ಡಾ| ಅನುರಾಧಾ ಕಾಮತ್ | Jan 25, 2013
ಮಗುವಿನ ಸಹಜ ಬೆಳವಣಿಗೆಯ ಮೈಲುಗಲ್ಲು ಹಾಗೂ ಹಂತಗಳ ಕುರಿತಾಗಿ ಮಾತೆಗೆ ಅರಿವಿದ್ದರೆ, ಯಾವುದೇ ವ್ಯತ್ಯಯ ಅಥವಾ ನಿಧಾನಗತಿಯ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಶೀಘ್ರದಲ್ಲಿಯೇ ಗಮನಿಸಿ, ತಜ್ಞ ವೈದ್ಯರಿಂದ ತಪಾಸಣೆ ನಡೆಸಲು ಸಹಕಾರಿಯಾಗುತ್ತದೆ.
.ಪುಟ್ಟ ಮಗುವು ಸಾಮಾನ್ಯ 10ರಿಂದ 16 ತಿಂಗಳುಗಳ ನಡುವೆ ನಡೆಯಲು ಆರಂಭಿಸುತ್ತದೆ.
.15 ತಿಂಗಳಿಗೆ ಮೊದಲು ಏಕಾಕ್ಷರಗಳ ವಿವಿಧ ಸ್ವರಗಳನ್ನು ಹೊರಡಿಸುವ ಪುಟಾಣಿಯು 16 ತಿಂಗಳು ಕಳೆಯುವಾಗ ಎರಡು ಅಕ್ಷರಗಳ್ಳುಳ್ಳ ಶಬ್ದಗಳನ್ನು ಉಲಿಯುತ್ತಾ, ತನ್ನ ತೊದಲುನುಡಿ ಮತ್ತು ಕೇಕೆಗಳಿಂದ ಮನೆಯಲ್ಲೆಲ್ಲಾ ಆನಂದ, ಸಂಭ್ರಮ ಪಸರಿಸುತ್ತದೆ!
.ಕಂದಮ್ಮನಿಗೆ ಮೂರೇ ತಿಂಗಳು ಕಳೆದಿದ್ದರೂ, ತನ್ನ ತಾಯಿ, ತಂದೆ, ಹಿರಿಯರು ತನ್ನನ್ನು ನೋಡಿ ನಕ್ಕರೆ ತಾನೂ ಬೊಚ್ಚುಬಾಯಿ ಅಗಲಿಸಿ ಮಲ್ಲಿಗೆಯಂತಹ ಶುಭ್ರ, ಮುಗ್ಧ ನಗುವನ್ನು ಹೊರಹೊಮ್ಮಿಸುತ್ತದೆ!
.ನಾಲ್ಕು ತಿಂಗಳು ಕಳೆಯುವಾಗ ವಸ್ತುಗಳನ್ನು ಸ್ಪಷ್ಟವಾಗಿ ಗುರುತಿಸುವ ಕೌಶಲ್ಯ ಪುಟ್ಟ ಮಗುವಿಗೆ ಕರಗತವಾಗಿರುತ್ತದೆ.
.5-6 ತಿಂಗಳು ಕಳೆದಾಗ ಇಷ್ಟದ ವಸ್ತು, ಆಟಿಕೆಗಳನ್ನು ಎತ್ತಿಕೊಳ್ಳುವುದು, ತಾಯಿ ಮಾತ್ರವಲ್ಲದೇ ಮನೆಯ ಇತರ ವ್ಯಕ್ತಿಗಳೊಂದಿಗೆ ಬೆರೆಯಲು ಆರಂಭಿಸುತ್ತದೆ.
.ಏಳು ತಿಂಗಳು ಕಳೆಯುವಾಗ ತನ್ನ ಹೆಸರು ಹಿಡಿದು ಕರೆದರೆ, ಅತ್ತ ತಿರುಗಿ ಸ್ಪಂದಿಸುತ್ತದೆ.
.ಒಂದು ವರ್ಷ ಕಳೆಯುವುದರೊಳಗೆ ಮಗುವು ಆಟಿಕೆಯೊಂದಿಗೆ ಆಡುತ್ತಾ ತಲ್ಲೀನವಾಗುತ್ತದೆ.
.ಒಂದರಿಂದ ಒಂದೂವರೆ ವರ್ಷದಲ್ಲಿ ತಾಯಿಯ ಮಾತುಗಳಿಗೆ ಸ್ಪಂದಿಸುವುದು, ದೇಹದ ಅವಯವಗಳ ಗುರುತಿಸುವಿಕೆ, ಹಿರಿಯರ ಅನುಕರಣೆ - ಇವೆಲ್ಲವೂ ಸಹಜ ಮೈಲಿಗಲ್ಲುಗಳು.
ಕೆಲವೊಮ್ಮೆ ವಯೋಸಹಜ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಮತ್ತು ಚಟುವಟಿಕೆಗಳು ಕಂಡುಬರದಿದ್ದರೆ ಸೂಕ್ತ ತಪಾಸಣೆ ಮತ್ತು ಔಷಧೋಪಚಾರ ನಡೆಸುವುದು ಅವಶ್ಯ.
ತಾಯಿ ಮತ್ತು ಮಗುವಿಗೆ ಉತ್ತಮ ಆರೋಗ್ಯ ರಕ್ಷಿಸಿಕೊಳ್ಳಲು ಸುಲಭವಾದ ಸೂತ್ರವೊಂದಿದೆ. ಅದೇ ಅಭ್ಯಂಗ ಸ್ನಾನ.
ಪ್ರಸವದ ಬಳಿಕ ಬಾಣಂತನ ಅವಧಿ ಮುಗಿಯುವವರೆಗೆ (ಕಡಿಮೆ ಪಕ್ಷ) ನಿತ್ಯವೂ ಬೆಚ್ಚಗಿನ ಔಷಧೀಯ ತೈಲ ಹಚ್ಚಿ , ಮಾಲೀಶು ಮಾಡಿ, ಬಳಿಕ ಉಷ್ಣ ಜಲದಿಂದ ಸ್ನಾನ ಮಾಡಿದರೆ ಪ್ರಸವದ ಬಳಿಕದ ಮೈಕೈನೋವು, ಸುಸ್ತು ಬಳಲಿಕೆ ನಿವಾರಣೆಯಾಗುತ್ತದೆ. ಅಂತೆಯೇ ಬಾಣಂತನದ ಅವಧಿಯಲ್ಲಿ ತೈಲಾಭ್ಯಂಗ ಮಾಡುವುದರಿಂದ ಮಾಂಸಖಂಡ, ಮೂಳೆ, ಸಂಧಿಗಳು ಸುದೃಢವಾಗಿ ಆರೋಗ್ಯ ವರ್ಧಿಸುತ್ತದೆ. ಅದೂ ಚಳಿಗಾಲದಲ್ಲಿ ಬಾಣಂತಿ ಹಾಗೂ ಮಗುವಿಗೆ ಕಡ್ಡಾಯವಾಗಿ ನಿತ್ಯ ಬೆಚ್ಚಗಿನ ಎಣ್ಣೆ ಹಚ್ಚಿ ಮಾಲೀಶು ಮಾಡಿ, ಉಷ್ಣ ಜಲದಿಂದ ಸ್ನಾನ ಮಾಡಿಸಿದರೆ ಹಿತಕರ. ತಾಯಿ ಮತ್ತು ಮಗುವನ್ನು ಬೆಚ್ಚಗಿನ ಬಟ್ಟೆಯಿಂದ ಹೊದಿಸಿ ದೇಹ ಚಳಿ, ಗಾಳಿಗೆ ಒಡ್ಡದಂತೆ ನೋಡುವುದು ಅವಶ್ಯ. ಸ್ನಾನದ ಬಳಿಕ ಲೋಭಾನದ ಧೂಪ ಹಾಕಿದರೆ ತಾಯಿಗೂ ಮಗುವಿಗೂ ನೆಗಡಿ, ಗಂಟಲುನೋವು, ಕೆಮ್ಮು ಉಂಟಾಗುವುದಿಲ್ಲ.
ಪ್ರಸವದ ಬಳಿಕ ಹಾರ್ಮೋನ್‌ಗಳ ವ್ಯತ್ಯಯದಿಂದ ಬಾಣಂತಿಯಲ್ಲಿ ಮಾನಸಿಕ ಖನ್ನತೆ ಕಾಣಿಸಿಕೊಳ್ಳುವುದು ಸಹಜ. ಅಂತೆಯೇ ಬಾಣಂತಿಸನ್ನಿ ಅಥವಾ ಹಿಸ್ಟೀರಿಯಾ ಕೂಡಾ ಬಾಣಂತನದ ಅವಧಿಯಲ್ಲಿ ಸ್ತ್ರೀಯರನ್ನು ಕಾಡುವ ಕಾಯಿಲೆ. ಹಿಸ್ಟೀರಿಯಾದ ಲಕ್ಷಣಗಳು ಬಂದಾಗ, ತೀವ್ರತರದ ಖನ್ನತೆ, ಚಟುವಟಿಕೆ ಕುಗ್ಗುವುದು, ನಿದ್ರಾಹೀನತೆ, ಉತ್ಸಾಹರಾಹಿತ್ಯ, ಶೀಘ್ರ ಕೋಪಗೊಳ್ಳುವುದು, ಭಯ, ಆತಂಕ ಇತ್ಯಾದಿಗಳು ಕಂಡುಬಂದಾಗ ಸೂಕ್ತ ತಪಾಸಣೆಯೊಂದಿಗೆ ಔಷಧೋಪಚಾರ, ಪೌಷ್ಟಿಕ ಆಹಾರ, ಅಧಿಕ ಕಾಳಜಿ, ಆರೈಕೆ ಅವಶ್ಯ.
"ಮಾತೃದೇವೋಭವ' ಎಂದು ಮಾತೆಗೆ ಮೊದಲ ನಮನ ಸಲ್ಲಿಸುವ, "ತಾಯಿಗಿಂತ ದೇವರಿಲ್ಲ' ಎಂದು ತಾಯಿಯನ್ನು ಕೊಂಡಾಡುವ ಸಂಸ್ಕೃತಿ ನಮ್ಮದು. ನವಮಾಸ ಮಗುವನ್ನು ಹೊತ್ತು ಹೆತ್ತು, ಬಳಿಕ ಪ್ರಸವದ ತೀವ್ರವೇದನೆಯನ್ನು ಅನುಭವಿಸಿಯೂ, ಮಗುವಿನ ಮುದ್ದು ಮುಖ ನೋಡಿದಾಕ್ಷಣ - ಅದೇ ಕ್ಷಣ ಎಲ್ಲ ಕಷ್ಟಕೋಟಲೆ ದುಃಖದುಮ್ಮಾನಗಳನ್ನು ಮರೆವ ಮಾತೆ ದೇವತೆ ಅಲ್ಲವೇನು?!
ಮಾಂಸದ ಮುದ್ದೆಯಂತಹ ಪುಟ್ಟ ಕಂದಮ್ಮನನ್ನು ಲಾಲಿಸಿ ಪಾಲಿಸಿ, ತನ್ನ ಹಗಲು ರಾತ್ರಿಗಳನ್ನು ಕಂದಮ್ಮನ ಆರೈಕೆ ಕಾಳಜಿಗಾಗಿ ಕಾಯ್ದಿಡುವ, ಮಗುವು ಬೆಳೆಯುವವರೆಗೆ ಕಣ್ಣಲ್ಲಿ ಕಣ್ಣಿಟ್ಟು ಸಾಕಿಸಲಹುವ, ಮಗುವು ಬೆಳೆದು ದೊಡ್ಡದಾದ ಬಳಿಕವೂ ಅಹರ್ನಿಶಿ ತನ್ನ ಮಗು (ಮಗ ಅಥವಾ ಮಗಳ) ಸರ್ವತೋಮುಖ ಬೆಳವಣಿಗೆಗೆ ಪ್ರಯತ್ನಿಸುವ, ಪ್ರಾರ್ಥಿಸುವ ತನಗೇ ತಾನೇ ಅರ್ಪಿಸಿಕೊಳ್ಳುವ "ಅಮ್ಮ'ನೆಂಬ ದೇವರಿಲ್ಲದಿದ್ದರೆ ಭುವಿಯ ಬದುಕು ಬರಡಾಗುತ್ತಿತ್ತು.
ಸೆŒ„ಣತ್ವದ ಹಿರಿಮೆಯೇ ಅಂತಹುದು!
ಮಾತೃತ್ವದ ಗರಿಮೆಯೇ ಅಂತಹುದು!
ಮಧುರ ಮಾತೃತ್ವ ಅನುಭವಿಸಿದ ತಾಯಿಯ ಪರಿಪೂರ್ಣತೆಯಷ್ಟೇ - ಮಧುರ ಮಾತೃತ್ವದ ಆರೆಕೈ ಪಡೆದ ಮಗುವಿನ ಬಾಳೂ ಪರಿಪೂರ್ಣ !