Udayavani | Jan 25, 2013
ಬೆಣ್ಣೆ ಕದ್ದನಮ್ಮಾ ನಿನ್ನ ಮುದ್ದು ಕೃಷ್ಣ ನಮ್ಮನೆಯ ಬೆಣ್ಣೆ ಕದ್ದನಮ್ಮಾ.....
ಅಂತ ಪಕ್ಕದಮನೆಯಾಕೆ ಯಶೋದೆಗೆ ಕೃಷ್ಣನ ಮೇಲೆ ದೂರಿದಳು. ಬಾಲಕೃಷ್ಣ ಮುಗುಳ್ನಗುತ್ತಲೇ ಅಲ್ಲಿಂದ ಕಾಲ್ಕಿತ್ತಿದ್ದ. ಯಶೋದೆ ಬಿಡುವಳೆ. ಮಗನ ಬೆನ್ನಿಗೆ ಬಿದ್ದಳು.
ಕೃಷ್ಣಯ್ಯ...ಕೃಷ್ಣಯ್ಯ ಅಂತ ಓಡಿದಳು.
ಶ್ರೀಕೃಷ್ಣನ ಅವತಾರವೆತ್ತಿದ್ದ ಭಗವಂತ, ಅಮ್ಮನ ಕೈಗೆ ಸಿಕ್ಕಂತೆ ಸಿಕ್ಕಿ, ಮತ್ತೆ ಕೈ ತಪ್ಪಿಸುತ್ತ, ಆ ಮನೆ ಈ ಮನೆ, ಮರಗಿಡ, ಇಡೀ ನಂದಗೋಕುಲವೆಲ್ಲಾ ಸುತ್ತಾಡಿಸಿದ. ಶ್ರೀಕೃಷ್ಣನ ಹಿಂದಿಂದೆ ಓಡಿ...ಓಡಿ.... ಯಶೋದಾ ಸುಸ್ತಾದಳು. ಅಮ್ಮ ಬಳಲಿದ್ದಾಳೆಂದು ಅರಿತ ಶ್ರೀಕೃಷ್ಣ, ಯಶೋದೆಯ ಕೈಗೆ ಸಿಕ್ಕಿಬಿಟ್ಟ. ಬಾಲಕೃಷ್ಣನನ್ನು ಕಂಕುಳಲ್ಲಿಟ್ಟುಕೊಂಡೆ, ಬಾ ಮನೆಯಲ್ಲಿ ನಿನ್ನ ಒರಳುಕಲ್ಲಿಗೆ ಕಟ್ಟಿಹಾಕುವೆ. ನಿನ್ನ ತುಂಟತನದಿಂದ ದಿನವೂ ದೂರುಗಳೇ ದೂರುಗಳು. ನಂಗೆ ಸಾಕು ಸಾಕಾಗಿದೆ ಮಗನೆ. ನಿಂಗೆ ಅಮ್ಮನ ಮುದ್ದು ಜಾಸ್ತಿ ಆಯಿತು. ಚಿಕ್ಕವನು ಅಂದುಕೊಂಡರೆ ವಯಸ್ಸಿಗೆ ಮೀರಿದ ಕೆಲಸಗಳನ್ನು ಮಾಡ್ತೀಯಾ, ಮರ ಹತ್ತು¤ತೀಯಾ, ಬೆಟ್ಟ ಹತ್ತು¤ತೀಯಾ, ಸಾಹಸಗಳು ಬೇಡ, ಅವೆಲ್ಲಾ ಅಪಾಯವೆಂದರೂ ಕೇಳಲ್ಲ. ಮಕ್ಕಳನ್ನು ತುಂಬಾ ಮುದ್ದು ಮಾಡಿದರೂ ಹಾಳಾಗ್ತಾರಂತೆ, ಹೀಗೆ ಬಿಟ್ಟರೆ ನೀನೂ ಕೆಟ್ಟ ಹೆಸರು ತರುವೆ ಈ ನಿನ್ನಮ್ಮ¾ನಿಗೆ, ಹೇಗಾದರೂ ಮಾಡಿ ಹೊಡೆದೋ ಬಡಿದೋ ನಿನ್ನ ಒಳ್ಳೆ ದಾರಿಗೆ ತಂದುಕೊಬೇಕೆಂದು ಮನಸಲ್ಲಿ ಯೋಚಿಸುತ್ತಲೇ ಹಗ್ಗ ಕೈಗೆ ಹಿಡಿದು ಒರಳುಕಲ್ಲಿನ ಸಮೀಪ ಬಂದಳು.
ಹಗ್ಗವನ್ನು ಹೊರಳು ಕಲ್ಲಿಗೆ ಕಟ್ಟಿ, ಅದರ ಮತ್ತೂಂದು ತುದಿಯನ್ನು ಶ್ರೀಕೃಷ್ಣನ ಸೊಂಟಕ್ಕೆ ಕಟ್ಟಲು ಬಂದಳು ಯಶೋದೆ.
ಆದರೆ, ಹಗ್ಗ ಶ್ರೀಕೃಷ್ಣನ ಸೊಂಟಕ್ಕೆ ಕಟ್ಟಲು ಎರಡಿಂಚು ಉದ್ದ ಕಡಿಮೆ ಬಂತು. ಮತ್ತೂಂದು ಹಗ್ಗ ತಂದು ಆದನ್ನು ಮೊದಲಿನ ಹಗ್ಗಕ್ಕೆ ಸೇರಿಸಿ ಕಟ್ಟಿದಳು. ಆಗಲೂ ಎರಡಿಂಚು ಕಡಿಮೆಯಾಗಿ, ಕಟ್ಟಲಾಗಲಿಲ್ಲ. ಹೀಗೆ ಮನೆಯಲ್ಲಿರುವ ಎಲ್ಲ ಹಗ್ಗಗಳು ತಂದು ಕಟ್ಟುತ್ತಿದ್ದಳು. ಬಾಲಕೃಷ್ಣ ಮುಗುಳ್ನಗುತ್ತಲೇ ಅಮ್ಮನಿಗೆ ಇನ್ನು ತೊಂದರೆ ಕೊಡುವುದು ಬೇಡವೆಂದು ಬಗೆದು, ಅಮ್ಮನ ಕೈಯಲ್ಲಿ ಸೊಂಟಕ್ಕೆ ಹಗ್ಗವನ್ನು ಕಟ್ಟಿಸಿಕೊಂಡು ಸುಮ್ಮನೆ ಗುಮ್ಮನಂತೆ ಕುಳಿತ.
'ಬಾಲಯ್ಯ ಈಗ ಹೇಗೆ ಹೊರಗೆ ಹೋಗುವೆ? ಬೆಣ್ಣೆ, ಮೊಸರು ಕದಿಯುವೆ ನೋಡ್ತೀನಿ' ಅಂದುಕೊಂಡು ಮನೆಕೆಲಸದಲ್ಲಿ ನಿರತಳಾದಳು.
ಶ್ರೀಕೃಷ್ಣ ಒರಳುಕಲ್ಲನ್ನೂ ಎಳೆದುಕೊಂಡು ಮನೆಯಂಗಳಕ್ಕೆ ಬಂದ. ತುಂಬಾ ವರ್ಷಗಳಿಂದ ನಿಂತಿದ್ದ ಎರಡು ಶಾಪಗ್ರಸ್ತ ಮರಗಳು ಕಣ್ಣಿಗೆ ಬಿದ್ದವು. ಅವುಗಳು ಅಂದು ಶಾಪ ವಿಮೋಚನೆಗಾಗಿ ಕಾಯುತ್ತಿತ್ತು. ಶ್ರೀಕೃಷ್ಣ ಅಮ್ಮ ಕಟ್ಟಿ ಹಾಕಿದ ಒರಳು ಕಲ್ಲನ್ನು ಆ ಎರಡು ಮರಗಳ ನಡುವೆ ಎಳೆದುಕೊಂಡು ಹೊರಟ. ಅವು ಬುಡ ಸಮೇತ ಕಿತ್ತು ಬಂತು. ಕೂಡಲೇ ಆ ಮರದ ಬುಡಗಳಿಂದ ಇಬ್ಬರು ಯುವಕರು ಹೊರಬಂದು ಕೃಷ್ಣನಿಗೆ ಕೈಮುಗಿದರು.
ಅವರಿಬ್ಬರು ಕುಬೇರನ ಮಕ್ಕಳು. ಒಂದು ದಿನ ಕಾಲದಲ್ಲಿ ಅವರಿಬ್ಬರು ತುಂಬಾ ಗರ್ವಿಗಳು. ಅಹಂಕಾರಿಗಳು. ಹಣದ ಮದ ಅವರನ್ನು ಆವರಿಸಿಬಿಟ್ಟಿತ್ತು. ಯಾರನ್ನು ಗೌರವಿಸುತ್ತಿರಲಿಲ್ಲ. ಯಾರ ಮಾತನ್ನು ಲೆಕ್ಕಿಸುತ್ತಿರಲಿಲ್ಲ. ಒಂದು ದಿನ ಅವರಿಬ್ಬರು ಉದ್ಯಾನವನದಲ್ಲಿ ಕುಡಿದು ಕುಪ್ಪಳಿಸುತ್ತಿ¤ದ್ದರು. ಕುಡಿದ ಅಮಲಿನಲ್ಲಿ ಮೈಮೇಲೆ ಬಟ್ಟೆಗಳು ಇಲ್ಲದಿರುವುದು ಅವರಿಗೆ ತಿಳಿಯಲಿಲ್ಲ. ಆ ಮಟ್ಟದಲ್ಲಿ ಅವರು ಕುಣಿಯುತ್ತಿದ್ದರು. ನಾರದ ಮಹರ್ಷಿಗಳು ಅಲ್ಲಿಗೆ ಬಂದರೂ ಲೆಕ್ಕಿಸಲಿಲ್ಲ. ಆ ಅಜ್ಞಾನಿಗಳಿಗೆ ಬುದ್ದಿ ಕಲಿಸಬೇಕೆಂದು ಎಣಿಸಿದ ನಾರದ ಮಹರ್ಷಿಗಳು ಹೀಗೆ ಹೇಳಿದರು.
'ಹಣಗರ್ವ ಎಷ್ಟು ದೊಡ್ಡವರನ್ನಾದರೂ ಸರ್ವನಾಶ ಮಾಡುತ್ತೆ. ಹಣದ ಮದದಲ್ಲಿರುವವರು ಕೆಟ್ಟ ಕೆಲಸಗಳು, ಪಾಪಕಾರ್ಯಗಳು ಮಾಡುವುದೇ ಹೆಚ್ಚು. ಅವರಿಗೆ ಹಿರಿಯರೆಂಬ ಗೌರವ ಇರಲ್ಲ. ಅಹಂಕಾರದಿಂದ ನಿರ್ದಯಿಗಳಾಗುತ್ತಾರೆ. ಕೆಲ ಕ್ಷಣಗಳ ಸುಖವನ್ನೇ ಅವರು ಶಾಶ್ವತವೆಂದು ಬಗೆದು, ಪರಮಾನಂದದಲ್ಲಿ ಮುಳುಗಿಬಿಡುತ್ತಾರೆ. ಪಾನಮತ್ತೆಯಲ್ಲಿ ನಗ್ನರಾಗಿರುವ ಇವರಿಬ್ಬರಿಗೂ ಬುದ್ದಿ ಕಲಿಸಬೇಕು. ಮತ್ತೆಂದು ಇಂತ ಹೇಯ ಕೆಲಸಗಳನ್ನು ಮಾಡಬಾರದು. ಅದಕ್ಕೆ ಇವರಿಬ್ಬರು ಕೆಲ ವರ್ಷಗಳು ಮರಗಳಾಗಿ ಬದುಕಬೇಕು. ನಾಲ್ಕು ಜನಕ್ಕೆ ನೆರಳು ಕೊಡಬೇಕು. ಹಕ್ಕಿಗಳಿಗೆ ಆಸರೆಯಾಗಬೇಕು. ಹಣ್ಣು ಕೊಟ್ಟು ಆಹಾರವಾಗಬೇಕು. ಒಳ್ಳೆಯದನ್ನು ಕಲಿಯಬೇಕು. ಆ ನಂತರ ಶ್ರೀಕೃಷ್ಣನ ಕೃಪೆಯಿಂದ ಶಾಪ ವಿಮೋಚನರಾಗಿ, ಕೃಷ್ಣಭಕ್ತರಾಗಬೇಕು' ಎಂದು ನಾರದ ಮಹರ್ಷಿಗಳು ಶಾಪ ಕೊಟ್ಟುಬಿಡುತ್ತಾರೆ. ಅವರಿಬ್ಬರು ನಂದಗೋಕುಲದ ಶ್ರೀಕೃಷ್ಣನ ಅಂಗಳದಲ್ಲಿ ಎರಡು ಗಿಡಗಳಾಗಿ ಹುಟ್ಟಿ, ಬಹುಕಾಲ ಮರಗಳಾಗಿ ಬಾಳುತ್ತವೆ. ಶ್ರೀಕೃಷ್ಣ ದಿನವೂ ಮರವೇರಿ ಆಡುತ್ತಾನೆ ಹಣ್ಣು ಕೊಯ್ಯುತ್ತಾನೆ. ಅವರಿಗೆ ವಿಮೋಚನೆಯ ಕಾಲ ಸಮೀಪಿಸಲಿ ಅಂತ ಕಾಯುತ್ತಾನೆ. ಆ ರೀತಿ ಶಾಪದಿಂದ ಮರಗಳಾಗಿ ಹುಟ್ಟಿದ್ದವರೆ ಈ ಇಬ್ಬರು ಯುವಕರು.
ಹಣ, ಅಂತಸ್ತು, ಅಧಿಕಾರ ನಶ್ವರ. ಒಳ್ಳೆತನವೇ ಶಾಶ್ವತವಾದುದು. ಕೈಲಾದರೆ ಒಳ್ಳೇದು ಮಾಡಬೇಕು. ಆಗದಿದ್ದರೆ ಸುಮ್ಮನಿರಬೇಕು ಕೆಟ್ಟದ್ದಂತೂ ಮಾಡಲೇಬಾರದು ಎಂಬುದಕ್ಕೆ ನಿದರ್ಶನವೇ ಈ ಕುಬೇರನ ಮಕ್ಕಳು.
ಅಷ್ಟರಲ್ಲಿ ಯಶೋದೆ ಕೆಲಸ ಮುಗಿಸಿ ನಡುಮನೆಗೆ ಬಂದರೆ, ಅಲ್ಲಿ ಮಗನೂ ಇಲ್ಲ. ಆತನನ್ನು ಕಟ್ಟಿ ಹಾಕಿದ್ದ ಒರಳು ಕಲ್ಲು ಇಲ್ಲ. ಹೊರ ಬಂದು ನೋಡಿದರೆ ಮಗ ಉರುಳಿಸಿದ್ದ ಮರದ ಬುಡದ ಮೇಲೆ ಒರಳುಕಲ್ಲು ಸಮೇತ ಕುಳಿತಿದ್ದ.
ಹೇ.... ಭಗವಾನ್....... ಈ ತುಂಟಕೃಷ್ಣನನ್ನು ಹೇಗೆ ದಂಡಿಸಲಿ. ಓ ಪರಮಾತ್ಮ... ಈ ಮುದ್ದು ಕೃಷ್ಣನನ್ನು ಹೇಗೆ ದಂಡಿಸಲಿ ಅಂತ ಸೊಂಟಕ್ಕೆ ಕಟ್ಟಿದ್ದ ಹಗ್ಗ ಬಿಚ್ಚಿ ಮಗನನ್ನು ಎತ್ತಿ ಮುದ್ದಾಡಿದರು.
-ಬಿ.ವಿ.ಅನುರಾಧಾ