ಚೆನ್ನೈ: ನಟ ಕಮಲ್ ಹಾಸನ್ ನಿರ್ದೇಶನ ಮಹತ್ವಕಾಂಕ್ಷೆಯ 'ವಿಶ್ವರೂಪಂ' ಸಿನಿಮಾ ಬಿಡುಗಡೆಗೆ ಜ.28 ರವರೆಗೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದರಿಂದ ಕಮಲ್ ಹಾಸನ್‌ಗೆ ಮತ್ತೂಮ್ಮೆ ಹಿನ್ನಡೆಯಾಗಿದೆ. ಜ.26ರಂದು ನ್ಯಾಯಾಧೀಶರು ಖುದ್ದು ವಿಶ್ವರೂಪಂ ಸಿನಿಮಾ ವೀಕ್ಷಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಮುಸ್ಲಿಮರ ಭಾವನೆಗಳಿಗೆ ಚಿತ್ರದಿಂದ ಧಕ್ಕೆಯಾಗುತ್ತದೆ ಎಂದು ಮುಸಲ್ಮಾನ ಸಂಘಟನೆಗಳು ದೂರಿದ್ದ ಹಿನ್ನೆಲೆಯಲ್ಲಿ ಚಿತ್ರವನ್ನು ತಮಿಳ್ನಾಡು ಸರ್ಕಾರ ಬುಧವಾರ ನಿಷೇಧಿಸಿತ್ತು. ಇದನ್ನು ಪ್ರಶ್ನಿಸಿ, ರಾಜಕೀಯ ದುರುದ್ದೇಶದಿಂದ ವಿನಾಕಾರಣ ತಮ್ಮ ಸಿನಿಮಾ ಬಿಡುಗಡೆಗೆ ತಡೆ ನೀಡಲಾಗಿದೆ ಎಂದು ಕಮಲ್ ಹಾಸನ್ ಗುರುವಾರ ಬೆಳಗ್ಗೆ ಹೈಕೋರ್ಟ್ ಮೊರೆ ಹೋಗಿದ್ದರು. ಈ ನಡುವೆ, ಕೇಂದ್ರ ಸರ್ಕಾರವು ಸಿನಿಮಾ ಬಿಡುಗಡೆ ಮೇಲಿನ ನಿಷೇಧವನ್ನು ಮರು ಪರಿಶೀಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಕೋರಿಕೊಂಡಿದೆ.