ಚೆನ್ನೈ: ನಟ ಕಮಲ್ ಹಾಸನ್ ನಿರ್ದೇಶನದ ಮಹತ್ವಕಾಂಕ್ಷೆಯ ವಿಶ್ವರೂಪಂ ಚಿತ್ರಕ್ಕೆ ಒಂದರ ಮೇಲೊಂದು ವಿಘ್ನಗಳು ಎದುರಾಗುತ್ತಿವೆ. ಆರಂಭದಲ್ಲಿ ಡಿಟಿಎಚ್‌ನಲ್ಲಿ ಚಿತ್ರ ಪ್ರದರ್ಶನಕ್ಕೆ ಥೇಟರ್ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ವಿಶ್ವರೂಪಂ ಬಿಡುಗಡೆಗೆ ಮುಸ್ಲಿಮರು ವಿರೋಧ ವ್ಯಕ್ತಪಡಿಸಿದ್ದರ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ತಡೆಯಾಜ್ಞೆ ನೀಡಿದೆ. ತಮಿಳುನಾಡಿನಲ್ಲಿ ವಿವಿಧ ಮುಸ್ಲಿಂ ಸಂಘಟನೆಗಳು ಮುಸ್ಲಿಂ ಸಮುದಾಯಕ್ಕೆ ಧಕ್ಕೆ ತರುವಂತಹ ದೃಶ್ಯಗಳನ್ನು ವಿಶ್ವರೂಪಂನಲ್ಲಿ ತೋರಿಸಲಾಗಿದೆ ಎಂದು ಆರೋಪಿಸಿ ಚಿತ್ರ ಪ್ರದರ್ಶನವನ್ನು ನಿಷೇಧಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದವು. ಈ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ವಿಶ್ವರೂಪಂ ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ನೀಡಿದೆ. ವಿಶ್ವರೂಪಂನಲ್ಲಿ ಮುಸ್ಲಿಂ ಸಮುದಾಯದ ನಂಬಿಕೆಗಳನ್ನು ಗುರಿಯಾಗಿಟ್ಟುಕೊಂಡು ಸಮುದಾಯಕ್ಕೆ ಅವಹೇಳನ ಮಾಡವಂತ ದೃಶ್ಯಗಳನ್ನು ಅಳವಡಿಸಲಾಗಿದೆ. ಇಂತಹ ದೃಶ್ಯಗಳನ್ನು ನಮ್ಮ ಸಮುದಾಯ ಒಪ್ಪಿಕೊಳ್ಳುವುದಿಲ್ಲ. ಸಮಾಜದಲ್ಲಿ ಶಾಂತಿ ಹಾಗೂ ಸೌಹಾರ್ಧತೆ ಕಾಪಾಡುವ ದೃಷ್ಟಿಯಿಂದ ಚಿತ್ರವನ್ನು ನಿಷೇಧಿಸುವಂತೆ ಮುಸ್ಲಿಂ ಸಂಘಟನೆಗಳ ಮುಖಂಡರು ಸರ್ಕಾರವನ್ನು ಆಗ್ರಹಿಸಿದ್ದರು.