ಮಾಲತಿ ಡಿ. ಪುತ್ತೂರು | Jan 25, 2013
ಸುನಾದ ಸಂಗೀತ ಕಲಾ ಶಾಲೆ ತನ್ನ ಪುತ್ತೂರಿನ ಶಾಖೆಯ ವಾರ್ಷಿಕೋತ್ಸವವನ್ನು ಜನವರಿ 13, 14ರಂದು ಬಹಳ ವಿಜೃಂಭಣೆ ಯಿಂದ ಆಚರಿಸಿಕೊಂಡಿತು. ಸುದಾನ ವಸತಿ ಯುತ ಶಾಲಾ ಆವರಣದಲ್ಲಿ ಸಂಗೀತ ಶಾಲೆಯ ನಿರ್ದೇಶಕರಾದ ವಿ| ಕಾಂಚನ ಎ. ಈಶ್ವರ ಭಟ್ ಇವರು ದೀಪ ಬೆಳಗುವುದರೊಂದಿಗೆ ಉದ್ಘಾಟನೆಗೊಂಡಿತು. ಈ ಸಂದರ್ಭದಲ್ಲಿ ವಿ| ವಿ. ಎಸ್. ರಮೇಶ್, ಕೆ. ಆರ್. ಆಚಾರ್ಯ ಮೊದಲಾದವರು ಉಪಸ್ಥಿತ ರಿದ್ದರು."ಗುರುವಂದನಾ' ಕಾರ್ಯಕ್ರಮದ ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಗಾಯನ ಕಾರ್ಯಕ್ರಮ ಜರಗಿತು.
ಇಳಿ ಸಂಜೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಸಿಕೊಟ್ಟವರು ವಿ| ಮಾತಂಗಿ ಸತ್ಯಮೂರ್ತಿ ಕೊಟ್ಟಾಯಂ. ಇವರಿಗೆ ವಯಲಿನ್‌ನಲ್ಲಿ ವಿ| ಮತ್ತೂರು ಶ್ರೀನಿಧಿ, ಮೃದಂಗದಲ್ಲಿ ವಿ| ಕಾಂಚನ ಎ. ಈಶ್ವರ ಭಟ್, ಘಟಂನಲ್ಲಿ ವಿ| ಶ್ರೀಶೈಲ ಬೆಂಗಳೂರು, ಮೋರ್ಚಿಂಗ್‌ನಲ್ಲಿ ವಿ| ವಿ. ಎಸ್. ರಮೇಶ್ ಮೈಸೂರು ಸಹಕರಿಸಿದರು. ವಸಂತ ರಾಗದ ಪ್ರಸಿದ್ಧ ವರ್ಣ ನಿನ್ನುಕೋರಿಯೊಂದಿಗೆ ಆರಂಭ ಗೊಂಡ ಕಛೇರಿಯಲ್ಲಿ ಆ ಬಳಿಕ ಹಂಸಧ್ವನಿ ರಾಗದ ವರವಲ್ಲಭ ಕೃತಿ ಸುಂದರ ಆಲಾಪ, ಸ್ವರ ಕಲ್ಪನೆಗಳೊಂದಿಗೆ ಪ್ರಸ್ತುತಗೊಂಡಿತು. ಶುದ್ಧ ಸಾವೇರಿಯ ದಾರಿನಿಯ ಅನಂತರ ನಿನ್ನುನೇರನಮ್ಮಿನಾನುರಾ (ಪಂತುವರಾಳಿ ರಾಗ-ರೂಪಕ ತಾಳ) ವಿಸ್ತಾರವಾದ ಆಲಾಪನೆ, ಮನೋಧರ್ಮಯುತ ನೆರವಲ್ ಹಾಗೂ ಖಚಿತ ಸ್ವರಕಲ್ಪನೆಗಳ ಮೂಲಕ ನೆರೆದವರಲ್ಲಿ ವಿದ್ಯುತ್ ಸಂಚಾರ ಮೂಡಿಸಿತು. ಧ್ರುತಗತಿಯಲ್ಲಿ ರುದ್ರಪ್ರಿಯ ರಾಗದ ಅಂಬಾಪರದೇವತೆ ಮನಕ್ಕೆ ಮುದ ನೀಡಿತು.
ಮುಂದೆ ಪ್ರಧಾನ ರಾಗವಾಗಿ ಕಾಂಭೋಜಿ ತನ್ನ ವಿಸ್ತಾರಗಳನ್ನು, ಸಾಧ್ಯತೆಗಳನ್ನು ಅನಾವರಣ ಗೊಳಿಸಿತು. ಮಿಶ್ರಛಾಪು ತಾಳದಲ್ಲಿ ಪ್ರಸ್ತುತ ಗೊಂಡ ಕಾರಣಂ ವಿನಾಯಕಾಯ ಅದ್ಭುತವಾದ ನೆರವಲ್, ದಾಟು ಪ್ರಯೋಗಯುಕ್ತ ಲೆಕ್ಕಾಚಾರದ ಸ್ವರವಿನ್ಯಾಸಗಳಿಂದ ನೆರೆದ ಸಂಗೀತ ಶ್ರೋತೃಗಳಿಗೆ ಕರ್ಣಾನಂದ ವನ್ನುಂಟುಮಾಡಿತು. ತದನಂತರ ಮೂಡಿಬಂದ ತನಿ ಆವರ್ತನ ಅದ್ಭುತ ಲಯವಿನ್ಯಾಸ, ಮೃದಂಗ, ಘಟ ಹಾಗೂ ಮೋರ್ಚಿಂಗ್‌ಗಳ ಸಮ್ಮಿಲನ ದಿಂದ ಮೂಡಿದ ನಾದಾನುಭವ ಜನ ಮನ್ನಣೆ ಪಡೆಯಿತು.
ಭಾವಪೂರ್ಣವಾಗಿ ಕಾನಡ ರಾಗದ ಪ್ರಸಿದ್ಧ ಕೃತಿ ಅಲೈಪಾಯುದೆಯ ಪ್ರಸ್ತುತಿಯ ಬಳಿಕ ಖರಹರಪ್ರಿಯ ರಾಗ ದಲ್ಲಿ ರಾಗ-ತಾನ-ಪಲ್ಲವಿ ಮಾಮರುಗನೆ, ಮುರುಗನೆ ರುಗನೆ ಉಮಯಾಳ್ ಮಗನೆ ಅರುಳ್ದಿರ್- ಖಂಡ ತ್ರಿಪುಟವಜ್ಯì ಪ್ರಯೋಗ ಗಳು, ಭಾವ ಪೂರ್ಣ ಆಲಾಪನೆ, ಧ್ರುತ ಗತಿಯಲ್ಲಿ ತಾನ, ರಾಗಮಾಲಿಕೆಯಲ್ಲಿ ಕಲ್ಪನಾ ಸ್ವರ ಪ್ರಸ್ತುತಿ ಕಲಾವಿದರ ವಿದ್ವತ್ತಿಗೆ ಸಾಕ್ಷಿ ಯಾಯಿತು. ಸಿಂಧು ಭೈರವಿಯ ವೆಂಕಟಾಚಲದ ಬಳಿಕ ಮಂಗಳ ದೊಂದಿಗೆ ನಾಲ್ಕು ತಾಸುಗಳ ಕಾಲ ನಡೆದ ಅದ್ಭುತ ಕಛೇರಿ ಸಂಪನ್ನಗೊಂಡಿತು.