತ್ತಲೇ ಇರುವ ಅದಮ್ಯ ಉತ್ಸಾಹವಿತ್ತು. ಸೈಕ್ಲಿಂಗಿನ ಕಷ್ಟವನ್ನು ಅನುಭವಿಸಿಯೇ ವಿವರಿಸಬೇಕು. ಆ ಬೆಟ್ಟಗುಡ್ಡಗಳ ರಸ್ತೆ, ಥಂಡಿ ಗಾಳಿ, ಮಳೆ, ಪ್ರತಿಸ್ಪರ್ಧಿಗಳ ತೀವ್ರ ಸ್ಪರ್ಧೆ, ವಾರಗಟ್ಟಲೆ ಸಾಗುವ ಹೋರಾಟ...
ಆರಂಭದಲ್ಲಿ ನನ್ನಲ್ಲಿ ಕೌಶಲ್ಯವಿರಲಿಲ್ಲ, ವಾತಾವರಣವನ್ನು ಅಳೆದು ಅದಕ್ಕೆ ತಕ್ಕ ತಂತ್ರ ರೂಪಿಸುವ ಚಾಕಚಕ್ಯತೆ ಇರಲಿಲ್ಲ, ಗಾಳಿಯ ಓಘವನ್ನು ಅರ್ಥಮಾಡಿಕೊಳ್ಳಲಿಕ್ಕೇ ಹೋಗುತ್ತಿರಲಿಲ್ಲ. ವೇಗವಾಗಿ ಸೈಕಲ್ ತುಳಿಯುವುದೊಂದೇ ನನಗೇ ಗೊತ್ತಿದ್ದದ್ದು. ಆ ದಿನ ಸಂಜೆ ನನ್ನ ಕೋಚ್ ಮುಂದೊಂದು ದಿನ ನೀನು ಶ್ರೇಷ್ಠ ಸೈಕ್ಲಿಸ್ಟ್ ಆಗುವ ಅವಕಾಶವಿದೆ. ನಿನ್ನ ಸೈಕಲ್ ತುಳಿಯುವ ರೀತಿಯಲ್ಲಿ ಬದಲಾವಣೆ ಮಾಡಿಕೊ ಎಂದರು. ನಾನು ಬದಲಾದೆ'
ಮುಂದಿನ ದಿನಗಳಲ್ಲಿ ಲ್ಯಾನ್ಸ್‌ರದ್ದು ಯಶಸ್ಸಿನ ಕಥೆ. ಹೋದಲ್ಲೆಲ್ಲ ಗೆಲ್ಲುತ್ತಲೇ ಸಾಗಿದರು. ದಂತಕಥೆಗಳನ್ನು ಅಚ್ಚರಿಗೊಳಪಡಿಸಿದರು. ಆ ಸಂದರ್ಭದಲ್ಲಿ ಅಮೆರಿಕದ ಸೈಕ್ಲಿಸ್ಟ್‌ಗಳು ಭಾರೀ ಯಶಸ್ಸನ್ನು ಗಳಿಸುತ್ತಿರಲಿಲ್ಲ. ಆಗ ಯಶಸ್ಸು ಸಾಧಿಸುವ ಭರವಸೆ ಹುಟ್ಟಿಸಿದ್ದು ಲ್ಯಾನ್ಸ್ ಆರ್ಮ್ಸ್ಟ್ರಾಂಗ್.
ಲ್ಯಾನ್ಸ್ ಆರಂಭದಲ್ಲಿ ಗಳಿಸಿದ ಅಂತಾರಾಷ್ಟ್ರೀಯ ಯಶಸ್ಸುಗಳ ಕುರಿತು ಹೇಳಿಕೊಂಡಿದ್ದಾರೆ. ಅದರಲ್ಲಿ ಪ್ರಮುಖವಾದದ್ದು ಇಟಲಿಯ ಸ್ಪರ್ಧಿ ವಿರುದ್ಧ ಇಟಲಿಯಲ್ಲೇ ಗೆದ್ದದ್ದು. ಇಟಲಿಯ ಸ್ಪರ್ಧಿ ಯೂರೋಪ್‌ನಾದ್ಯಂತ ಅಜೇಯ ಎಂಬ ಹೆಸರುಗಳಿಸಿದ್ದ. ಸೈಕಲ್ ಮೇಲೆ ಕುಳಿತಿದ್ದಾಗ ಪಕ್ಕದ ಸ್ಪರ್ಧಿಗಳನ್ನು ಮಾತನಾಡಿಸುವುದು ವಾಡಿಕೆ. ಇಟಲಿ ಸ್ಪರ್ಧಿ ಲ್ಯಾನ್ಸ್‌ರತ್ತ ತಿರುಗಿ, ನೀನು ಅವನಾ? ಎಂದು ತಪ್ಪಾಗಿ ಕೇಳಿದ. ತನ್ನ ಅಣಕ ಮಾಡುತ್ತಿರಬೇಕೆಂದು ಲ್ಯಾನ್ಸ್‌ಗನಿಸಿತು. ಅದಕ್ಕೆ ಪ್ರತಿಯಾಗಿ ಲ್ಯಾನ್ಸ್, ನೀನು ಅವನಾ? ಎಂದು ಇಟಲಿ ಸ್ಪರ್ಧಿಗೆ ಕೇಳಿದರು. ಅಲ್ಲಿಗೂ ನಿಲ್ಲದೇ ನಾನ್ಯಾರೆಂದು ನಿಂಗೆ ಸೈಕ್ಲಿಂಗ್ ಮುಗಿದ ಮೇಲೆ ಗೊತ್ತಾಗುತ್ತೆ ಎಂದು ಲ್ಯಾನ್ಸ್ ಹೇಳಿದರು. ಇದು ಪರಸ್ಪರ ತಪ್ಪು ತಿಳಿವಳಿಕೆಯಷ್ಟೇ. ಆದರೆ ಲ್ಯಾನ್ಸ್‌ರಲ್ಲಿ ಅದಕ್ಕೂ ಮೀರಿದ ಆತ್ಮಾಭಿಮಾನವಿತ್ತು. ಈ ಅತಿ ಅಭಿಮಾನವೇ ಅವರಲ್ಲಿ ದುರಹಂಕಾರ ಮಟ್ಟದ ಆತ್ಮಾಭಿಮಾನಕ್ಕೆ ಕಾರಣವಾಗಿತ್ತು. ಅಂದಿನ ಓಟದಲ್ಲಿ ಲ್ಯಾನ್ಸ್‌ರದ್ದೇ ಮೊದಲ ಸ್ಥಾನ. ಇಟಲಿ ಸ್ಪರ್ಧಿ 2ನೇ ಸ್ಥಾನದಲ್ಲಿದ್ದರು. ಗುರಿ ಮುಟ್ಟುವ ಮುನ್ನ ನಡೆದದ್ದೇ ಬೇರೆ. ಇನ್ನೇನು ಕೊನೆ ಗೆರೆ ಬರಬೇಕು...ಇಟಲಿ ಸ್ಪರ್ಧಿ ಸೈಕಲ್ ಗಕ್ಕನೆ ನಿಲ್ಲಿಸಿದರು. ಬೇರಿಬ್ಬರು 2, 3ನೇ ಸ್ಥಾನ ಪಡೆದರು. ಲ್ಯಾನ್ಸ್‌ರಿಗೆ ಇದರರ್ಥ ಗೊತ್ತಾಯಿತು. ನಿನ್ನಂತಾ ದುರಹಂಕಾರಿಯೊಂದಿಗೆ ವೇದಿಕೆ ಹಂಚಿಕೊಳ್ಳುವುದಿಲ್ಲ ಎನ್ನುವುದು ಇಟಲಿ ಸ್ಪರ್ಧಿಯ ಸಂದೇಶ. ಈ ಘಟನೆ ನಂತರ ಇಬ್ಬರೂ ಸ್ನೇಹಿತರಾದರು!
ಇಂತಹ ಲ್ಯಾನ್ಸ್ ಅಮೆರಿಕದ ಭವಿಷ್ಯದ ಆಶಾಕಿರಣವಿರಬಹುದೇನೋ ಎಂಬ ಅನುಮಾನ ಮೂಡಿರುವಾಗಲೇ ಅವರ ಮುಂದೆ ಮಾರಣಾಂತಿಕ ಆಘಾತ ನಿಂತುಕೊಂಡು ಇದನ್ನು ಸೈಕ್ಲಿಂಗ್‌ನಂತೆ ಗೆದ್ದುಬಿಡುತ್ತೀಯಾ ಎಂದು ಪ್ರಶ್ನಿಸಿತು. ಅದೊಂದು ದಿನ ರಕ್ತಕಾರಿಕೊಂಡರು. ಅದನ್ನು ಲ್ಯಾನ್ಸ್ ಹೀಗೆ ಬರೆದುಕೊಳ್ಳುತ್ತಾರೆ....
'ನನ್ನ ವೃಷಣ ವಿಪರೀತ ಊದಿಕೊಂಡಿತ್ತು. ಆದರೆ ಗಂಟೆಗಟ್ಟಲೆ ಸೀಟಿನ ಮೇಲೆ ಕೂತಿದ್ದರಿಂದಾದ ಊತ ಎಂದು ಸುಮ್ಮನಾದೆ. ಒಂದು ದಿನ ಹೊಟ್ಟೆಯೊಳಗಿಂದ ಏನೋ ಒತ್ತಿಕೊಂಡು ಬಂತು. ಕಕ್ಕಿಕೊಂಡೆ, ಮುದ್ದೆ, ಮುದ್ದೆ ರಕ್ತವಾಂತಿಯಾಯಿತು. ಆತಂಕದಿಂದ ಡಾಕ್ಟರ್ ಬಳಿ ಹೋದೆ. ಅದು ಕ್ಯಾನ್ಸರ್ ಎಂದು ಡಾಕ್ಟರ್ ಹೇಳಿದರು'
ಮುಂದಿನ ಹೋರಾಟದಲ್ಲಿ ಲ್ಯಾನ್ಸ್ ಗೆದ್ದುಬಂದರು. 4ನೇ ಹಂತಕ್ಕೆ ತಲುಪಿ ಸಾಯುವುದೊಂದೇ ಬಾಕಿಯಾಗಿದ್ದ ಕ್ಯಾನ್ಸರ್ ವಿರುದ್ಧ ನಿರ್ಣಾಯಕ ಗೆಲುವು ಸಾಧಿಸಿದರು. ಆ ಗೆಲುವು ಬದುಕಿನಲ್ಲಿ ಹೋರಾಟ ಮಾಡುವ ಎಲ್ಲರಿಗೂ ನಿರಂತರ ಸ್ಫೂರ್ತಿ. ಸೈಕ್ಲಿಂಗ್ ಬಿಟ್ಟು ತನ್ನ ಬದುಕನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲದಷ್ಟು ಮುಳುಗಿದ್ದ ಲ್ಯಾನ್ಸ್ ಒಂದೇ ವರ್ಷದಲ್ಲಿ ಸೈಕಲ್ ಹತ್ತಿದರು. ಅಲ್ಲಿಂದಲೇ ಶುರುವಾಗಿದ್ದು ಅವರ ವಿಜಯಯಾತ್ರೆ ಮತ್ತು ಉದ್ದೀಪನ ಯಾತ್ರೆ!
ಗೆಲ್ಲಲಾಗದ ಸಿಟ್ಟೇ ಇದಕ್ಕೆಲ್ಲ ಕಾರಣ
ಆ ಉದ್ದೀಪನ ಸೇವಿಸುವ ಹೋರಾಟದಲ್ಲೂ ಅವರನ್ನು ಯಾರಿಗೂ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಅಂತಹ ನಿಪುಣತೆ ಅವರದ್ದು. ಕೇವಲ ಲ್ಯಾನ್ಸ್ ಹೀಗೆ ಬೆತ್ತಲಾಗಿದ್ದಕ್ಕೆ ಕಾರಣ ಅವರ ಅಹಂಕಾರ, ತೀವ್ರ ಆತ್ಮಾಭಿಮಾನ. ಎಲ್ಲರನ್ನೂ ಎದುರು ಹಾಕಿಕೊಳ್ಳುವ ಸ್ಪರ್ಧಾತ್ಮಕ ಮನೋಭಾವ, ಯಾರಿಗೂ ಹೆದರದ, ತಲೆಬಾಗದ ಜನ್ಮಸಹಜ ಸ್ವಭಾವ. ಇವೇ ಅವರನ್ನು ಗೆಲ್ಲಲಾಗದ ಎದುರಾಳಿಗಳನ್ನು ಶತ್ರುಗಳನ್ನಾಗಿ ಮಾಡಿತು. ಆ ಶತ್ರುತ್ವವೇ ಅಮೆರಿಕ ಉದ್ದೀಪನ ದ್ರವ್ಯ ನಿಷೇಧ ಸಂಸ್ಥೆಯ ಅಧ್ಯಕ್ಷ ಟ್ರಾವಿಸ್ ಟಿಗಾರ್ಟ್‌ರ ರೂಪದಲ್ಲಿ ಲ್ಯಾನ್ಸ್‌ರಿಗೆ ಶತ್ರುವೊಬ್ಬರನ್ನು ಸೃಷ್ಟಿಸಿತು. ವರ್ಷಗಟ್ಟಲೆ ಹೋರಾಡಿ ಟ್ರಾವಿಸ್ ಟಿಗಾರ್ಟ್ ಗೆದ್ದರು. ಒಂದು ವೇಳೆ ಲ್ಯಾನ್ಸ್‌ರಲ್ಲಿ ರಾಜೀಯಾಗುವ, ಎದುರು ಹಾಕಿಕೊಳ್ಳದ, ಸ್ವಲ್ಪವಷ್ಟೇ ತಗ್ಗುವ ಸ್ವಭಾವವಿದ್ದರೆ ಬಹುಶಃ ಇಂತಹ ಕಗ್ಗಂಟೇ ಇರುತ್ತಿರಲಿಲ್ಲ! ಆದರೆ ಟಿಗಾರ್ಟ್ ವಿರುದ್ಧ ಮೊದಲ ಬಾರಿಗೆ ಲ್ಯಾನ್ಸ್ ಸ್ಪರ್ಧೆಯಿಂದ ಹಿಂದೆ ಸರಿದರು. ಮುಂದಿನ ಹೋರಾಟ ಕೈಬಿಟ್ಟು ನನ್ನ ಲೈವ್‌ಸ್ಟ್ರಾಂಗ್ ಕ್ಯಾನ್ಸರ್ ಸಂಸ್ಥೆಗಾಗಿ ದುಡಿಯುತ್ತೇನೆ ಎಂದರು. ಇದೀಗ ಓಪ್ರಾ ವಿನ್‌ಫ್ರೆà ಎದುರು ಲ್ಯಾನ್ಸ್ ಮತ್ತೂಮ್ಮೆ ಎಲ್ಲವನ್ನೂ ಒಪ್ಪಿಕೊಂಡಿದ್ದಾರೆ. ನಾನು ತಪ್ಪು ಮಾಡಿದ್ದು ಹೌದು. ಆದರೆ ಅಂದು ಉದ್ದೀಪನ ಅನ್ನುವುದು ಸಾಮಾನ್ಯವಾಗಿತ್ತು ಎಂದರು!
13 ವರ್ಷದ ಮಗ ಲೂಕ್, ಅಪ್ಪ ತಪ್ಪು ಮಾಡಿಲ್ಲ ಎಂದು ಹೇಳಿದ್ದನ್ನು ನೆನಪಿಸಿಕೊಂಡ ಲ್ಯಾನ್ಸ್ ಗದ್ಗದಿತರಾದರು. ಮುಂದೆ ಹೀಗನ್ನಬೇಡ ಎಂದು ಮಗನಿಗೆ ಹೇಳಿದೆ, ಆದರೆ ಮಗ ಈಗ್ಲೂ ನಿನ್ನ ಪ್ರೀತಿಸ್ತೀನಿ ಎಂದ ಎಂದು ಲ್ಯಾನ್ಸ್ ಹೇಳುತ್ತಾರೆ. ಇಷ್ಟೆಲ್ಲ ಒಪ್ಪಿಕೊಂಡ ಲ್ಯಾನ್ಸ್ ಮತ್ತೆ ಹೇಳುತ್ತಿರುವುದು ನನಗೆ ಸೈಕ್ಲಿಂಗ್ ಬೇಕು. ಮತ್ತೆ ನಾನು ಪರಿಶುದ್ಧನಾಗಿ ಗೆಲ್ಲಬೇಕು!
ಎಂದಿಗೂ ನಿಲ್ಲದ ಹೋರಾಟಗಾರ
ಲ್ಯಾನ್ಸ್‌ಗೀಗ 41 ವರ್ಷ. ವೃತ್ತಿಪರ ಆಟಗಾರರು ನಿವೃತ್ತಿಯಾಗುವ ವಯಸ್ಸು. ಆದರೆ ಈಗ ಮತ್ತೆ ನಂಗೆ ಸೈಕ್ಲಿಂಗ್ ಬೇಕು, ತಪ್ಪು ಮಾಡಿಬಿಟೆ.r ಅಂದಿನ ನನ್ನ ಹೋರಾಟದಲ್ಲಿ ಗೆಲ್ಲುವುದೊಂದೇ ಮುಖ್ಯವಾಗಿತ್ತು. ಉದ್ದೀಪನ ಸೇವನೆ ಅನ್ನವುದು ಮೋಸ ಅನ್ನಿಸುತ್ತಲೇ ಇರಲಿಲ್ಲ. ಮೋಸ ಮಾಡುವುದರಲ್ಲೇ ಒಂದು ಖುಷಿಯಿತ್ತು ಎಂದು ಲ್ಯಾನ್ಸ್ ಹೇಳುತ್ತಾರೆ.
ಈಗ ನಮಗೆ ಲ್ಯಾನ್ಸ್ ತಪ್ಪು ಮಾಡಿದ್ದಾರೆ ಎಂದು ಅನಿಸಿದೆ. ಬೇಕಾದಂಗೆ ಬೈಯುವ ಸ್ವಾತಂತ್ರ್ಯವೂ ಇದೆ. ಭಾರತೀಯ ಮಾಧ್ಯಮವೊಂದರಲ್ಲಿ ಬರೆದರೆ ಲ್ಯಾನ್ಸ್ ಮಾನನಷ್ಟ ಹೂಡುವ ಹೆದರಿಕೆಯೂ ನಮಗಿಲ್ಲ. ಆದರೆ ನಾವು ಮತ್ತೂಂದು ದಿಕ್ಕಿನಿಂದ ಒಮ್ಮೆ ಯೋಚಿಸೋಣ. ಎಷ್ಟು ಜನ ಇದ್ದಾರೆ ಇಂತಹ ಹೋರಾಟಗಾರರು? ಬದುಕಿನ ಪ್ರತಿ ಹಂತದಲ್ಲೂ ಹೋರಾಟವನ್ನೇ ಕಾಯಕವಾಗಿಸಿಕೊಂಡವರು ಎಷ್ಟು ಮಂದಿ? ಸತ್ಯವನ್ನು ಒಪ್ಪಿಕೊಳ್ಳುವ ಧೈರ್ಯ ಎಷ್ಟು ಮಂದಿಗಿದೆ? ಮತ್ತೆ ಪರಿಶುದ್ಧನಾಗಬೇಕು ಎಂಬ ತುಡಿತ ಎಷ್ಟು ಮಂದಿಗಿದೆ? ಆತನ ಬದುಕಬೇಕು ಎಂಬ ಉತ್ಸಾಹ ಎಷ್ಟು ಮಂದಿಗಿದೆ? ಯಾವುದೋ ಹಂತದಲ್ಲಿ ಹೋರಾಟ ಕೈಬಿಡುವವರೇ ಜಾಸ್ತಿಯಿರುವಾಗ ಲ್ಯಾನ್ಸ್ ಬದುಕನ್ನು ಪಕ್ಕದಲ್ಲಿಟ್ಟುಕೊಂಡು ನೋಡಿ.
ಕಾರ್‌ರೇಸರ್ ಮೈಕೇಲ್ ಶುಮ್ಯಾಕರ್ ಹೋರಾಟ ಕೈಬಿಟ್ಟಿದ್ದಾರೆ, ಡೈವೋರ್ಸ್‌ಗೆ ಸಿಲುಕಿ ಅರ್ಧ ಆಸ್ತಿಯನ್ನೇ ಕಳೆದುಕೊಂಡ ಟಾಡ್ ವುಡ್‌ಬ್ರಿಜ್ ಈಗ ಗೆಲ್ಲುವುದನ್ನೇ ನಿಲ್ಲಿಸಿದ್ದಾರೆ. ಅಂದು ಅವರು ಕ್ರೀಡಾ ಜಗತ್ತಿನ ಪರಮಶ್ರೀಮಂತ. ಸೋಲೆನ್ನುವುದೇ ಇರಲಿಲ್ಲ. ಒಮ್ಮೆ ವಿಚ್ಛೇದನವಾಯಿತು ನೋಡಿ. ಸಿಕ್ಕಸಿಕ್ಕಿದ ಹುಡುಗಿಯರೆಲ್ಲ ನಾನೂ ವುಡ್‌ಬ್ರಿಜ್ ಜೊತೆ ಮಲಗಿದ್ದೆ ಎಂದರು! ಆತನ ಬದುಕೆನ್ನುವುದನ್ನು ಯಾವುದಕ್ಕೆ ಹೋಲಿಸಿದರೂ ಅರ್ಥಮಾಡಿಕೊಳ್ಳಲಿಕ್ಕಾಗದ ವ್ಯಥೆಯಾಯಿತು. ಕ್ರಿಕೆಟ್ ಆಳಿದ ಅಂದಿನ ದಕ್ಷಿಣ ಕಪ್ತಾನ ಹ್ಯಾನ್ಸಿ ಕ್ರೋನಿಯೇ ಒಂದು ಮ್ಯಾಚ್‌ಫಿಕ್ಸಿಂಗ್ ಹೋರಾಟದಲ್ಲಿ ಕಳೆದುಹೋದರು. ಆಸ್ಟ್ರೇಲಿಯಾ 2 ವಿಶ್ವಕಪ್ ಗೆದ್ದ ತಂಡಕ್ಕೆ ನಾಯಕನಾಗಿದ್ದ ರಿಕಿಪಾಂಟಿಂಗ್ ಕ್ರಿಕೆಟ್‌ನ ಕೊನೆ ದಿನಗಳಲ್ಲಿ ತಂಡದಿಂದ ತೆಗೆದುಹಾಕಲ್ಪಡುವ ಮಟ್ಟದಲ್ಲಿದ್ದರು. ಅರ್ಜೆಂಟೀನಾದ ಫುಟ್‌ಬಾಲ್ ದಂತಕಥೆ ಡಿಯಾಗೋ ಮರಡೋನಾ ಸತ್ವವನ್ನೇ ಕಳೆದುಕೊಂಡರು. ಆದರೆ ಲ್ಯಾನ್ಸ್ ಸತ್ಯ ಒಪ್ಪಿಕೊಂಡು ತಮ್ಮನ್ನು ತಾವೇ ನಗ್ನಗೊಳಿಸಿಕೊಂಡು ತೊಡೆತಟ್ಟಿದ್ದಾರೆ. ಮುಂದೆ ಅವರು ಆಡುತ್ತಾರೋ, ಗೆಲ್ಲುತ್ತಾರೋ, ಸೋಲುತ್ತಾರೋ ಬಿಟಿºಡಿ. ಅಂತಹ ಹೋರಾಟಗಾರ ಮಾತ್ರ ಸಿಗಲಿಕ್ಕಿಲ್ಲ. ಸೋತು ಗೆಲ್ಲುವ ಲ್ಯಾನ್ಸ್ ಸಿಗಲಿಕ್ಕಿಲ್ಲ. ಇಟ್ ಈಸ್ ನಾಟ್ ಎಬೌಟ್ ದಿ ಬೈಕ್: ಮೈ ಜರ್ನಿ ಬ್ಯಾಕ್ ಟು ಲೈಫ್ ಎಂದು ಲ್ಯಾನ್ಸ್ ಬರೆದ ಜೀವ ಕಥಾನಕದ ಮುಂದಿನ ಪುಸ್ತಕವೆಲ್ಲಾದರೂ ಬಿಡುಗಡೆಯಾದರೆ ಅದರ ಹೆಸರು-ಇಟ್ ಈಸ್ ನಾಟ್ ಎಬೌಟ್ ದಿ ಡೋಪ್: ಮೈ ಜರ್ನಿ ಬ್ಯಾಕ್ ಟು ಲೈಫ್ ಎಂದು ಕರೆದುಬಿಡಬಹುದು. ಮೈ ಜರ್ನಿ ಬ್ಯಾಕ್ ಟು ಲೈಫ್...
ನೆಪೋಲಿಯನ್ ಕೂಡಾ ಹೀಗೆ
ಅಸಾಧ್ಯ ಎನ್ನುವ ಪದವೇ ತನ್ನ ಶಬ್ದಕೋಶದಲ್ಲಿಲ್ಲ ಎಂದಿದ್ದ ಫ್ರಾನ್ಸ್‌ನ ಸೇನಾಪತಿ ನೆಪೋಲಿಯನ್ ಕೂಡಾ ಎಂತಹ ಹೋರಾಟಗಾರನೆಂದರೆ ತನ್ನ ಕಡೆಯ ದಿನಗಳಲ್ಲೂ ಜಗತ್ತನ್ನು ಗೆಲ್ಲುವ ಬಗ್ಗೆಯೇ ಯೋಚಿಸುತ್ತಿದ್ದ. ಇಂಗ್ಲೆಂಡ್‌ಗೆ ಸೋಲಿನ ಭೀತಿ ತೋರಿಸಿ, ಆ ರಾಷ್ಟ್ರವನ್ನೇ ತನ್ನ ರಾಷ್ಟ್ರೀಯರ ಒಗ್ಗಟ್ಟಿಗಾಗಿ ಬಳಸಿಕೊಂಡಿದ್ದ. ಅಂತಹ ನೆಪೋಲಿಯನ್ ಬಗ್ಗೆ ಕೂಡಾ ಹತ್ತಾರು ಅನುಮಾನಗಳಿವೆ. ಕವಿ ಕುವೆಂಪು ತಮ್ಮ ಕವಿತೆಯೊಂದರಲ್ಲಿ ಕ್ರೂರಿ ನೆಪೋಲಿಯನ್ ಎನ್ನುವ ರೀತಿಯಲ್ಲಿ ಕವನವನ್ನೂ ಬರೆದಿದ್ದಾರೆ! ಆದರೆ ಲ್ಯಾನ್ಸ್ ಸತ್ಯವನ್ನು ಒಪ್ಪಿಕೊಂಡಿದ್ದಾರೆ. ಒಪ್ಪಿಕೊಳ್ಳುವುದಕ್ಕೆ ನೆಪೋಲಿಯನ್ ಬದುಕಿಲ್ಲ ಎನ್ನುವುದಷ್ಟೇ ಸತ್ಯ...
ಮಾತೃಪ್ರೇಮಿ ಲ್ಯಾನ್ಸ್‌ಗೆ ತಂದೆ ಯಾರು?
ಬದುಕಿನಲ್ಲಿ ಇಷ್ಟೆಲ್ಲ ಹೋರಾಟ ಮಾಡಿದ ಲ್ಯಾನ್ಸ್ ತಂದೆ ಯಾರು ಎನ್ನುವುದು ಇವತ್ತಿಗೂ ನಿಗೂಢ. ಅವರ ತಾಯಿ ಬಿಟ್ಟು ಚಿಕ್ಕ ವಯಸ್ಸಿನಲ್ಲಿ ಅಪ್ಪ ಹೊರಟುಹೋದ. ಅವರ ಹೆಸರಿನ ಮುಂದೆ ಅಂಟಿಕೊಂಡ ಆರ್ಮ್ಸ್ಟ್ರಾಂಗ್ ಎಂಬ ಹೆಸರು ಕೂಡಾ ಅವರ ತಾಯಿ ಮದುವೆಯಾದ ಮತ್ತೂಬ್ಬನದ್ದು. ಕಾಲಕ್ರಮೇಣ ಆತನೂ ಬಿಟ್ಟು ಹೋದ. ಲ್ಯಾನ್ಸ್ ಗೆಲ್ಲಲು ಆರಂಭಿಸಿದ ನಂತರ, ಅಮೆರಿಕದ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳತೊಡಗಿದ ನಂತರ ನಾನೇ ಅಪ್ಪ ಎಂದೊಬ್ಬ ಪತ್ರ ಬರೆದಿದ್ದ. ಆದರೆ ತಾಯಿಯನ್ನು ಅತಿಯಾಗಿ ಪ್ರೀತಿಸುವ ಲ್ಯಾನ್ಸ್, ನಿನ್ನಂಥ ಅಪ್ಪ ಬೇಕಿಲ್ಲ ಎಂದು ಸಾರಾಸಗಟು ತಿರಸ್ಕರಿಸಿದ! ಇದನ್ನೆಲ್ಲ ಆತನೇ ಬರೆದುಕೊಂಡದ್ದು.
ಬ್ಲಿರ್ಬ್
-ಓಪ್ರಾ ವಿನ್‌ಫ್ರೆ ಸಂದರ್ಶನದಲ್ಲಿ ಅಮೆರಿಕದ ಸೈಕ್ಲಿಂಗ್ ದಂತಕಥೆ ಲ್ಯಾನ್ಸ್ ಆರ್ಮ್ಸ್ಟ್ರಾಂಗ್ ತಾನು ಉದ್ದೀಪನ ಸೇವಿಸಿದ್ದು ಹೌದು ಎಂದಿದ್ದಾರೆ. ಲ್ಯಾನ್ಸ್ ಆತ್ಮಕಥನದ ಹೆಸರು ಇಟ್ ಈಸ್ ನಾಟ್ ಎಬೌಟ್ ದಿ ಬೈಕ್: ಮೈ ಜರ್ನಿ ಬ್ಯಾಕ್ ಟು ಲೈಫ್! ಓಪ್ರಾ ಎದುರು ತನ್ನನ್ನು ತಾನು ನಗ್ನಗೊಳಿಸಿಕೊಂಡಿರುವ ಲ್ಯಾನ್ಸ್‌ರದ್ದು ಮತ್ತೆ ಜೀವನಕ್ಕೆ ಮರಳುವ ಹೋರಾಟವೇ?
-ನಿರೂಪ