Udayavani | Jan 26, 2013
ಗುರುವಾರ, 22ಜನವರಿ 1998.
ಸಂಜೆ ಗವೀಪುರಂ ಗಲ್ಲಿಯಲ್ಲೊಬ್ಬ ತರುಣ ಆತಂಕದಿಂದ ಚಡಪಡಿಸುತ್ತಿದ್ದ. ಭಯಂಕರ ಗೊಂದಲದಿಂದ ತಲೆಕೆದರಿಕೊಂಡು ಓಡಾಡುತ್ತಿದ್ದ. ಅವನ ಮುಂದೆ ಅವನೇ ಕೂತು ರೂಪಿಸಿದ ರಾಶಿ ರಾಶಿ ಪೋಸ್ಟರುಗಳಿದ್ದವು. ಅವನ್ನು ಅಂಟಿಸಲು ಹುಡುಗರೇ ಇರಲಿಲ್ಲ. ಅವನೇ ಗೆಳೆಯರನ್ನು ಕರೆದುಕೊಂಡು ಗಾಂಧೀನಗರದ ಗಲ್ಲಿಗಳಲ್ಲಿ ಅಲೆಯುವುದೆಂದು ನಿರ್ಧರಿಸಿದ್ದ. ನಾಳೆ ಎಂಬುದು ಭೀಕರ ಸತ್ಯದಂತೆ, ಕ್ರೂರ ವಾಸ್ತವದಂತೆ ಕಾಣುತ್ತಿತ್ತು. ಫುಲ್ ಆಫ್ ಕನ್‌ಫ್ಯೂಷನ್.
ಅವನ ಸಿನಿಮಾ ನೋಡಿದ ಗಾಂಧೀನಗರದ ಮಂದಿ ಅದೊಂದು ಸಿನಿಮಾವೇ ಅಲ್ಲ ಅಂದಿದ್ದರು. ಅಂಥ ಚಿತ್ರಗಳನ್ನು ಪ್ರೇಕ್ಷಕ ಒಪ್ಪುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು. ಕೂದಲು ಕೆದರಿಕೊಂಡು ಗಡ್ಡ ಬಿಟ್ಟುಕೊಂಡು ಹಳೇ ಸ್ಲಿಪರ್, ದೊಗಲೆ ಅಂಗಿ, ಕೊಳೆಯಾದ ಪ್ಯಾಂಟು ಹಾಕಿಕೊಂಡು ಅವನು ನಕ್ಷತ್ರ ನೋಡುತ್ತಾ ಕೂತಿದ್ದ.
ಅದೇ ಹೊತ್ತಿಗೆ ಮತ್ತೂಬ್ಬ ಗುಂಗುರು ಕೂದಲಿನ ತರುಣ ಗಿಟಾರಿನ ಮೇಲೆ ಕೈಯಾಡಿಸುತ್ತಾ ಕೂತಿದ್ದ. ಅವನ ಸ್ಥಿತಿಯೂ ಮೊದಲನೇ ತರುಣದ ಸ್ಥಿತಿಗಿಂತ ಭಿನ್ನವಾದದ್ದೇನೂ ಆಗಿರಲಿಲ್ಲ. ಮೊದಲ ತರುಣನಿಗೆ ಒಂದಷ್ಟು ಅಭಿಮಾನಿಗಳಾದರೂ ಇದ್ದರು. ಈತನಿಗೆ ಇದ್ದದ್ದು ಚೆಂದದ ಮುಖ, ಗುಂಗುರು ಕೂದಲು. ಮುಗುಳ್ನಗೆ ಮತ್ತು ಕುಸಿಯುತ್ತಿದ್ದ ಆತ್ಮವಿಶ್ವಾಸ ಮಾತ್ರ.
ಮೊದಲ ತರುಣನ ಗೆಲುವಿನ ಮೇಲೆ, ಈತನ ಗೆಲುವೂ ನಿಂತಿತ್ತು. ಅವನು ಕುಸಿದರೆ ಇವನೂ ಕುಸಿಯುತ್ತಿದ್ದ. ಹೀಗೆ ಒಬ್ಬರನ್ನೊಬ್ಬರು ಆತುಕೊಂಡು ನಿಂತು, ಬೆಳಗಾಗುವುದಕ್ಕೆ ಕಾಯತೊಡಗಿದರು.
ಶುಕ್ರವಾರ, 23 ಜನವರಿ 1998.
ಎಂದಿನಂತೆ ಬೆಳಗಾಯಿತು. ಹತ್ತುಗಂಟೆಯೂ ಆಯಿತು. ಜನ ಚಿತ್ರಮಂದಿರಕ್ಕೆ ಬಂದರು. ಸಿನಿಮಾ ನೋಡಿದರು. ನಿರಾಸೆಯಿಂದ ಮರಳಿದರು. ಮತ್ತೂಂದು ಉಲ್ಕಾಪಾತ ಆಯಿತು. ಕುಂದಾಪುರದ ಅವನೂ ಮಂಗಳೂರಿನ ಇವನೂ ಸೋತ ಮುಖ ಹಾಕಿಕೊಂಡು, ಕಣ್ಣೀರು ಕೆನ್ನೆಗಿಳಿಯದಂತೆ ಕಾದುಕೊಂಡು ಹತಾಶರಾಗಿ ಮನೆಗೆ ಬಂದು ಇಲ್ಲಿಗೆ ಒಂದು ಅಧ್ಯಾಯ ಮುಕ್ತಾಯವಾಯಿತು ಅಂದುಕೊಂಡರು.
ಆದರೆ ಪವಾಡವೊಂದು ಸಂಭವಿಸಿತು. ಬೆಳಗ್ಗೆ ಸಿನಿಮಾ ನೋಡಿ ತಲೆಕೆಡಿಸಿಕೊಂಡು ಹೋದವರು ಮಧ್ಯಾಹ್ನ ಮತ್ತೆ ಬಂದರು. ಥೇಟರಿಗೆ ನುಗ್ಗಿದರು. ಮ್ಯಾಟಿನಿ ಮತ್ತು ಮೊದಲನೇ ಆಟಕ್ಕೂ ಅವರದೇ ಭರಾಟೆ. ಸೆಕೆಂಡ್ ಷೋ ಭರ್ತಿಯಾಯಿತು. ಲಾಠಿಚಾರ್ಜು ಆಗವಷ್ಟು ಗಲಾಟೆ.
ಮುಂದಿನ ಶುಕ್ರವಾರದ ಪತ್ರಿಕೆಯಲ್ಲಿ ಎ ಸ್ಟಾರ್ ಈಸ್ ಬಾರ್ನ್ ಎಂಬ ಲೇಖನವೊಂದು ಪ್ರಕಟವಾಯಿತು.
ಹಾಗೆ ರಾತ್ರೋರಾತ್ರಿ ಸ್ಟಾರ್ ಆದ ತರುಣ ಉಪೇಂದ್ರ. ಅವನ ಜೊತೆಗೆ ತಲ್ಲಣಿಸಿದ್ದ ಮತ್ತೂಂದು ಜೀವದ ಹೆಸರು ಗುರುಕಿರಣ್. ಈ ಘಟನೆ ಸಂಭವಿಸಿ ಮೊನ್ನೆಗೆ ಸರಿಯಾಗಿ ಹದಿನೈದು ವರುಷ.
ಅಲ್ಲಿಂದಾಚೆ ಸುಮಾರು ಎಂಬತ್ತು ಚಿತ್ರಗಳಿಗೆ ಗುರು ಸಂಗೀತ ನೀಡಿದ್ದಾರೆ. ಉಪೇಂದ್ರ ಸುಮಾರು 45 ಸಿನಿಮಾಗಳಲ್ಲಿ ನಟಿಸಿದ್ದಾರೆ. ನಿರ್ದೇಶಿಸಿದ ಚಿತ್ರಗಳ ಸಂಖ್ಯೆ ಹತ್ತನ್ನು ಸಮೀಪಿಸುತ್ತಿದೆ. ಇವತ್ತು ಇವರಿಬ್ಬರೂ ತಮ್ಮದೇ ದಾರಿಯಲ್ಲಿ ಸಾಗಿದ್ದಾರೆ. ಹೊಸತನಕ್ಕೆ ಹೆಸರಾಗಿದ್ದಾರೆ.
ಆ ರಾತ್ರಿ ಅವರು ಅನುಭವಿಸಿದ ಯಾತನೆ, ಆತಂಕ ಮತ್ತು ಭರವಸೆಯನ್ನು ಇವತ್ತಿನ ತರುಣ ನಿರ್ದೇಶಕರೂ ನಾಯಕರೂ ಸಂಗೀತ ನಿರ್ದೇಶಕರೂ ಅನುಭವಿಸುತ್ತಿರಬಹುದು. ಆದರೆ ಉಪೇಂದ್ರ ಆ ದಿನ ಇಡೀ ಚಿತ್ರರಂಗವನ್ನೇ ಅಲ್ಲಾಡಿಸುವಂಥ ಚಿತ್ರ ನೀಡಿದ್ದು, ಏಕಾಯೇಕಿ ತಾರೆಯಾದದ್ದು ಮಾತ್ರ ಅವಿಸ್ಮರಣೀಯ.
ಗುರುಕಿರಣ್ ಕೂಡ ಈ ಹದಿನೈದು ವರುಷಗಳಲ್ಲಿ ಬೆಳೆಯುತ್ತಾ ಬಂದ ರೀತಿ ಗಮನಾರ್ಹ.