Wednesday, May 22, 2013
Last Updated: 8:37:10 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಮಹಿಳಾ ಸಂಪದ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಕಾಲಿಗೆ ತೊಡರುವ ಸೀರೆಯೂ ಕಾಲಕ್ಕೆ ಅಳುಕುವ ನೀರೆಯೂ
    • ಕಾಲಿಗೆ ತೊಡರುವ ಸೀರೆಯೂ ಕಾಲಕ್ಕೆ ಅಳುಕುವ ನೀರೆಯೂ..

      • ಜಯಶ್ರೀ | Jan 25, 2013

        ಇವತ್ತಿನ ಜಾಹೀರಾತುಗಳಲ್ಲಿ ಎರಡು ವಿಧದ ಮಹಿಳೆಯರು ಇರುತ್ತಾರೆ. ಅಡುಗೆ ಮಾಡುವ, ಬಟ್ಟೆ ಒಗೆಯುವ, ಪಾತ್ರೆ ತೊಳೆಯುವ, ಮಕ್ಕಳಿಗೆ ಹೆಲ್ದಿಫ‌ುಡ್‌ ಕೊಡಲು (ಅದು ಪ್ಯಾಕೆಟ್‌ನಲ್ಲಿರುತ್ತದೆ) ಒದ್ದಾಡುವ ಗೃಹಿಣಿ. ಇನ್ನೊಂದು ಸೆಕ್ಸಿಯಾಗಿರುವ, ಉತ್ತೇಜನಕಾರಿ ಭಂಗಿಗಳಲ್ಲಿ ಕಾರಿನ ಮೇಲೆ ವಿರಮಿಸುವ, ಚಾಕಲೇಟನ್ನೊಂದು ಅನಿರ್ವಚನೀಯ ವಸ್ತುವಿನಂತೆ ಆಸ್ವಾದಿಸುವ, ವಿಶಿಷ್ಟ ರೀತಿಯಲ್ಲಿ ಮ್ಯಾಂಗೋ ಜ್ಯೂಸ್‌ ಕುಡಿಯುವ ಲಲನೆಯರು.

        ದೆಹಲಿ ಗ್ಯಾಂಗ್‌ರೇಪ್‌ನ ಬೆನ್ನಲ್ಲಿ ಹುಟ್ಟಿಕೊಂಡ ಅಭೂತಪೂರ್ವ ಚರ್ಚೆಗಳು, ಡಿಬೇಟ್‌ಗಳು, ಲೇಖನಗಳು ನಮ್ಮ ದೇಶದಲ್ಲಿ ಮಾನವೀಯತೆ, ಹೆಣ್ಣಿನ ಸ್ಥಿತಿಗತಿಗಳ ಬಗ್ಗೆ ಗೌರವ, ಕಾಳಜಿ ಇನ್ನೂ ಜೀವಂತವಾಗಿದೆ ಎಂದು ಸ್ಪಷ್ಟಪಡಿಸಿತು. ಜ್ವಲಂತವಾಗಿ ನಿಗಿನಿಗಿಸಿದ ಇನ್ನೊಂದು ವಿಷಯ ಹೆಣ್ಣಿಗೆ ಎಷ್ಟರಮಟ್ಟಿಗೆ ಸ್ವಾತಂತ್ರ್ಯ, ಸ್ವಾಯತ್ತತೆ ಕೊಡಬೇಕು ಎನ್ನುವುದು. ಪಬ್‌ನಲ್ಲಿ ಹುಡುಗರೊಂದಿಗೆ ಕುಡಿದು ತೂರಾಡಿ ಬೀದಿಯಲ್ಲಿ ಬೀಳುವುದು ಸಮಾನತೆಯೇ ಎಂದು ನಾಡಿನ ಹಿರಿಯ ಚಿಂತಕರೋರ್ವರು ಪ್ರಶ್ನಿಸಿದರೆ ಎಳೆಯ ಕಂದಮ್ಮಗಳನ್ನು ಕೂಡ ಬಿಡಲಾರದ ಕಾಮುಕತೆಯ ಪರಮಾವಧಿಯನ್ನು ಪ್ರಶ್ನಿಸಿದವರು ಸ್ತ್ರೀವಾದಿಗಳು. ಗ್ಯಾಂಗ್‌ರೇಪ್‌ ಇರಲಿ, ಅಶ್ಲೀಲ ಸಿಡಿ, ಕ್ಯಾಸೆಟ್‌ಗಳಿರಲಿ, ಬೀದಿ ಬದಿಯ ಕಾಮಣ್ಣರ ಸಿಳ್ಳೆಗಳಿರಲಿ, ಹೆಣ್ಣನ್ನೊಂದು ಭೋಗದ ವಸ್ತುವಿನಂತೆ, "ದೇಹ'ವಾಗಿ ಕಾಣುವ ಮನೋಭಾವನೆ ಬದಲಾಗದೆ ಅತ್ಯಾಚಾರಗಳು ನಿಲ್ಲುವುದಿಲ್ಲ. ಹಾಗೆ ನೋಡುವುದಿದ್ದರೆ ಮಾಧ್ಯಮಗಳ (ಅದರಲ್ಲೂ ದೃಶ್ಯ ಮಾಧ್ಯಮದ) ಬಿರುಸಿನ ಪ್ರಚಾರದಿಂದ ಇನ್ನಷ್ಟು ಘಟನೆಗಳು ಸಂಭವಿಸಿದವು ಅಥವಾ ಬೆಳಕಿಗೆ ಬಂದವು.

        ಭಾರತದಂತಹ ವಿರೋಧಾಭಾಸಗಳೇ ತುಂಬಿದ ದೇಶದಲ್ಲಿ ಹೆಚ್ಚಿನ ಹೆಣ್ಣು ಮಕ್ಕಳ ಆಸೆ ಸ್ವತಂತ್ರವಾಗಿ ಬದುಕಬೇಕು ಎಂದು. ಅದರ ಎಲ್ಲೆ , ಪರಿಧಿಗಳನ್ನು ನಿರ್ಣಯಿಸುವವರು, ವ್ಯಾಖ್ಯಾನಿಸುವವರು ಸಾಕಷ್ಟಿದ್ದಾರೆ. ದೈನಂದಿನ ವಾಸ್ತವ ಮಾತ್ರ ಅತ್ಯಂತ ಕಟುವೂ, ಪ್ರಖರವೂ ಆಗಿದೆ. ಸೆಮಿನಾರುಗಳಲ್ಲಿನ ಘೋಷಣೆಗಳಾಗಲಿ, ತಾತ್ವಿಕ ಚರ್ಚೆಗಳಾಗಲಿ ಸಂಗೀತ ಕ್ಲಾಸಿಗೆ ಹೋದ ಮಗಳು ಬರುವುದು ಹತ್ತು ನಿಮಿಷ ತಡವಾದಲ್ಲಿ ಚಡಪಡಿಸುವ ತಾಯಿಯ ಆತಂಕಕ್ಕೆ ಸಾಂತ್ವನ ಕೊಡುವುದಿಲ್ಲ. ಬೆಳೆದ ಹೆಣ್ಣುಮಕ್ಕಳ ಚಲನವಲನವನ್ನು , ಅವರ ಮೊಬೈಲ್‌ ಕಾಲ್‌, ಇಂಟರ್‌ನೆಟ್‌ ಚಾಟ್‌ಗಳನ್ನು ಅನಿವಾರ್ಯವಾಗಿ ಹದ್ದುಗಣ್ಣಿನಿಂದ ನೋಡಲೇಬೇಕಾದ ತಂದೆತಾಯಿಯರ ಆತಂಕಕ್ಕೆ ವಿರಾಮ ನೀಡುವುದಿಲ್ಲ. ಹಾಗಿದ್ದರೂ ಈ ರೀತಿಯ ಚರ್ಚೆಗಳು ನಮ್ಮ ಚಿಂತನೆಗೊಂದು ಹೊಸ ಆಯಾಮವನ್ನು ನೀಡಿ, ನಮ್ಮ ನಿಷ್ಕ್ರಿàಯತೆಯನ್ನು ಕೊಡವಿ ಗಾಬರಿಯಿಂದ ಎಚ್ಚೆತ್ತುಕೊಳ್ಳಲಾದರೂ ಸಹಕರಿಸಿವೆ ಎನ್ನಬಹುದು.

        ಯಾಕೆ ಬದಲಾದವು ಈ ಹತ್ತಿಪ್ಪತ್ತು ವರ್ಷಗಳು...

        ಹತ್ತಿಪ್ಪತ್ತು ವರ್ಷಗಳ ಹಿಂದೆ ಕೂಡ ಹೆಣ್ಣುಮಕ್ಕಳನ್ನು ಒಂದಿಡೀ ಬೀದಿಯೇ, ಗ್ರಾಮವೇ ಪೊರೆಯುತ್ತಿತ್ತು. ಮೈಲಿಗಟ್ಟಲೆ ನಡೆದು ಹಳ್ಳಿ ಶಾಲೆ, ಪ್ರೌಢಶಾಲೆಗಳಿಗೆ ಹೋಗಿ ಬರುವ ತಮ್ಮ ಹೆಣ್ಣು ಮಕ್ಕಳು ಮರಳಿ ಬರುವ ಬಗ್ಗೆ ಯಾವ ತಾಯಂದಿರಿಗೂ ಈಗಿನಂತೆ ಭಯ ಇರಲಿಲ್ಲ. ಗ್ರಾಮಗಳ ಮುಗ್ಧತೆ, ಮಾನವೀಯತೆಗಳು ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಭಾರತದ ಅಭಿವೃದ್ಧಿಯ ಮಾನದಂಡವನ್ನೇ ಪ್ರಶ್ನಿಸುವಂತಾಗಿದೆ. ಈ ದೇಶದಲ್ಲಿ ಹೆಣ್ಣಾಗಿ ಹುಟ್ಟುವುದು ತಪ್ಪು ಎಂದು ಈ ಕಾಲದಲ್ಲಿ ಕಾಲೇಜು ಕುವರಿಯರು ಕೂಡ ಖನ್ನತೆಯಿಂದ, ಆರ್ತತೆಯಿಂದ ಹೇಳುವಾಗ ನಾವು ಮಧ್ಯಯುಗಕ್ಕೆ ಹೋಗುತ್ತಿದ್ದೇವೇನೋ ಎಂದೆನಿಸುತ್ತದೆ. ಹೆಣ್ಣಿನ ಬದಲಾದ ಡ್ರೆಸ್‌ಕೋಡ್‌, ಪಾಶ್ಚಾತ್ಯೀಕರಣ ಇವೆಲ್ಲ ಅವಳ ಮೇಲಿನ ದೌರ್ಜನ್ಯಕ್ಕೆ ಕಾರಣವಂತೆ. ಬ್ರಿಟಿಷರ ಕಾಲದ ಲಾಗಾಯ್ತು ಪಾಶ್ಚಾತ್ಯೀಕರಣಕ್ಕೆ ತೆರೆದುಕೊಂಡ ಭಾರತೀಯ ತಾವು ಪಾಶ್ಚಾತ್ಯ ಉಡುಪು, ಸೂಟ್‌ಬೂಟ್‌ ಧರಿಸಿದರೂ ಹೆಣ್ಣು ಮಾತ್ರ ನಡೆದರೆ ಕಾಲಿಗೆ ತೊಡರುವ ಸೀರೆ, ಆಭರಣಗಳನ್ನು ತೊಟ್ಟು ಸಾಲಂಕೃತ ಲಕ್ಷ್ಮಿಯಂತಿರಬೇಕು ಎಂದು ಬಯಸುತ್ತಾರೆ. ಈ ಕಾರ್ಪೊರೇಟ್‌ ಯುಗದಲ್ಲಿ ಇದು ಸಾಧ್ಯವೇ? ಮೈಕೈ ತೋರಿಸುವ ಬಟ್ಟೆ ತೊಡಬೇಕೆಂದು ಇದರರ್ಥವೇನಲ್ಲ. ಸಾಂಪ್ರದಾಯಿಕತೆ-ಆಧುನಿಕತೆಯ ಗೊಂದಲ, ಹೊಸ ಆಶಯಗಳಿಗೆ ತೆರೆದುಕೊಳ್ಳುವ ಸಾಧ್ಯತೆಗಳು ಹೆಣ್ಣಿಗೆ ಎಷ್ಟು ಕಡಿಮೆ ಎಂದು ಹೇಳಲಷ್ಟೇ ಈ ವಿಚಾರ. ನಮ್ಮ ಹೆಚ್ಚಿನ ಚರ್ಚಾಪಟುಗಳು, ರಾಜಕೀಯ ನಾಯಕರುಗಳು ಹೆಣ್ಣಿನ ಘನತೆ ಗೌರವಗಳ ಸಂಕೇತವಾಗಿ ಸೀತೆ, ದ್ರೌಪದಿ, ಮೀರಾ, ಅಕ್ಕಮಹಾದೇವಿಯರನ್ನೋ ಝಾನ್ಸಿರಾಣಿ, ಅಬ್ಬಕ್ಕ ಇಂತಹವರನ್ನೋ ಉಲ್ಲೇಖೀಸುತ್ತಾರೆ. ಚರಿತ್ರೆ, ಧರ್ಮಗಳಲ್ಲಿನ ಹಿರೋಯಿನ್‌ಗಳಾದ ಈ ವ್ಯಕ್ತಿಗಳಿಗೂ, ಜೆಟ್‌ ಸ್ಪೀಡಿನಲ್ಲಿ ಓಡುತ್ತಿರುವ ಮಾಡರ್ನ್ ಯುಗಕ್ಕೂ ಯಾವ ಸಾಮ್ಯಗಳಿವೆ?

        ಈ ಎಲ್ಲ ಕಿತ್ತಾಟಗಳಿಗೆ, ಪೂರ್ವಾಗ್ರಹಪೀಡಿತ ವಾಗ್ಯುದ್ಧಗಳಿಗೆ ಬಹುಶಃ ಜನರೇಷನ್‌ ಗ್ಯಾಪ್‌ ಕಾರಣವಿರಬಹುದು. ಭಾರತದ ಜನಸಂಖ್ಯೆಯನ್ನು ವಿಂಗಡಿಸಿದಲ್ಲಿ ನಾವು ಕಾಣುವುದು- ಹಿರಿಯ ನಾಗರಿಕರು, ಮಧ್ಯ ವಯಸ್ಕರು, ತರುಣ-ತರುಣಿಯರು ಹಾಗೂ ಹೊಸ ಮಿಲೇನಿಯಂನಲ್ಲಿ ಜನಿಸಿದ, ಈಗ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳು. ಬಹುಶಃ ಇದರಲ್ಲಿ ಅತ್ಯಂತ ತಳಮಳಕ್ಕೀಡಾಗಿರುವುದು ಈಗಿನ ಟೀನೇಜರ್‌ಗಳ ತಂದೆತಾಯಿಯರು. ಅತ್ತ ಸಾಂಪ್ರದಾಯಿಕತೆಯನ್ನು ಬಿಡಲೂ ಆಗದೆ, ಪೂರ್ಣವಾಗಿ ಆಧುನಿಕತೆಗೆ ತೆರೆದುಕೊಳ್ಳಲೂ ಆಗದೆ, ಹೊಸ ಜಗತ್ತಿನ ಆಗುಹೋಗುಗಳನ್ನು ದಿಗ್ಭ್ರಮೆಯಿಂದ ನೋಡುತ್ತ, ಗ್ಲೋಬಲೈಸೇಶನ್‌ನ ಆವೇಗಗಳೊಂದಿಗೆ ಸಂಭ್ರಮಿಸಲೂ ಆಗದೆ, ಅಭಿವೃದ್ಧಿಯನ್ನು , ಹೊಸ ವೈಜ್ಞಾನಿಕ ಯುಗದ ಸೌಲಭ್ಯಗಳನ್ನು ಸಾರಾಸಗಟಾಗಿ ಅಲ್ಲಗಳೆಯಲೂ ಆಗದೆ ವಿಚಿತ್ರವಾದ ಸಂದಿಗ್ಧ ಪರಿಸ್ಥಿತಿಯಲ್ಲಿರುವವರು.

        ಖಂಡಿತವಾಗಿಯೂ ಸಮಾನತೆಯೆಂದರೆ ಸ್ವತ್ಛಂದತೆಯಲ್ಲ. ಆದರೆ ಈ ಭೂಮಿಯಲ್ಲಿ ಹುಟ್ಟಿದ ಸಕಲ ಜೀವ ಚರಾಚರಗಳಿಗೂ ಬದುಕುವ ಹಕ್ಕು ಇರುವಾಗ, ಬೇಟೆಯಾಡಲ್ಪಡಬಹುದಾದ ಮೃಗದಂತೆ, ತಮ್ಮ ತಪ್ಪೇ ಇಲ್ಲದಿದ್ದರೂ ಬಲಿಯಾಗಬೇಕಾದ ಅನಿವಾರ್ಯ ಕರ್ಮಕ್ಕೆ, ತಮಗೆ ಏನೋ ಸಂಭವಿಸಬಹುದೆಂಬ ನಿರಂತರ ಭಯ, ಆತಂಕಗಳಿಂದ ಹೆಣ್ಣುಮಕ್ಕಳು ಬದುಕಬೇಕಾದ ಈ ಪರಿಸ್ಥಿತಿಗೆ ಕಾರಣರು ಯಾರು? ಸಂಸ್ಕೃತಿಯೇ, ರಾಜಕೀಯವೇ, ಧಾರ್ಮಿಕತೆಯೇ ಅಥವಾ ಪ್ಯೂರ್‌ ಹಿಪಾಕ್ರಸಿಯೇ? "ಬಯಕೆ' ಎನ್ನುವುದು ಹೆಣ್ಣು ಗಂಡುಗಳಿಬ್ಬರಿಗೂ ಸಾಪೇಕ್ಷವಾದರೂ "ಲಜ್ಜೆಗೆಟ್ಟವಳು', "ಮಾನಗೆಟ್ಟವಳು' ಎಂದು ಬಹಿಷ್ಕರಿಸಲ್ಪಡುವವಳು ಹೆಣ್ಣು. ಅತ್ಯಾಚಾರಕ್ಕೊಳಗಾದ ಹೆಣ್ಣು ಮೃತಳಾದ ಕಾರಣದಿಂದಷ್ಟೇ ಅವಳ ಸುತ್ತ ಇಂತಹ ಪ್ರಭಾವಳಿ ಇದೆ.

        ನಮ್ಮ ಎಳೆ ಹೆಣ್ಣುಮಕ್ಕಳ ಬಾಲ್ಯವನ್ನು , ಹದಿಹರೆಯದ ತರುಣಿಯರ ಮುಗ್ಧತೆಯನ್ನು , ದಿಢೀರನೆ ಕಿತ್ತುಕೊಳ್ಳಲೇಬೇಕಾದ ಅಸಹಾಯಕತೆಯನ್ನು ಮಧ್ಯಮ ವರ್ಗದ ಮೇಲೆ ಹೇರಿದವರು ಯಾರು? ಇನ್ನೂ ಖಚಿತವಾಗಿ ಹೇಳುವುದಿದ್ದರೆ ನಮ್ಮ ಹೆಣ್ಣುಮಕ್ಕಳನ್ನು ಪಾಟ್‌ಗಳಲ್ಲಿನ ಕ್ರೋಟನ್‌ಗಳಂತೆ ಮುಚ್ಚಟೆಯಿಂದ ಸುರಕ್ಷಿತವಾಗಿ ಬೆಳೆಸಬೇಕಾದ ಪರಿಸ್ಥಿತಿ. ನನಗೆ ಅರ್ಥವಾಗದ ವಿಷಯವೆಂದರೆ ಸೀತೆಯ ಸಹನಶೀಲತೆ, ಶಕುಂತಲೆಯ ಸೌಂದರ್ಯ, ಮೇನಕೆಯ ಕೋಮಲತೆ ಇವನ್ನೆಲ್ಲ ಆದರ್ಶವಾಗಿಟ್ಟುಕೊಂಡು ಈ ಸೈಬರ್‌ ಯುಗದಲ್ಲಿ ಬದುಕಲು ಹೇಗೆ ಸಾಧ್ಯ ಎಂದು. ಮಾತನಾಡಿದರೆ ಗಂಡುಬೀರಿಯೆಂದೂ, ಮೌನವಾಗಿದ್ದಲ್ಲಿ "ಮುಟ್ಟಿದರೆ ಮುನಿ'ಯೆಂದೂ ನಾಮ ವಿಶೇಷಣಗಳು ದೊರಕುತ್ತಿರುವಾಗ ನಮ್ಮ ಹೆಣ್ಣು ಮಕ್ಕಳನ್ನು ಹೇಗೆ ಬೆಳೆಸಬೇಕು.

        ಸಿನೆಮಾ ನೋಡಿ ಹೀಗಾಯಿತೆ?

        ಹೆಣ್ಣು ಮಕ್ಕಳ ಮೇಲಿನ ಅನಾಚಾರಕ್ಕೆ ಹೆಚ್ಚಿನವರು ಕೂಡ ಸಿನೆಮಾ ಇನ್ನಿತರ ದೃಶ್ಯ ಮಾಧ್ಯಮವನ್ನು ಆರೋಪಿಸುತ್ತಾರೆ. ಅದು ಸತ್ಯವೂ ಕೂಡ. ತರಕಾರಿ, ದವಸಧಾನ್ಯಕ್ಕಿಂತ ಮೊಬೈಲ್‌ ದರ ಕಡಿಮೆ ಆಗಿರುವ ಈ ಕಾಲದಲ್ಲಿ ಮಕ್ಕಳನ್ನು ತಂತ್ರಜ್ಞಾನದಿಂದ ವಿಮುಖವಾಗಿಸುವುದು ಸುಲಭವೇನಲ್ಲ. ಮನೆಯಲ್ಲಿ ಇಂಟರ್‌ನೆಟ್‌ ನೋಡಬೇಡವೆಂದು ನಿರ್ಬಂಧಿಸಿದಲ್ಲಿ ಗಲ್ಲಿಗೊಂದು ಸೈಬರ್‌ಕೆಫೆಗಳಿವೆ. ಮಾಡರ್ನ್ ಆಗಿರುವ ಮಲ್ಟಿಫ್ಲೆಕ್ಸ್‌ಗಳಲ್ಲಿನ ಖೀ/ಅ ಸಿನೆಮಾಗಳಿಗೆ ಯುವಜನಾಂಗ ಮುಗಿಬೀಳುವುದನ್ನು ನೋಡಬಹುದು. ಇನ್ನು ಅಶ್ಲೀಲತೆಯೇ ಫ್ಯಾಶನೇಬಲ್‌ ಎನ್ನುವಂತಿರುವ ರ್‍ಯಾಂಪ್‌ ಶೋಗಳು, ಸೆಲೆಬ್ರಿಟಿಗಳ ವಾರ್ಡ್‌ರೋಬ್‌ ಬಗೆಗಿರುವ ಚರ್ಚೆಗಳು, ದಿನನಿತ್ಯವೆನ್ನುವಂತೆ ಒಂದಲ್ಲ ಒಂದು ಟಿವಿ ಚಾನೆಲ್‌ನಲ್ಲಿ ಕಾಣಿಸುತ್ತಿರುತ್ತದೆ. ಲೈಂಗಿಕತೆ, ಹಿಂಸೆ ಮತ್ತು ಕ್ರೌರ್ಯ ಬದುಕಿನ ಅವಿಭಾಜ್ಯ ಅಂಗವೆನ್ನುವಂತೆ ನಮ್ಮ ಚಲನಚಿತ್ರಗಳು ತೋರಿಸುತ್ತವೆ.

        ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಲಾಂಗು, ಮಚ್ಚು ಹಿಡಿದರೆ ತಪ್ಪೇನೂ ಇಲ್ಲವೆಂದೂ, ಹೆಣ್ಣನ್ನು ಒಲಿಸಿ ತನ್ನವಳನ್ನಾಗಿಸುವುದು ಹೀರೋವಿನ ಲಕ್ಷಣವೆಂದೂ ನಮ್ಮ ಹದಿಹರೆಯದ ಹುಡುಗರು ಅಂದುಕೊಳ್ಳುವಲ್ಲಿ ಅವರು ನೋಡುವ vಜಿsuಚl ಞಛಿಛಜಿಚದ ಪಾತ್ರ ಖಂಡಿತ ಇದೆ. ಅತ್ಯಂತ ಮೈಲ್ಡ್‌ ಆಗಿರುವ  ರೊಮ್ಯಾಂಟಿಕ್‌ ಸಿನೆಮಾಗಳಲ್ಲಿ ಕೂಡ ಬೋಲ್ಡ್‌ ಆಗಿರುವ ಹೀರೋಯಿನ್‌ಗೆ ಒಂದು ತಪರಾಕಿ ಕೊಟ್ಟರೆ, ಅವಮಾನಿಸಿದರೆ ಮಧ್ಯ ವಿರಾಮ ಹೊತ್ತಿಗೆ ಆಕೆ ಭಾರತೀಯ ನಾರಿಯಂತೆ ತಗ್ಗಿಬಗ್ಗಿ, ಹೀರೋವಿನ ಮೇಲೆ ಅವಲಂಬಿತಳಾದ ಲಜ್ಜಾವತಿಯಂತೆ ವರ್ತಿಸುತ್ತಾಳೆ. ಇನ್ನು ಟಿವಿ ಸೀರಿಯಲ್‌ಗ‌ಳ ನಾಯಕಿಯರಂತೂ ಭಾರವಾದ ದನಿಯಲ್ಲಿ, ಜಗತ್ತಿನ ದುಗುಡ, ಜವಾಬ್ದಾರಿಗಳನ್ನೆಲ್ಲ ಹೊತ್ತು ತ್ಯಾಗ, ಸಹನೆಗಳ ಪ್ರತಿರೂಪವೇ ಆಗಿರುತ್ತಾರೆ. ಈ ಪಡಿಯಚ್ಚನ್ನು , ಪ್ರತಿನಿಧೀಕರಣವನ್ನು ಯಾರು ಮೀರಲೆತ್ನಿಸುತ್ತಾರೋ ಅವರನ್ನು ಈ ಸಮಾಜ ಕ್ರೂರವಾಗಿ ಶಿಕ್ಷಿಸುತ್ತದೆ (ಭಾರತದಲ್ಲಿ ಮಾತ್ರ ಅಲ್ಲ).

        ಸುಶಿಕ್ಷಿತಳಾದ ಹೆಣ್ಣು ಎಲ್ಲಿ ಎಲ್ಲೆ ಮೀರುತ್ತಾಳ್ಳೋ ಎನ್ನುವ ಆತಂಕ ಪ್ರತಿಯೊಂದು ಅಭಿವ್ಯಕ್ತಿ ಮಾಧ್ಯಮದಲ್ಲೂ ಕಾಣಬಹುದು. ಭಾರತೀಯ ಹೆಣ್ಣು ಏಕಕಾಲಕ್ಕೆ ಬುದ್ಧಿœಮತ್ತೆಯಲ್ಲಿ ಇಪ್ಪತ್ತೂಂದನೇ ಶತಮಾನದವಳೂ, ನಡೆನುಡಿಯಲ್ಲಿ ಹತ್ತೂಂಬತ್ತನೆಯ ಶತಮಾನದವಳೂ ಆಗಿದ್ದರೆ ಮಾತ್ರ ಇಲ್ಲಿ ಬದುಕಲು ಸಾಧ್ಯ. ಹೀಗಾಗಿಯೇ ನಮ್ಮ ಜಾಹೀರಾತುಗಳಲ್ಲಿ ನೆಲವನ್ನು ಪರಿಮಳಯುಕ್ತ ದ್ರಾವಣದಲ್ಲಿ ಒರೆಸಿದಾಗ, ಯಾವುದೋ ಸೋಪ್‌ ಪೌಡರ್‌ ಹಾಕಿ ಬಟ್ಟೆ ಬೆಳ್ಳಗೆ ಮಿಂಚಿದಾಗ ಗೃಹಿಣಿಯರ ಮುಖದಲ್ಲಿ ಅಲೌಕಿಕ ಆನಂದವನ್ನೂ, ತೃಪ್ತಿಯನ್ನೂ ಕಾಣಬಹುದು. ಒಂದು ಮಹಾಕಾವ್ಯ ಬರೆದ ಕವಿಯ ಸಂತೋಷಕ್ಕೆ ಸಮನಾಗಿ ಇವು ಚಿತ್ರಿಸಲ್ಪಡುತ್ತವೆ. ಎರಡು ವಿಧದ ಮಹಿಳೆಯರು ಜಾಹೀರಾತಿನಲ್ಲಿರುತ್ತಾರೆ. ಅಡುಗೆ ಮಾಡುವ, ಬಟ್ಟೆ ಒಗೆಯುವ, ಪಾತ್ರೆ ತೊಳೆಯುವ, ಮಕ್ಕಳಿಗೆ ಹೆಲ್ದಿಫ‌ುಡ್‌ ಕೊಡಲು (ಅದು ಪ್ಯಾಕೆಟ್‌ನಲ್ಲಿರುತ್ತದೆ) ಒದ್ದಾಡುವ ಗೃಹಿಣಿ. ಇನ್ನೊಂದು ಸೆಕ್ಸಿಯಾಗಿರುವ, ಉತ್ತೇಜನಕಾರಿ ಭಂಗಿಗಳಲ್ಲಿ ಕಾರಿನ ಮೇಲೆ ವಿರಮಿಸುವ, ಚಾಕಲೇಟನ್ನೊಂದು ಅನಿರ್ವಚನೀಯ ವಸ್ತುವಿನಂತೆ ಆಸ್ವಾದಿಸುವ, ವಿಶಿಷ್ಟ ರೀತಿಯಲ್ಲಿ ಮ್ಯಾಂಗೋ ಜ್ಯೂಸ್‌ ಕುಡಿಯುವ ಲಲನೆಯರು. ಹಾಗೆ ನೋಡುವುದಿದ್ದರೆ ಭೋಗ ಸಂಸ್ಕೃತಿಯೇ ಪ್ರಧಾನವಾಗಿರುವ ಈ ಎಲ್ಲ ಜಾಹೀರಾತುಗಳಲ್ಲಿ ಗಂಡು-ಹೆಣ್ಣು ಇಬ್ಬರ ಬುದ್ಧಿಶಕ್ತಿಗೂ ಚೂರೇ ಚೂರು ಬೆಲೆಯಿರುವುದಿಲ್ಲ.

        ದಶಕಗಳ ಹಿಂದೆ ಸರಳ ಜೀವನ ನಡೆಸುವ, ನೇರವಂತ ವ್ಯಕ್ತಿಗಳಿಗೆ ಆದರ ಲಭಿಸುತ್ತಿದ್ದರೆ ಈಗ ದುಡ್ಡಿಲ್ಲದವರು ಕೈಲಾಗದವರೆಂದೂ, ಮಹತ್ವಾಕಾಂಕ್ಷೆ ಇಲ್ಲದವರೆಂದೂ ಪರಿಗಣಿಸಲ್ಪಡುತ್ತಾರೆ. ಒಂದು ಕಾಲಕ್ಕೆ ಅನಕ್ಷರತೆ ಭಾರತದ ಶಾಪವಾಗಿತ್ತು. ಆದರೆ ಈಗೀಗ ಹಿಂಸಾಚಾರಗಳು, ಲೈಂಗಿಕ ಅಪರಾಧಗಳಲ್ಲಿ ಸುಶಿಕ್ಷಿತರೇ ಶಾಮೀಲಾಗಿರುತ್ತಾರೆ. ಸಾಮಾನ್ಯ ಜನರಿಗಂತೂ ಅವುಗಳ ಬಗ್ಗೆ ಮಾತಾಡಲೂ ಭಯ. ಈ ಹಿಂಸಾತ್ಮಕ ಘಟನೆಗಳನ್ನು ಸವಿವರವಾಗಿ ಮಾಧ್ಯಮಗಳೇ ಬಿತ್ತರಿಸಿ ಸೆನ್ಸೇಶನ್‌ ಹುಟ್ಟಿಸುತ್ತವೆ. ನಮ್ಮ ಸಾಮಾಜಿಕ ಮೌಲ್ಯಗಳು, ನಮ್ಮ ಧಾರ್ಮಿಕತೆ ಇವೆಲ್ಲ ಎಲ್ಲಿ ಮಟಾಮಾಯವಾಗಿವೆ ಗೊತ್ತಿಲ್ಲ. ಈ ಸಮಸ್ಯೆಗೆ ಪರಿಹಾರವೂ ನಮ್ಮ ಕೈಯಲ್ಲೇ ಇದೆ ಹಾಗೂ ಅದರ ಬೇರೆ ಬೇರೆ ಆಯಾಮಗಳು ವ್ಯಕ್ತವಾಗುತ್ತಿವೆ ಕೂಡ. ಶಾಲೆ ಕಾಲೇಜುಗಳಲ್ಲಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಒಗ್ಗಟ್ಟಿನ ಪ್ರತಿಭಟನೆ, ಸಂಘ ಸಂಸ್ಥೆಗಳಲ್ಲಿನ ಜಾಗೃತಿ, ಸರಕಾರದ ಆಶ್ವಾಸನೆಗಳು, ಪರಿಹಾರ ಕಾರ್ಯಗಳು, ಮುಖ್ಯವಾಗಿ ಸಮಾಜದ ಎಲ್ಲ ವರ್ಗದಲ್ಲಿ ಹೆಣ್ಣುಮಕ್ಕಳ ಬಗೆಗೆ ಹೆಚ್ಚಿದ ಕಾಳಜಿ ಇವೆಲ್ಲ ಖಂಡಿತವಾಗಿಯೂ ಧನಾತ್ಮಕ ಬೆಳವಣಿಗೆಗಳು. ಹಾಗಿದ್ದರೂ ಈ ಎಲ್ಲ ಸದಾಶಯಗಳು ಒಮ್ಮೆಲೇ ಭೋರ್ಗರೆದು ತಣ್ಣಗಾಗದೆ ನಿರಂತರವಾಗಿ ಪ್ರವಹಿಸುತ್ತಿರಬೇಕು ಎನ್ನುವುದೇ ನಾಗರಿಕರೆಲ್ಲರ ಮೊರೆ. ಹಾಗಾದಾಗಲೇ ಎಳೆಯ ಹೂಗಳಂತಿರುವ ತರಳೆಯರು ಅರಳಿ ಬಾಳಲು ಸಾಧ್ಯ.

      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      pic"ಉದ್ಯೋಗ' ಎನ್ನುವುದು ಕೆಲವರಿಗೆ ತಮ್ಮ ಪ್ರತಿಭೆಯ ಅಭಿವ್ಯಕ್ತಿಗೆ, ಸ್ವಾತಂತ್ರ್ಯದ ಅಪೇಕ್ಷೆಗೆ ಪೂರಕವಾದರೆ ಇನ್ನು ಕೆಲವರಿಗೆ ತುತ್ತಿನ ಚೀಲ ತುಂಬಿಸಲು ಅನಿವಾರ್ಯ...
      • ಈ ವಿಭಾಗದಲ್ಲಿಯೂ ಇದೆ
      • ಏಕತಾರಿ ಮಿಡಿತ
        ಅವಳು ಒಂಟಿಯಾಗಿ ಕಾರ್ಯಕ್ರಮಕ್ಕೆ ಬಂದಳು, ಕಾರ್ಯಕ್ರಮ ಮುಗಿದ ನಂತರ ಒಂಟಿಯಾಗಿ ಬಸ್‌ನಲ್ಲಿ ಜೋತಾಡಿಕೊಂಡು ಹೋಗುತ್ತಿದ್ದಳು....
      image
      image
      • Copyright @ 2009 Udayavani.All rights reserved.
      • Designed & Hosted By 4cplus