Monday, May 20, 2013
Last Updated: 8:50:18 PM IST
  • ನಾನೆಲ್ಲಿರುವೆ:
  • ಮುಖಪುಟ ಪುರವಣಿಗಳು ಕಲಾವಿಹಾರ
  • ಉದಯವಾಣಿ
  • ವೆ ಬ್
  • ಹುಡುಕಿ
  • ಮುಖ್ಯಾಂಶಗಳು:   
    • ಛಂದಸ್ಸೂ ಅದೇ, ಪದ್ಯವೂ ಅದೇ; ಬದಲಾದದ್ದು ತೀರ್ಮಾನ
      • ಕೆ. ಜೆ. ಗಣೇಶ, ಕಿದಿಯೂರು | Jan 25, 2013

        ಲಲಿತರಂಗ, 4-1-2013ರಂದು ""ಯಕ್ಷಗಾನ ಭಾಗವತಿಕೆ ಮತ್ತು ಛಂದಸ್ಸು' ಎಂಬ ವಿಚಾರವಾಗಿ ವಿಮಶಾತ್ಮಕ ಲೇಖನವೊಂದು ಪ್ರಕಟವಾಗಿತ್ತು. ಆ ಕುರಿತು ನನ್ನ ಅಭಿಪ್ರಾಯಗಳನ್ನು ಹೇಳಬಯಸುತ್ತೇನೆ. ""ಇತ್ತೀಚೆಗೆ ಒಂದು ಯಕ್ಷಗಾನ ಕಾರ್ಯಾಗಾರದಲ್ಲಿ ಒಬ್ಬರು ಪಂಚವಟಿ ಪ್ರಸಂಗದ ಒಂದು ಪ್ರಸಿದ್ಧ ಪದ್ಯದ ಸಾಹಿತ್ಯವನ್ನು ಬದಲಿಸಿ ಹಾಡಿದರು. ಅನಂತರ ತಿಳಿದು ಬಂದುದೇನೆಂದರೆ ಆ ಪದ್ಯದಲ್ಲಿ ಛಂದಸ್ಸು ದೋಷವಿರುವುದರಿಂದ ಛಂದಸ್ಸು ತಿಳಿದ ಮಹನೀಯರಿಂದ ಆ ಪದ್ಯವನ್ನು ಸರಿಪಡಿಸಿಕೊಂಡು ಹಾಡ ಲಾಗಿದೆ' ಎಂದು ಲೇಖಕರು ಬರೆದಿದ್ದಾರೆ. ಅವರು ಹೇಳಿದ ಕಾರ್ಯಾಗಾರ ದಲ್ಲಿ ಪಂಚವಟಿ ಪ್ರಸಂಗದ ಚಂದದಿಂದ ಬಂದಳಬ ಲೋಚನೆ ಎಂಬ ಪದ್ಯ ವನ್ನು ಹಾಡಿದವನು ನಾನೆ. ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಪ್ರಕಾಶನದವರಿಂದ ಎರಡನೆಯ ಮುದ್ರಣವಾಗಿ 2009ರಲ್ಲಿ ಪ್ರಕಟಿಸಲ್ಪಟ್ಟ , ಕುಕ್ಕಿಲ ಕೃಷ್ಣ ಭಟ್ಟರು ಸಂಪಾದಿಸಿರುವ ಪಾರ್ತಿ ಸುಬ್ಬನ ಯಕ್ಷಗಾನ ಪ್ರಸಂಗಗಳು ಎಂಬ ಗ್ರಂಥದಿಂದ ನಾನು ಆ ಪದ್ಯವನ್ನು ಆರಿಸಿಕೊಂಡಿದ್ದೇನೆ.

        ಛಂದಸ್ಸನ್ನು ಸರಿಪಡಿಸಿ ಆ ಪದ್ಯವನ್ನು ಬದಲಾಯಿಸಿ ಹಾಡಿದ್ದೇನೆ ಎಂಬುದು ಲೇಖಕರ ಅವಸರದ ತೀರ್ಮಾನವೆಂದೇ ಭಾವಿಸಬೇಕಾಗುತ್ತದೆ. ಪದ್ಯವೂ ಆ ಗ್ರಂಥದಲ್ಲಿದೆ. ಛಂದಸ್ಸನ್ನು ನಾನು ಬದಲಾಯಿಸಲಿಲ್ಲ. ಇಲ್ಲಿ ಬದಲಾದದ್ದು ಲೇಖಕರ ತೀರ್ಮಾನವೆಂದೇ ಹೇಳಬೇಕಾಗುತ್ತದೆ. ಕುಕ್ಕಿಲ ಕೃಷ್ಣ ಭಟ್ಟರ ಸಂಪುಟದ 120ನೇ ಪುಟದಲ್ಲಿ ಆ ಪದ್ಯವಿದೆ. ಆ ಪದ್ಯದ ಒಂದಕ್ಷರ ವನ್ನೂ ಬದಲಾಯಿಸದೆ ಬಡಗುತಿಟ್ಟಿನ ಪರಂಪರೆಯಂತೆ ಏಕ ತಾಳದಲ್ಲಿ ನನ್ನ ಗುರುಗಳಾದ ಗಣೇಶ ಕೊಲೆಕಾಡಿಯವರು ನಿರ್ದೇಶಿಸಿರುವಂತೆ ಛಂದಸ್ಸಿಗೂ ನಿಷ್ಠವಾಗಿ ಹಾಡಿದ್ದೇನೆ. ಕುಕ್ಕಿಲ ಕೃಷ್ಣ ಭಟ್ಟರ ಗ್ರಂಥದಲ್ಲಿರುವ ಪದ್ಯವನ್ನು ಗಮನಿಸಿ (ಗ್ರಂಥದಲ್ಲಿ ಇರುವಂತೆಯೇ ಇಲ್ಲಿ ಪ್ರಸ್ತರಿಸಲಾಗಿದೆ).

        ರಾಗ ಗೌಳೀಪಂತು -ರೂಪಕ ತಾಳ

        ಚಂದದಿಂದ | ಬಂದಳಬj | ಲೋ-ಚ | ನೆ-ರಾಮ |

        ಚಂದ್ರನೆಂದ | ಮಾತಿನ ಆ | ನಂದವನ್ನೆ | ನೆನೆಯುತಾಗ ||ಪ||

        ಕನ್ನಡಿಯನು | ಹಿಡಿದು ಮುಂದೆ | ನೋ-ಡು | ತ - ಮೊಗವು |

        ಚೆನ್ನಾಗಿಹು | ದೆಂದು | ನಗೆಯ | ಮಾ-ಡು | ತ-ತನಗೆ |

        ಕನ್ನೆಯರೊಳು | ಜೋಡಿಲ್ಲೆಂದು | ಪಾ - ಡು | ತ - ಅಸುರೆ|

        ತನ್ನೊಳಗೆ | ತಾನೇ ನಲಿ|ದಾ-ಡು|ತ- ಚಂದ|ದಿಂದ -||320||

        ಯಕ್ಷಗಾನವು ಅದರ ಹೆಸರೇ ಸೂಚಿಸುವಂತೆ ಗಾನ ಪ್ರಧಾನವಾದದ್ದು. ಗಾನವೆಂದರೆ ಪದ್ಯ. ಪದ್ಯವಾಗಬೇಕಾದರೆ ಛಂದಸ್ಸಿನ ನಿಯಮಗಳಿಗೆ ಅದು ಬದ್ಧವಾಗಿರಬೇಕು. ಹಾಗಾಗಿ ಯಕ್ಷಗಾನದ ಹಾಡುಗಾರನಾಗಲೀ, ಪ್ರಸಂಗ ಕರ್ತನಾಗಲೀ ಛಂದೋಬಲವಿಲ್ಲದೆ ಕಲೆಗೆ ನ್ಯಾಯವನ್ನು ಒದಗಿಸಲು ಸಾಧ್ಯವಿಲ್ಲ. ಯಕ್ಷಗಾನ ಚರಿತ್ರೆಯಲ್ಲಿ ಪಾರ್ತಿಸುಬ್ಬರ ಹೆಸರು ಅತ್ಯಂತ ಗಣ್ಯವಾದುದು. ಯಕ್ಷಗಾನ ಕಲೆಗೆ ಹೊಸ ಜೀವ ತುಂಬಿ ಬೆಳೆಸಿದ ಕೀರ್ತಿ ಅವರದ್ದು. ಮಹಾ ಕವಿ ಪಾರ್ತಿಸುಬ್ಬರು ಬರೆದ ಯಕ್ಷಗಾನ ಪ್ರಸಂಗಗಳ ಬಗ್ಗೆ ಸಂಶೋಧನೆ ನಡೆಸಿ ಕೃತಿಗಳನ್ನು ಪ್ರಕಟಿಸಿದವರು ಅನೇಕರು ಇರಬಹುದು. ಆದರೆ ಉಳಿದವರೆಲ್ಲರಿಗಿಂತಲೂ ಕುಕ್ಕಿಲ ಕೃಷ್ಣ ಭಟ್ಟರು ಸಂಪಾದಿಸಿದ ಕೃತಿಗಳೇ ಮೂಲಕ್ಕೆ ಹೆಚ್ಚು ನಿಷ್ಠವಾಗಿದ್ದು , ಅಧಿಕೃತವಾದುದಾಗಿವೆ ಎಂಬುದು ವಿದ್ವಾಂಸರೂ ಒಪ್ಪಿಕೊಂಡಿರುವ ಸತ್ಯ. ಕುಕ್ಕಿಲ ಕೃಷ್ಣ ಭಟ್ಟರು ಸಂಗೀತ ಶಾಸ್ತ್ರ ಹಾಗೂ ಛಂದಃಶಾಸ್ತ್ರಗಳಲ್ಲಿ ವಿಶೇಷ ತಜ್ಞತೆಯನ್ನು ಪಡೆದವರು. ಸಂಸ್ಕೃತ ವಿದ್ವಾಂಸರಾದ ಇವರು ಭರತನ ನಾಟ್ಯಶಾಸ್ತ್ರವನ್ನು ಅಭ್ಯಸಿಸಿ ಸಂಶೋಧನಾತ್ಮಕ ಲೇಖನಗಳನ್ನು ಪ್ರಕಟಿಸಿದವರು. ಆದ್ದರಿಂದ ಅಂತಹ ಮಹನೀಯರ ಸಂಪುಟ ದಿಂದ ಆರಿಸಿಕೊಂಡ ಪದ್ಯವು ಸಮಂಜಸವಲ್ಲ ಎಂಬುದನ್ನು ಸಮರ್ಥಿಸಲು ಲೇಖಕರಲ್ಲಿ ಆಧಾರಗಳಿದ್ದರೆ ತಿಳಿಸಬಹುದು. ಇದೇ ಪದ್ಯ ಬೇರೆ ಬೇರೆ ಪುಸ್ತಕಗಳಲ್ಲಿ ಬೇರೆ ಬೇರೆ ರೀತಿಯಾಗಿರಬಹುದು. ಭಾಗವತನ ನೆಲೆಯಲ್ಲಿ ಆಯ್ಕೆಯ ಸ್ವಾತಂತ್ರ್ಯ ವನ್ನಷ್ಟೆ ನಾನು ಬಳಸಿಕೊಂಡಿದ್ದೇನೆ. ಕವಿಯ ಪದ್ಯವನ್ನೇ ತಿರುಚುವ ಉದ್ಧಟತನವನ್ನು ನಾನು ತೋರಲಿಲ್ಲ ಎಂಬುದನ್ನು ಲೇಖಕರು ಗಮನಿಸಬೇಕು. ಪರಂಪರೆಯ ಬಗ್ಗೆ ನನಗೂ ಒಲವಿದೆ. ಇಂದ್ರಾಳಿಯ ಶಿವಪ್ರಭಾ ಯಕ್ಷಗಾನ ಕೇಂದ್ರದ ವಿದ್ಯಾರ್ಥಿ ಯಾದ ನಾನು ವಿದ್ವಾನ್‌ ಗಣಪತಿ ಭಟ್‌, ಕೋಟ ಮಹಾಬಲ ಕಾರಂತ, ಗೋರ್ಪಾಡಿ ವಿಟuಲ ಪಾಟೀಲ್‌ ಮುಂತಾದ ಹಿರಿಯ ಕಲಾವಿದರಿಂದ ಹಾಡುಗಾರಿಕೆಯನ್ನು ಅಭ್ಯಸಿಸಿದ್ದೇನೆ. ಪರಂಪರೆಯನ್ನು ಮೀರುವ ಉದ್ದೇಶ ನನ್ನಲ್ಲಿಲ್ಲ. ಪರಂಪರೆ ಜೊತೆಗೆ ಯಕ್ಷಗಾನ ಛಂದಸ್ಸಿನ ಅಭ್ಯಾಸ ಎಲ್ಲಾ ಭಾಗವತರಿಗೆ ಅತೀ ಅನಿವಾರ್ಯವಾದದ್ದು ಎಂದು ನಾನು ಇತ್ತೀಚೆಗೆ ಕಂಡುಕೊಂಡ ಸತ್ಯ.

        ವರ್ತಮಾನ ಕಾಲದಲ್ಲಿ ಯಕ್ಷಗಾನ ಸಾಹಿತ್ಯ ಪ್ರಪಂಚಕ್ಕೆ ಅಭಿನವ ನಾಗವರ್ಮ, ಛಂದೋಬ್ರಹ್ಮ ಎಂದು ಪ್ರಸಿದ್ಧರಾದ ಡಾ| ಎನ್‌. ನಾರಾಯಣ ಶೆಟ್ಟರ ""ಯಕ್ಷಗಾನ ಛಂದೋಂಬುಧಿ' ಯಕ್ಷಗಾನ ಸಾರಸ್ವತ ಲೋಕಕ್ಕೆ ಸಂದ ಮಹಾ ಕೊಡುಗೆ. ಛಂದಸ್ಸಿಗೆ ಸಂಬಂಧಿಸಿದ ಅವರ ಅನೇಕ ವಿಚಾರಧಾರೆಗಳು ಲಲಿತರಂಗ ವಿಭಾಗದಲ್ಲಿ ಸರಣಿಯಾಗಿ ಪ್ರಕಟವಾಗುತ್ತಿವೆ. ಅವನ್ನೆಲ್ಲಾ ಓದಿ ಅರ್ಥೈಸಿ ಕೊಂಡವರು ಯಾರೂ ಲೇಖಕರು ಹೇಳಿದಂತೆ ""ಹೀಗೆ', ""ಎಂಬಂತೆ' ಪದ್ಯ ಬರೆಯುವ ಸಾಹಸ ಮಾಡಲಾರರು. ""ಹೀಗೆ', ""ಎಂಬಂತೆ' ಪದ್ಯಗಳನ್ನು ಬರೆಯುವವರ ಸಂಖ್ಯೆ ಹೆಚ್ಚಾಗುವುದಕ್ಕೆ ಅವರಿಗೆ ಅದಕ್ಕೊಂದು ಶಾಸ್ತ್ರ ವಿದೆ ಎಂಬ ಅರಿವಿಲ್ಲದಿರುವುದೇ ಕಾರಣ. ಯಕ್ಷಗಾನ ಪ್ರಪಂಚದ ವಿಷ್ಣು ವಾರಂಬಳ್ಳಿ, ಕುಂಬಳೆಯ ಪಾರ್ತಿಸುಬ್ಬ, ಪಾಂಡೇಶ್ವರ ವೆಂಕಟ, ಹಳೆಮಕ್ಕಿ ರಾಮ, ನಗಿರೆ ಸುಬ್ರಹ್ಮಣ್ಯ, ಮುದ್ದಣ ಮೊದಲಾದ ಬಹಳ ಹಿಂದಿನ ಕವಿಗಳು ಕೂಡ ಛಂದಸ್ಸಿನ ಅರಿವಿದ್ದೇ ಪ್ರಸಂಗವನ್ನು ಬರೆದವರು. ಅನಂತರ ಬಂದ ಮಹಾಕವಿಗಳು ಅದೇ ಮಾರ್ಗವನ್ನು ಅನುಸರಿಸಿದರು. ಆದರೆ ಅವುಗಳೆಲ್ಲಾ ಮೌಖೀಕವಾಗಿದ್ದು, ಅದೆಷ್ಟೋ ವರ್ಷಗಳ ಬಳಿಕ ಮುದ್ರಣಗೊಳ್ಳುವಾಗ ಅನೇಕ ಕಾರಣಗಳಿಂದ ಸಣ್ಣಪುಟ್ಟ ದೋಷಗಳು ಇರಲಾರವೆಂದೇನಲ್ಲ. ಇದ್ದರೂ ಅದಕ್ಕೆ ಕವಿ ಹೊಣೆಯಲ್ಲ. ಹಾಗೆಂದು ಹಿಂದಿನ ಅನೇಕ ಪ್ರಸಂಗಕರ್ತರು ಛಂದಃಶಾಸ್ತ್ರ ಪಾರಂಗತರಾಗಿರಲಿಕ್ಕಿಲ್ಲ ಎಂಬ ಲೇಖಕರ ಮಾತು ಸಮಂಜಸವಲ್ಲ. ಛಂದಸ್ಸಿನ ಪರಿಜ್ಞಾನವಿಲ್ಲದೆ ಇತ್ತೀಚೆಗೆ ಪ್ರಸಂಗ ಬರೆಯುವವರ ಸಂಖ್ಯೆ ಕಡಿಮೆ ಇಲ್ಲ. ಶಾಸ್ತ್ರದ ಪ್ರಜ್ಞೆ ಇರುವವರು ಅವುಗಳನ್ನು ಸ್ವೀಕರಿಸಲಾರರು. ಪರಂಪರೆಯ ಹಾಡು ಎಂದಾಗ ಕೆಲವು ಪದ್ಯಗಳು ಛಂದಸ್ಸಿಗೆ ನಿಷ್ಠವಾಗಿ ಇಲ್ಲದೇ ಇರುವುದನ್ನು ನಾನು ಗಮನಿಸಿದ್ದೇನೆ. ಹಾಗಾಗಬಾರದು. ಆ ಕುರಿತು ಸಮರ್ಥರು ಸಮಾಲೋಚನೆ ನಡೆಸಿ ಪರಂಪರೆ ಮತ್ತು ಛಂದಸ್ಸನ್ನು ಸಮನ್ವಯಗೊಳಿಸಿ ರಂಗದಲ್ಲಿ ಹಾಡನ್ನು ಸಾದರಪಡಿಸಿದರೆ ಸಾರ್ಥಕ ಪ್ರಯೋಗ ವೆಂದು ನಾನು ಭಾವಿಸುತ್ತೇನೆ.


      Share your views-post your Comment below
      blog comments powered by Disqus
      ತಾಜಾಸುದ್ದಿಗಳುಹೆಚ್ಚು ಒದಲ್ಪಟ್ಟಅತೀ ಹೆಚ್ಚು ಪ್ರತಿಕ್ರಿಯೆ
      image
      image
      • Copyright @ 2009 Udayavani.All rights reserved.
      • Designed & Hosted By 4cplus