Udayavani | Jan 26, 2013
ದಿಗಂತ್ ಡೇಟ್ ಕೊಡಲಿಲ್ಲ; ಕರಣ್ 'ಪಾನೀಪುರಿ' ತಿನಿಸಲಿಲ್ಲ
ಇದು ಮತ್ತೂಂದು ವಿವಾದದ ಮುನ್ಸೂಚನೆ. ವಿವಾದದ ಕೇಂದ್ರ ಬಿಂದು ನಟ ದಿಗಂತ್ ...
ವಿಷಯ ಏನಪ್ಪಾ ಅಂದರೆ, 'ಕನಸುಗಾರ' ಎಂಬ ಚಿತ್ರ ಮಾಡಿದ್ದ ನಿರ್ದೇಶಕ ಕರಣ್, ದಿಗಂತ್ ಅಭಿನಯದಲ್ಲಿ ಸಿನಿಮಾ ಮಾಡೋಣ ಎಂದು ಮೂರು ವರ್ಷದ ಹಿಂದೆ ಹೋದರಂತೆ. ಕಥೆ ಹೇಳಿದ್ದು, 23 ಲಕ್ಷ ಸಂಭಾವನೆ ಮಾತಾಡಿದ್ದು, ಮುಂಗಡವಾಗಿ ಮೂರು ಲಕ್ಷ ಕೊಟ್ಟಿದ್ದು, ಕರಣ್ ನಿರ್ದೇಶನದಲ್ಲಿ ದಿಗಂತ್ ಸಿನಿಮಾ ಮಾಡುತ್ತಾರೆ ಎಂದು ಸುದ್ದಿಯಾಗಿದ್ದು ... ಎಲ್ಲಾ ಆಗಿದೆ. ಆದರೆ, ಇದುವರೆಗೂ ಚಿತ್ರ ಮಾತ್ರ ಸೆಟ್ಟೇರಿಲ್ಲ ಎಂಬುದು ಕರಣ್ ಬೇಸರ.
ಕರಣ್ ಹೇಳುವಂತೆ ಅವರು ದಿಗಂತ್‌ರನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದು 2010ರ ಜನವರಿಯಲ್ಲಿ. ಆಗಲೇ ಕಥೆ ಹೇಳಿ ಒಪ್ಪಿಸಿದರಂತೆ. ದಿಗಂತ್ ಕಥೆ ಕೇಳಿ ಏಪ್ರಿಲ್‌ಗೆ ಡೇಟ್‌ಗೆ ಕೊಡುವುದಾಗಿ ಹೇಳಿದರಂತೆ. ನಂತರ ಏಪ್ರಿಲ್ ಇದ್ದಿದ್ದು ಜೂನ್, ನಂತರ ಸೆಪ್ಟೆಂಬರ್, ಕೊನೆಗೆ 2011ರವರೆಗೂ ಕಾಲ್‌ಶೀಟ್ ಮುಂದಕ್ಕೆ ಹೋಯಿತಂತೆ. ಈ ಸಮಯದಲ್ಲಿ ಕರಣ್, ಜೋಶ್ವಾ ಶ್ರೀಧರ್ ಸಂಗೀತ ನಿರ್ದೇಶನದಲ್ಲಿ ಹಾಡುಗಳನ್ನು ಕಂಪೋಸ್ ಮಾಡಿಸಿದ್ದಾರೆ. ಚಿತ್ರಕ್ಕೆ ನಿಧಿ ಸುಬ್ಬಯ್ಯರನ್ನು ಆಯ್ಕೆ ಮಾಡಿದ್ದೂ ಆಗಿದೆ. ಆದರೆ, ದಿಗಂತ್ ಮಾತ್ರ ಕರಣ್ ಕೈಗೆ ಸಿಗಲಿಲ್ಲವಂತೆ. 2011 ಮುಗಿದು 2012ರ ಮೇ ಬಂದರೂ ಯಾವಾಗ ದಿಗಂತ್‌ರಿಂದ ಸುದ್ದಿ ಬರಲಿಲ್ಲವೋ, ಆ ನಂತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ, ಕನ್ನಡ ಚಿತ್ರ ಕಲಾವಿದರ ಸಂಘಕ್ಕೆ ದೂರು ನೀಡಿದರಂತೆ.
'ದೂರು ನೀಡಿದ ಮರುದಿನವೇ, ಅಂದರೆ ಮೇ 18ಕ್ಕೆ ದಿಗಂತ್ ನಿರ್ಮಾಪಕರ ಸಂಘದಿಂದ ದೂರು ಪ್ರತಿಯನ್ನು ಪಡೆದ ದಿಗಂತ್ ಮತ್ತೆ ಎರಡು ತಿಂಗಳ ಕಾಲ ಆಟ ಆಡಿಸಿದರು. ಅವರು ಫೋನ್ ಪಿಕ್ ಮಾಡಲ್ಲ, ಅವರ ಮ್ಯಾನೇಜರ್ ಮುತ್ತು ಸರಿಯಾಗಿ ಸಹಕರಿಸುವುದಿಲ್ಲ. ನಿರ್ಮಾಪಕ ಸಂಘಕ್ಕೆ ದೂರು ಕೊಟ್ಟು ಏಳು ತಿಂಗಳ ನಂತರವೂ ಯಾವಾಗ ಏನೂ ಉತ್ತರ ಬರಲಿಲ್ಲವೋ ಮತ್ತೆ ಸಂಘಕ್ಕೆ ಹೋದೆ. ಆದರೆ, ಅಲ್ಲೂ ದಿಗಂತ್ ಸಹಕರಿಸುತ್ತಿಲ್ಲ ಎಂದರು' ಎನ್ನುತ್ತಾರೆ ಕರಣ್.
ಇದೆಲ್ಲದರಿಂದ ಸುಸ್ತಾಗಿದ್ದರಂತೆ ಕರಣ್. 'ಮೂರು ವರ್ಷ ವೇಸ್ಟ್ ಆಗಿದೆ. ಚಿತ್ರಕ್ಕಾಗಿ ಆಫೀಸ್ ತೆರೆದೆ. ಹಾಡುಗಳ ಮುದ್ರಣ ಮಾಡಿಸಿಕೊಂಡೆ. ಈಗ ಅದೇ ಕಥೆಯನ್ನು ಬೇರೆಯವರಿಗೆ ಮಾಡೋಣ ಎಂದರೆ ಯಾರು ಡೇಟ್ ಕೊಡುತ್ತಾರೆ ಹೇಳಿ? ದಿಗಂತ್ ನನ್ನ ಜೀವನವನ್ನೇ ಹಾಳು ಮಾಡಿಬಿಟ್ಟರು. ನನಗೆ ಕಾಲ್‌ಶೀಟೂ ಸಿಗಲಿಲ್ಲ, ಕೊಟ್ಟ ಅಡ್ವಾನ್ಸ್ ಸಹ ವಾಪಸ್ಸು ಬಂದಿಲ್ಲ. ದುಡ್ಡು ತಗೊಂಡು ಎಸ್ಕೇಪ್ ಆಗಿಬಿಟ್ಟಿದ್ದಾರೆ' ಎನ್ನುತ್ತಾರೆ.
ದಿಗಂತ್ ಹೋಗಿದ್ದಾದರೂ ಎಲ್ಲಿಗೆ ಎಂದು ಅವರಿಗೆ ಫೋನ್ ಮಾಡಿದರೆ, ಅವರ ಫೋನು 'ಟೆಂಪೊರರಿ ಔಟ್ ಆಫ್ ಸರ್ವೀಸ್ ...' ಎಂಬ ಉತ್ತರ ಕೊಡುತ್ತದೆ.