Udayavani | Jan 23, 2013
ಅಂತಃಪುರದಲ್ಲಿ ರಾಜನೊಬ್ಬ ಅಳಬಹುದೇ? ಕಿರೀಟವಿಲ್ಲದೆ ಆ ರಾಜನನ್ನು ನೋಡಬಹುದೇ? ಸಂಬಂಧಕ್ಕಾಗಿ, ಮಕ್ಕಳಿಗಾಗಿ, ಹೆಂಡತಿಗಾಗಿ ಮಿಡಿಯುವ ಮನಸ್ಸನ್ನು ಅಲ್ಲೆಲ್ಲಾದರೂ ಕಾಣಬಹುದೇ?
ಎಲ್ಲಿದೆ ಅಂಥಾ ಇತಿಹಾಸದ ಕತೆ? ಏಕಾಂತದಲ್ಲಿ ಬೇಜಾರಾಗಿರುವ ಅರಸನ ಕತೆ ಯಾವುದಿದೆ? ನಮಗೆ ಗೊತ್ತಿರುವ ಇತಿಹಾಸ ಬಹಿರಂಗವನ್ನು ಹೇಳುತ್ತದೆ. ಅಂತರಂಗ ಎಲ್ಲೋ ಅಡಗಿಕೊಂಡಿರುತ್ತದೆ. ಆತ ಸಾಮಾನ್ಯ ಮನುಷ್ಯನಲ್ಲ ಅನ್ನುವುದನ್ನೇ ಮತ್ತೆ ಮತ್ತೆ ಹೇಳಲಾಗುತ್ತದೆ. ಆತನಿಗೂ ಮನಸಿದೆ, ಆತನಿಗೂ ನೋವಿದೆ, ಆತನ ಮೈಯಲ್ಲೂ ರಕ್ತವಿದೆ, ಅವನಿಗೂ ಮನುಷ್ಯತ್ವವಿದೆ ಅನ್ನುವುದನ್ನು ಹೇಳುವುದೇ ಮುಜುಗರ ಅನ್ನಿಸುವಂತಾಗುತ್ತದೆ. ಹೀಗೆಲ್ಲಾ ಆಗುವಾಗ ನಿಜವಾಗಿಯೂ ಏನು ನಡೆದಿತ್ತು ಅನ್ನೋ ಕುತೂಹಲ ಉಳಿದುಹೋಗುತ್ತದೆ.
ಕುತೂಹಲಗಳು ಉಳಿದು, ರಹಸ್ಯಗಳು ಗೆದ್ದು, ಅನುಮಾನಗಳು ಜಾಸ್ತಿಯಾಗುತ್ತಾ ಇರುವ ಹೊತ್ತಿಗೆ ಕೊಡಗಿನ ಸಿ.ಪಿ. ಬೆಳ್ಳಿಯಪ್ಪನವರು ಚಿಕವೀರರಾಜೇಂದ್ರ ಮಗಳಾದ ವಿಕ್ಟೋರಿಯಾ ಗೌರಮ್ಮನ ಕತೆಯನ್ನು ಕೈಗಿಟ್ಟಿದ್ದಾರೆ. ಎಲ್ಲಾ ಮನುಷ್ಯರಂತೆಯೂ ರಾಜನೂ ಒಬ್ಬ ಮನುಷ್ಯ, ಅವನಿಗೂ ಜ್ವರ ಬರುತ್ತದೆ, ಅವನೂ ನಗುತ್ತಾನೆ, ಅವನೊಳಗೂ ಪ್ರೀತಿ ಇದೆ ಅನ್ನೋ ಸತ್ಯ ತಿಳಿಸುವ ಇತಿಹಾಸದ ಕತೆ ಇದು. ಅಂತರಂಗವನ್ನು ಬಹಿರಂಗ ಮಾಡಿ ಎಲ್ಲರೂ ಮನುಷ್ಯ ಮಾತ್ರರೇ ಎಂದು ಹೇಳುವ ವಿಶ್ವರಹಸ್ಯದ ಕತೆ ಇದು. ಪಟ್ಟ ಬಿಟ್ಟು ಗೊತ್ತಿಲ್ಲದ ಊರಿಗೆ ಹೋಗಿ ಅಂತರಾತ್ಮದ ಕಿವಿಗೆ ಓಗೊಡುವ ರಾಜನ ದುರಂತ ಕತೆ ಇದು. ಎಂದೂ ಕೊಡಗಿಗೆ ಕಾಲಿಡದ ಆದರೂ ಕೊಡಗಿನ ರಾಜಕುಮಾರಿಯಾಗಿಯೇ ಉಳಿದ ಹೆಣ್ಮಗಳ ಹೆಮ್ಮೆಯ ಕತೆ ಇದು.
ಯಾರೂ ದೇವರಲ್ಲ. ಯಾರೂ ರಾಜರಾಗಿಯೇ ಉಳಿಯುವುದಿಲ್ಲ. ಆಳಿದವರು ಆಳುತ್ತಾರೆ. ಯಾರಿಗೋ ಹೇಳಿ ಪ್ರಾರ್ಥನಾ ಮಂದಿರ ಕಟ್ಟಿಸುತ್ತಾರೆ. ಪ್ರಾರ್ಥನೆ ಮಾಡಲು ಸಮಯವಿಲ್ಲದೆ ಒದ್ದಾಡುತ್ತಾರೆ. ಕೊನೆಗೆ ತಾನು ಅಂದುಕೊಂಡಿದ್ದು ಆಗುವುದಿಲ್ಲ. ಅಂಥಾ ಹೊತ್ತಲ್ಲಿ ಚಿಕವೀರ ರಾಜೇಂದ್ರನಿಗೆ ಜನಿಸಿದ ರಾಜಕುಮಾರಿಯ ಈ ಕೂತೂಹಲಕರ ಕತೆ ಓದುಗನನ್ನು ಹಿಡಿದೆಳೆದು, ಕೊಡಗಿನ ರಾಜಬೀದಿಯಿಂದ ಲಂಡನ್ನಿನ ವೈಭವೋಪೇತ ರಸ್ತೆಗಳವರೆಗೆ ಕರೆದೊಯ್ದು ಅಲೆದಾಡಿಸುವ ಹೊತ್ತಿಗೆ ಇದು ಕಾದಂಬರಿ ಅಲ್ಲ. ಇತಿಹಾಸದ ತುಣುಕು ಎಂದುಕೊಂಡು ಕೂತು ಓದುತ್ತಾ ಇರುವ ಹೊತ್ತಿಗೆ ಕೆಳಗಿಡಲು ಮನಸ್ಸಾಗದೆಯೇ ಹೋದಾಗ ಇದು ಕಾದಂಬರಿಯಂತನ್ನಿಸುವುದನ್ನು ಒಪ್ಪದಿರಲು ಸಾಧ್ಯವಾಗುವುದಿಲ್ಲ.
ವಿಕ್ಟೋರಿಯಾ ಗೌರಮ್ಮ/ ಸಿ ಪಿ ಬೆಳ್ಳಿಯಪ್ಪ ಅನು- ಡಾ.ಡಿ.ಬಿ. ರಾಮಚಂದ್ರಾಚಾರ್/ ಪ್ರ- ಅಂಕಿತ ಪುಸ್ತಕ, ಗಾಂಧಿಬಜಾರ್, ಬೆಂಗಳೂರು/ಪುಟ- 208/ಬೆಲೆ- 150
-ರಾಜೇಶ್ ಶೆಟ್ಟಿ